Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಚಾ… ಚಾ… ಚಾಕಲೇಟ್

Saturday, 07.07.2018, 3:05 AM       No Comments

ಇಂದು (ಜುಲೈ 7) ವಿಶ್ವ ಚಾಕಲೇಟ್ ದಿನ. ಇದೇ ನೆಪದಲ್ಲಿ ಚಾಕಲೇಟ್​ನ ಬಗ್ಗೆ ಒಂದಷ್ಟು ಮಾಹಿತಿ ತಿಳಿಯುವುದು ಸೂಕ್ತವಾಗಬಹುದು. ಎಷ್ಟು ಚಾಕಲೇಟ್ ತಿನ್ನಬಹುದು, ಹೆಚ್ಚು ತಿಂದರೆ ಅದರಿಂದಾಗುವ ಹಾನಿ ಏನು ಎಂಬುದನ್ನು ತಿಳಿಯುವುದು ಅತ್ಯಗತ್ಯ.

| ದೀಕ್ಷಾ ಹೆಗ್ಡೆ ಎಚ್.

ಚಾಕಲೇಟ್…

ಈ ಶಬ್ದ ಕೇಳುತ್ತಿದ್ದ ಹಾಗೆಯೇ ನಿಮ್ಮ ಬಾಯಿ ನೀರೂರಿರಬೇಕಲ್ವಾ? ಚಾಕಲೇಟ್​ನ ಚಿತ್ರಗಳನ್ನು ನೋಡಿದರೆ ಸಾಕು, ತಿನ್ಬೇಕು ಅನಿಸೋದು ಸಹಜ. ಶಾಲೆಯ ಕೊಠಡಿಯಲ್ಲಿ ರ್ಯಾಪರ್​ನ ಸರಪರ ಸದ್ದು ಕೇಳಿಸಿದರಂತೂ ಗಮನವೆಲ್ಲಾ ಆ ಕಡೆಯೇ. ಯಾರೋ ಚಾಕಲೇಟ್ ತಂದಿದ್ದಾರೆ ಎಂಬ ಕುತೂಹಲ. ಯಾರವರು ಅಂತ ನೋಡೋಕೆ ಟೀಚರ್ ಕಣ್ತಪ್ಪಿಸಿ ಇಣುಕುವ ಧಾವಂತ. ಅಲ್ಲವೇ..?

ಬಾಯಲ್ಲಿ ಇಟ್ಟರೆ ಮೆಲ್ಲಗೆ ಕರಗಿ ಖುಷಿ ಕೊಡುವ ಈ ಚಾಕಲೇಟನ್ನು ಇಷ್ಟ ಪಡದವರು ಯಾರೂ ಇಲ್ಲ. ಚೆಂದನೆಯ ರ್ಯಾಪರ್ ಬಿಡಿಸುವಾಗಲೇ ಬಾಯಲ್ಲಿ ನೀರು ಬರುತ್ತದೆ. ಬಾಯಿಗಿಟ್ಟ ಕೂಡಲೇ ಅದೇನೋ ಆನಂದ. ಮನಸ್ಸಿನ ಒತ್ತಡವೆಲ್ಲ ದೂರ. ತಿಂದಷ್ಟೂ ಮತ್ತಷ್ಟು ಬೇಕು ಎನಿಸುತ್ತಿರುತ್ತದೆ. ಹಾಗಾಗಿಯೇ ಇದು ಚಿಣ್ಣರಿಗೆ ಪಂಚ ಪ್ರಾಣ.

ಪುಟಾಣಿಗಳನ್ನು ಆಕರ್ಷಿಸಲು ಚಾಕಲೆಟ್ಟೇ ಉತ್ತಮ ಮಾರ್ಗ ಎಂದು ಅರಿತ ದೊಡ್ಡವರು, ನೀವು ಚಿಕ್ಕವರಿದ್ದಾಗ ಬರಿಗೈ ಮುಷ್ಟಿಯಲ್ಲಿಟ್ಟು, ‘ಬಾ ಚಾಕಿ ಕೊಡ್ತೀನಿ’ ಎಂದು ಸುಳ್ಳು ಸುಳ್ಳೇ ಕರೆದು ನಿಮ್ಮನ್ನು ಮುದ್ದಿಸಿರಬಹುದು. ಹತ್ತಿರ ಕರೆದು ಕೆನ್ನೆ ಹಿಂಡಿರಬಹುದು. ಚಾಕಲೇಟ್​ನ ಆಸೆ ತೋರಿಸಿದರೆ ಯಾವುದೇ ಮಕ್ಕಳು ಬರುತ್ತಾರೆ ಎನ್ನುವುದು ಮಕ್ಕಳು ಮತ್ತು ಚಾಕಲೇಟ್ ನಡುವಿನ ಸಂಬಂಧಕ್ಕೆ ಸಾಕ್ಷಿ.

ಫಾರಿನ್​ಗೆ ಯಾರಾದರೂ ಹೋಗಿದ್ದರೆ ಅಲ್ಲಿಂದ ಬರುವಾಗ ತಪ್ಪದೆ ಚಾಕಲೇಟ್ ತಂದು ಕೈಗಿಡುತ್ತಾರೆ. ಮನೆಗೆ ಹತ್ತಿರದ ಸಂಬಂಧಿಗಳು ಬಂದರೆ ಮಕ್ಕಳಿಗೆ ಒಂದಿಷ್ಟು ಚಾಕಲೇಟ್ ತರುವುದು ಗ್ಯಾರಂಟಿ. ಈ ಚಾಕಲೆಟ್ಟೇ ಹಾಗೆ. ಒಂಥರಾ ಬಾಂಧವ್ಯ ಬೆಸೆಯುವುವಂಥದ್ದು. ಮಕ್ಕಳಿಗೆ ಇಷ್ಟ ಎನ್ನುವ ಕಾರಣಕ್ಕಾಗಿ ರಾಜ್ಯ ಸರ್ಕಾರ ಕೂಡ ಕ್ಷೀರ ಭಾಗ್ಯ ಯೋಜನೆಯಡಿ ನೀಡುವ ಹಾಲನ್ನು ಚಾಕಲೇಟ್ ಫ್ಲೇವರ್​ನಲ್ಲಿ ಕೊಡುತ್ತಿದೆ. ಇದುವರೆಗೆ ಸಪ್ಪೆ ಹಾಲು ಕುಡಿದ ಮಕ್ಕಳು ಈಗ ಚಾಕಲೇಟ್ ಫ್ಲೇವರ್​ನಲ್ಲಿ ಬಾಯಿ ಚಪ್ಪರಿಸುತ್ತಿದ್ದಾರೆ.

ಅಮ್ಮನ ಜತೆ ದಿನಸಿ ಅಂಗಡಿಗೆ ಹೋದಾಗ ಅಥವಾ ಅಪ್ಪನ ಜತೆ ಬೇಕರಿಗೆ ಹೋದಾಗ ನೀವು ಖಂಡಿತವಾಗಿಯೂ ಚಾಕಲೇಟ್ ಡಬ್ಬಿಯ ಕಡೆ ಕೈತೋರಿಸಿರುತ್ತೀರಿ. ಕೆಲವೊಮ್ಮೆ ಕೊಡಿಸಿರುತ್ತಾರೆ. ಇನ್ನು ಕೆಲವೊಮ್ಮೆ ಬೈದಿರುತ್ತಾರೆ. ಕೊಡಿಸಿದಾಗ ನಿಮ್ಮ ಮುಖ ಇಷ್ಟಗಲ ಅರಳಿರುತ್ತೆ, ಕೊಡಿಸದೇ ಇದ್ದಾಗ ನಿಮ್ಮ ಮುಖ ನೋಡುವ ಹಾಗೆ ಇರುವುದಿಲ್ಲ. ಚಾಕಲೇಟ್ ತಿನ್ನಬೇಡ ಅಂತ ಮನೆಯಲ್ಲಿ ಅಪ್ಪ-ಅಮ್ಮ ಮಾತ್ರವಲ್ಲ. ಫ್ಯಾಮಿಲಿ ಡಾಕ್ಟರ್ ಕೂಡ ಹೇಳಿರುತ್ತಾರೆ. ಈ ಭಯಕ್ಕಾಗಿಯೇ ನಿಮ್ಮಲ್ಲಿ ಕೆಲವರು ಶಾಲೆಗೆ ಹೋದಾಗಷ್ಟೇ ಸ್ನೇಹಿತರ ಜತೆ ಚಾಕಲೇಟ್ ತಿಂದು ಸಂಭ್ರಮಿಸಿರುತ್ತೀರಿ… ಏನೋ ಸಾಧಿಸಿದಂತೆ… ಅಲ್ಲವೇ?

ಆದರೆ ಮಕ್ಕಳೇ.., ಪಾಲಕರ ಎಚ್ಚರಿಕೆಯ ಮಾತಿನ ಹಿಂದೆ ನಿಮ್ಮ ಬಗೆಗಿನ ಕಾಳಜಿ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಮಕ್ಕಳ ಹಲ್ಲುಗಳು ಹಾಳಾಗದಿರಲಿ, ಜಾಸ್ತಿ ಚಾಕಲೇಟ್ ತಿಂದು ಹೊಟ್ಟೆನೋವು ಬರದಿರಲಿ… ಎಂಬ ಕಳಕಳಿ ಅವರದು. ಸಿಹಿ ತುಂಬಿದ ಚಾಕಲೇಟ್ ಇಷ್ಟಪಡುವ ಮಕ್ಕಳಿಗೆ ಇದೆಲ್ಲ ಕೇಳಿಸುವುದೇ ಇಲ್ಲ.

ಚಾಕಲೇಟ್ ತಿನ್ನಲೇಬಾರದು ಎಂದಲ್ಲ. ಖಂಡಿತಾ ತಿನ್ನಬಹುದು. ಆದರೆ ಅತಿಯಾಗಿ ತಿಂದರೆ ಹಲ್ಲುಗಳ ಆರೋಗ್ಯಕ್ಕೆ ಹಾನಿ ಎಂಬುದರ ಅರಿವೂ ಇರಲಿ. ಚಿಕ್ಕಂದಿನಿಂದಲೇ ಹಲ್ಲುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಮುಂದೆ ಪರಿತಪಿಸುವುದು ತಪು್ಪತ್ತದೆ. ಹಲ್ಲು ನೋವು ಎಂದು ಆಸ್ಪತ್ರೆಗೆ ಹೋದಾಗ, ಡಾಕ್ಟರನ್ನ ನೋಡಿ ಅಳುವುದರ ಬದಲು, ಮೊದಲೇ ಹಲ್ಲಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ?

ಹಲ್ಲು ಯಾಕೆ ಹಾಳಾಗುತ್ತೆ?

ಚಾಕಲೇಟ್​ಗೆ ಬಳಸುವ ಅಂಟು ಸಿಹಿ ಪದಾರ್ಥಗಳು ಹಲ್ಲುಗಳನ್ನು ಕ್ರಮೇಣ ಕೊರೆಯುತ್ತವೆ. ಆದ್ದರಿಂದಲೇ ಚಾಕಲೇಟ್ ಅಥವಾ ಯಾವುದೇ ಅಂಟು ಸಿಹಿ ಪದಾರ್ಥ ತಿಂದ ನಂತರ ಟೂಥ್ ಬ್ರಷ್ ಮಾಡಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಹಲ್ಲುಜ್ಜಲು ಸಾಧ್ಯವಾಗದಿದ್ದರೆ ಕೊನೇ ಪಕ್ಷ ಸ್ವಚ್ಛ ನೀರಿನಿಂದ ಬಾಯಿ ಮುಕ್ಕಳಿಸಬೇಕು. ಚಾಕಲೇಟ್​ಗೆ ಬಳಸುವ ಕೋಕೋ ಆರೋಗ್ಯಕರವಾಗಿದ್ದರೂ, ಕೋಕೋ ಕಹಿ ಹೋಗಲಾಡಿಸಲು ಅಂಟು ಸಿಹಿ ಹಾಗೂ ಹಾಲನ್ನು ಬಳಸಲಾಗುತ್ತದೆ. ಈ ಸಿಹಿ ಪದಾರ್ಥವನ್ನು ಸೇವಿಸುವುದು ನಿಷಿದ್ಧವಲ್ಲ. ಆದರೆ ಅತಿಯಾದ ಸೇವನೆ ಒಳ್ಳೆಯದಲ್ಲ.

ರಾತ್ರಿ ಬ್ರಷ್ ಮಾಡುವುದು ಒಳ್ಳೆಯದು

ಸಾಮಾನ್ಯವಾಗಿ ಮನೆಮಂದಿಯೆಲ್ಲ ಬೆಳಗ್ಗೆ ತಿಂಡಿ ತಿನ್ನುವ ಮೊದಲು ಹಲ್ಲುಜ್ಜುತ್ತಾರೆ. ರಾತ್ರಿಯಿಡೀ ನಿದ್ದೆ ಮಾಡುತ್ತಿರುತ್ತೇವೆ, ಬೆಳಗ್ಗೆ ಬಾಯಿ ವಾಸನೆ ಬರುತ್ತದೆಂದು ಈ ರೀತಿ ಮಾಡಲಾಗುತ್ತದೆ. ಆದರೆ ಹಲ್ಲಿನ ಆರೋಗ್ಯಕ್ಕಾಗಿ ರಾತ್ರಿಯೇ ಬ್ರಷ್ ಮಾಡುವುದು ಉತ್ತಮ ಎನ್ನುತ್ತಾರೆ ದಂತವೈದ್ಯರು. ದಿನಕ್ಕೆ ಎರಡು ಸಲ, ಅಂದರೆ ಬೆಳಗ್ಗೆ ಮತ್ತು ರಾತ್ರಿ ಬ್ರಷ್ ಮಾಡುವುದು ಇನ್ನೂ ಒಳ್ಳೆಯದು. ರಾತ್ರಿ ಬ್ರಷ್ ಮಾಡುತ್ತೀರಿ ಎನ್ನುವ ಕಾರಣಕ್ಕೆ ಹೆಚ್ಚೆಚ್ಚು ಚಾಕಲೇಟ್ ತಿನ್ನಬಹುದು ಎಂದಲ್ಲ!

ತಿನ್ನಲು ಇಷ್ಟ, ಹಲ್ಲುಗಳಿಗೆ ಕಷ್ಟ!

ಮಕ್ಕಳೇ ಎಚ್ಚರ

  • ಟಿವಿಯಲ್ಲಿ ತೋರಿಸುವ ಚಾಕಲೇಟ್, ಅದೇ ಫ್ಲೇವರ್​ನ ಐಸ್ಕ್ರೀಮ್ ಕೇಕ್​ಗಳು ಆ ಕ್ಷಣಕ್ಕೆ ನಿಮ್ಮ ಮನ ಸೆಳೆಯಬಹುದು. ಆದರೆ ಕಂಡಿದ್ದನ್ನೆಲ್ಲ ಕೊಳ್ಳಬೇಕಿಲ್ಲ.
  • ಚಾಕಲೇಟ್ ತಿನ್ನುವ ಮೊದಲು ಅದರ ಎಕ್ಸ್​ಪೈರಿ ದಿನಾಂಕವನ್ನು ತಪ್ಪದೇ ಗಮನಿಸಿ. ಅವಧಿ ಮೀರಿದ್ದಾದರೆ ಸೇವಿಸಬೇಡಿ.
  • ಚಾಕಲೆಟ್ ಇಷ್ಟ ಎಂದು ಅಪರಿಚಿತರು ಕೊಡುವ ತಿಂಡಿಗೆ ಕೈಚಾಚಬೇಡಿ. ನಿಮ್ಮ ಈ ಅಭ್ಯಾಸವನ್ನು ದುರ್ಬಳಕೆ ಮಾಡಿಕೊಳ್ಳುವವರೂ ಇರುತ್ತಾರೆ.
  • ತುಂಬ ಕರಗಿ ಮಿದುವಾಗಿರುವ ಚಾಕಲೇಟ್ ತಿನ್ನುವಾಗ ಅದರ ಜತೆ ರ್ಯಾಪರ್ ಕೂಡ ಹೊಟ್ಟೆ ಸೇರದಂತೆ ಎಚ್ಚರ ವಹಿಸಿ.

ಪಾಲಕರಿಗೆ ಗೊತ್ತಿರಲಿ….

ಮಕ್ಕಳು ಹಠ ಮಾಡಿದ ಕೂಡಲೇ ಚಾಕಲೇಟ್ ಕೊಟ್ಟು ಸುಮ್ಮನಿರಿಸಬೇಕೆಂದಿಲ್ಲ. ಹಲ್ಲಿನ ಆರೋಗ್ಯ ಎಷ್ಟು ಮುಖ್ಯ ಎಂಬುದನ್ನು ಮಕ್ಕಳಿ ಗೆ ಮನವರಿಕೆ ಮಾಡಿಕೊಡಿ. ರಾತ್ರಿ ಬ್ರಷ್ ಮಾಡಲು ಮನವೊಲಿಸಿ. ಒಮ್ಮೆ ಶುರುವಾದರೆ ನಂತರ ಅದು ಅಭ್ಯಾಸವಾಗಿಬಿಡುತ್ತದೆ. ಮನೆಯಲ್ಲೂ ಸಕ್ಕರೆ, ಬೆಲ್ಲದಂಥ ಸಿಹಿ ಪದಾರ್ಥಗಳನ್ನು ಮಕ್ಕಳ ಕೈಗೆ ಸುಲಭವಾಗಿ ಸಿಗುವಂತೆ ಇಡಬೇಡಿ. ನಿಮ್ಮ ಕಣ್ತಪ್ಪಿಸಿ ಅವರು ಅದನ್ನೇ ಜಾಸ್ತಿ ತಿನ್ನಬಹುದು. ನಂತರ ಊಟ, ತಿಂಡಿ ರುಚಿಸುವುದಿಲ್ಲ. ಚಿಕ್ಕಂದಿನಿಂದಲೇ ಇದು ಅಭ್ಯಾಸವಾದರೆ ಮುಂದೆ ಅವರೇ ಎಚ್ಚರ ವಹಿಸುತ್ತಾರೆ.

ಪ್ರಯೋಜನವೂ ಉಂಟು…

ಅತಿಯಾಗಿ ಚಾಕಲೇಟ್ ತಿನ್ನುವುದರಿಂದ ಹಲ್ಲು ಹುಳುಕಾಗುತ್ತದೆ ಎನ್ನುವುದು ಬಿಟ್ಟರೆ ಚಾಕಲೇಟ್​ನಿಂದ ಬೇರೆ ತೊಂದರೆಯೇನೂ ಇಲ್ಲ. ಬದಲಿಗೆ ಚಾಕಲೇಟ್ ತಿನ್ನುವುದರಿಂದ ಕೆಲವು ಪ್ರಯೋಜನಗಳಿವೆ. ಸ್ಮರಣಶಕ್ತಿ ವೃದ್ಧಿಸಲು, ಒತ್ತಡ ಕಮ್ಮಿ ಮಾಡಲು ಚಾಕಲೇಟ್ ಸಹಾಯಕ ಎಂಬುದು ಬಹುತೇಕರ ನಂಬಿಕೆ.

Leave a Reply

Your email address will not be published. Required fields are marked *

Back To Top