ಯುವಕರ ಹೋರಾಟಕ್ಕೆ ಸಂದ ಜಯ

ಕಳಸ: ಮರು ಡಾಂಬರೀಕರಣವಾದ ಮೂರೇ ತಿಂಗಳಲ್ಲಿ ಮತ್ತೆ ಗುಂಡಿಬಿದ್ದಿದ್ದ ಕಳಸ-ಹೊರನಾಡು ರಸ್ತೆ ಕುರಿತು ಪಟ್ಟಣದ ಕೆಲ ಯುವಕರು ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ಹೋರಾಟದಿಂದ ಪಿಡಬ್ಲ್ಯುಡಿ ಇಲಾಖೆ ಕೊನೆಗೂ ಎಚ್ಚೆತ್ತುಕೊಂಡಿದ್ದು ಸೋಮವಾರ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು.

ಮಂಜಿನಕಟ್ಟೆ ಸಮೀಪದ ರಸ್ತೆಯಲ್ಲಿ ದೊಡ್ಡ ಹೊಂಡ ನಿರ್ವಣವಾಗಿ ಎರಡು ತಿಂಗಳು ಕಳೆದರೂ ದುರಸ್ತಿ ಮಾಡಿರಲಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿರಲಿಲ್ಲ. ಕೆಲ ಯುವಕರು ಇಲಾಖೆಯ ಕಾರ್ಯವೈಖರಿಯನ್ನು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದರು. ಮಂಜಿನಕಟ್ಟೆ ಸಮೀಪ ಸುಸಜ್ಜಿತ ಈಜುಕೊಳ ನಿರ್ವಿುಸಿರುವಂತೆ, ಇದನ್ನು ನಟಿಯರಾದ ಸನ್ನಿಲಿಯೋನ್ ಹಾಗೂ ದೀಪಿಕಾ ಪಡುಕೋಣೆ ಉದ್ಘಾಟಿಸಲಿದ್ದಾರೆ ಎಂಬ ಬ್ಯಾನರ್ ಹಾಕಿದ್ದರು. ಇದರ ಜತೆಗೆ ತಮಿಳು ನಟ ವಿಜಯ್ ಗುಂಡಿ ಸಮೀಪ ಸೆಲ್ಪಿ ತೆಗೆದುಕೊಳ್ಳುತ್ತಿರುವ ಹಾಗೆ ಫೋಟೋ ಎಡಿಟ್ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.

ಕೂಡಲೇ ಎಚ್ಚೆತ್ತ ಪಿಡಬ್ಲ್ಯುಡಿ ಇಂಜಿನಿಯರ್ ರಾಜಕುಮಾರ ರೆಡ್ಡಿ, ಕಾರ್ಯಪಾಲಕ ಇಂಜಿನಿಯರ್ ಆನಂದಮೂರ್ತಿ, ಎಇಇ ಆನಂದಪ್ರಕಾಶ್, ಕಿರಿಯ ಇಂಜಿನಿಯರ್​ಗಳಾದ ಜಯಸಿಂಗ್, ಚೆನ್ನಯ್ಯ ಸ್ಥಳಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ಮಳೆಗಾಲದಲ್ಲಿ ಮುಳುಗಡೆಯಾಗಿ ಶಿಥಿಲಗೊಂಡ ಹೆಬ್ಬಾಳೆ ಸೇತುವೆಯನ್ನೂ ಪರಿಶೀಲಿಸಿದರು.