ಕಾಲುಸಂಕ ಸಂಚಾರ ಅಪಾಯ

ಶಶಿ ಈಶ್ವರಮಂಗಲ

ಪುತ್ತೂರು ನಗರಸಭೆ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ರಾಗಿದಕುಮೇರು ಸಮೀಪದ ಅಂದ್ರಟ್ಟದ ಕಾಲುಸಂಕದಲ್ಲಿ ಜನಸಂಚಾರ ಈಗ ಅಪಾಯಕಾರಿಯಾಗಿ ಗೋಚರಿಸಿದೆ.
ಸುಮಾರು 47 ವರ್ಷಗಳ ಹಿಂದೆ ಬೆದ್ರಾಳ ಹೊಳೆಗೆ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟು ಉಪಯೋಗಕ್ಕಿಲ್ಲದೆ ಪ್ರಸ್ತುತ ಕೇವಲ ಸಂಪರ್ಕ ಕಾಲುಸಂಕವಾಗಿ ಉಳಿದಿದೆ. ಕಿಂಡಿ ಅಣೆಕಟ್ಟಿನ ಅಡಿಪಾಯ ಬಿರುಕು ಬಿಟ್ಟು ಶಿಥಿಲಗೊಂಡಿದ್ದು, ಕುಸಿಯುವ ಹಂತ ತಲುಪಿದೆ.

ಆನಡ್ಕ, ಕೂಡುರಸ್ತೆ, ದಾಸರಮೂಲೆ, ಪಂಜಿಗ ಕಡೆಯವರು ಅಂದ್ರಟ್ಟ ಕಾಲುಸಂಕವನ್ನೇ ಅವಲಂಬಿಸಿದ್ದಾರೆ. ಆ ಭಾಗದ ನೂರಾರು ವಿದ್ಯಾರ್ಥಿಗಳು ಇದೇ ಕಾಲುಸಂಕ ದಾಟಿ ಜಿಡೆಕಲ್ ಪ್ರಥಮದರ್ಜೆ ಸರ್ಕಾರಿ ಕಾಲೇಜಿಗೆ ಹಾಗೂ ರಾಗಿದಕುಮೇರು ಪ್ರೌಢಶಾಲೆಗೆ ತೆರಳುತ್ತಿದ್ದಾರೆ. ಸುಮಾರು 300ಕ್ಕೂ ಅಧಿಕ ಮಂದಿ ಈ ಕಾಲುಸಂಕವನ್ನೆ ಅವಲಂಬಿಸಿದ್ದಾರೆ. ಇದನ್ನು ಬಿಟ್ಟರೆ ಅಲ್ಲಿನ ಮಂದಿ ಪುರುಷರಕಟ್ಟೆ ಕೂಡುರಸ್ತೆಯಾಗಿ ಸುಮಾರು 10 ಕಿ.ಮೀ.ನಷ್ಟು ಸುತ್ತು ಬಳಸಿ ತೆರಳಬೇಕಾಗುತ್ತದೆ.
ಮಳೆಗಾಲದಲ್ಲಿ ಹೊಳೆಯ ನೀರಿನ ಒಳಹರಿವಿನ ತೀವ್ರತೆ ಹೆಚ್ಚಿರುವುದರಿಂದ ಈಗಾಗಲೇ ಕಿಂಡಿ ಅಣೆಕಟ್ಟಿನ ಮಧ್ಯ ಹಾಗೂ ಅಂಚಿನ ತಳಭಾಗದಲ್ಲಿ ಅಡಿಪಾಯ ಕಳಚಿದೆ. ಮಳೆ ನೀರಿನೊಂದಿಗೆ ಕೊಚ್ಚಿಕೊಂಡು ಬರುವ ಭಾರಿ ಗಾತ್ರದ ಮರದ ದಿಮ್ಮಿಗಳು ಬಡಿದ ಪರಿಣಾಮ ಕಿಂಡಿ ಅಣೆಕಟ್ಟಿಗೆ ಅಳವಡಿಸಲಾಗಿದ್ದ ಕಲ್ಲುಗಳು ಎದ್ದು ಹೋಗಿವೆ.

ಕಾಲು ಜಾರಿ ಹೊಳೆಗೆ ಬಿದ್ದು ಅಪಾಯ
ಆಗಸ್ಟ್ 10ರಂದು ಇದೇ ಕಿಂಡಿ ಅಣೆಕಟ್ಟಿನ ಮೇಲಿನ ಕಾಲುಸಂಕದಲ್ಲಿ ತೆರಳುತ್ತಿದ್ದ ಜನಾರ್ದನ ಎಂಬುವರು ಆಕಸ್ಮಿಕವಾಗಿ ಕಾಲು ಜಾರಿ ಹೊಳೆ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದರು. ಇದಕ್ಕಿಂತ ಹಿಂದೆ ಸ್ಥಳೀಯ ಇಬ್ಬರು ಇದೇ ಅಣೆಕಟ್ಟಿನ ಕಾಲುಸಂಕ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋಗಿ ಅದೃಷ್ಟವಶಾತ್ ಜೀವ ಕಾಪಾಡಿಕೊಂಡಿದ್ದರು. ವರ್ಷ ಕಳೆದಂತೆ ಕಿಂಡಿ ಅಣೆಕಟ್ಟು ಶಿಥಿಲಗೊಳ್ಳುತ್ತಿರುವುದರಿಂದ ಅಪಾಯ ಭೀತಿ ಹೆಚ್ಚಾಗಿದೆ.

ಮಳೆಗಾಲದಲ್ಲಿ ಕೆಲವೊಮ್ಮೆ ಹೊಳೆ ನೀರು ಕಾಲುಸಂಕದ ಮೇಲಿಂದ ಹರಿದು ಹೋಗಿ ಅಣೆಕಟ್ಟಿನ ಅಡಿಭಾಗದಲ್ಲಿ ಮರಮಟ್ಟುಗಳು ಸಂಗ್ರಹಗೊಂಡು ನೀರಿನ ಮಟ್ಟ ಹೆಚ್ಚಾಗಿರುತ್ತದೆ. ಇಂಥ ಸಂದರ್ಭದಲ್ಲೂ ಜಿಡೆಕಲ್ಲು ಕಾಲೇಜಿಗೆ ಹಾಗೂ ರಾಗಿದಕುಮೇರು ಶಾಲೆಗೆ ಹೋಗುವ ವಿದ್ಯಾರ್ಥಿಗಳು ಅಲ್ಲಿ ನಡೆದ ಅನಾಹುತಗಳನ್ನು ನೆನಪಿಸಿಕೊಂಡು ಭೀತಿಯ ವಾತಾವರಣದಲ್ಲಿ ಸರ್ಕಸ್ ಮಾಡಿಕೊಂಡು ಕಾಲುಸಂಕ ದಾಟಿಕೊಂಡು ಹೋಗಬೇಕಾಗುತ್ತದೆ.

ಉಪಯೋಗವಿಲ್ಲದ ಕಿಂಡಿ ಅಣೆಕಟ್ಟು
ಕೃಷಿ ಜಮೀನಿಗೆ ಅನುಕೂಲವಾಗುವಂತೆ 70 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ‘ಕೋಟಿ ಕಟ್ಟ’ವೇ ಅಂದ್ರಟ್ಟ ಕಿಂಡಿ ಅಣೆಕಟ್ಟು ಆಗಿ ಪರಿವರ್ತನೆಗೊಂಡಿದೆ. ಅದೇ ಸ್ಥಳದಲ್ಲಿ 1972ರಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಮರದ ಹಲಗೆ ಇಟ್ಟು ನೀರು ಸಂಗ್ರಹಿಸಲು ಕಿಂಡಿ ಅಣೆಕಟ್ಟು ನಿರ್ಮಿಸಲಾಗಿತ್ತು. ಕ್ರಮೇಣ ಮರದ ಹಲಗೆ ಇರಿಸಲು ಮಾಡಿದ್ದ ಶೆಡ್ ಮತ್ತು ಮರದ ಹಲಗೆಗಳು ಮಾಯವಾಗಿದ್ದು, ಉಪಯೋಗಕ್ಕಿಲ್ಲದ ಕಿಂಡಿ ಅಣೆಕಟ್ಟು ಕೇವಲ ಕಾಲುಸಂಕಕ್ಕಷ್ಟೇ ಸೀಮಿತವಾಗಿದೆ. ಈಗ ಕಾಲುಸಂಕ ಅಪಾಯಕಾರಿಯಾಗಿ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ನಮ್ಮ ಪರಿಸರದ ಶಾಲಾ ಕಾಲೇಜು ಮಕ್ಕಳಿಗೆ ತೀರ ಸಮಸ್ಯೆಯಾಗುತ್ತಿದೆ. ಕಿಂಡಿ ಅಣೆಕಟ್ಟಿನ ಮೇಲಿನ ಕಾಲುಸಂಕ ದಾಟುವುದು ಅಪಾಯಕಾರಿ. ಆದರೆ 10 ಕಿ.ಮೀ. ಸುತ್ತು ಬಳಸಿ ಹೋಗಬೇಕಾಗಿರುವುದರಿಂದ ಕಾಲುಸಂಕ ದಾಟುವುದು ಅನಿವಾರ್ಯ. ಬಾಡಿಗೆ ರಿಕ್ಷಾ ಮಾಡಿದರೆ 300 ರೂ. ಕೊಡಬೇಕು. ನಮ್ಮ ಸಮಸ್ಯೆಯನ್ನು ಸಂಬಂಧಪಟ್ಟವರು ಅರ್ಥ ಮಾಡಿಕೊಂಡು ಆದಷ್ಟು ಶೀಘ್ರ ರಸ್ತೆ ಮತ್ತು ಸೇತುವೆ ವ್ಯವಸ್ಥೆ ಕಲ್ಪಿಸಬೇಕು.
ಆನಂದ ಗೌಡ, ಅಂದ್ರಟ್ಟ ನಿವಾಸಿ

ಅಂದ್ರಟ್ಟ ಕಿಂಡಿ ಅಣೆಕಟ್ಟಿನ ಕಾಲುಸಂಕ ಬಳಸಿ ನೂರಾರು ಮಕ್ಕಳು ಶಾಲಾ ಕಾಲೇಜುಗಳಿಗೆ ಹೋಗುತ್ತಾರೆ. ಜೋರಾಗಿ ಮಳೆ ಬಂದರೆ ಅಣೆಕಟ್ಟಿನ ಮೇಲ್ಭಾಗದಿಂದ ನೀರು ಹರಿದು ಹೋಗುವುದರಿಂದ ಅಪಾಯವಿದೆ. ಇತ್ತೀಚೆಗೆ ಇದೇ ಕಾಲುಸಂಕ ದಾಟುತ್ತಿದ್ದ ವೇಳೆ ಮೃತಪಟ್ಟ ಜನಾರ್ದನ ಈ ಹಿಂದೆ ಶಾಲಾ ಮಕ್ಕಳನ್ನು ಜಾಗ್ರತೆಯಿಂದ ಅಣೆಕಟ್ಟಿನ ಕಾಲುಸಂಕ ದಾಟಿಸುವ ಕೆಲಸ ಮಾಡುತ್ತಿದ್ದರು. ಅಣೆಕಟ್ಟಿನಲ್ಲಿ ಸಿಕ್ಕಿ ಹಾಕಿಕೊಂಡ ಮರದ ದಿಮ್ಮಿ, ತ್ಯಾಜ್ಯಗಳನ್ನು ತೆರವು ಮಾಡುವ ಮೂಲಕ ಸಾರ್ವಜನಿಕ ಸೇವೆ ಮಾಡುತ್ತಿದ್ದರು. ಈಗ ಅವರು ಮೃತಪಟ್ಟ ಬಳಿಕ ಆ ಪರಿಸರದಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.
ಅಶೋಕ್, ರಾಗಿದಕುಮೇರು ನಿವಾಸಿ

ಕ್ಷೇತ್ರದ ಎಲ್ಲೆಲ್ಲ ಹೊಳೆಗಳಿಗೆ ಸಂಪರ್ಕ ಸಾಧನವಾಗಿರುವ ಕಾಲುಸಂಕ, ಅಣೆಕಟ್ಟುಗಳಿವೆಯೋ ಅವುಗಳನ್ನು ಪರಿಶೀಲಿಸಿ ಶಿಥಿಲಗೊಂಡಿದ್ದಲ್ಲಿ ದುರಸ್ತಿ ಅಥವಾ ಹೊಸ ವ್ಯವಸ್ಥೆ ಮಾಡಲಾಗುವುದು. ಹೊಸ ಅಣೆಕಟ್ಟಿಗಳ ನಿರ್ಮಾಣಕ್ಕೆ ಪ್ರಸ್ತಾವನೆ ಕಳುಹಿಸಲು ವರದಿ ಸಿದ್ಧಪಡಿಸಲಾಗಿದೆ. ಅಂದ್ರಟ್ಟದಲ್ಲಿ ಸಂಪರ್ಕ ಸಾಧನವಾಗಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಕಾಲು ಸಂಕಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
ಸಂಜೀವ ಮಠಂದೂರು, ಪುತ್ತೂರು ಶಾಸಕ

ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಹೊಳೆ, ತೋಡು, ತೊರೆ ದಾಟಿ ಬರುವ ಕಡೆಗಳಲ್ಲಿ ಕಾಲು ಸಂಕ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಅನುದಾನವಿದೆ. ಈ ಕುರಿತು ಶಾಲೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ವರದಿ ಪ್ರಸ್ತಾವನೆ ಕಳುಹಿಸಬೇಕು. ಶಿಕ್ಷಣ ಇಲಾಖೆಯಿಂದ ವರದಿ ಬಂದ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಕಾಲುಸಂಕ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗುವುದು.
ಪ್ರಮೋದ್, ಲೋಕೋಪಯೋಗಿ ಇಲಾಖೆ ಅಧಿಕಾರಿ

Leave a Reply

Your email address will not be published. Required fields are marked *