Wednesday, 12th December 2018  

Vijayavani

ಟ್ರಿನಿಟಿ ಸರ್ಕಲ್​​​ ಬಳಿ ಬಿರುಕು ಬಿಟ್ಟ ಪಿಲ್ಲರ್ - 10 ಕಿಮೀ ವೇಗದಲ್ಲಿ ಮೆಟ್ರೋ ಓಡಾಟ - ಸಮಸ್ಯೆ ಬಗೆಹರಿಸೋದಾಗಿ ಹೇಳಿದ ಸಿಎಂ        ಸದನದ ಹೊರಗೆ NPS ಆದೇಶ ಹಿನ್ನೆಲೆ - ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಸಿದ್ದತೆ -  ಸಂಕಷ್ಟ ತಂದ ಪೆನ್ಶನ್‌ ಸ್ಕೀಂ        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -  ರಾಜ್ಯಪಾಲರನ್ನು ಭೇಟಿಯಾಗಿ ಕಾಂಗ್ರೆಸ್ ಹಕ್ಕು ಮಂಡನೆ        ನಾಳೆ ಕೆಸಿಆರ್ ಪಟ್ಟಾಭಿಷೇಕ- ಪ್ರಮಾಣವಚನಕ್ಕೆ ಚಂದ್ರಶೇಖರ್ ರಾವ್ ಸಿದ್ಧತೆ - ರಾಜ್ಯಪಾಲರನ್ನು ಭೇಟಿಯಾದ ನಾಯಕ        ಶ್ರೀರಂಗಪಟ್ಟಣದಲ್ಲಿ ಶೂಟಿಂಗ್ ವೇಳೆ ಅವಾಂತರ - ಭರತ ಬಾಹುಬಲಿ ತಂಡದ ಮೇಲೆ ಹೆಜ್ಜೇನು ದಾಳಿ -ಏಳು ಮಂದಿ ಆಸ್ಪತ್ರೆಗೆ       
Breaking News

ಆಟ-ಪಾಠ ಫಿಫ್ಟಿ ಫಿಫ್ಟಿ!

Saturday, 11.08.2018, 3:05 AM       No Comments

ಪಾಠ ಬೇಡ, ಆಟವಾಡಿ ಅಂದ್ರೆ ಯಾವ ಮಕ್ಕಳು ತಾನೆ ಖುಷಿಪಡಲ್ಲ? ಇಂಥ ಖುಷಿಯ ದಿನಗಳು ಯಾವಾಗ ಬರುತ್ತವೋ ಎಂದು ನಿರೀಕ್ಷಿಸುತ್ತಿದ್ದ ಮಕ್ಕಳಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಹೋಂವರ್ಕ್, ಪರೀಕ್ಷೆ, ಟ್ಯೂಷನ್ ನೆಪದಲ್ಲಿ ಮಕ್ಕಳಿಗೆ ಆಟದ ಕೊರತೆಯಾಗಿದ್ದು ಇದರಿಂದ ಅವರ ದೈಹಿಕ, ಮಾನಸಿಕ ಬೆಳವಣಿಗೆಗೆ ಅಡ್ಡಿಯಾಗಿದೆ ಎಂಬುದನ್ನು ಕೇಂದ್ರ ಸರ್ಕಾರವೇ ಮನಗಂಡಿದೆ. ಶಾಲೆಯ ಅರ್ಧದಷ್ಟು ಅವಧಿಯನ್ನು ಆಟಕ್ಕೇ ಮೀಸಲಿಡುವ ಇಂಗಿತವನ್ನು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್​ಸಿಂಗ್ ರಾಥೋಡ್ ವ್ಯಕ್ತಪಡಿಸಿದ್ದಾರೆ. ಹೊರಾಂಗಣ ಆಟಗಳು ಮಕ್ಕಳಿಗೆ ಯಾಕೆ ಅಷ್ಟೊಂದು ಮುಖ್ಯ? ಬನ್ನಿ ತಿಳಿದುಕೊಳ್ಳೋಣ.

| ಬಾನುಪ್ರಸಾದ್ ಕೆ.ಎನ್.

ಶಾಲಾ ದಿನಗಳೇ ಹಾಗೆ. ದಿನವಿಡೀ ಆಡಿದರೂ ದಣಿವಾಗದಷ್ಟು ಉತ್ಸಾಹ. ಮೇಷ್ಟ್ರು ತರಗತಿಯಿಂದ 5 ನಿಮಿಷ ಹೊರಹೋದರೆ ಸಾಕು, ಕುಣಿದು ಕುಪ್ಪಳಿಸತೊಡಗುವ ಮಕ್ಕಳು. ಪಾಠ ಕೇಳಿ ಕೇಳಿ ನಿಸ್ತೇಜಗೊಂಡ ಮುಖದಲ್ಲಿ ಅದೇನೋ ನಿರಾಳ ಭಾವ. ಸಂಜೆ ಗಂಟೆ ಢಣಢಣ ಬಾರಿಸಿದ ಮೇಲಂತೂ ಸೀದಾ ಮೈದಾನಕ್ಕೇ ದಾಂಗುಡಿ. ಬಾಲ್ಯಕ್ಕೂ, ಆಟಕ್ಕೂ ಬಿಟ್ಟಿರಲಾರದ ಸಂಬಂಧ. ಚಿಣ್ಣರ ಗುಂಪು ಸೇರಿದೆ ಎಂದರೆ ಅಲ್ಲಿ ಯಾವುದಾದರೂ ಒಂದು ಆಟ ಆರಂಭವಾಗಿದೆ ಎಂದೇ ಅರ್ಥ.

ಅಷ್ಟೇ ಅಲ್ಲ, ಜೀವನವೇ ಒಂದು ಆಟಗಳ ಕೂಟವಿದ್ದಂತೆ. ಬೇಕಿದ್ದರೆ ಒಮ್ಮೆ ಪರೀಕ್ಷಿಸಿ ನೋಡಿ. ನಿತ್ಯ ಜೀವನದ ಚಟುವಟಿಕೆಗಳು ಆಟದಲ್ಲೇ ಅಂತ್ಯವಾಗುವಂತಹವು! ಓಡಾಟ, ಅಲೆದಾಟ, ತಿರುಗಾಟ, ಸುತ್ತಾಟ.. ಹೀಗೆ ಎಲ್ಲವೂ ಒಂದಲ್ಲ ಒಂದು ಬಗೆಯ ಆಟವೇ.

ಆದರೀಗ ಪರಿಸ್ಥಿತಿ ಬದಲಾಗಿದೆ. ನಗರಗಳಲ್ಲಿ ಆಟದ ಮೈದಾನಗಳೇ ಮಾಯವಾಗಿಬಿಟ್ಟಿವೆ. ಮಕ್ಕಳು ಬೆಳಗ್ಗಿನಿಂದ ಸಂಜೆವರೆಗೂ ಶಾಲೆಯಲ್ಲಿ. ನಂತರ ರಾತ್ರಿವರೆಗೂ ಟ್ಯೂಷನ್​ನಲ್ಲಿ ಇರುವಂತಾಗಿದೆ. ಇತ್ತೀಚೆಗೆೆ ಪ್ರಾಥಮಿಕ ಶಾಲೆಯಲ್ಲೂ ಡಿಜಿಟಲ್ ಕಲಿಕೆ ಹೊಸ ಟ್ರೆಂಡ್ ಆಗಿಬಿಟ್ಟಿದೆ. ವಿದ್ಯಾರ್ಥಿ, ಪಾಲಕರಾದಿಯಾಗಿ ಎಲ್ಲರೂ ಅಂಕ ಗಳಿಕೆಯ ರೇಸ್​ನಲ್ಲಿದ್ದಾರೆ. ಕ್ರೀಡೆಗಳನ್ನು ಶಿಕ್ಷಣದ ಭಾಗವಾಗಿಸಿದ್ದರೂ, ಅದು ಹೆಸರಿಗಷ್ಟೇ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ. ಈ ಎಲ್ಲದರ ನಡುವೆ ಮಗು ಕನಿಷ್ಠ ಚಟುವಟಿಕೆಗಳಲ್ಲೂ ಭಾಗಿಯಾಗದೆ ಇರುವಂತಹ ಪರಿಸ್ಥಿತಿ ಇದೆ. ಇದೆಲ್ಲವನ್ನೂ ಮನಗಂಡಿರುವ ಕೇಂದ್ರ ಸರ್ಕಾರ ಶಾಲಾ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ತರುವ ಮಹತ್ವದ ಹೆಜ್ಜೆ ಇಟ್ಟಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದಲೇ ಈಗಿರುವ ಪಠ್ಯಕ್ರಮದಲ್ಲಿ ಶೇ.50ರಷ್ಟನ್ನು ಕಡಿತಗೊಳಿಸಿ ಆಟದ ಅವಧಿ ಕಡ್ಡಾಯಗೊಳಿಸಲಾಗುವುದು. ಈ ಅವಧಿ ಕಡ್ಡಾಯವಾಗಿ ಕ್ರೀಡೆಗಳಿಗೇ ಮೀಸಲಿರಬೇಕೆಂಬ ಅಭಿಪ್ರಾಯವನ್ನು ಇತ್ತೀಚೆಗಷ್ಟೇ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮೊದಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವ್ಡೇಕರ್ ಕೂಡ ಎನ್​ಸಿಇಆರ್​ಟಿ ಪಠ್ಯಕ್ರಮದಲ್ಲೂ 2019ರಿಂದ ಶೇ.50ರಷ್ಟು ಕಡಿತವಾಗಲಿದೆ ಎಂದು ಘೊಷಿಸಿದ್ದರು. ಶಾಲಾ ದಿನಗಳಲ್ಲಿ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂಬುದು ಜಾವ್ಡೇಕರ್ ಅಭಿಪ್ರಾಯ. ಇದೀಗ ಕ್ರೀಡಾ ಸಚಿವಾಲಯ ಕೂಡ ಇದಕ್ಕೆ ಮನಸ್ಸು ಮಾಡಿದ್ದು, ಪಠ್ಯಕ್ರಮದಲ್ಲಿ ಮಕ್ಕಳ ನೆಚ್ಚಿನ ಆಟಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುವ ದಿನಗಳು ದೂರವಿಲ್ಲ.

ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯ ಮಹತ್ವ: ಮಕ್ಕಳ ಬೆಳವಣಿಗೆಗೆ ಆಟ ಮತ್ತು ಓದು ಎರಡೂ ಮುಖ್ಯ. ವಿದ್ಯಾರ್ಥಿ ಜೀವನವೆಂದರೆ ಆಟ, ಪಾಠ , ಮನರಂಜನೆ ಎಲ್ಲವೂ ಇರಬೇಕು. ಕೇವಲ ಓದುತ್ತಾ ಇರುವವರು ಮಾತ್ರವಲ್ಲ, ದೈಹಿಕವಾಗಿ ಕೂಡ ಶ್ರಮ ಇರಬೇಕು. ಗಟ್ಟಿಯಾದ ಶರೀರ ಇದ್ದರೆ ಆರೋಗ್ಯವಂತರಾಗಿರುತ್ತಾರೆ. ಆಟ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಪೂರಕ. ಕ್ರೀಡೆಯಲ್ಲಿ ಶ್ರದ್ಧೆ ದೃಢ ನಿಶ್ಚಯ ಸಮರ್ಪಣೆ ಅತ್ಯಗತ್ಯ, ಉತ್ತಮ ಕ್ರೀಡಾಪಟುವಾಗಲು ದೇಹದ ಸಾಮರ್ಥ್ಯದೊಂದಿಗೆ ಸಕಾರಾತ್ಮಕ ಭಾವನೆ ಅತ್ಯಗತ್ಯ. ಆಹಾರ, ವ್ಯಾಯಾಮ, ವಿಶ್ರಾಂತಿಗಳೂ ಸಮತೋಲನದಲ್ಲಿರಬೇಕು. ಕೇವಲ ಓದು ಮಾತ್ರ ಮಾನಸಿಕ ಮತ್ತು ದೈಹಿಕ ದೃಢತೆಗೆ ಕಾರಣವಲ್ಲ, ಆಟವಿದ್ದರೆ ಮಾತ್ರ ಪಾಠ ಚೆನ್ನ. ಆದರೆ ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಮಕ್ಕಳ ಗಮನವನ್ನು ಓದುವ ಕಡೆ ಮಾತ್ರ ಕೇಂದ್ರೀಕರಿಸಲು ಪಾಲಕರು ಎಲ್ಲ ಪಠ್ಯೇತರ ಚಟುವಟಿಗಳಿಗೂ ತಾತ್ಕಾಲಿಕ ವಿರಾಮದ ನೀಡಿ ಮಕ್ಕಳನ್ನು ಓದಿಗೆ ಮಾತ್ರ ಸೀಮಿತಗೊಳ್ಳುವಂತೆ ಮಾಡುತ್ತಾರೆ. ಇದರಿಂದ ಮಕ್ಕಳ ಚಿತ್ತ ಬೇರೆಲ್ಲೂ ವಾಲದೆ ಓದಿನತ್ತ ಮಾತ್ರ ಇರಲು ಸಹಾಯವಾಗುತ್ತದೆ ಎಂಬುದು ಬಹುಪಾಲು ಪೋಷಕರ ನಂಬಿಕೆ. ಆದರೆ ಮಕ್ಕಳಿಗೆ ಒತ್ತಡವೂ ಇದ್ದೇ ಇರುತ್ತದೆ. ಪರೀಕ್ಷೆ ಸಮಯದಲ್ಲಿ ಅದು ಇನ್ನಷ್ಟು ಹೆಚ್ಚು. ಆ ಸಮಯದಲ್ಲಿ ಪೋಷಕರು ಮಕ್ಕಳಿಗೆ ಮಾಮೂಲಿಯಂತೆ ಬಿಡದೆ, ಬರಿ ಓದಿನಲ್ಲಿ ತೊಡಗುವಂತೆ ಒತ್ತಾಯಿಸುತ್ತಾರೆ. ಇದು ಸರಿಯಲ್ಲ. ಮಕ್ಕಳಿಗೆ ವಿರಾಮ ಅಗತ್ಯ ಹೆಚ್ಚಿರುತ್ತದೆ. ಆಟಗಳು ಅಂಥ ಆರೋಗ್ಯದಾಯಕ ವಿರಾಮ ನೀಡುತ್ತವೆ.

ಹೆಚ್ಚಿನ ಸಮಯವನ್ನು ಕಂಪ್ಯೂಟರ್, ವೀಡಿಯೊಗೇಮ್ ಟಿವಿ ಅಂತ ಕಳೆಯುವುದರಿಂದ ದೈಹಿಕ ವ್ಯಾಯಾಮ ಕಡಿಮೆಯಾಗಿದೆ. ಈ ರೀತಿ ಆದರೆ ಮಕ್ಕಳ ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳುತ್ತದೆ. ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪ್ರತಿದಿನ 60 ನಿಮಿಷ ವ್ಯಾಯಾಮ ಮಾಡುವುದು ಒಳ್ಳೆಯದು. ಮಕ್ಕಳನ್ನು ತರಗತಿಯಲ್ಲೇ ಅಥವಾ ಮನೆಯಲ್ಲೇ ಕೂಡಿ ಹಾಕಿಕೊಳ್ಳುವ ಬದಲು ಹಾಕಿ, ಕ್ರಿಕೆಟ್, ಟೆನಿಸ್ ಮೊದಲಾದ ಆಟಗಳಲ್ಲಿ ತೊಡಗಿಸಲು ಸರ್ಕಾರ ಮುಂದಾಗಿದೆ. ಸರ್ಕಾರದ ಪ್ರಯತ್ನವಿದ್ದರಷ್ಟೇ ಸಾಲದು ಪಾಲಕರ ಪೋ›ತ್ಸಾಹವೂ ಬೇಕು.

ಮಕ್ಕಳಿಗೆ ಬೇಕು ಆಟಗಳು

ಹೆಚ್ಚಿನ ಪಾಲಕರು ಮಕ್ಕಳಿಗೆ ಓದಿ ಎಂದು ಹೇಳುತ್ತಾರೆಯೇ ಹೊರತು ಅಟವಾಡಿ ಎಂದು ಹೇಳುವುದಿಲ್ಲ. ಮಕ್ಕಳು ಆಟವಾಡುವುದು ಸಮಯವ್ಯರ್ಥ ಎಂದು ಕೆಲವರಿಗೆ ಅನಿಸಬಹುದು. ಆದರೆ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ವ್ಯಾಯಾಮ ಮತ್ತು ಆಟ ಒಳ್ಳೆಯದು. ಆಟಗಳಿಂದಾಗುವ ಲಾಭಗಳ ಅರಿವಿದ್ದರೆ, ಯಾವ ಪಾಲಕರೂ ಮಕ್ಕಳನ್ನು ಆಟವಾಡದಂತೆ ತಡೆಯುವುದಿಲ್ಲ. ಮಗುವಿನ ಶಾರೀರಿಕ, ಸಾಮಾಜಿಕ, ಮಾನಸಿಕ ಮತ್ತು ಬೌದ್ಧಿಕ ವಿಕಾಸದಲ್ಲಿ ಆಟಗಳು ಮಹತ್ವದ ಪಾತ್ರ ವಹಿಸುತ್ತವೆ. ಆಟವಾಡುತ್ತ ಮಕ್ಕಳು ಇತರ ಮಕ್ಕಳ ಜತೆ ಹೊಂದಿಕೊಂಡು ಹೋಗುವುದನ್ನು, ಅವರ ಜತೆ ಸಹಕರಿಸುವುದನ್ನು, ಕೆಲವೊಮ್ಮೆ ಅನುಕರಿಸುವುದನ್ನು ಕಲಿತುಕೊಳ್ಳುತ್ತಾರೆ. ಎಲ್ಲರೊಂದಿಗೂ ಬೆರೆಯುವುದನ್ನು ಅಭ್ಯಾಸ ಮಾಡುತ್ತಾರೆ. ಒಟ್ಟಾರೆ ಮನೋದೈಹಿಕ ವಿಕಾಸದಲ್ಲಿ ಕ್ರೀಡೆಗಳು ಮಹತ್ವದ ಪಾತ್ರ ಹೊಂದಿವೆ. ಹೊರಾಂಗಣಗಲ್ಲಿ ಆಡುವ ಆಟಗಳಿಂದ ಶಾರೀರಿಕ ವ್ಯಾಯಾಮವಾಗುತ್ತದೆ, ಇದರಿಂದ ಅವರ ಶರೀರ ಸದೃಢವಾಗಲು ಸಹಾಯವಾಗುತ್ತದೆ. ಬಾಲವಿಹಾರದಲ್ಲಿ ಮಕ್ಕಳಿಗೆ ಆಟಿಕೆ ಮತ್ತು ಆಟಗಳ ಮಾಧ್ಯಮದಿಂದಲೇ ಶಿಕ್ಷಣ ನೀಡುತ್ತಾರೆ. ಇಂತಹ ಆಟಗಳಿಂದ ಮಕ್ಕಳ ಮಾನಸಿಕ ಬೆಳವಣಿಗೆಗೆ ಸಹಾಯವಾಗುತ್ತದೆ.

ಆಟಗಳಿಂದಾಗುವ ಪ್ರಯೋಜನ

 • ಅಧ್ಯಯನ ಮತ್ತಿತರ ಕೆಲಸಗಳಿಂದ ಆಗುವ ಏಕತಾನತೆ ಯನ್ನು ನಿವಾರಿಸುತ್ತವೆ.
 • ತಂಡದಲ್ಲಿ ಆಡುವ ಆಟಗಳಿಂದ ಮಕ್ಕಳಲ್ಲಿ ಸಮಷ್ಟಿ ಭಾವ ರೂಪುಗೊಳ್ಳುತ್ತದೆ.
 • ಆಟಗಳಿಂದ ಕಲ್ಪನಾ ಶಕ್ತಿಯ ವೃದ್ಧಿಯಾಗುತ್ತದೆ.
 • ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಲು ಆಟಗಳು ಕಲಿಸುತ್ತವೆ.
 • ನಿಯಮಗಳನ್ನು ಪಾಲಿಸುವ ಸಂಸ್ಕಾರವನ್ನು ಆಟಗಳು ಕಲಿಸುತ್ತವೆ.
 • ಬುದ್ಧಿವಂತಿಕೆ, ಆಯೋಜನ ಕೌಶಲ, ತಂಡ ನಿರ್ವಹಣಾ ಕೌಶಲ, ವಿವೇಚನೆ ಮುಂತಾದ ಗುಣಗಳ ವೃದ್ಧಿಯಾಗುತ್ತದೆ.
 • ಆರೋಗ್ಯಕರ ಬೆಳವಣಿಗೆ ಉಂಟಾಗುತ್ತದೆ, ದೇಹದ ತೂಕ ಮಿತಿಯಲ್ಲಿರುತ್ತದೆ.
 • ಮಕ್ಕಳ ಮೂಳೆ ಮತ್ತು ಸ್ನಾಯುಗಳು ಬಲವಾಗುತ್ತವೆ.
 • ಮಧುಮೇಹ ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ಬರದಂತೆ ತಡೆಯುತ್ತದೆ.
 • ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತವೆ.
 • ಮಾನಸಿಕ ಒತ್ತಡ ನಿಯಂತ್ರಿಸುವ ಸಾಮರ್ಥ್ಯ ದೊರೆಯುತ್ತದೆ.
 • ಮಕ್ಕಳಲ್ಲಿ ಏಕಾಗ್ರತೆ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ.

Leave a Reply

Your email address will not be published. Required fields are marked *

Back To Top