More

    ಪುತ್ತೂರು ನಗರ ರಸ್ತೆ ಚತುಷ್ಪಥ

    ಶ್ರವಣ್ ಕುಮಾರ್ ನಾಳ ಪುತ್ತೂರು

    ನಗರೋತ್ಥಾನ ಯೋಜನೆಯಲ್ಲಿ ಆರಿಸಿಕೊಳ್ಳಲಾದ ಕಾಮಗಾರಿಗಳ ಪೈಕಿ ಪುತ್ತೂರು ನಗರದ ದರ್ಬೆ ವೃತ್ತದಿಂದ ಮರೀಲ್‌ವರೆಗಿನ ಚತುಷ್ಪಥ ಕಾಮಗಾರಿ ಪೂರ್ಣಗೊಂಡಿದ್ದು, ಮೊದಲ ಹಂತದಲ್ಲಿ ಪುತ್ತೂರು ನಗರ ರಸ್ತೆ ಚತುಷ್ಪಥವಾಗಿ ಮಾರ್ಪಟ್ಟಿದೆ.
    ದರ್ಬೆ ವೃತ್ತದಿಂದ ಮರೀಲ್ ರಸ್ತೆ ನಗರದಿಂದ ಕವಲೊಡೆಯುವ ಪ್ರಮುಖ ಮಾರ್ಗ ಇದಾಗಿದ್ದು, ಸುಬ್ರಹ್ಮಣ್ಯ- ಮಂಜೇಶ್ವರ ಅಂತಾರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಿದೆ. ದರ್ಬೆ ವೃತ್ತದಿಂದ ಕಾವೇರಿಕಟ್ಟೆ, ಮರೀಲ್, ಬೆದ್ರಾಳ, ಪುರುಷರಕಟ್ಟೆ ಮೂಲಕ ಸರ್ವೆ, ಸವಣೂರು, ಕಾಣಿಯೂರು ಮೂಲಕ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು, ಇದರಲ್ಲಿ ನಗರದ ಪ್ರದೇಶದ ಸುಮಾರು 2 ಕಿ.ಮೀ. ರಸ್ತೆ ಮೊದಲ ಹಂತದಲ್ಲಿ ಚತುಷ್ಪಥಗೊಂಡಿದೆ. ಇದಕ್ಕಾಗಿ ನಗರೋತ್ಥಾನ ಯೋಜನೆಯಲ್ಲಿ ತಲಾ 1.75 ಕೋಟಿ ರೂಪಾಯಿಗಳ 2 ಪ್ಯಾಕೇಜ್ ಮೀಸಲಿಡಲಾಗಿದ್ದು, ಒಟ್ಟು 3.5 ಕೋಟಿ ರೂ. ವೆಚ್ಚದಲ್ಲಿ ಸುಂದರ ಚತುಷ್ಪಥ ಸಿದ್ಧಗೊಂಡಿದೆ.

    ಚತುಷ್ಪಥ ರಸ್ತೆ ನಿರ್ಮಿಸಿ ಡಿಬಿಎಂ ಡಾಂಬರು
    ಮಳೆಗಾಲ ಪೂರ್ವದಲ್ಲಿ ಮೊದಲ ಹಂತದ ಕಾಮಗಾರಿಗಳೆಲ್ಲ ಪೂರ್ಣಗೊಂಡಿದ್ದು, ಚತುಷ್ಪಥ ರಸ್ತೆ ನಿರ್ಮಿಸಿ ಡಿಬಿಎಂ ಡಾಂಬರು ಹಾಕಲಾಗಿತ್ತು. ಡಿವೈಡರ್ ನಿರ್ಮಿಸಿ ಮೊದಲ ಕೆಲಸ ಮುಗಿಸಲಾಗಿತ್ತು. ಈಗ ಮಳೆಗಾಲ ಮುಗಿದ ಬಳಿಕ ಬಿ.ಸಿ. ಡಾಂಬರು ಕಾಮಗಾರಿ ನಡೆಸಲಾಗುತ್ತಿದ್ದು, ಡಿವೈಡರ್ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಅದಕ್ಕೆ ಮಣ್ಣು ತುಂಬಿಸುವ ಕೆಲಸವೂ ಪ್ರಸ್ತುತ ಅಂತಿಮ ಹಂತ ತಲುಪಿದೆ. ಪ್ರಸ್ತುತ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಮತ್ತು ಅಂತಿಮ ಹಂತದ ಸೌಂದರೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ದರ್ಬೆಯಿಂದ ಮರೀಲ್‌ನ ಪುತ್ತೂರು ಕ್ಲಬ್ ತಿರುವುವರೆಗಿನ ಅತ್ಯುತ್ತಮ 2 ವಿಭಾಗದ ಚರಂಡಿ ಹಾಗೂ ಸೌಂದರ‌್ಯ ಕಾಮಗಾರಿ ಇದರಲ್ಲಿ ಸೇರಿದೆ.

    ಪುತ್ತೂರು ಜಿಲ್ಲಾಕೇಂದ್ರ ೋಷಣೆಗೆ ಬಹಳ ದಿನಗಳಿಂದ ಸಿದ್ಧತೆ ನಡೆಯುತ್ತಿದ್ದಂತೆ ಇಲ್ಲಿನ ರಸ್ತೆ ಹಾಗೂ ಸಂಪರ್ಕ ವ್ಯವಸ್ಥೆ ಬಲಪಡಿಸಲು ರಾಜ್ಯಮಟ್ಟದಲ್ಲಿ ಯೋಜನೆಗಳು ಸಿದ್ಧಗೊಳಿಸಲಾಗುತ್ತಿದೆ ಎಂಬ ಮಾಹಿತಿ ಶಾಸಕರ ಕಚೇರಿಯಿಂದಲೇ ಲಭ್ಯವಿದ್ದು, ಇದಕ್ಕಾಗಿಯೇ ಪುತ್ತೂರು ನಗರ ಹಾಗೂ ನಗರ ಸಂಪರ್ಕಿಸುವ ರಸ್ತೆ ಚತುಷ್ಪಥಗೊಳ್ಳುತ್ತಿದೆ. ದರ್ಬೆಯಲ್ಲಿ ಈಗಾಗಲೇ ಸುಂದರ ವೃತ್ತ ನಿರ್ಮಿಸಲಾಗಿದ್ದು, ಅಲ್ಲಿಂದಲೇ ಚತುಷ್ಪಥ ಕವಲೊಡೆದಿದೆ. ನಗರದ ಮುಖ್ಯ ರಸ್ತೆಯಲ್ಲಿ ಈಗಾಗಲೇ ಕಲ್ಲಾರೆಯಿಂದ ದರ್ಬೆ ಫಾದರ್ ಪತ್ರಾವೊ ವೃತ್ತದವರೆಗೆ ಚತುಷ್ಪಥ ರಸ್ತೆಯಿದ್ದು, ಇದರಲ್ಲಿ ಬಸ್ ನಿಲ್ದಾಣ- ಕಲ್ಲಾರೆ ಮಧ್ಯೆ ಮರು ಡಾಂಬರು ಕಾಮಗಾರಿ ಇತ್ತೀಚೆಗೆ ಮುಕ್ತಾಯ ಕಂಡಿದೆ.

    ಮುಖ್ಯ ರಸ್ತೆಗಳು ಮೇಲ್ದರ್ಜೆಗೆ
    ಒಂದೆಡೆ ವಿಶೇಷ ಪ್ಯಾಕೇಜ್‌ನಲ್ಲಿ ಪುತ್ತೂರು- ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿ- ಸೇಡಿಯಾಪು ನಡುವಿನ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈ ಮೂಲಕ ಪುತ್ತೂರಿನಿಂದ ಕವಲೊಡೆದ ಎರಡು ಮುಖ್ಯ ರಸ್ತೆಗಳು ಮೇಲ್ದರ್ಜೆಗೇರಲಿವೆ. ಮತ್ತೊಂದು ಮುಖ್ಯ ನಿರ್ಗಮನ ರಸ್ತೆಯಾದ ದರ್ಬೆ- ಕುಂಬ್ರ ರಸ್ತೆಯು ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿರುವ ಕಾರಣ ಅದು ಈಗಾಗಲೇ ದ್ವಿಪಥಗೊಂಡಿದೆ. ಮುಂದಿನ ಹಂತದಲ್ಲಿ ಇದು ಚತುಷ್ಪಥಗೊಳ್ಳಲಿದೆ.

    ಪುತ್ತೂರು ನಗರದ ದರ್ಬೆ- ಮರೀಲ್ ಚತುಷ್ಪಥ ಯೋಜನೆಯ ಬಹುತೇಕ ಕಾಮಗಾರಿ ಕಳೆದ ಮಳೆಗಾಲಕ್ಕೆ ಮುನ್ನವೇ ಪೂರ್ಣಗೊಳಿಸುವ ಯೋಜನೆ ಇತ್ತು. ಕೆಲವು ತಾಂತ್ರಿಕ ಕಾರಣದಿಂದ ಸಾಧ್ಯವಾಗದೆ ಈಗ ಕಾಮಗಾರಿ ಪೂರ್ಣಗೊಂಡಿದೆ. ಇನ್ನೊಂದು ತಿಂಗಳಲ್ಲಿ ಚರಂಡಿ ಕೆಲಸವೂ ಮುಗಿಯುವ ಸಾಧ್ಯತೆ ಇದೆ.
    ಅರುಣ್, ಪುತ್ತೂರು ನಗರಸಭೆ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts