ಭಾರತದಲ್ಲಿ ಮಹಿಳೆಯರಿಗೆ ಗೌರವ ಅಪರೂಪವೆಂದ ಸಿಂಧು!

ನವದೆಹಲಿ: ಕ್ರಿಕೆಟಿಗರಿಬ್ಬರು ವಿವಾದಾತ್ಮಕ ಹೇಳಿಕೆ ನೀಡಿ ಇಕ್ಕಟ್ಟಿಗೆ ಸಿಲುಕಿರುವ ನಡುವೆ, ರಿಯೋ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಕೂಡ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ಟೀಕೆಗೆ ಗುರಿಯಾಗಿದ್ದಾರೆ. ‘ವಿದೇಶಕ್ಕೆ ಹೋಲಿಸಿದರೆ, ಭಾರತದಲ್ಲಿ ಮಹಿಳೆಯರಿಗೆ ಗೌರವ ಸಿಗುವುದು ತುಂಬ ಅಪರೂಪ’ ಎನ್ನುವ ಮೂಲಕ ಸಿಂಧು ವಿವಾದದ ಕೇಂದ್ರಬಿಂದುವಾಗಿದ್ದಾರೆ. ಹೈದರಾಬಾದ್​ನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಂಧು ಗೊಂದಲದ ಹೇಳಿಕೆ ನೀಡಿದರು. ಬೇರೆ ದೇಶಗಳಲ್ಲಿ ಮಹಿಳೆಯರಿಗೆ ತುಂಬ ಗೌರವ ಸಿಗುತ್ತದೆ ಎನ್ನಲು ನನಗೆ ಖುಷಿಯಿದೆ. ಭಾರತದಲ್ಲಿ ‘ಮಹಿಳೆಯರನ್ನು ಗೌರವಿಸಬೇಕೆಂದು’ ಹೇಳುತ್ತಾರೆ. ಆದರೆ ಬಹಳ ವಿರಳ ಮಂದಿಯಷ್ಟೇ ಇದನ್ನು ಪಾಲಿಸುತ್ತಾರೆ ಎಂದು ಸಿಂಧು ಹೇಳಿದರು. ಇದಕ್ಕೆ ಟ್ವಿಟರ್​ನಲ್ಲಿ ಸಿಂಧು ಅವರನ್ನು ಕೆಲವರು ಖಾರವಾಗಿ ಪ್ರಶ್ನಿಸಿದ್ದರೆ, ಇನ್ನು ಕೆಲವರು ಬೆಂಬಲಿಸಿದ್ದಾರೆ. ‘ನಿಮಗೆ ಗೌರವ ಸಿಗದೆ ಇರುವಂಥ ಸ್ವಂತ ಅನುಭವ ಏನಾದರೂ ಆಗಿದ್ದರೆ ಅದನ್ನು ಹೇಳಿ’ ಎಂದು ಟ್ವೀಟ್ ಮಾಡಿದ್ದಾರೆ. ಇಷ್ಟು ದಿನ ನಿಮಗೆ ಹೆಸರು, ಹಣ, ಗೌರವ ನೀಡಿದ ಭಾರತ, ತಕ್ಷಣಕ್ಕೆ ಅಗೌರವ ನೀಡುವಂಥ ದೇಶವಾಯಿತೇ? ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. -ಏಜೆನ್ಸೀಸ್