Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ಅಕ್ಷರದೊಂದಿಗೆ ಹಸಿರು ಕ್ರಾಂತಿ

Saturday, 11.08.2018, 3:03 AM       No Comments

| ಅಕ್ಕಪ್ಪ ಮಗದುಮ್ಮ

ಬೆಳಗಾವಿ: ಇತ್ತೀಚೆಗೆ ಶಾಲೆಗಳ ಆವರಣದಲ್ಲಿ ಕೃಷಿ ಮಾಡಿ ಮಕ್ಕಳಲ್ಲಿ ಹಸಿರು ಪ್ರೀತಿ ಮೂಡಿಸುವ ಪರಿಪಾಠ ಹೆಚ್ಚುತ್ತಿದೆ. ಇಂಥ ಶಾಲೆಗಳ ಪಟ್ಟಿಗೆ ಬೆಳಗಾವಿ ಜಿಲ್ಲೆಯ ಚಿಕ್ಕಹಟ್ಟಿಹೊಳಿ ಸರ್ಕಾರಿ ಪ್ರೌಢಶಾಲೆ ಹೊಸ ಸೇರ್ಪಡೆ. ಆರಂಭದಲ್ಲಿ ಹಲವು ಮೂಲ ಸೌಲಭ್ಯಗಳ ಸಮಸ್ಯೆ ಎದುರಿಸುತ್ತಿದ್ದ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಗಿರೀಶ ನಾಯಿಕ ಅವರಿಂದಾಗಿ ಈಗ ಸಾಕಷ್ಟು ಬದಲಾವಣೆ ಕಂಡಿದೆ. ವಿವಿಧ ಬಗೆಯ ಔಷಧ ಗುಣವುಳ್ಳ ಹಾಗೂ ತರಕಾರಿ ಗಿಡಗಳು ಶಾಲೆಯ ಆವರಣದಲ್ಲಿ ನಳನಳಿಸುತ್ತಿವೆ. ಆರಂಭದಲ್ಲಿ ಬರಡು ಭೂಮಿಯಂತಿದ್ದ ಶಾಲೆಯ ಆವರಣ ಈಗ ಹಸಿರು ಹೊದಿಕೆಯಿಂದ ಕಂಗೊಳಿಸುತ್ತಿದೆ.

ಶಾಲೆಯ ಒಳಗೆ ಹೋದರೆ ಆವರಣದಲ್ಲಿ ವಿದ್ಯಾರ್ಥಿಗಳು ಗಿಡಗಳಿಗೆ ನೀರುಣಿಸುವ, ಕಳೆ ತೆಗೆಯುವ, ಗೊಬ್ಬರ ಹಾಕಿ ಪೋಷಣೆ ಮಾಡುವ ದೃಶ್ಯ ಕಾಣಿಸುತ್ತದೆ. ನುರಿತ ಕೃಷಿಕರನ್ನೂ ನಾಚಿಸುವಂತೆ ವಿದ್ಯಾರ್ಥಿಗಳು ಕೃಷಿಯಲ್ಲಿ ತೊಡಗಿಕೊಂಡಿರುತ್ತಾರೆ. ಸ್ವತಃ ಕೃಷಿಯ ಬಗ್ಗೆ ಒಲವು ಹೊಂದಿದ್ದ ಶಿಕ್ಷಕ ಗಿರೀಶ ಶಾಲಾಮಕ್ಕಳಿಗೆ ಈ ವಿಷಯದಲ್ಲಿ ಮಾರ್ಗದರ್ಶಕರಾಗಿದ್ದಾರೆ. ‘ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಮಾತ್ರವಲ್ಲ, ಪರಿಸರ ಪ್ರೀತಿ ಬೆಳೆಸಿ ಕೃಷಿಯ ಮಹತ್ವವನ್ನೂ ಹೇಳಿಕೊಡಬೇಕು’ ಎಂಬುದು ಅವರ ಧ್ಯೇಯ. ಆದ್ದರಿಂದ ಶಾಲೆಗೆ ಬಂದ ಮೊದಲ ವರ್ಷವೇ ವಿದ್ಯಾರ್ಥಿಗಳಿಗೆ ಕೃಷಿ ತರಬೇತಿ ನೀಡಲಾರಂಭಿಸಿದರು.

ವಿದ್ಯಾರ್ಥಿಗಳ ವಿಭಾಗ: ಶಾಲೆಯಲ್ಲಿ ಒಟ್ಟು 8 ಶಿಕ್ಷಕರಿದ್ದು, 125 ವಿದ್ಯಾರ್ಥಿಗಳಿದ್ದಾರೆ. ಒಬ್ಬ ವಿದ್ಯಾರ್ಥಿಗೆ ತಲಾ ನಾಲ್ಕು ಗಿಡಗಳನ್ನು ಪೋಷಣೆ ಮಾಡುವ ಜವಾಬ್ದಾರಿಯನ್ನು ವಹಿಸಿಕೊಡಲಾಗಿದೆ. ಬೆಂಡೆ, ಬದನೆ, ಮೆಣಸಿನಕಾಯಿ, ಟೊಮೆಟೋ, ಅವರೆ ಮುಂತಾದ ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ತರಗತಿಯ ಒಟ್ಟು ವಿದ್ಯಾರ್ಥಿಗಳಲ್ಲಿ 5 ವಿಭಾಗ ಮಾಡಿ, ಪ್ರತಿ ತಂಡಕ್ಕೂ ನಿರ್ದಿಷ್ಟ ಭೂಮಿ ನೀಡಲಾಗಿದೆ. ಅಲ್ಲಿ ಉಳುಮೆ ಮಾಡುವುದರಿಂದ ಹಿಡಿದು ಕಟಾವು ಮಾಡುವವರೆಗಿನ ಎಲ್ಲ ಕೆಲಸಗಳನ್ನು ಮಕ್ಕಳೇ ಮಾಡಬೇಕು.

ಔಷಧ ಸಸ್ಯಗಳು: ಶಾಲೆ ಆವರಣದಲ್ಲಿ ನಿರ್ಗಂಡಿ, ಅನಂತಮೂಲ, ಗವತಿ, ಕುಮಾರಿ, ಪಾಷಾಣಭೇದ, ಗುಗ್ಗುಳು, ಏರಕಂಡಕರ್ಕಟಿ, ನಾರಿಕೇಲ, ತರೂಣಿ, ಕಾಮಕಸ್ತೂರಿ, ಜಂಬೂ, ಆಮೃತ, ಭೈಂಗರಾಜ, ಚಿತ್ರಕ, ಪನಸ, ಆಮಲಕ್ಕಿ, ಸದಾಪಹ, ನುಗ್ಗೆ, ದಾಳಿಂಬೆ, ಯಂಕಿ, ಚಹಾ ಗಡ್ಡಿ, ಶತಾವರಿ, ತುಳಸಿ, ಅರ್ಕ, ಮದುನಾಶಿನಿ ಸೇರಿ ವಿವಿಧ ಬಗೆಯ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ.

ಆಟಕ್ಕೂ ಸೈ, ಪಾಠಕ್ಕೂ ಸೈ: ಈ ಶಾಲೆಯ ವಿದ್ಯಾರ್ಥಿಗಳು ಕೃಷಿ, ಪರಿಸರ ಕಾಳಜಿ ಜತೆಗೆ ಕ್ರೀಡೆ ಹಾಗೂ ವಿದ್ಯಾಭ್ಯಾಸದಲ್ಲೂ ಮುಂದಿದ್ದಾರೆ. ವಿದ್ಯಾರ್ಥಿನಿ ಗೌರಮ್ಮ ಪೂಜಾರ ವಾಲಿಬಾಲ್​ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಅವಳೀಗ ಕ್ರೀಡಾ ಮೀಸಲಾತಿಯಡಿ ಮೂಡಬಿದಿರೆಯ ಆಳ್ವಾಸ್ ಶಾಲೆಯಲ್ಲಿ ಉಚಿತ ಪ್ರವೇಶ ಪಡೆದು ಓದುತ್ತಿದ್ದಾಳೆ.

ಈ ಶಾಲೆಗೆ 2015-16ನೇ ಸಾಲಿನ ‘ಜಿಲ್ಲಾ ಅತ್ಯುತ್ತಮ ಪ್ರೌಢಶಾಲೆ’ ಹಾಗೂ ‘ಸ್ವಚ್ಛ ಪರಿಸರ ಶಾಲೆ’ ಹಾಗೂ ‘ಪರಿಸರ ಮಿತ್ರ’ ಪ್ರಶಸ್ತಿ ಲಭಿಸಿದೆ.

ಪಾಲಕರ ಪ್ರೋತ್ಸಾಹ

ಶಾಲೆಯ ಈ ಹಸಿರು ಪ್ರಯೋಗಕ್ಕೆ ಪೋಷಕರು, ಶಾಲಾ ಅಭಿವೃದ್ಧಿ ಸಮಿತಿ (ಎಸ್​ಡಿಎಂಸಿ) ಸದಸ್ಯರು, ಹಳೆ ವಿದ್ಯಾರ್ಥಿಗಳ ಸಂಘದ ಸದಸ್ಯರು ಮತ್ತು ಗ್ರಾಮಸ್ಥರ ಪೂರ್ಣ ಬೆಂಬಲವಿದೆ. ಎಸ್​ಡಿಎಂಸಿ ಅಧ್ಯಕ್ಷ ಸುರೇಶ ಸಣ್ಣಕ್ಕಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಿವಾನಂದ ಪೂಜಾರಿ ಅವರು ಶಾಲೆ ಕಟ್ಟಡ, ಶೌಚಗೃಹ ಹಾಗೂ ಆಟದ ಮೈದಾನ ನಿರ್ವಿುಸಲು ಆರ್ಥಿಕ ಸಹಾಯ ಮಾಡಿದ್ದಾರೆ.

ಬರುವ ತಿಂಗಳು ಚಿಕ್ಕಹಟ್ಟಿಹೊಳಿ ಶಾಲೆಗೆ ಇಂಗ್ಲಿಷ್ ಶಿಕ್ಷಕರನ್ನು ನೇಮಿಸಲಾಗುವುದು. ಡಿಎಸ್​ಇಆರ್​ಪಿ ಸಂಸ್ಥೆ ವತಿಯಿಂದ ನೀಡಲಾಗುವ ಕಂಪ್ಯೂಟರ್​ಗಳನ್ನು ಚಿಕ್ಕಹಟ್ಟಿಹೊಳಿ ಶಾಲೆಗೆ ನೀಡಲಾಗುವುದು. ಶಾಲೆಯ ಕಾಂಪೌಂಡ್ ನಿರ್ಮಾಣ ಜಿಪಂ ವ್ಯಾಪ್ತಿಗೆ ಬರುತ್ತದೆ. ಆದರೂ ಶಿಕ್ಷಣ ಇಲಾಖೆ ವತಿಯಿಂದ ಸಹಕಾರ ನೀಡಲು ಪ್ರಯತ್ನಿಸುತ್ತೇನೆ.

| ಆನಂದ ಬಿ. ಪುಂಡಲೀಕ ಡಿಡಿಪಿಐ, ಬೆಳಗಾವಿ

 

ಈ ಶಾಲೆಯಲ್ಲಿ ಹಲವು ವರ್ಷಗಳಿಂದ ಇಂಗ್ಲಿಷ್ ಶಿಕ್ಷಕರೇ ಇಲ್ಲ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ಹಿನ್ನಡೆಯಾಗುತ್ತಿದೆ. ಮೇಲಧಿಕಾರಿಗಳು ಗಮನಹರಿಸಿ ಇಂಗ್ಲಿಷ್ ಶಿಕ್ಷಕರ ನೇಮಕ ಹಾಗೂ ಕಂಪ್ಯೂಟರ್ ಅಳವಡಿಸಿಕೊಟ್ಟರೆ ವಿದ್ಯಾರ್ಥಿಗಳ ಸಾಧನೆಗೆ ಸಹಕಾರಿಯಾಗುತ್ತದೆ.

| ಗಿರೀಶ ನಾಯಿಕ ದೈಹಿಕ ಶಿಕ್ಷಣ ಶಿಕ್ಷಕ

 

ಈ ಶಾಲೆ ಖಾನಾಪುರ ದಟ್ಟಾರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಇಲ್ಲಿನ ಮಕ್ಕಳಿಗೆ ಕಾಡುಪ್ರಾಣಿಗಳ ಭೀತಿ ಇದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಇತ್ತ ಗಮನಹರಿಸಿ ಶಾಲೆಗೆ ಕಾಂಪೌಂಡ್ ನಿರ್ವಿುಸಿಕೊಟ್ಟರೆ ಮಕ್ಕಳಿಗೆ ಅನುಕೂಲವಾಗಲಿದೆ.

| ಸುರೇಶ ಸಣ್ಣಕ್ಕಿ ಎಸ್​ಡಿಎಂಸಿ ಅಧ್ಯಕ್ಷ

Leave a Reply

Your email address will not be published. Required fields are marked *

Back To Top