ತನಿಖೆಗೆ ಮೊದ್ಲೇ ಹಳ್ಳಹಿಡಿದ ಪುಟ್ಟಗಂಟು ಕೇಸ್?

|ಶಿವಕುಮಾರ ಮೆಣಸಿನಕಾಯಿ

ಬೆಂಗಳೂರು: ‘ಕೊಟ್ಟೋನು ಕೋಡಂಗಿ, ಇಸ್ಕೊಂಡೋನು ಈರಭದ್ರ’ ಎಂಬಂತೆ ಸಚಿವ ಪುಟ್ಟರಂಗಶೆಟ್ಟಿ ಕಚೇರಿ ಸಿಬ್ಬಂದಿಯಿಂದ ಹಣ ವಶ ಪ್ರಕರಣದಲ್ಲಿ ಗುತ್ತಿಗೆದಾರರ ವಿರುದ್ಧವೇ ಲಂಚಕ್ಕೆ ಪ್ರಲೋಭನೆ ಒಡ್ಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಇದು ಲಂಚ ನೀಡಿದವರ ವಿರುದ್ಧವೇ ಪ್ರಕರಣ ದಾಖಲಿಸಿರುವ ದೇಶದ ಮೊದಲ ಪ್ರಕರಣವಾಗಿದೆ.

2018ರ ಜು.21ರಂದು ಸಂಸತ್ತು ಅಂಗೀಕರಿಸಿದ ಭ್ರಷ್ಟಾಚಾರ ನಿಮೂಲನಾ (ತಿದ್ದುಪಡಿ) ಕಾಯ್ದೆ ಸೆಕ್ಷನ್ 8ರ ಪ್ರಕಾರ, ಲಂಚ ನೀಡುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಅವಕಾಶವಿದೆ. ಸಚಿವರಿಗೆ ಲಂಚದ ಆಮಿಷ ಒಡ್ಡಿದ ಆರೋಪದ ಮೇಲೆ ಗುತ್ತಿಗೆದಾರರಾದ ಅನಂತು, ನಂದ, ಶ್ರೀನಿಧಿ ಹಾಗೂ ಕೃಷ್ಣಮೂರ್ತಿ ಎಂಬುವವರ ವಿರುದ್ಧ ಈ ಸೆಕ್ಷನ್ ಅನ್ವಯವೇ ಪ್ರಕರಣ ದಾಖಲಾಗಿದೆ.

ಲಂಚದ ಆಮಿಷ ಒಡ್ಡಿದ ಗುತ್ತಿಗೆದಾರರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ (ಸೆಕ್ಷನ್ 7ಎ, 7ಸಿ ಮತ್ತು ಸೆಕ್ಷನ್ 8) ತನಿಖೆ ನಡೆಸುವಂತೆ ವಿಧಾನಸೌಧ ಪೊಲೀಸ್ ಠಾಣೆ ಪೊಲೀಸರು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಪ್ರಕರಣ ವರ್ಗಾಯಿಸಿ ಪತ್ರ ಬರೆದಿದ್ದಾರೆ. ಈ ಪತ್ರ ವಿಜಯವಾಣಿಗೆ ಲಭ್ಯವಾಗಿದೆ.

ಸಚಿವರ ಪಾತ್ರವೇನು?

ಇಡೀ ಹಗರಣದಲ್ಲಿ ಸಚಿವ ಪುಟ್ಟರಂಗಶೆಟ್ಟಿ ಪಾತ್ರ ಏನು ಎಂಬ ಬಗ್ಗೆ ಪೊಲೀಸರು ಎಸಿಬಿಗೆ ಬರೆದ ಪತ್ರದಲ್ಲಿ ನೇರವಾಗಿ ಹೇಳಿಲ್ಲ. ಆದರೆ ಎಫ್​ಐಆರ್ ಮತ್ತು ಪ್ರಕರಣ ವರ್ಗಾವಣೆ ಪತ್ರದಲ್ಲಿ ಸಚಿವರ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ‘ಮಾನ್ಯ ಸಚಿವರಾದ ಶ್ರೀ ಪುಟ್ಟರಂಗಶೆಟ್ಟಿ ಅವರಿಗೆ ಲಂಚವಾಗಿ ನೀಡಿ ಗುತ್ತಿಗೆದಾರರ ಕೆಲಸಗಳನ್ನು ಮಾಡಿಕೊಡುವಂತೆ ಪ್ರೇರೇಪಿಸುವ ಸಲುವಾಗಿ ತೆಗೆದುಕೊಂಡು ಹೊರಡುತ್ತಿರುವ ವೇಳೆ’ ಹಣ ಸಿಕ್ಕಿ ಬಿದ್ದಿದೆಯೆಂದು ಪತ್ರದಲ್ಲಿ ತಿಳಿಸಲಾಗಿದೆ. ಹೀಗಾಗಿ ಸಚಿವರನ್ನು ಆರೋಪಿ ಎಂದು ಪರಿಗಣಿಸಬೇಕೋ ಅಥವಾ ಸಾಕ್ಷಿಯಾಗಿ ಪರಿಗಣಿಸಬೇಕೋ ಎಂಬ ವಿಷಯವನ್ನು ಎಸಿಬಿ ವಿವೇಚನೆಗೆ ಬಿಟ್ಟು ಭ್ರಷ್ಟಾಚಾರ ನಿಮೂಲನಾ ಕಾಯ್ದೆ ಸೆಕ್ಷನ್ 7ಸಿ ಉಲ್ಲೇಖಿಸಲಾಗಿದೆ. ಎಸಿಬಿ ನಡೆ ಈಗ ಕುತೂಹಲ ಕೆರಳಿಸಿದೆ.

ಲಂಚ ಪಡೆಯುವುದು ಅಕ್ಷಮ್ಯ ಅಪರಾಧ. ಅಂಥವರು ಎಷ್ಟೇ ಪ್ರಭಾವಿಗಳಾದರೂ ಪೊಲೀಸರು ಸಾಕ್ಷ್ಯ ಸಂಗ್ರಹಿಸಬೇಕು. ಇನ್ನು ಲಂಚ ಕೊಟ್ಟವರ ವಿರುದ್ಧ ಕೇಸ್ ಹಾಕಲು ಅವಕಾಶ ಇರುವುದನ್ನು ಉಪಯೋಗಿಸಿಕೊಂಡು ಯಾರಿಗೆ ಕೊಡಲು ಹೊರಟಿದ್ದರು ಎಂಬುದು ಬಹಿರಂಗ ಆಗಬೇಕು. ಆಗ ಮಾತ್ರ ಈ ಪ್ರಕರಣ ರ್ತಾಕ ಅಂತ್ಯ ಕಾಣುತ್ತದೆ.

| ನ್ಯಾ.ಎನ್.ಸಂತೋಷ್ ಹೆಗ್ಡೆ ಮಾಜಿ ಲೋಕಾಯುಕ್ತ

ಹೊಸ ವರ್ಷದ ಇನಾಮು!

ಸಚಿವ ಪುಟ್ಟರಂಗಶೆಟ್ಟಿ ಕಚೇರಿ ನೌಕರ ಎಸ್.ಜೆ.ಮೋಹನ್ ಕುಮಾರ್ ಜ.4ರಂದು ಗುತ್ತಿಗೆದಾರರಾದ ಅನಂತು ಅವರಿಂದ 3.60 ಲಕ್ಷ ರೂ., ನಂದು ಎಂಬುವರಿಂದ 15.90 ಲಕ್ಷ ರೂ., ಶ್ರೀನಿಧಿ ಅವರಿಂದ 2 ಲಕ್ಷ ರೂ., ಕೃಷ್ಣಮೂರ್ತಿ ಅವರಿಂದ 4.26 ಲಕ್ಷ ರೂ.ಪಡೆದಿದ್ದರು. ನಂತರ ಈ ಹಣವನ್ನು ಹೊಸ ವರ್ಷದ ಶುಭಾಶಯ ಕೋರುವ ಗ್ರೀಟಿಂಗ್ ಕಾರ್ಡ್​ಗಳ ಸಹಿತ ಪ್ಯಾಕೆಟ್​ಗಳಲ್ಲಿ ಹಾಕಿ, ಅವುಗಳ ಮೇಲೆ ಸಚಿವ ಪುಟ್ಟರಂಗಶೆಟ್ಟಿ ಅವರ ಹೆಸರು ಸಹಿತ ಹೊಸ ವರ್ಷದ ಶುಭಾಶಯಗಳೊಂದಿಗೆ ಎಂಬ ಒಕ್ಕಣಿಕೆ ಬರೆದು ಬ್ಯಾಗ್​ನಲ್ಲಿ ತುಂಬಿಟ್ಟಿದ್ದರು. ನಾಲ್ವರು ಗುತ್ತಿಗೆದಾರರು ಹಾಗೂ ಸಚಿವರ ಕಚೇರಿ ಸಿಬ್ಬಂದಿ ಮೋಹನ್ ಕುಮಾರ್ ಅವರುಗಳು ಸಚಿವರಿಗೆ ಆಮಿಷ ಒಡ್ಡುವ ಪ್ರಯತ್ನವಾಗಿ ಈ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು ಎಂಬ ಅರೋಪದ ಮೇಲೆ ಆ ಗುತ್ತಿಗೆದಾರರು ಹಾಗೂ ಮಧ್ಯವರ್ತಿಯಾಗಿ ಕೆಲಸ ಮಾಡಿದ ಸಚಿವರ ಕಚೇರಿ ಸಿಬ್ಬಂದಿ ಮೋಹನ್​ಕುಮಾರ್ ವಿರುದ್ಧ ಭ್ರಷ್ಟಾಚಾರ ನಿಮೂಲನಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.