Friday, 16th November 2018  

Vijayavani

Breaking News

ಸೋಮಾರಿಗಳ ರಾಜ ಸ್ಲೋತ್!

Saturday, 07.07.2018, 3:04 AM       No Comments

| ಸುರೇಶ್ ಮರಕಾಲ ಸಾೖಬರಕಟ್ಟೆ

ಮಕ್ಕಳೇ, ನಾವು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ, ಮನೆಕೆಲಸ ಮಾಡಿಕೊಂಡು ಬಾರದ ವಿದ್ಯಾರ್ಥಿಗಳಿಗೆ ಶಿಕ್ಷಕರು ಕಿವಿಹಿಂಡಿ, ಗಾಳಿಬೆತ್ತದಿಂದ ನಾಲ್ಕು ಬಿಗಿದು, ನಾವು ಭರತನಾಟ್ಯದ ಭಂಗಿಗಳನ್ನು ಅಣಕಿಸುವಂತೆ ನರ್ತಿಸುತ್ತಾ ಅಂಗಾಂಗಗಳನ್ನು ಉಜ್ಜಿಕೊಂಡು ನೋವನ್ನು ಆಸ್ವಾದಿಸುತ್ತಿರುವಾಗ, ಮತ್ತೂ ಕೋಪವೇರಿ ಮೇಲೆ ನಾಲ್ಕು ಬಾರಿಸಿ, ಸೋಮಾರಿಗಳಾ.. ಎಂಬ ಬಿರುದುಬಾವಲಿ ಕೊಡುತ್ತಿದ್ದರು.

ಮುಂದೆ, ನಮಗಿಂತಲೂ ದೊಡ್ಡದೊಡ್ಡ ಸೋಮಾರಿಗಳು ಪ್ರಾಣಿ ಪ್ರಪಂಚದಲ್ಲಿ ಇವೆಯೆಂದು ತಿಳಿದಮೇಲೆ, ಗುರುಗಳು ಕೊಟ್ಟ ಸೋಮಾರಿ ಪಟ್ಟ ತಪ್ಪಿತೆಂದು ಖುಷಿಯಾಗಿತ್ತು. ಪ್ರಾಣಿ ಪ್ರಪಂಚದಲ್ಲಿ ಎಂತೆಂಥಾ ಸೋಮಾರಿಗಳಿದ್ದಾವೆ- ತಿಳಿದರೆ ಅಚ್ಚರಿಪಡುತ್ತೀರಿ.

ಈ ಸೋಮಾರಿಗಳ ರಾಜ್ಯಕ್ಕೆ ಒಡೆಯ ಸ್ಲೋತ್. ಶಬ್ದವೇ ಹೇಳುವಂತೆ ಅದೊಂದು ಹುಟ್ಟಾ ಸೋಮಾರಿ, ಎಷ್ಟು ಸೋಮಾರಿಯೆಂದರೆ ವೈರಿ ಬಂದು ಮೈಮೇಲೆರಗಿದರೂ, ತಪ್ಪಿಸಿಕೊಂಡು ಓಡಿಹೋಗಲೂ ಉದಾಸೀನ ಪಟ್ಟು, ಕೊಲ್ಲೋದಾದ್ರೆ ಕೊಲ್ಲಪ್ಪಾ.. ಎನ್ನುವಷ್ಟು! ವಾಸ- ಮಧ್ಯ ಮತ್ತು ದಕ್ಷಿಣ ಅಮೆರಿಕಾ. ಮೆಗಲೊನಿಕಿಡೆ ಕುಟುಂಬಕ್ಕೆ ಸೇರಿದ ಈ ಪ್ರಾಣಿಯ ರೂಪ, ಜೀವನ ಎಲ್ಲವೂ ಒಂದಕ್ಕಿಂತ ಒಂದು ವಿಚಿತ್ರ.

ಸ್ಲೋತ್​ಗಳ ಸೋಮಾರಿತನದ ಪರಾಕಾಷ್ಠೆ ಗೊತ್ತಾಗಬೇಕಾದರೆ, ಅದು ನೆಲದ ಮೇಲೆ ನಡೆಯುವುದನ್ನು ನೋಡಬೇಕು. ನೆಲದಲ್ಲಿ ಸ್ಲೋತ್​ಗಳು ತೀರಾ ಅಸಹಾಯಕ ಪ್ರಾಣಿ. ನೆಲದಲ್ಲಿ ಅವುಗಳು ನಿಮಿಷಕ್ಕೆ ಅತೀ ಹೆಚ್ಚೆಂದರೆ ನಾಲ್ಕು ಮೀಟರ್ ನಡೆಯುತ್ತವೆ! ಮೊಲ, ಅಳಿಲಿನಂತಹ ಪ್ರಾಣಿಗಳು ಈ ದೂರವನ್ನು ಕೇವಲ ಅರ್ಧದಿಂದ ಒಂದು ಸೆಕೆಂಡಿನೊಳಗೆ ದಾಟಬಲ್ಲವು! ಸ್ಲೋತ್ ಈ ನಾಲ್ಕು ಮೀಟರ್ ನಡೆಯಲೂ ಅತ್ಯಂತ ಪ್ರಯಾಸಪಡುತ್ತದೆ. ಒಂದೊಂದು ಹೆಜ್ಜೆ ಇಡುವಾಗಲೂ ಬೇಕೋ ಬೇಡವೋ ಎಂಬಂತೆ ಅತೀ ಆಲಸಿಯಾಗಿ ಇಡುತ್ತದೆ. ಶತ್ರುಗಳು ಅಟ್ಟಿಸಿಕೊಂಡು ಬರುತ್ತಿರುವುದನ್ನು ನೋಡಿದರೂ, ಸ್ಲೋತ್ ತನ್ನ ವೇಗವನ್ನು ಕಿಂಚಿತ್ತೂ ಹೆಚ್ಚಿಸುವುದಿಲ್ಲ. ಅಷ್ಟೇ ಅಲ್ಲ, ಬೇಟೆಯೊಂದು ತನ್ನನ್ನು ಹಿಡಿದಾಗಲೂ, ತಪ್ಪಿಸಿಕೊಳ್ಳಲು ಅದು ಕಿಂಚಿತ್ತೂ ಮಿಸುಕಾಡುವುದಿಲ್ಲ! ಆದರೊಂದು ಮಾತು, ನೆಲದಲ್ಲಿ ಅಸಹಾಯಕನಾಗಿ ಬಿಡುವ ಸ್ಲೋತ್ ನೀರಿನಲ್ಲಿ ಮಾತ್ರ ಚಾಂಪಿಯನ್! ನೀರಿನಲ್ಲಿರುವಾಗ ಅಟ್ಟಿಸಿಕೊಂಡು ಬರುವ ಮೊಸಳೆಗೂ ಸಿಗದಷ್ಟು ವೇಗವಾಗಿ ಈಜಬಲ್ಲದು!

ಸ್ಲೋತ್​ಗಳ ಮುಖ್ಯ ಆಹಾರ ಎಲೆಗಳು- ಅದೂ ಅತ್ಯಂತ ಎತ್ತರದ ಮರಗಳ ಎಲೆಗಳು. ಪ್ರಾಣಿ ಪ್ರಪಂಚದ ಅದ್ಭುತಗಳಲ್ಲಿ ಒಂದಾದ ಸ್ಲೋತ್ ಹುಟ್ಟುವುದು, ವಾಸಮಾಡುವುದು, ಆಹಾರ ಸೇವಿಸುವುದು, ಮರಿಹಾಕುವುದು, ಕೊನೆಗೆ ಸಾಯುವುದು ಕೂಡ ಮರದ ಮೇಲೆಯೇ! ಪ್ರಕೃತಿ ಸ್ಲೋತ್​ಗೆ ಎಂತಹ ಉಗುರುಗಳನ್ನು ನೀಡಿದೆಯೆಂದರೆ, ಅದರ ಆರಿಂಚು ಉದ್ದದ ಬಾಗಿದ ಉಗುರುಗಳು ಕೊಕ್ಕೆಯ ಹಾಗೆ ಮರವನ್ನು ಬಾಚಿ ಹಿಡಿದರೆ, ಮರದಿಂದ ಅದನ್ನು ಬಿಡಿಸಲು ಬ್ರಹ್ಮನಿಂದಲೂ ಸಾಧ್ಯವಿಲ್ಲ! ಯಾವುದೇ ಬಲವನ್ನು ಹಾಕದೇ ಸ್ಲೋತ್ ಮರದ ಕೊಂಬೆಗೆ- ಕೊಡೆಯನ್ನು ನೇತು ಹಾಕಿದ ಹಾಗೆ- ನೇತು ಬೀಳಬಲ್ಲದು. ಎಷ್ಟೋ ಬಾರಿ ಬೇಟೆಗಾರರು ಹೊಡೆದ ಗುಂಡಿನಿಂದ ಸ್ಲೋತ್​ಗಳು ಸತ್ತಮೇಲೂ ನೆಲಕ್ಕೆ ಬೀಳದೆ, ಹಾಗೇ ಮರದಲ್ಲಿ ತಲೆಕೆಳಗಾಗಿ ನೇತಾಡುತ್ತಾ ಇರುತ್ತವೆ!

ಪ್ರಕೃತಿ ಸಹಜವಾಗಿ ಬಂದಿರುವ ಉಗುರುಗಳನ್ನು ತನ್ನ ರಕ್ಷಣೆಗಾಗಿ ಕೂಡ ಬಳಸಿಕೊಳ್ಳುತ್ತದೆ. ಬಲವಾಗಿ ಬೀಸಿದ ಅದರ ಪಂಜುಗಳು ಶತ್ರುವಿನ ದೇಹದ ಮಾಂಸವನ್ನು ಸೀಳಿಕೊಂಡು, ನಾಲ್ಕಿಂಚಿನ ಹೊಂಡದ ದಾರಿಯನ್ನು ಸೃಷ್ಟಿಸೀತು! ಆದರೆ ಅದು ಹಾಗೆ ತನ್ನ ಪಂಜುಗಳನ್ನು ಬೀಸುವುದೇ ಅತ್ಯಪೂರ್ವ!

ಸ್ಲೋತ್​ನ ಮತ್ತೊಂದು ವಿಚಿತ್ರ ಅವುಗಳ ರೋಮಗಳು. ಶತ್ರುವನ್ನು ಮೋಸಗೊಳಿಸಲು ಸ್ಲೋತ್ ಅದ್ಭುತವಾಗಿ ವೇಷ ಮರೆಸುವ ತಂತ್ರವನ್ನು ಅನುಸರಿಸುತ್ತದೆ. ಅದರ ಮೈಮೇಲೆ ಕುರಿಯ ಮೈಗಿಂತಲೂ ದಪ್ಪವಾದ, ಗೋಣಿದಾರದಂತೆ ಒರಟಾದ, ಜತೆಗೆ ಸುತ್ತಲಿನ ಪರಿಸರದೊಂದಿಗೆ ತದ್ರೂಪವಾಗಿ ಹೊಂದಿಕೊಳ್ಳುವ ರೋಮರಾಶಿಯಿದೆ. ಈ ರೋಮಗಳು ಸುತ್ತಲಿನ ಪರಿಸರದೊಂದಿಗೆ ಎಷ್ಟು ಐಕ್ಯವಾಗಿ ಬಿಡುತ್ತವೆಯೆಂದರೆ, ಕಾಲಬುಡದಲ್ಲಿಯೆ ಸ್ಲೋತ್ ಬಿದ್ದುಕೊಂಡಿದ್ದರೂ ಶತ್ರುವಿಗೆ ಅದರ ಇರುವಿಕೆಯೇ ಗೊತ್ತಾಗದೆ ದಾಟಿಕೊಂಡು ಹೋಗುತ್ತದೆ. ಸ್ಲೋತ್ ನಗುತ್ತಾ ಬಿದ್ದುಕೊಂಡಿರುತ್ತದೆ.

ತಮಾಷೆಯೆಂದರೆ ಸ್ಲೋತ್​ನ ಮೂತಿ ಯಾವಾಗಲೂ ನಗುತ್ತಿರುವ ಮುಖದಂತೆ ಕಾಣುತ್ತಿರುತ್ತದೆ. ಇನ್ನೊಂದು ವಿಶೇಷ, ಎಲ್ಲ ಪ್ರಾಣಿಗಳಿಗೆ ರೋಮಗಳು ಕೆಳಮುಖವಾಗಿ ಬಾಗಿಕೊಂಡಿದ್ದರೆ, ಸ್ಲೋತ್​ನ ರೋಮಗಳು ಮೇಲ್ಮುಖವಾಗಿರುತ್ತದೆ. ಸ್ಲೋತ್ ತನ್ನ ಜೀವಮಾನವಿಡೀ ಮರದ ಮೇಲೆ ತಲೆಕೆಳಗಾಗಿ ನೇತಾಡುತ್ತಾ ಜೀವಿಸಬೇಕಾಗಿರುವುದೇ ಇದಕ್ಕೆ ಕಾರಣ. ಮೇಲ್ಮುಖವಾಗಿರುವ ಅದರ ರೋಮಗಳು ತಲೆಕೆಳಗಾಗಿ ನೇತಾಡುವಾಗ ಕೆಳಮುಖವಾಗಿರುತ್ತದೆ.

ಹೀಗಾಗಿ ಎಂತಹ ಮಳೆ ಬಂದರೂ ಒಂದೇಒಂದು ನೀರಹನಿಯೂ ರೋಮವನ್ನು ದಾಟಿ ಒಳಸುಳಿಯಲಾರದು. ಒಂದೊಮ್ಮೆ ಅದರ ರೋಮಗಳು ಕೆಳಮುಖವಾಗಿ ಬಾಗಿಕೊಂಡಿದ್ದರೆ ತಲೆಕೆಳಗಾಗಿ ನೇತಾಡುವಾಗ ರೋಮಗಳ ಮೂಲಕ ನೀರು ಒಳಹೊಕ್ಕು, ಸ್ಲೋತ್ ಚಳಿಯಿಂದ ಗಡಗಡ ನಡುಗಬೇಕಾಗುತ್ತಿತ್ತು. ಪ್ರಕೃತಿ ನೀಡಿದ ಅದ್ಭುತ ಹೊಂದಾಣಿಕೆ ಇದು!

ಸ್ಲೋತ್​ಗಳು ಇಂದು ವಿನಾಶದ ಅಂಚಿನಲ್ಲಿವೆ. ಅದರಲ್ಲೂ 3 ಉಗುರುಗಳ ಪಿಗ್ಮಿ ಸ್ಲೋತ್​ಗಳು ನಾಶದ ಹೊಸ್ತಿಲು ತುಳಿದಾಗಿದೆ. ಇದಕ್ಕೆ ಕಾರಣ ಕಾಡಿನ ಯಾವ ಪ್ರಾಣಿಯೂ ಅಲ್ಲ; ಬದಲಿಗೆ ಇವುಗಳು ಹೆಚ್ಚು ವಾಸಿಸುವ ಕೋಸ್ಟಾರಿಕಾ ಪ್ರದೇಶದಲ್ಲಿ ಮನುಷ್ಯನು ಹಾಕಿರುವ ವಿದ್ಯುತ್ ಬೇಲಿಗಳು. ಈ ವಿದ್ಯುತ್ ಬೇಲಿಗಳನ್ನು ತಿಳಿಯದೆ ರ್ಸ³ಸಿ ಅದೆಷ್ಟೋ ಸ್ಲೋತ್​ಗಳು ನಿರ್ನಾಮವಾಗಿವೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ, ನಮಗಿಂತ ಸೋಮಾರಿ ಪ್ರಾಣಿಯೊಂದು ಭೂಮಿ ಮೇಲಿತ್ತು ಎನ್ನಲು ನಾವು ಚಿತ್ರಗಳನ್ನು ಆಶ್ರಯಿಸಬೇಕಾದೀತು!

ಸ್ಲೋತ್ ಇಲ್ಲೂ ಸೋಮಾರಿ!

ಸದಾ ಮರದ ಮೇಲೆ ವಾಸ ಮಾಡುವ ಸ್ಲೋತ್​ಗಳು ಮರವಿಳಿದು ನೆಲಕ್ಕೆ ಬರುವುದು ಏನಿದ್ದರೂ ಮಲವಿಸರ್ಜನೆ ಮಾಡಲು. ಮಲವಿಸರ್ಜನೆಯಲ್ಲೂ ಸ್ಲೋತ್ ಸೋಮಾರಿ! ಸ್ಲೋತ್ ಮಲವಿಸರ್ಜನೆ ಮಾಡುವುದು ವಾರಕ್ಕೆ ಒಮ್ಮೆ ಮಾತ್ರ! ಸ್ಲೋತ್​ಗಳು ಯಾವಾಗಲೂ ಒಂದು ನಿರ್ದಿಷ್ಟ ಸ್ಥಳದಲ್ಲೆ ಮಲವಿಸರ್ಜನೆ ಮಾಡುತ್ತವೆ ಮತ್ತು ಪ್ರತಿ ಬಾರಿಯೂ ಅದೇ ಸ್ಥಳಕ್ಕೆ ಹೋಗುತ್ತವೆ. ಹೀಗಾಗಿ ಈ ಸಮಯದಲ್ಲೆ ಹೆಚ್ಚಾಗಿ ಅವುಗಳು ಶತ್ರುಗಳ ಕೈಗೆ ಸುಲಭವಾಗಿ ಸಿಕ್ಕಿಬೀಳುತ್ತವೆ.

ನಿದ್ದೆ ಹೋದರೆ ಕುಂಭಕರ್ಣ

ಸ್ಲೋತ್​ನ ಸೋಮಾರಿತನಕ್ಕೆ ಮತ್ತೊಂದು ಕಿರೀಟ ಅದರ ನಿದ್ದೆ! ಮರದಲ್ಲಿ ತಲೆಕೆಳಗಾಗಿ ತೂಗುಬಿದ್ದು ದಿನಕ್ಕೆ ಕಡಿಮೆಯೆಂದರೂ ಹದಿನೈದರಿಂದ ಹದಿನೆಂಟು ಗಂಟೆಗಳ ಕಾಲ ನಿದ್ದೆ ಮಾಡುತ್ತದೆ! ನಿದ್ದೆ ಬಿಟ್ಟರೆ ಅದು ಮಾಡುವ ಇನ್ನೊಂದು ಕೆಲಸ ತಿನ್ನುವುದು! ಸ್ಲೋತ್ ಎಲೆಗಳನ್ನಷ್ಟೇ ತಿಂದು ಬದುಕುತ್ತದೆ. ಎಲೆಗಳಲ್ಲಿ ಕಡಿಮೆ ಪೌಷ್ಠಿಕಾಂಶವಿರುವುದರಿಂದ, ಎಲೆಗಳನ್ನೇ ನಂಬಿ ಬದುಕುವ ಅದು, ಹೊಟ್ಟೆ ಬಿರಿಯುವಷ್ಟು ಎಲೆಗಳನ್ನು ತಿನ್ನುತ್ತಲೆ ಇರಬೇಕು. ಪೂರ್ಣವಾಗಿ ತುಂಬಿದ ಸ್ಲೋತ್​ನ ಹೊಟ್ಟೆಯು ಅದರ ದೇಹದ ಮೂರನೇ ಎರಡರಷ್ಟುತೂಗುತ್ತದೆ!

Leave a Reply

Your email address will not be published. Required fields are marked *

Back To Top