ಪುಟ್ಟಸ್ವಾಮಯ್ಯ ಸೃಜನಶೀಲ ಬರಹಗಾರ

ಬೆಂಗಳೂರು: ಯಾವುದೇ ಸಿದ್ಧಾಂತಗಳಿಗೆ ಅಂಟಿಕೊಳ್ಳದೆ ನವೋದಯ ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಬಿ. ಪುಟ್ಟಸ್ವಾಮಯ್ಯ ಅಪರೂಪದ ಸೃಜನಶೀಲ ಬರಹಗಾರರಾಗಿದ್ದರು ಎಂದು ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಬಣ್ಣಿಸಿದ್ದಾರೆ.

ಹಿರಿಯ ಪತ್ರಕರ್ತ, ಸಾಹಿತಿ ಬಿ. ಪುಟ್ಟಸ್ವಾಮಯ್ಯ ಬದುಕು-ಬರಹ ಕುರಿತು ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರ ಹಮ್ಮಿಕೊಂಡಿದ್ದ ವಿಚಾರಸಂಕಿರಣದಲ್ಲಿ ಮಾತನಾಡಿದರು.

ಪುಟ್ಟಸ್ವಾಮಯ್ಯ ಅವರ ‘ಕ್ರಾಂತಿ ಕಲ್ಯಾಣ’ ನಾಟಕ ಸಮಾಜದಲ್ಲಿ ಕ್ರಾಂತಿ ತರುವ ಶಕ್ತಿ ಹೊಂದಿದೆ.ಅವರ ಪ್ರೇರಣೆಯಿಂದಲೇ ನಾನು ‘ಯುಗೇ ಯುಗೇ’ ಚಿತ್ರ ನಿರ್ವಣಕ್ಕೆ ಮುಂದಾಗಿದ್ದೆ. ಮೂರು ವರ್ಷಗಳ ಚಿತ್ರೀಕರಣದ ನಂತರ ಅದು ಅರ್ಧಕ್ಕೆ ನಿಂತಿತು. ಈ ಚಿತ್ರಕ್ಕಾಗಿ ಪುಟ್ಟಸ್ವಾಮಯ್ಯ ಅವರ 6 ಕಾದಂಬರಿಗಳನ್ನು ಅಧ್ಯಯನ ಮಾಡಿದ್ದೆ ಎಂದು ನಾಗಾಭರಣ ಸ್ಮರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಜಾನಕಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಾರ್ಯದರ್ಶಿ ಮಹಾಲಿಂಗೇಶ್ವರ, ಕನ್ನಡ ಸಲಹಾ ಸಮಿತಿ ಸದಸ್ಯ ಮುಕುಂದರಾಜ್, ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರದ ಕಾರ್ಯದರ್ಶಿ ವೆಂಕಟರಾಜು ಇತರರಿದ್ದರು.

ಪ್ರಮುಖರ ಬಗ್ಗೆ ಚರ್ಚೆ ಅತ್ಯಗತ್ಯ

ಪುಟ್ಟಸ್ವಾಮಯ್ಯ ಅವರು ಸಾಹಿತ್ಯ ಕ್ಷೇತ್ರಕ್ಕೂ ಅಗಾಧ ಕೊಡುಗೆ ನೀಡಿದ್ದಾರೆ. ಇಂತಹ ವ್ಯಕ್ತಿಯನ್ನು ಕನ್ನಡ ಸಾರಸ್ವತ ಲೋಕ ನೇಪಥ್ಯಕ್ಕೆ ಸರಿಸಿದ್ದು ವಿಷಾದನೀಯ. ಪುಟ್ಟಸ್ವಾಮಯ್ಯ ಮಾತ್ರವಲ್ಲದೇ ಮಾಸ್ಟರ್ ಹಿರಣ್ಣಯ್ಯ, ಗುಬ್ಬಿ ವೀರಣ್ಣ ಸೇರಿ ಪ್ರಮುಖರ ಪರಂಪರೆ ಕುರಿತು ರ್ಚಚಿಸಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಹೇಳಿದರು.

Leave a Reply

Your email address will not be published. Required fields are marked *