ಪುತ್ತೂರು ಬಸ್‌ನಿಲ್ದಾಣದಲ್ಲಿ ‘ಕಿರಿಕ್’ ಹಾವಳಿ

ಶಶಿ ಈಶ್ವರಮಂಗಲ

ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಹಾಗೂ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ವಿದ್ಯಾರ್ಥಿನಿಯರನ್ನು ಚುಡಾಯಿಸುವ ಹಾಗೂ ಪ್ಯಾಸೇಜ್‌ಗಳಲ್ಲಿ ಸಂಚರಿಸುವ ಮಹಿಳೆಯರಿಗೆ ಉಪಟಳ ನೀಡುವ ಕೃತ್ಯ ಹೆಚ್ಚಾಗುತ್ತಿವೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ. ಅಲ್ಲದೆ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡುತ್ತಿದ್ದು, ವಿದ್ಯಮಾನ ಗಂಭೀರ ಸ್ವರೂಪ ಪಡೆಯುವಂತಾಗಿದೆ.
ಬಸ್ ನಿಲ್ದಾಣ ಕಟ್ಟಡದ ನೆಲ ಅಂತಸ್ತು ಹಾಗೂ ಪ್ರಥಮ ಅಂತಸ್ತಿನಲ್ಲಿ ವಾಣಿಜ್ಯ ಮಳಿಗೆಗಳಿದ್ದು, ಇಲ್ಲಿನ ಮೊಬೈಲ್ ಶಾಪ್‌ನಲ್ಲಿ ವಿದ್ಯಾರ್ಥಿನಿಯರನ್ನು ಚುಡಾಯಿಸಲಾಗುತ್ತಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳು ಜಮಾಯಿಸಿ, ಕಾರ್ಯಾಚರಣೆಗೆ ಮುಂದಾಗಿದ್ದರು. ಈ ವೇಳೆ ಹಿಂದು ಸಂಘಟನೆ ಕಾರ್ಯಕರ್ತರೂ ಸಾಥ್ ನೀಡಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಅರಿತ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳನ್ನು ಚದುರಿಸಿದರು.

ಪ್ಯಾಸೇಜ್‌ನಲ್ಲಿ ಕಿರಿಕಿರಿ
ಇಲ್ಲಿನ ನಿಲ್ದಾಣದ ಪ್ರವೇಶದ್ವಾರದ ಭಾಗ ಬಿಟ್ಟರೆ ಬೇರೆ ಕಡೆ ಸಿಸಿ ಕ್ಯಾಮರಾ ವ್ಯವಸ್ಥೆಗಳಿಲ್ಲ. ಇದು ಪಡ್ಡೆ ಯುವಕರ ಹಾಗೂ ಸೋಮಾರಿ ವಿದ್ಯಾರ್ಥಿಗಳ ಪಾಲಿಗೆ ವರವಾಗಿದೆ. ಸಂಕೀರ್ಣದ ಪ್ಯಾಸೇಜ್‌ಗಳಲ್ಲೇ ದಿನವಿಡೀ ಸುತ್ತುತ್ತ ಕಾಲ ಕಳೆಯುವವರಿಂದಾಗಿ ಮಹಿಳೆಯರು, ಮಕ್ಕಳ ಸಹಿತ ನಾಗರಿಕರು ನಿರಾಳವಾಗಿ ಸಂಚರಿಸದ ಸ್ಥಿತಿ ನಿರ್ಮಾಣವಾಗಿದೆ. ಗಾಂಜಾ ವ್ಯಸನಿಗಳು, ಕುಡುಕರಿಂದಾಗಿ ಮಹಿಳೆಯರು ಕಿರಿಕಿರಿ ಅನುಭವಿಸಬೇಕಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಮೊಬೈಲ್ ದುರುಪಯೋಗ
ಶಾಲಾ, ಕಾಲೇಜುಗಳಿಗೆ ಬರುವ ಹಲವು ವಿದ್ಯಾರ್ಥಿಗಳು ತಮ್ಮ ಮೊಬೈಲ್ ಅನ್ನು ಬಸ್ ನಿಲ್ದಾಣದ ಕೆಲವು ಅಂಗಡಿಗಳಲ್ಲಿ ಇಟ್ಟು ಹೋಗುತ್ತಿದ್ದು, ಇದನ್ನು ದುರುಪಯೋಗಪಡಿಸಿಕೊಳ್ಳುವ ಕೆಲಸ ಆಗುತ್ತಿದೆ ಎಂದು ಆರೋಪಿಸುತ್ತಿರುವ ನಾಗರಿಕರು ಈ ಬಗ್ಗೆ ಪೊಲೀಸರು ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಾರ್ಯರೂಪಕ್ಕೆ ಬಾರದ ಪ್ರಸ್ತಾವ
ವರ್ಷದ ಹಿಂದೆ ಶಕುಂತಳಾ ಶೆಟ್ಟಿ ಶಾಸಕಿಯಾಗಿದ್ದ ಸಂದರ್ಭ ನಡೆದಿದ್ದ ಕೆಡಿಪಿ ಸಭೆಯಲ್ಲಿ ಪುತ್ತೂರು ಬಸ್ ನಿಲ್ದಾಣ-ವಾಣಿಜ್ಯ ಮಳಿಗೆಗಳಲ್ಲಿ ವಿದ್ಯಾರ್ಥಿನಿಯರಿಗೆ ಮತ್ತು ಮಹಿಳೆಯರಿಗೆ ಮಾನಸಿಕ ಕಿರುಕುಳ ನೀಡುತ್ತಿರುವ ವಿಚಾರ ಪ್ರಸ್ತಾಪವಾಗಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಭೆಯಲ್ಲಿ ಪೊಲೀಸರಿಗೂ ಸೂಚಿಸಲಾಗಿತ್ತು. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ವಾಣಿಜ್ಯ ಮಳಿಗೆಗಳ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಹಿಂದುಸ್ತಾನ್ ಪ್ರಮೋಟರ್ಸ್‌ ಸಂಸ್ಥೆಯವರಿಗೆ ತಿಳಿಸಿ, ಸಿಸಿ ಕ್ಯಾಮರಾ ಅಳವಡಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಅದಾವುದೂ ಕಾರ್ಯರೂಪಕ್ಕೆ ಬರಲಿಲ್ಲ.

ಪೊಲೀಸ್ ಕಾರ್ಯಾಚರಣೆ
ನಗರ ಪೊಲೀಸರು ಸೋಮವಾರ ಕಾರ್ಯಾಚರಣೆ ನಡೆಸಿ ಬಸ್‌ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣದಲ್ಲಿ ಸುತ್ತಾಡುತ್ತಾ ಕಾಲ ಕಳೆಯುತ್ತಿದ್ದ ವಿದ್ಯಾರ್ಥಿಗಳನ್ನು ಹೊರ ಕಳುಹಿಸಿದ್ದಾರೆ. ಅನಾಗರಿಕ ಚಟುವಟಿಕೆ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಮಫ್ತಿಯಲ್ಲೂ ಪೊಲೀಸ್ ಕಾರ್ಯಾಚರಣೆ ನಡೆಯುತ್ತಿದೆ.

ಮಹಿಳಾ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಬೆಳಗ್ಗೆ ಹಾಗೂ ಸಾಯಂಕಾಲ ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಪ್ರಥಮ ದರ್ಜೆ ಮಹಿಳಾ ಕಾಲೇಜು, ಮುಕ್ರಂಪಾಡಿ ಮಹಿಳಾ ಕಾಲೇಜು, ಜಿಡೆಕಲ್ ಸರ್ಕಾರಿ ಕಾಲೇಜು, ಕೊಂಬೆಟ್ಟು ಸರ್ಕಾರಿ ಕಾಲೇಜು ವ್ಯಾಪ್ತಿಯಲ್ಲಿ ತಲಾ ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಲಿದ್ದಾರೆ.
ಸೇಸಮ್ಮ, ಪುತ್ತೂರು ಮಹಿಳಾ ಠಾಣಾ ಎಸ್‌ಐ

Leave a Reply

Your email address will not be published. Required fields are marked *