ಸರ್ಕಾರಿ ಶಾಲೆಗೂ ಹೈಟೆಕ್ ರಂಗು

ಹೆಸರಿಗಷ್ಟೇ ಸ.ಹಿ.ಪ್ರಾ. ಸ್ಕೂಲ್​ರೀ ಆಕರ್ಷಣೆಗಳು ತರಹೇವಾರಿ ಮೂರೇ ವರ್ಷಗಳ ಹಿಂದೆ ಸಣ್ಣ ಮೂಲಸೌಕರ್ಯವೂ ಇಲ್ಲದೇ ಕೊರತೆಗಳ ಮಡಿಲಲ್ಲಿ ನರಳಾಡುತ್ತಿದ್ದ ಬೆಳಗಾವಿ ಶಿವಬಸವ ನಗರದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಇಂದು ಹೈಟೆಕ್ ಸ್ವರೂಪ ಪಡೆದು ಕಣ್ಮನ ಸೆಳೆಯುತ್ತಿದೆ. ಇದಕ್ಕೆ ಕಾರಣರಾಗಿರುವವರು ಡಾ.ಕುಲಗೋಡ ವೈದ್ಯ ದಂಪತಿ ಹಾಗೂ ಸಮಾನ ಶಿಕ್ಷಣ ಪ್ರೇಮಿಗಳ ಬಳಗ.

| ಇಮಾಮ್ ಹುಸೇನ್​​ ಗೂಡುನವರ

ಈ ಶಾಲೆಯಲ್ಲಿ ಓದುತ್ತಿರುವ ಬಹುತೇಕ ಅಲೆಮಾರಿ ಮಕ್ಕಳು ಪ್ರತಿನಿತ್ಯ ಗುಣಾತ್ಮಕ ಶಿಕ್ಷಣ ಪಡೆಯುವ ಜತೆಗೆ, ನೃತ್ಯ ತರಬೇತಿ ಪಡೆಯುತ್ತಿದ್ದಾರೆ, ಚದುರಂಗ ಆಟ ಆಡುವುದನ್ನು ಕಲಿಯುತ್ತಿದ್ದಾರೆ. ಅಷ್ಟೇ ಏಕೆ, ಅಕ್ಷರಾಭ್ಯಾಸ ಮುಗಿಸಿ ಮನೆಗೆ ಮರಳುವ ಮುನ್ನ ಸಂಜೆಯ ಹೊತ್ತಿಗೆ ರುಚಿಕರ ಖಾದ್ಯ ಸವಿದು ಸಂತಸದ ನಗೆಯೊಂದಿಗೆ ತಮ್ಮ ಗೂಡಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಇಂಥದ್ದೊಂದು ಮಹತ್ವದ ಬದಲಾವಣೆ ಆಗಿರುವುದು ಯಾವುದೇ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಲ್ಲ. ಇದು ಬೆಳಗಾವಿ ಶಿವಬಸವ ನಗರದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ.

ಅನಾಥ ಸ್ಥಿತಿಯಲ್ಲಿ ಏನೂ ಸೌಲಭ್ಯವಿಲ್ಲದೆ ನರಳಾಡುತ್ತಿದ್ದ ಶಾಲೆಗೆ ಜೀವ ತುಂಬಿ, ಮಕ್ಕಳಲ್ಲಿ ಭರವಸೆಯ ಬೆಳಕು ಚಿಮ್ಮಿಸಿದವರು ಡಾ.ಕುಲಗೋಡ ವೈದ್ಯ ದಂಪತಿ ಹಾಗೂ ಸಮಾನ ಶಿಕ್ಷಣ ಪ್ರೇಮಿಗಳ ಬಳಗ.

ಅದು 1995ನೇ ಇಸ್ವಿ. ಜಯಶ್ರೀ ಭರಮಗೌಡ ಪಾಟೀಲ ಎನ್ನುವ ಶಿಕ್ಷಕಿ ಸೇವೆಯಲ್ಲಿ ಇದ್ದರು. ಆಗ ಎಂಟೇ ವಿದ್ಯಾರ್ಥಿಗಳು ಶಾಲೆಗೆ ಪ್ರವೇಶ ಪಡೆದಿದ್ದರು. ಶಾಲೆಗೆ ಸ್ವಂತ ಕಟ್ಟಡವಿಲ್ಲದಿರುವ ಕೊರಗು ಕಾಡುತ್ತಲೇ ಇತ್ತು. ಆದರೂ ಶಿಕ್ಷಕಿಗೆ ಮಕ್ಕಳ ಸಂಖ್ಯೆ ಹೆಚ್ಚಿಸಬೇಕೆಂಬ ಹಂಬಲ. ಹಾಗಾಗಿ, ಎಷ್ಟೇ ಗೊಂದಲ ಮತ್ತು ಸಮಸ್ಯೆಗಳು ಎದುರಾದರೂ ಕುಗ್ಗದೇ ಗ್ಯಾಂಗವಾಡಿ ಮತ್ತು ವಡ್ಡರವಾಡಿ ಎನ್ನುವ ಕೊಳಚೆ ಪ್ರದೇಶಗಳಲ್ಲಿ ಅಲೆದಾಡಿದರು. ಆದರೆ, ಸ್ಲಂ ನಿವಾಸಿಗಳಿಗೆ ಶಿಕ್ಷಣದ ಅರಿವಿರಲಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರೂ ಹಿಂದೇಟು ಹಾಕಿದರು. ಒತ್ತಡ ಹಾಕಿದಾಗ ಶಿಕ್ಷಕಿಯೊಂದಿಗೆ ಗಲಾಟೆಗಿಳಿದದ್ದೂ ಇತ್ತು. ಆಗ ತಮ್ಮತಂದೆ ನೆರವು ಪಡೆದು ಪಾಲಕರ ಮನವೊಲಿಸಿದ ಶಿಕ್ಷಕಿ ಒಂದೇ ವರ್ಷದಲ್ಲಿ 50 ವಿದ್ಯಾರ್ಥಿಗಳಿಗೆ ಪ್ರವೇಶ ಕೊಡಿಸುವಲ್ಲಿ ಯಶಸ್ವಿಯಾದರು. ಆಗ ಮಕ್ಕಳಿಗೆ ಓದಿಸುವುದು ಎಲ್ಲಿ ಎಂಬ ಸಂಕಷ್ಟ ಎದುರಾಯಿತು. ಬೆಳಗಾವಿಯ ಮೊದಲ ಕನ್ನಡ ಮೇಯರ್ ಡಾ.ಸಿದ್ಧನಗೌಡ ಪಾಟೀಲ ತಮ್ಮ ಮನೆಯ ಪಕ್ಕದಲ್ಲೇ ಒಂದು ತಾತ್ಕಾಲಿಕ ಕಟ್ಟಡದಲ್ಲಿ ಅಕ್ಷರಾಭ್ಯಾಸಕ್ಕೆ ವ್ಯವಸ್ಥೆ ಮಾಡಿದರು. ಇದಾದ ಕೆಲದಿನಗಳಲ್ಲೇ ಸರ್ಕಾರವೇ ಶಾಲೆಗೆ ಒಂದು ಸೂರು ಒದಗಿಸಿತು. ಆದರೆ, ಸ್ವಂತ ಕಟ್ಟಡವಾದರೂ ಶಾಲೆಯಲ್ಲಿ ಸೌಲಭ್ಯಗಳೇ ಇರಲಿಲ್ಲ. ಹೆಜ್ಜೆಹೆಜ್ಜೆಗೂ ಸಂಕಷ್ಟಗಳ ಸಾಲುಗಳು ಮಕ್ಕಳನ್ನು ಕಾಡುತ್ತಿದ್ದವು. 2004ರಲ್ಲಿ ಲಯನ್ಸ್ ಕ್ಲಬ್ ಆಫ್ ಸ್ತ್ರೀಶಕ್ತಿ ಅಡಿ ಡಾ.ವಿಜಯಲಕ್ಷಿ್ಮೕ ಕುಲಗೋಡ ಶಾಲೆಗೆ ಒಂದಿಷ್ಟು ಸೌಲಭ್ಯ ಕಲ್ಪಿಸಿದರು. ಆದರೆ, ನಂತರದ ದಿನಗಳಲ್ಲಿ ಕ್ಲಬ್ ಸೇವೆ ಸ್ಥಗಿತಗೊಳಿಸಿದ ಪರಿಣಾಮ ಶಾಲೆ ಮತ್ತೆ ಸೊರಗಿತು. ಆಗ, ಶಾಲೆಯ ಕೈಹಿಡಿದು ಸುಂದರವಾಗಿಸಿದ್ದೇ ರಾಜಲಕ್ಷ್ಮೀ ಚಿಲನ್ ಫೌಂಡೇಷನ್.

ಕಲೆ-ಸಂಸ್ಕೃತಿಯ ಹರಿವು

ಅಭಿವೃದ್ಧಿಯತ್ತ ಸಾಗುತ್ತಿರುವ ಶಾಲೆಯಲ್ಲಿ ನೃತ್ಯಗಾರ್ತಿ ಮಿನಿಮಾ ಗುತ್ತಿಗೋಳ, ಕಲೆ ಮತ್ತು ಸಂಸ್ಕೃತಿಯ ಪರಿಮಳ ಹರಡುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ನೃತ್ಯ ತರಬೇತಿ ನೀಡಿ, ಕಲೆಯ ಬದುಕಿನ ಬಗ್ಗೆ ಒಲವು ಮೂಡಿಸುತ್ತಿದ್ದಾರೆ.

ಚದುರಂಗದ ಕಲಿಕೆ

ವೈದ್ಯ ದಂಪತಿ ಶೈಕ್ಷಣಿಕ ಕಳಕಳಿಗೆ ಮನಸೋತ ಡಾ. ಸುರೇಶ ದೇಸಾಯಿ, ಅಲೆಮಾರಿ ಜನಾಂಗದ ಮಕ್ಕಳಿಗೆ ಚದುರಂಗ ಆಟ ಕಲಿಸಲು ಮುಂದಾದರು. ವೈದ್ಯರಾಗಿದ್ದರೂ ಚದುರಂಗ ಆಟದಲ್ಲಿ ಆಸಕ್ತಿ ಹೊಂದಿದ್ದ ಡಾ.ದೇಸಾಯಿ, ಪ್ರತಿದಿನ ಸಂಜೆ ಶಾಲೆಗೆ ಬಂದು 10 ಮಕ್ಕಳಿಗೆ ಚೆಸ್ ಕಲಿಸುತ್ತಿದ್ದಾರೆ. ಇವರ ಗರಡಿಯಲ್ಲಿ ಬೆಳೆದ ಮಕ್ಕಳು ಈಗ ಜಿಲ್ಲಾಮಟ್ಟದ ಚದುರಂಗ ಟೂರ್ನಿಯವರೆಗೂ ತೆರಳಿ ಭೇಷ್ ಎನಿಸಿಕೊಂಡಿದ್ದಾರೆ.

‘ನಮ್ಮದು ಗವರ್ನ್​ವೆುಂಟ್ ಸ್ಕೂಲ್ ರೀ. ಪ್ರೖೆವೇಟ್ ಸ್ಕೂಲ್​ನಲ್ಲಿ ಓದುವುದಕ್ಕೆ ಲಭಿಸುವ ಎಲ್ಲ ಸೌಕರ್ಯಗಳನ್ನು ನಮ್ಗೆ ನೀಡಿದ್ದಾರೆ. ಹೊಟ್ಟೆ ತುಂಬ ಆಹಾರ, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡುವ ಜತೆಗೆ, ಉತ್ತಮ ಶಿಕ್ಷಣವನ್ನು ನೀಡಾಕತ್ತಾರು. ಮತ್ತೇನು ಬೇಕ್ರಿ ನಮಗ್.. ಅವ್ರ ಮಾಡಿದ್ದ ಪ್ರಯತ್ನಕ್ಕ ನಾವು ಫಲಾ ನೀಡ್ತೇವಿ. ಚೆನ್ನಾಗಿ ಓದಿ ದೊಡ್ಡ ನೌಕ್ರೀ ಪಡಿತೇವಿ. ನಾವು ನಮ್ಮ ಸರ್ಕಾರಿ ಶಾಲೆಯ ಗುಣಮಟ್ಟ ಎತ್ತರಿಸತೇವಿ’ ಎನ್ನುತ್ತಾರೆ ಈ ಶಾಲೆಯ ವಿದ್ಯಾರ್ಥಿಗಳು.

ಬದಲಾದ ಶಾಲೆ

ಡಾ. ಶಶಿಕಾಂತ ಕುಲಗೋಡ ಹಾಗೂ ಡಾ.ವಿಜಯಲಕ್ಷ್ಮೀ ಕುಲಗೋಡ ನೇತೃತ್ವದ ರಾಜಲಕ್ಷ್ಮೀ ಚಿಲನ್ ಫೌಂಡೇಷನ್ 2015ರಲ್ಲಿ ಸರ್ಕಾರದ ನಿಯಮಾನುಸಾರ ಈ ಶಾಲೆಯನ್ನು ದತ್ತು ಪಡೆಯಿತು.

ಆರಂಭದಲ್ಲಿ ಶಾಲೆಗೆ ಅಗತ್ಯವಿರುವ ಸೌಲಭ್ಯಗಳ ಪಟ್ಟಿ ಮಾಡಿತು. ಶಾಲೆಯನ್ನು ಸುಂದರಗೊಳಿಸುವುದಾದರೂ ಹೇಗೆ? ಹಾಗೂ ಈ ಬದಲಾವಣೆಗೆ ಒಡ್ಡಿಕೊಳ್ಳಲು ಮಕ್ಕಳನ್ನು ತಯಾರು ಮಾಡುವುದು ಹೇಗೆ? ಎನ್ನುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ, ಅಭಿವೃದ್ಧಿಯ ಒಂದೊಂದೇ ಮಜಲುಗಳಿಗೆ ಚಾಲನೆ ನೀಡಿತು. ಎಷ್ಟೋ ವರ್ಷಗಳಿಂದ ಬಣ್ಣವನ್ನೇ ಕಾಣದೇ ಬಾಡಿ ಹೋಗಿದ್ದ ಶಾಲೆಗೆ ಬಣ್ಣದ ಮೂಲಕ ಜೀವ ತುಂಬಿತು. ಶಾಲಾ ಗೋಡೆಗಳ ಮೇಲೆ ವೈವಿಧ್ಯಮಯ ಚಿತ್ರಗಳನ್ನು ಬಿಡಿಸಲಾಯಿತು. ಸುರಕ್ಷತೆ ದೃಷ್ಟಿಯಿಂದ ಶಾಲೆಗೆ ಆವರಣ ಗೋಡೆ ನಿರ್ವಿುಸಲಾಯಿತು. ಕಟ್ಟಡ ನವೀಕರಣಗೊಳಿಸಿ, ಫ್ಯಾನ್ ಮತ್ತು ವಿದ್ಯುತ್ ದೀಪಗಳನ್ನು ಅಳವಡಿಕೆ ಮಾಡುವ ಜತೆಗೆ, ಹಾಳಾಗಿದ್ದ ಶೌಚಗೃಹಗಳನ್ನು ದುರಸ್ತಿಪಡಿಸಿ ಬಳಕೆಗೆ ಪ್ರೋತ್ಸಾಹಿಸಿದರು. ಶುದ್ಧ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಿದರು. ಮಕ್ಕಳಿಗೆ ಕುಳಿತುಕೊಳ್ಳಲು ಡೆಸ್ಕ್, ಕಪಾಟು ಇತರೆ ಕಲಿಕಾ ಸಾಮಗ್ರಿ ಕೊಡಿಸಿದರು. ಆರೋಗ್ಯವರ್ಧಕ ಶಿಕ್ಷಣ ಕಾರ್ಯಕ್ರಮದಡಿ ಶಾಲೆ ಸುಧಾರಣೆ ಮಾಡುತ್ತಿರುವ ಫೌಂಡೇಷನ್, ಪ್ರತಿ ತಿಂಗಳು ಮಕ್ಕಳಿಗಾಗಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸುತ್ತಿದೆ. ವರ್ಷಕ್ಕೊಮ್ಮೆ ರಕ್ತದೊತ್ತಡ ಮತ್ತು ಮಧುಮೇಹ ಪ್ರಮಾಣದ ಪರೀಕ್ಷೆ ನಡೆಸಿ, ಮಕ್ಕಳ ಆರೋಗ್ಯದ ಮೇಲೆ ಬೆಳಕು ಚೆಲ್ಲಿದೆ. ಆರೋಗ್ಯ ಸದೃಢವಾಗಿಟ್ಟುಕೊಳ್ಳುವ ಬಗ್ಗೆ ನಿರಂತರ ಜಾಗೃತಿ ಶಿಬಿರಗಳು ಇಲ್ಲಿ ಆಯೋಜನೆಗೊಳ್ಳುತ್ತಿವೆ. ಕೊಳಚೆ ಪ್ರದೇಶಗಳಿಂದ ಬಂದರೂ ಇಲ್ಲಿನ ಮಕ್ಕಳು ಸುಂದರ ಮತ್ತು ಆರೋಗ್ಯಕರವಾಗಿರುವುದೇ ಇದಕ್ಕೆ ಸಾಕ್ಷಿ. ಹೀಗೆ ಸಂಕಷ್ಟದ ಹಾದಿಯಲ್ಲಿದ್ದ ಶಾಲೆಯು ಫೌಂಡೇಷನ್ ನೆರವಿನೊಂದಿಗೆ ಇವತ್ತು ಅಭಿವೃದ್ಧಿಯತ್ತ ಮುಖ ಮಾಡಿದೆ.

ರಜೆಯಲ್ಲಿ ಸ್ಪೆಷಲ್ ಕ್ಲಾಸ್

ವೈದ್ಯರ ಕಾರ್ಯದೊಂದಿಗೆ ಕೈಜೋಡಿಸಿದ ಡಾ. ರವಿ ಗುರುವಣ್ಣನವರ ಎನ್ನುವವರು ಪ್ರತಿ ಶನಿವಾರ ಮತ್ತು ಭಾನುವಾರದಂದು ಮಹಾಂತೇಶ ನಗರ ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಕನ್ನಡ ಶಾಲೆಗಳ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯ ತರಬೇತಿ ಉಚಿತವಾಗಿ ನೀಡುತ್ತಿದ್ದಾರೆ. ಈ ಕಲಿಕೆ ಚಟುವಟಿಕೆ ನಡೆಸುವುದಕ್ಕಾಗಿ ಕುಲಗೋಡ ದಂಪತಿ ಶಾಲೆಯ ಕಟ್ಟಡದ ಮೇಲ್ಮಹಡಿಯಲ್ಲಿ ಆರೋಗ್ಯ ವರ್ಧಕ ಕಲಿಕಾ ಕೇಂದ್ರ ನಿರ್ವಿುಸಿದ್ದಾರೆ ಎನ್ನುತ್ತಾರೆ ಮುಖ್ಯಶಿಕ್ಷಕಿ ಜಯಶ್ರೀ ಪಾಟೀಲ ಹಾಗೂ ಶಿಕ್ಷಕಿಯರಾದ ಶಿವಲಿಂಗವ್ವ ಮುನ್ನೆನ್ನವರ, ಐ.ಕಂಠಿಮಠ ಹಾಗೂ ಎಸ್. ಐ. ಗುಡದೈವಗೋಳ.

ಬಗೆಬಗೆಯ ಭಕ್ಷ್ಯ

ಅಲೆಮಾರಿ ಜನಾಂಗದ ಮಕ್ಕಳು ಹೆಚ್ಚಾಗಿ ಅಪೌಷ್ಟಿಕತೆಯಿಂದ ಬಳಲುವುದು ಸಾಮಾನ್ಯ. ಹಾಗಾಗಿ, ಫೌಂಡೇಷನ್ ಸದಸ್ಯರು, ಪ್ರತಿನಿತ್ಯ ಸಂಜೆ ಮಕ್ಕಳಿಗೆ ಮೇಥಿ ಪರೋಟಾ, ಪಾಲಕ್ ಪರೋಟಾ, ಶೇಂಗಾ ಹೋಳಿಗೆ, ಬೇಸನ್ ಉಂಡೆ, ರವೆ ಉಂಡೆ, ಗುಲಾಬ್ ಜಾಮೂನ್ (ದಿನಕ್ಕೊಂದು ಆಹಾರ/ವಾರದಲ್ಲಿ ಐದು ದಿನ) ಹೀಗೆ ವಿವಿಧ ಆಹಾರ ಖಾದ್ಯಗಳನ್ನು ಮಾಡಿ ಉಣಬಡಿಸುತ್ತಾರೆ. ಮಧ್ಯಾಹ್ನದ ವೇಳೆ ಸರ್ಕಾರದ ಬಿಸಿಯೂಟವೂ ಇದೆ.

ನಾನು ಬಸವ ತತ್ವದ ಪರಿಪಾಲಕ. ಬದುಕಿನಲ್ಲಿ ಗಳಿಸಿದ ಹಣದಲ್ಲಿ ಒಂದಿಷ್ಟು ಪಾಲು ಸಾಮಾಜಿಕ ಚಟುವಟಿಕೆಗೆ ಮೀಸಲಿಡುತ್ತ ಬಂದಿದ್ದೇನೆ. ಪತ್ನಿಯೂ ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗಾಗಿ, ರಾಜಲಕ್ಷ್ಮೀ ಚಿಲನ್ ಫೌಂಡೇಷನ್ ಅಡಿ ಕನ್ನಡ ಶಾಲೆ ಅಭಿವೃದ್ಧಿ ಮಾಡಿದ್ದೇವೆ. ಪ್ರತಿ ಬಡಾವಣೆಯ ಒಂದಿಷ್ಟು ಗಣ್ಯರು, ಹೀಗೆ ಸರ್ಕಾರಿ ಕನ್ನಡ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಬೇಕು.

| ಡಾ. ಶಶಿಕಾಂತ ಹಾಗೂ ವಿಜಯಲಕ್ಷ್ಮೀ ಕುಲಗೋಡ

ರಾಜಲಕ್ಷ್ಮೀ ಚಿಲನ್ ಫೌಂಡೇಷನ್ ಪ್ರತಿಯೊಬ್ಬ ಗಣ್ಯರು ತಮ್ಮ ಮನೆಯ ಸುತ್ತಮುತ್ತಲಿನ ಒಂದೊಂದೇ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದರೆ ರಾಜ್ಯದ ಯಾವೊಂದು ಸರ್ಕಾರಿ ಶಾಲೆಯೂ ಕೊರತೆಗಳಿಂದ ಬಳಲುವ ಪ್ರಮೇಯವೇ ಉದ್ಭವಿಸದು. ಡಾ. ಕುಲಗೋಡ ದಂಪತಿ ಕಾರ್ಯ ಶ್ಲಾಘನೀಯವಾದದ್ದು.

| ಮಲ್ಲಪ್ಪ ದಳವಾಯಿ ಸ್ಥಳೀಯರು