ರಷ್ಯಾಗೆ ಕಿಮ್​ ಭೇಟಿ, ಪುಟಿನ್​ ಜತೆ ದ್ವಿಪಕ್ಷೀಯ ಮಾತುಕತೆ; ಕೊರಿಯಾ ರಾಷ್ಟ್ರಗಳ ಸಮಸ್ಯೆ ಪರಿಹಾರಕ್ಕೆ ಯತ್ನ

ವ್ಲಾದಿವೋಸ್ಟಾಕ್ (ರಷ್ಯಾ): ರಷ್ಯಾದ ಪ್ರವಾಸಕ್ಕೆ ತೆರಳಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುಟಿನ್​ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ಇದು ಕಿಮ್​ ಜಾಂಗ್​ ಉನ್​ ಮತ್ತು ಪುಟಿನ್​ ನಡುವೆ ನಡೆಯುತ್ತಿರುವ ಮೊದಲ ಶೃಂಗ ಸಭೆ. ಎರಡು ತಿಂಗಳ ಹಿಂದೆ ಕಿಮ್​ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರೊಂದಿಗೆ ಹನೋಯಿಯಲ್ಲಿ ಮಾತುಕತೆ ನಡೆಸಿದ್ದರು. ಆದರೆ, ಆ ಮಾತುಕತೆ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಕಿಮ್​ ಅವರ ರಷ್ಯಾ ಭೇಟಿ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.

ಕಿಮ್​ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪುಟಿನ್​ ‘ಕಿಮ್​ ಭೇಟಿಯಿಂದ ಉಭಯ ರಾಷ್ಟ್ರಗಳ ನಾಯಕರು ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾದ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು ಎಂಬುದರ ಕುರಿತು ಅರಿತುಕೊಳ್ಳಬಹುದು. ಉತ್ತರ ಕೊರಿಯಾದ ಧನಾತ್ಮಕ ಬೆಳವಣಿಗೆಗೆ ರಷ್ಯಾ ಬೆಂಬಲ ನೀಡುತ್ತದೆ. ಉಭಯ ರಾಷ್ಟ್ರಗಳ ನಡುವೆ ಆರ್ಥಿಕ ಸಂಬಂಧವನ್ನು ವೃದ್ಧಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)