More

    ಜೋಪಡಿಯಲ್ಲೇ ಬದುಕು

    ಶ್ರವಣ್‌ಕುಮಾರ್ ನಾಳ ಪುತ್ತೂರು
    ಸರ್ಕಾರದ ವಿವಿಧ ಯೋಜನೆ ಮುಖಾಂತರ ಮನೆ ಕಟ್ಟಿಕೊಡುವ ಅವಕಾಶವಿದ್ದರೂ ಪುತ್ತೂರು ನಗರಸಭೆ ವ್ಯಾಪ್ತಿಯ ಮರೀಲ್ ಸಂಜಯನಗರದ ಬಳಿ ಇರುವ ಪಳಿಕೆ ಕಾಲನಿ ನಿವಾಸಿಗರು 30ವರ್ಷಗಳಿಂದ ಜೋಪಡಿಯಲ್ಲೇ ಬದುಕು ಕಳೆದಿದ್ದಾರೆ.
    ಪುತ್ತೂರು ನಗರಸಭಾ ವ್ಯಾಪ್ತಿಯ ಮರೀಲ್ ಸಂಜಯನಗರ ಬಳಿ ಇರುವ ಪಳಿಕೆ ಕಾಲನಿಯಲ್ಲಿ 7 ಮನೆಗಳಿದ್ದು, ಇದರಲ್ಲಿ 4 ಕುಟುಂಬಗಳು ಇನ್ನೂ ಜೋಪಡಿಯಲ್ಲೇ ಜೀವನ ನಡೆಸುತ್ತಿದ್ದಾರೆ. ಮಡಲಿನ ತಟ್ಟಿ ಕಟ್ಟಿಕೊಂಡು ಅದಕ್ಕೆ ಪ್ಲಾಸ್ಟಿಕ್ ಹೊದಿಕೆ ಹಾಕಿಕೊಂಡು ನಿರ್ಮಿಸಲಾದ ಈ ಜೋಪಡಿ ಮನೆಗಳು ಕುಸಿಯುವ ಭೀತಿಯಲ್ಲಿವೆ.

    ಬಯಲು ಶೌಚವೇ ಗತಿ: ಅಭಿವೃದ್ಧಿ ಹೊಂದುತ್ತಿರುವ ಪುತ್ತೂರು ನಗರದ ಪಳಿಕೆ ಕಾಲನಿ ನಿವಾಸಿಗಳಿಗೆ ಸಮರ್ಪಕ ಶೌಚಗೃಹ ಕೂಡ ಇಲ್ಲ. 20 ವರ್ಷಗಳಿಂದ ಇಲ್ಲಿನ ನಿವಾಸಿಗಳು ಶೌಚಗೃಹ ನಿರ್ಮಿಸಿಕೊಡುವಂತೆ ನಗರಸಭೆಗೆ ಮನವಿ ಮಾಡಿದ್ದರೂ ಈ ಬಗ್ಗೆ ಸ್ಥಳಿಯಾಡಳಿತ ಗಮನಹರಿಸಿಲ್ಲ. 6 ಕುಟುಂಬಗಳಿಗೆೆ ಶೌಚಗೃಹವೂ ಇಲ್ಲ. ಒಂದು ಮನೆಯಲ್ಲಿ ಮಾತ್ರ ಶೌಚಗೃಹವಿದ್ದು, ಉಳಿದ ಮನೆಗಳಲ್ಲಿ ಸೋಗೆ, ಗೋಣಿ ಕಟ್ಟಿ ಸ್ನಾನಗೃಹ ನಿರ್ಮಿಸಿದ್ದು, ಹೊರತುಪಡಿಸಿದರೆ, ಅಗತ್ಯಬಿದ್ದಾಗ ಬಯಲು ಶೌಚವೇ ಇವರಿಗೆ ಮೂಲ.

    ಬದುಕುವ ಅನಿವಾರ್ಯ
    ನಗರ ಮಧ್ಯೆ ಇರುವ ಪಳಿಕೆ ನಿವಾಸಿಗರಿಗೆ ಬದುಕು ಕಟ್ಟಿಕೊಡುವ ಅನಿವಾರ್ಯತೆ ಇದೆ. ಇಲ್ಲಿನ ಗಿರೀಶ್, ಸುನೀತಾ ವಸಂತ, ರಾಮ ಎಂಬುವರ ಕುಟುಂಬ ಮತ್ತು ಅನಾರೋಗ್ಯದಿಂದ ನಡೆಯಲಾರದೆ ತೆವಳುತ್ತಲೇ ಬದುಕುತ್ತಿರುವ ಮಾಲಿನಿ ಕುಟುಂಬ ಜೋಪಡಿಗಳಲ್ಲಿ ದಿನ ಕಳೆಯುತ್ತಿದ್ದಾರೆ. ಈ ನೋವಿನ ನಡುವೆಯೂ ಮೇಲೊಂದು ಸೂರಿಗಾಗಿ ಕಾಯುತ್ತಿದ್ದಾರೆ. ಮಾಲಿನಿ ಅವರ ಗಂಡ ಗುರುವಪ್ಪ ನಿಧನರಾಗಿದ್ದು, ಅನಾರೋಗ್ಯಕ್ಕೀಡಾದ ಮಾಲಿನಿ ಅವರಿಗೆ ನಡೆಯಲು ಸಾಧ್ಯವಿಲ್ಲ. ಇಬ್ಬರು ಮಕ್ಕಳ ಬದುಕಿನ ಬಗ್ಗೆ ಚಿಂತೆಯಲ್ಲಿರುವ ಈಕೆಗೆ ಬದುಕೇ ಒಂದು ನರಕ.

    ಶಿಕ್ಷಣದ ಬಗ್ಗೆ ಕಾಳಜಿ ಇಲ್ಲ
    ಪಳಿಕೆ ಕಾಲನಿಯಲ್ಲಿ ಪ್ರಾಥಮಿಕ ಶಾಲೆಯಿಂದ ಹಿಡಿದು ಕಾಲೇಜು ತನಕ ಹೋಗುವ ಮಕ್ಕಳಿದ್ದಾರೆ. ಆದರೆ ಪ್ರಾಥಮಿಕ ಶಾಲೆಗೆ ಮಕ್ಕಳು ಬರಬೇಕಾದರೆ ಶಾಲೆ ಅಧ್ಯಾಪಕರೇ ಹೋಗಿ ಕರೆತರಬೇಕಾಗಿದೆ. ಶಿಕ್ಷಣದ ಬಗ್ಗೆ ಯಾವುದೇ ಕಾಳಜಿ ಇಲ್ಲಿ ಕಂಡುಬರುತ್ತಿಲ್ಲ. ಇತ್ತೀಚೆಗೆ ಇಲ್ಲಿನ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸುವ ಪ್ರಯತ್ನ ನಡೆದರೂ ಲಕಾರಿಯಾಗಿಲ್ಲ.

    ಜಿಲ್ಲಾಧಿಕಾರಿಗೆ ಪತ್ರ
    ನಗರಸಭೆಯೊಳಗೆ ಜೋಪಡಿ ಗುಡಿಸಲ ಬದುಕು ನಡೆಸುವ ಕುಟುಂಬವಿದೆ ಎಂಬ ವಿಚಾರ ತಿಳಿದ ಸಹಾಯಕ ಕಮೀಷನರ್ ಯತೀಶ್ ಉಳ್ಳಾಲ್ ಮತ್ತು ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಮತ್ತು ಇಂಜಿನಿಯರ್‌ಗಳು ಜ.6ರಂದು ಬೆಳಗ್ಗೆ ಕಾಲನಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆ ಪರಿಸರದಲ್ಲಿ ಸುಮಾರು 7 ಮನೆಗೆ ಪ್ರತ್ಯೇಕ ಪಹಣಿ ಪತ್ರ ಇಲ್ಲ. ಜಂಟಿಯಾಗಿ ಆಸ್ತಿಯನ್ನು ಅನುಭವಿಸುತ್ತಿದ್ದಾರೆ. ತಮ್ಮೊಳಗೆ ವಿಭಾಗ ಪತ್ರ ಮಾಡಿಕೊಂಡಿಲ್ಲ. ಕಾಲನಿ ನಿವಾಸಿಗಳ ಪೂರಕ ದಾಖಲೆಗಳನ್ನು ಸಹಾಯಕ ಆಯುಕ್ತರ ಕಚೇರಿಗೆ ನೀಡಿದಲ್ಲಿ ವಿಭಾಗ ಪತ್ರ, ಆರ್‌ಟಿಸಿ ಸಮಸ್ಯೆ ಬಗೆಹರಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಯತೀಶ್ ಉಳ್ಳಾಲ್ ತಿಳಿಸಿದ್ದಾರೆ. ಪ್ರಕರಣದ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆಯುವುದಾಗಿಯೂ ಅವರು ತಿಳಿಸಿದ್ದಾರೆ.

     

    ಈಗಾಗಲೇ ನಗರಸಭೆಯೊಳಗೆ ಜೋಪಡಿ ಗುಡಿಸಲ ಬದುಕು ನಡೆಸುವ ಕುಟುಂಬವಿದೆ ಎಂಬ ಮಾಹಿತಿ ಬಂದಿರುವುದರಿಂದ ಸ್ಥಳ ಪರಿಶೀಲನೆ ನಡೆಸಲಾಗಿದೆ. ಪಳಿಕೆ ಕಾಲನಿ ನಿವಾಸಿಗರಿಗೆ ನಗರಸಭೆಯಿಂದ ಮನೆಗಳಿಗೆ ಶೌಚಗೃಹ, ನೀರು, ಮನೆ ರಿಪೇರಿ ಇತ್ಯಾದಿ ಮೂಲಸೌಕರ್ಯವನ್ನು ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
    ರೂಪಾ ಶೆಟ್ಟಿ ಪುತ್ತೂರು ನಗರಸಭಾ ಪೌರಾಯುಕ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts