More

    ಹತ್ತೂರ ಪುಷ್ಕರಿಣಿಗೆ ಮತ್ಸ್ಯ ಕಾರಂಜಿ

    ಪುತ್ತೂರು: ತುಳುನಾಡಿನ ವ್ಯಾಪ್ತಿ ಹೊಂದಿರುವ ಬಾರ್ಕೂರಿನಿಂದ ಮಂಜೇಶ್ವರವರೆಗೆ ಯಾವೊಂದು ಪ್ರದೇಶದಲ್ಲಿ ಬರ ಸ್ಥಿತಿ ಎದುರಾದರೂ ಹತ್ತೂರ ಒಡೆಯ ಪುತ್ತೂರು ಮಹಾಲಿಂಗೇಶ್ವರನ ಕೆರೆ ಮಾತ್ರ ಅಕ್ಷಯ ಪಾತ್ರೆಯಂತೆ ನೀರು ತುಂಬುತ್ತಿರುತ್ತದೆ. ಪ್ರಸ್ತುತ ಬಿಸಿಲ ತಾಪ ಏರಿಕೆಯಾಗುತ್ತಿರುವುದರಿಂದ ಪುಷ್ಕರಿಣಿಯ ಮತ್ಸ್ಯಗಳಿಗೆ ಆಮ್ಲಜನಕ ಕೊರತೆಯಾಗದಂತೆ ತಡೆಯಲು ಮತ್ಸ್ಯ ಕಾರಂಜಿ ಚಿಮ್ಮಿಸುವ ಪ್ರಯೋಗಕ್ಕೆ ದೇವಸ್ಥಾನ ಆಡಳಿತ ಮಂಡಳಿ ಮುಂದಾಗಿದೆ.
    ಬತ್ತದ ಕೆರೆ ಎಂದೇ ಪ್ರಸಿದ್ಧಿ ಪಡೆದ ಮಹಾಲಿಂಗೇಶ್ವರನ ದೇವರ ಕೆರೆಯ ಮಣ್ಣು ಹಾಗೂ ಕೆಸರು ತೆಗೆಯಲು 40 ವರ್ಷದ ಹಿಂದೆ ನೀರು ಸಂಪೂರ್ಣ ಖಾಲಿ ಮಾಡಲಾಗಿತ್ತಾದರೂ ಹೂಳು ತೆಗೆದ ಮರುಕ್ಷಣವೇ ಕೆರೆ ನೀರಿನಿಂದ ಸಂಪೂರ್ಣವಾಗಿ ತುಂಬಿತ್ತು. ಕೆರೆ ಮಧ್ಯೆ ಇರುವ ಮಂಟಪದಲ್ಲಿ ವರುಣ ದೇವರ ಮೂರ್ತಿ ಸ್ಥಾಪಿತವಾದ ದಿನದಿಂದ ಈ ಕೆರೆ ಬತ್ತಿದ ಇತಿಹಾಸವೇ ಇಲ್ಲ ಎಂಬುದಾಗಿ ಆಸ್ತಿಕರ ನಂಬಿಕೆ. ಈ ಹಿನ್ನೆಲೆಯಲ್ಲಿ ಹತ್ತೂರ ಪುಷ್ಕರಣಿ ಮತ್ಸ್ಯ ಸಂಕುಲಕ್ಕೂ ಆವಾಸ ತಾಣ. ಆದರೆ ಬಿಸಿಲ ತಾಪಕ್ಕೆ ಇಲ್ಲಿನ ಮೀನುಗಳಿಗೆ ಆಮ್ಲಜನಕ ಕೊರತೆಯಾಗುವುದರಿಂದ ಮತ್ಸ್ಯ ಸಂಕುಲದ ರಕ್ಷಣೆಗೆ ಕಾರಂಜಿ ಪ್ರಯೋಗ ನಡೆಸಲಾಗಿದೆ.

    ನೀರು ಹಾಯಿಸಿ ಮೀನುಗಳ ರಕ್ಷಣೆ
    ಕಳೆದ ಎರಡು ಮೂರು ವರ್ಷಗಳಿಂದ ಕೆರೆಯಲ್ಲಿ ಬಿಸಿಲಿನ ತಾಪಕ್ಕೆ ಮೀನುಗಳಿಗೆ ಉಸಿರಾಟಕ್ಕೆ ತೊಂದರೆ ಆಗುತ್ತದೆ ಎಂದು ಮೀನಿಗೆ ಆಮ್ಲಜನಕ ನೀಡುವ ನಿಟ್ಟಿನಲ್ಲಿ ದೇವಳ ವತಿಯಿಂದ ಪೈಪ್ ಮೂಲಕ ಶುದ್ಧ ನೀರು ಹಾಯಿಸಿ ಮೀನುಗಳ ರಕ್ಷಣೆ ಮಾಡಲಾಗುತ್ತಿತ್ತು. ಈ ಬಾರಿಯೂ ಅದನ್ನು ದೇವಳ ವತಿಯಿಂದ ಕೆರೆಯ ನಡುವೆ ಇರುವ ಕಟ್ಟೆಯ ಸುತ್ತಲೂ ಪೈಪ್ ಅಳವಡಿಸಿ ಕಾರಂಜಿ ನಿರ್ಮಾಣ ಮಾಡಿದ್ದು, ಅದರ ಮೂಲಕ ಕೆರೆಗೆ ನೀರು ಚಿಮ್ಮಿಸಲಾಗುತ್ತಿದೆ. ಈ ನಡುವೆ ಕಳೆದ ವರ್ಷದಂತೆ ಕೆರೆಯ ಬಳಿ ಇರುವ ಸುಮಾರು 4 ಲಕ್ಷ ಲೀಟರ್‌ನ ಟ್ಯಾಂಕ್ ತುಂಬಿದಾಗ ಅದರ ಹೆಚ್ಚುವರಿ ನೀರು ನೆಲಕ್ಕೆ ಬಿದ್ದು ಹಾಳಾಗದಂತೆ ಪೈಪ್ ಮೂಲಕ ಕೆರೆಗೆ ನೀರನ್ನು ಬಿಡಲಾಗುತ್ತಿದೆ. ಇದರಿಂದ ಮೀನುಗಳ ರಕ್ಷಣೆ ಕಾರ್ಯ ನಡೆಯುತ್ತಿದ್ದು, ಮಳೆಗಾಲ ಆರಂಭ ಆಗುವ ತನಕ ಪೈಪ್ ನೀರು ಕೆರೆಗೆ ಹಾಯಿಸಲಾಗುತ್ತಿದೆ. ಈ ಕಾರ್ಯಕ್ಕೆ ದೇವಳ ಆಡಳಿತಾಧಿಕಾರಿ ಸಿ.ಲೋಕೇಶ್, ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ ಮತ್ತು ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಪ್ರೋತ್ಸಾಹದಂತೆ ಅರ್ಚಕ ಉದಯ ಭಟ್ ಸಹಕಾರ ನೀಡಿದ್ದಾರೆ.

    ಬಾತುಕೋಳಿಗಳಿಂದಲೂ ಮೀನಿನ ರಕ್ಷಣೆ
    ದೇವಳದ ಕೆರೆಯಲ್ಲಿ ಕಳೆದ ವರ್ಷ ಎರಡು ಬಾತುಕೋಳಿಗಳಿದ್ದರೆ, ಈ ಬಾರಿ ಮತ್ತೆರಡು ಬಾತುಕೋಳಿ ಸೇರ್ಪಡೆಗೊಂಡಿದೆ. ಪ್ರತಿದಿನ ಸಂಜೆ ಬಾತುಕೋಳಿಗಳು ಕೆರೆಯಲ್ಲಿ ಈಜಿಕೊಂಡು ಕೆರೆಗೆ ಸುತ್ತು ಬರುತ್ತಿವೆ. ಈ ಹಿಂದೆ ನೀರುಹಕ್ಕಿಗಳು ಕೆರೆಯಿಂದ ಮೀನನ್ನು ಹಿಡಿದು ಕೊಂಡು ಹೋಗುತ್ತಿದ್ದವು. ಈಗ ಬಾತುಕೋಳಿಗಳು ಬಂದ ಬಳಿಕ ನೀರು ಹಕ್ಕಿಗಳು ಕೆರೆಗೆ ಬರುತ್ತಿಲ್ಲ. ಇಲ್ಲೂ ಒಂದು ಕಡೆ ಬಾತುಕೋಳಿಗಳಿಂದಲೂ ಮೀನಿನ ರಕ್ಷಣೆ ಆಗುತ್ತಿದೆ.

    ಬಣ್ಣಬಣ್ಣದ ಕಾರಂಜಿ
    ದೇವಳದ ಅರ್ಚಕ ಉದಯ ಭಟ್ ಕಳೆದ ವರ್ಷವೂ ಮೀನುಗಳಿಗೆ ಆಮ್ಲಜನಕ ಸಿಗಬೇಕೆಂಬ ನೆಲೆಯಲ್ಲಿ ಕೆರೆಯಲ್ಲಿ ಕಾರಂಜಿ ನಿರ್ಮಾಣಕ್ಕೆ ಮುಂದಾಗಿದ್ದರು. ಈ ಭಾರಿ ಆರಂಭದಲ್ಲೇ ಪಂಪ್ ಕೈಕೊಟ್ಟ ಹಿನ್ನೆಲೆಯಲ್ಲಿ ಹೊಸ ಪಂಪ್ ಖರೀದಿಸಿದರಲ್ಲದೆ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಿ ಕಾರಂಜಿಯಲ್ಲಿ ಬಣ್ಣದ ರಂಗನ್ನು ಹೆಚ್ಚಿಸಿದ್ದಾರೆ. ಬಣ್ಣದ ದೀಪ ಅಳವಡಿಸುವಲ್ಲಿ ದೇವಳದ ಸಿಬ್ಬಂದಿ ಪದ್ಮನಾಭ ಸಹಕರಿಸಿದ್ದಾರೆ.

    ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಿಣಿಯ ಮತ್ಸ್ಯಗಳಿಗೆ ಆಮ್ಲಜನಕ ಪೂರೈಕೆಗೆ ವಿನೂತನ ಯೋಜನೆ ಇದಾಗಿದ್ದು, ದೇವಸ್ಥಾನದ ಆಡಳಿತ ವರ್ಗ, ಪುರೋಹಿತ ವರ್ಗ ಹಾಗೂ ಸಿಬ್ಬಂದಿ ವರ್ಗದ ಪ್ರೋತ್ಸಾಹದಂತೆ ಈ ಯೋಜನೆ ಕಾರ್ಯಗತವಾಗಿದೆ.
    ಸಿ.ಲೋಕೇಶ್, ಮಹಾಲಿಂಗೇಶ್ವರ ದೇವಳ ಆಡಳಿತಾಧಿಕಾರಿ 

    ಶ್ರವಣ್‌ಕುಮಾರ್ ನಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts