ಸೂಪರ್ ಆಗಿತ್ತು ರಜೆ

‘ಹೇಗಿತ್ತು ಮಕ್ಕಳೆ ನಿಮ್ಮ ಬೇಸಿಗೆ ರಜೆ..?’ ಎಂದು ವಿಜಯವಾಣಿ ಬೇಸಿಗೆ ರಜೆ ಮುಗಿಸಿದ ಮಕ್ಕಳನ್ನು ಕೇಳಿದಾಗ ಮಕ್ಕಳಿಂದ ಪತ್ರಗಳ ಮಹಾಪೂರ ಹರಿದು ಬಂತು. ಒಬ್ಬೊಬ್ಬರದು ಒಂದೊಂದು ಥರದ ಕಥೆ. ಕೆಲವರಿಗೆ ಹೇಳಿಕೊಂಡಷ್ಟು ಮುಗಿಯದ ಬೇಸಿಗೆ ಶಿಬಿರದ ನೆನಪುಗಳು, ಅಜ್ಜಿ ಮನೆಯ ಆಟಗಳು. ಇದರಲ್ಲಿ ಆಯ್ದ ಕೆಲ ಪತ್ರಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಮಲೆನಾಡಿನ ನದಿ ತೀರದಲ್ಲಿ ನೀರಿನಾಟ

ಅಪ್ಪ ಅಮ್ಮ ಬಿಜಿ ಇದ್ದುದರಿಂದ ರಜೆಯಲ್ಲಿ ಅಜ್ಜಿಯೇ ಬಂದು ನನ್ನನ್ನು ಹೊನ್ನಾಳಿಗೆ ಕರೆದೊಯ್ದರು. ಕೋಟೆ ಪ್ರದೇಶದಲ್ಲಿನ ಅಜ್ಜಿ ಮನೆ ಸನಿಹದಲ್ಲೇ ದೊಡ್ಡ ಅಶ್ವತ್ಥ ಕಟ್ಟೆ. ಪಕ್ಕವೇ ತುಂಗಭದ್ರಾ ನದಿ. ಅಲ್ಲಿ ಮಾವ, ಅತ್ತೆ ಎಲ್ಲರಿಗೂ ನನ್ನ ಕಂಡರೆ ಪ್ರೀತಿ. ಅವರ ಪುಟ್ಟ ಮಗು ಪ್ರಣೀತಾ ಜತೆ ಆಡುತ್ತಾ 6 ದಿನ ಕಳೆದದ್ದೇ ಗೊತ್ತಾಗಲಿಲ್ಲ. ಅಜ್ಜಿ ಮನೆ ಎದುರಿನ ಅಂಗಳವೆಲ್ಲವೂ ನಮಗೆ ಆಟದ ಬಯಲು. ಅಲ್ಲಿ ಯಾವುದೇ ಟ್ರಾಫಿಕ್ ಸಮಸ್ಯೆ ಇಲ್ಲ. ಚಿನ್ನಿಕೋಲು, ಚೆಂಡು, ಲಗೋರಿ, ಹುಲಿಕಟ್ಟೆ ಮನೆಯಾಟ, ಕಳ್ಳ-ಪೊಲೀಸ್, ಕಬಡ್ಡಿ, ಕ್ರಿಕೆಟ್ಟು- ಆಟವೋ ಆಟ. ಅಕ್ಕಪಕ್ಕದ ಮನೆ ಮಕ್ಕಳು, ನನ್ನ ಹಾಗೆ ಅಜ್ಜಿ ಮನೆಗೆ ಬಂದವರು; ಎಲ್ಲರೂ ಸೇರಿ ಆಡಿದ್ದೇ ಆಡಿದ್ದು. ಮಾವನ ಜತೆ ಸೇರಿ ಎಲ್ಲರೂ ತೀರ್ಥಹಳ್ಳಿ ಸಮೀಪ ತುಂಗಾತೀರದಲ್ಲಿರುವ ಚಿಬ್ಬಲುಗುಡ್ಡೆಗೆ ಪ್ರವಾಸ ಹೋಗಿದ್ದೆವು. ಬಗೆಬಗೆ ಜಾತಿಯ, ಥರಾವರಿ ಬಣ್ಣದ ಮೀನುಗಳನ್ನು ನೋಡಿದೆವು. ಅಕ್ಕಿ, ಮಂಡಕ್ಕಿ ಹಾಕಿದೆವು. ಹಿಡಿಯಲು ಕೈ ಹಾಕಿದ ಕೂಡಲೇ ಜಾರಿ ಹೋಗುತ್ತಿದ್ದವು! ನಾವೂ ಸಾಕಷ್ಟು ನೀರಾಟ ಆಡಿದೆವು. ನಂತರ ಮುಳಬಾಗಿಲಿನಲ್ಲಿರುವ ನೆಂಟರ ಮನೆಗೂ ಹೋಗಿದ್ದೆವು. ಅಂಬಾ ಕರುಗಳಿಗೆ ಹುಲ್ಲು ತಿನ್ನಿಸಿ, ಮುದ್ದು ಮಾಡಿ ಹಿತ್ತಲಿನ ತೋಟದಲ್ಲಿ ಆಡಿದೆವು. ಅಲ್ಲಿ ಬಾಳೆ, ಅಡಿಕೆ, ತೆಂಗು, ಮಾವು ಬೆಳೆದು ನಿಂತಿದ್ದವು. ಈ ಸಲದ ರಜೆಯಲ್ಲಿ ತುಂಗಾನದಿಯಲ್ಲಿ ಆಡಿದ್ದನ್ನು, ಹಾರಿ ಕುಣಿದಿದ್ದನ್ನು ಎಂದೂ ಮರೆಯಲಾಗದು.

| ಕೌಸಲ್ಯಾ ರಘುರಾಂ 9ನೇ ತರಗತಿ, ಶ್ರೀ ಸರಸ್ವತಿ ವಿದ್ಯಾಮಂದಿರ, ವಿ.ವಿ.ಪುರಂ, ಬೆಂಗಳೂರು


ಒಂದು ದಿನದ ಕೋಟೆ ಟೂರ್

ರಜೆಯಲ್ಲಿ ಚಿತ್ರದುರ್ಗಕ್ಕೆ ಒನ್ ಡೇ ಟೂರ್ ಪ್ಲಾ್ಯನ್ ಮಾಡಿದೆವು. ಅಂದು ಬೆಳಗ್ಗೆ 9.30ಕ್ಕೆ ಕೋಟೆ ತಲುಪಿದೆವು. ಕೋಟೆಗೆ ಮಹಾದ್ವಾರವೇ ಒಂದು ಸೊಬಗನ್ನು ಕೊಡುತ್ತಿತ್ತು. ನಾವು ವೀರ ಮದಕರಿ ನಾಯಕನ ಕೋಟೆ ನೋಡಲು ಉತ್ಸುಕರಾಗಿದ್ದೆವು. ಟಿಕೆಟ್ ತೆಗೆಸಿ ಮಹಾದ್ವಾರದಿಂದ ಒಳಗೆ ಹೋದೆವು. ಕೋಟೆ ಹತ್ತಲು ಶುರು ಮಾಡಿದೆವು. ಸೂರ್ಯ ನಮ್ಮ ನೆತ್ತಿ ಸುಡುತ್ತಿದ್ದ. ನಾನು ಮತ್ತು ಅಪ್ಪಾಜಿ ಸೇರಿ ಎತ್ತರದ ಬಂಡೆಗಳನ್ನೇರಿ ನೋಡಿದಾಗ ಅಲ್ಲಿನ ದೃಶ್ಯ ತುಂಬ ರಮಣೀಯ ಆಗಿತ್ತು . ಒಳ್ಳೆಯ ಟ್ರೆಕ್ಕಿಂಗ್ ಅನುಭವ ಆಯಿತು. ಅಲ್ಲಿಂದ ಮೇಲಿನ ತುಪ್ಪದ ಬಾವಿ ಮತ್ತು ಅಕ್ಕ ತಂಗಿ ಕೊಳದ ವೈಜ್ಞಾನಿಕ ಹಿನ್ನೆಲೆಯನ್ನು ತಿಳಿದು ಮೈ ಪುಳಕವಾಯಿತು. ಮಧ್ಯಾಹ್ನ ಊಟ ಮಾಡಿ ಸ್ವಲ್ಪ ಹೊತ್ತು ವಿಶ್ರಮಿಸಿ, ಮುಂದೆ ತಣ್ಣೀರು ಬಾವಿ ಮತ್ತು ಓಬವ್ವನ ಕಿಂಡಿ ನೋಡಲು ಹೊರಟೆವು. ಓಬವ್ವನ ಕಿಂಡಿ ಒಳಗಿನಿಂದ ಅಂದು ಸೈನಿಕರು ಬಂದ ಹಾಗೆ ಬಂದು ತಮಾಷೆ ಮಾಡಿದೆವು. ಆನಂತರ ಮುರುಘಾ ಮಠದ ಉದ್ಯಾನವನದಲ್ಲಿ ವಿಹರಿಸಿ, ಅಲ್ಲಿನ ಆನೆ ಮೇಲೆ ಸವಾರಿ ಮಾಡಿ ಖುಷಿ ಪಟ್ಟೆವು. ಪ್ರಕೃತಿ ಜತೆಯಲ್ಲಿ ಕಾಲ ಕಳೆದಿದ್ದು ತುಂಬ ಮಜವಾಗಿತ್ತು.

| ಹರ್ಷ ಬಿ. 9ನೇ ತರಗತಿ ಎಸ್​ಎಸ್​ಜೆವಿಪಿ ಪ್ರೌಢಶಾಲೆ ಸಂತೆಬೆನ್ನೂರು, ದಾವಣಗೆರೆ


ಚೆನ್ನಾಗಿತ್ತು ಚೆನ್ನೈ ಪ್ರವಾಸ

10ನೇ ತರಗತಿ, ಪಿಯುಸಿ ಪರೀಕ್ಷೆ, ಚುನಾವಣೆ ಸಲುವಾಗಿ ನಮಗೆ ಹೆಚ್ಚಿನ ರಜೆ ಸಿಕ್ಕಿತ್ತು. ಆಗ ನನಗೆ ರಜೆ ನೆನೆದು ಖುಷಿಯಾದರೆ ಈ ಬಾರಿಯ ಬಿಸಿಲು ತಾಪ ನೆನೆದು ಭಯವಾಗುತ್ತಿತ್ತು. ಅಪ್ಪ, ಅಮ್ಮ, ಅಕ್ಕನ ಜತೆ ಸೇರಿ ಚೆನ್ನೈ ಪ್ರವಾಸ ಹೊರಟೆವು. ಅಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ಅಣ್ಣಾ ದೊರೈ, ಎಂಜಿಆರ್, ಜಯಲಲಿತಾ ಸಮಾಧಿ ದರ್ಶನ ಪಡೆದೆವು. ಮರೀನಾ ಬೀಚ್​ನಲ್ಲಿ ಆಟ ಆಡಿ, ದಡದಲ್ಲಿ ಕುದುರೆ ಸವಾರಿ ಮಾಡಿದೆವು. ನಂತರ ಮಹಾಬಲಿಪುರಂನ ಕಲ್ಲಿನ ದೇವಸ್ಥಾನ ನೋಡಿದೆವು. ಕಂಚಿ, ಕಾಳಹಸ್ತಿ ನೋಡಿ ಅದರ ಬಗ್ಗೆ ತಿಳಿದುಕೊಂಡೆವು. ಅ ನಂತರ ಅಜ್ಜಿಮನೆ, ಬೇರೆ ಬೇರೆ ಮದುವೆ, ಇನ್ನಿತರ ಸಮಾರಂಭಗಳಿಗೆ ಹೋಗುವಷ್ಟರಲ್ಲಿ ರಜೆ ಮುಗಿದುಹೋಯಿತು.

| ಪ್ರಜ್ಞಾ ಪಿ.ಬಿ. 6ನೇ ತರಗತಿ, ಸೇಂಟ್ ಜೋಸೆಫ್ ಆಂಗ್ಲಮಾಧ್ಯಮ ಶಾಲೆ ಚಿತ್ರದುರ್ಗ

 


ಸಾಣೆಹಳ್ಳಿಯ ಮಕ್ಕಳ ಹಬ್ಬ

ಪೂಜ್ಯ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಮುಂದಾಳತ್ವದಲ್ಲಿ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ, ಸಾಣೇಹಳ್ಳಿಯಲ್ಲಿ ಪ್ರತಿವರ್ಷ ಬೇಸಿಗೆ ಶಿಬಿರ ನಡೆಯುತ್ತದೆ. ಸಾಣೇಹಳ್ಳಿ ಅದ್ಭುತ! ಅಲ್ಲಿನ ವಾತಾವರಣ. ಅಲ್ಲಿರುವ ಜನ, ಮಕ್ಕಳ ಮೋಜು, ಮಸ್ತಿ ಇವೆಲ್ಲ ಅವಿಸ್ಮರಣೀಯ. ಕಳೆದ ವರ್ಷ ಮಾವನ ಮಗನನ್ನು ಸಾಣೇಹಳ್ಳಿಯ ಮಕ್ಕಳಹಬ್ಬಕ್ಕೆ ಸೇರಿಸಿದ್ದರು. ಅದರ ಮುಕ್ತಾಯ ಕಾರ್ಯಕ್ರಮಕ್ಕೆ ನಾನೂ ಹೋಗಿದ್ದೆ. ಆಗಲೇ ಅನಿಸಿದ್ದು ನಾನು ಈ ಶಿಬಿರಕ್ಕೆ ಸೇರಬೇಕು ಎಂದು. ಆಸೆಯಂತೆ ಪ್ರಸ್ತುತ ವರ್ಷ ಏಪ್ರಿಲ್ 10ರಿಂದ ಏಪ್ರಿಲ್ 28ರವರೆಗೆ ಶಿಬಿರದಲ್ಲಿ ಭಾಗವಹಿಸಿದ್ದೆ. ಇಲ್ಲಿ ಕೊಡುವ ಸಂಸ್ಕಾರದಿಂದ ಮುಂದೆ ಉತ್ತಮ ನಾಗರಿಕರಾಗಿ ಬಾಳಲು ಸಾಧ್ಯ. ಗುರುಗಳ ಆಶಯದಂತೆ ಈ ಶಿಬಿರದಲ್ಲಿ ನಮಗೆ ಯೋಗಾಸನ, ಪ್ರಾರ್ಥನೆ, ವಚನ, ಸಂಗೀತ, ನೃತ್ಯ, ನಾಟಕ, ಮಡಿಕೆ ಮಾಡುವುದು, ಬುಟ್ಟಿ ಹೆಣೆಯುವುದು ಇತ್ಯಾದಿ ತರಬೇತಿ ನೀಡಿದರು. ನೃತ್ಯರೂಪಕದಲ್ಲಿ ಅಕ್ಕಮಹಾದೇವಿಯ ಪಾತ್ರ, ನಾಟಕದಲ್ಲಿ ಸೀತೆಯ ಪಾತ್ರ ಸಿಕ್ಕಿತ್ತು. ಪಾತ್ರಕ್ಕೆ ಗುರುಗಳು ಮೆಚ್ಚುಗೆ ವ್ಯಕ್ತಪಡಿಸಿದರು. ರಂಗ ತರಬೇತಿ ನೀಡಲು ಇಲ್ಲಿ ಹಲವಾರು ಕಟ್ಟಡಗಳಿವೆ. ಈ ಶಿಬಿರದಿಂದ ಅತಿ ಹೆಚ್ಚು ತಿಳಿದುಕೊಂಡಿದ್ದೇನೆ. ನನಗೆ ರಂಗ ತರಬೇತಿ ನೀಡಿದ ಎಲ್ಲ ರಂಗ ನಿರ್ದೇಶಕರಿಗೆ ನನ್ನ ಧನ್ಯವಾದಗಳು.

| ಪ್ರಕೃತಿ ಎಸ್. 8ನೇ ತರಗತಿ ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್ ದಾವಣಗೆರೆ


ಸ್ವಾವಲಂಬನೆ ಕಲಿಸಿದ ಶಿಕ್ಷಾವರ್ಗ

ನಾನು ಬೇಸಿಗೆ ರಜೆಯನ್ನು ಬಹಳ ಅದ್ದೂರಿಯಾಗಿ ಕಳೆದೆ. ಯಾವ ನೆಂಟರ ಮನೆಗೂ ಹೋಗಲಿಲ್ಲ. ಈ ಬಾರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರತಿ ವರ್ಷ ನಡೆಸುವ ಸಂಘಶಿಕ್ಷಾ ವರ್ಗಕ್ಕೆ ನಾನು ಆಯ್ಕೆ ಆಗಿದ್ದೆ. ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳ 500 ವಿದ್ಯಾರ್ಥಿಗಳು ಬಂದಿದ್ದರು. ಬೆಂಗಳೂರಿನ ಹೊರ ಭಾಗದ ಮಾಗಡಿ ರಸ್ತೆಯ ‘ಚನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರ’ದ ವಿಶಾಲ ಆವರಣದಲ್ಲಿ ನಡೆದ 21 ದಿನಗಳ ಶಿಬಿರ ಅದು. ಜನರೊಂದಿಗೆ ಬೆರೆಯುವುದನ್ನು ಕಲಿತೆ. ನಗರದಲ್ಲಿ ಜೀವಿಸುವ ನಾವು ಸೂರ್ಯೋದಯದ ಸೊಬಗನ್ನು ನೋಡುವುದೇ ವಿರಳ. ಆದರೆ ಶಿಬಿರದಲ್ಲಿ ನಿತ್ಯವೂ ಸೂರ್ಯೋದಯ, ಸೂರ್ಯಾಸ್ತ ನೋಡುವ ಯೋಗ ಸಿಕ್ಕಿತ್ತು. ಮುಂಜಾನೆ 5ಗಂಟೆಗೆ ಓದಲು ಕುಳಿತಾಗ ಸ್ಥಳದಲ್ಲೇ ಕಾಫಿ, ನೀರು, ತಿಂಡಿ ತಂದು ಕೊಡುವ ಅಮ್ಮ ಅಲ್ಲಿ ಇರಲಿಲ್ಲ. ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕಿತ್ತು. ಪ್ರಾರ್ಥನೆ ಮೂಲಕ ದಿನಚರಿ ಆರಂಭವಾಗುತ್ತಿತ್ತು. ನಂತರ ಶಾರೀರಿಕ ಬೆಳವಣಿಗೆ ಮತ್ತು ಸ್ವಯಂ ರಕ್ಷಣೆಗೆ ಪ್ರಾಚೀನ ಪದ್ಧತಿಯಾದ ದಂಡ ಯುದ್ಧ ಅಭ್ಯಾಸ. ಆಮೇಲೆ ಶ್ರಮಸೇವೆ. ಗೋಶಾಲೆಯಲ್ಲಿ ಹಸುಗಳ ಸೇವೆ, ಗಂಜಲ, ಸಗಣಿ ಸ್ವಚ್ಛ ಮಾಡಿ, ಹಸುಗಳ ಮೈ ತೊಳೆದು, ಹುಲ್ಲು ನೀರುಹಾಕುತ್ತಿದ್ದೆವು. ಆಮೇಲೆ ಉಪಾಹಾರ ಸೇವನೆ. ಒಂದೊಂದು ತಂಡದವರು ಊಟ ಬಡಿಸುವುದು, ಆವರಣ ಶುದ್ಧಿ ಮಾಡುವ ವೇಳಾಪಟ್ಟಿ ಮೊದಲೇ ನಿಗದಿಯಾಗಿತ್ತು. ನಂತರ ಚರ್ಚಾ ಅವಧಿ. ಪ್ರಚಲಿತ ವಿದ್ಯಮಾನದ ಅದರ ಬಗ್ಗೆ ಗುಂಪು ಗೋಷ್ಠಿಯಲ್ಲಿ ಮಾತನಾಡುವ ಸುಯೋಗ.

ದಿನವೂ ಶಾಲೆ, ಟ್ಯೂಷನ್, ಹೋಂ ವರ್ಕ್, ಟೆಸ್ಟು, ಎಕ್ಸಾಂನಲ್ಲಿ ಇದ್ದ ನಮಗೆ ಸ್ವಾವಲಂಬನೆಯ ಲೋಕ ತೆರೆದುಕೊಂಡಿತು. ಸಂಘ ಜೀವನದ ವಾತಾವರಣ ಸೃಷ್ಟಿಯಾಗಿತ್ತು. ಮೈ ಕೈ ದಣಿಯುವಷ್ಟು ಆಡಿ, ಕುಣಿಯುವ, ನಿಗದಿತ ವ್ಯಾಯಾಮ ಕಲಿಯುವ ಸವಾಲು ಇತ್ತು. ವಿವಿಧ ಕ್ಷೇತ್ರದ ಗಣ್ಯರು, ಸಾಧಕರು ಬರುತ್ತಿದ್ದರು. ದೇಶ, ಇತಿಹಾಸ, ಸಂಸ್ಕೃತಿ, ನಮ್ಮ ಜವಾಬ್ದಾರಿ, ವರ್ತಮಾನದ ಸ್ಥಿತಿ, ಕುರಿತು ಜಾಗೃತಿ ಮೂಡಿಸುವ ಭಾಷಣ ಮಾಡುತ್ತಿದ್ದರು. ನಂತರ ಪ್ರಶ್ನೋತ್ತರ. ಧೈರ್ಯವಾಗಿ ಎದ್ದು ನಿಂತು ಸಮಸ್ಯೆ, ಸಂದೇಹ ಕೇಳುವ ಅವಕಾಶವನ್ನು ನಾನೂ ಬಳಸಿಕೊಂಡೆ. ಹಸಿರು ಪರಿಸರದ ವಾತಾವರಣದ ಶಿಬಿರದಲ್ಲಿ ಶಿಸ್ತಿನ ಜೀವನ ಕಲಿತೆವು. ಆಲೋಚನಾ ಮಟ್ಟ ವೃದ್ಧಿ ಮಾಡಿಕೊಂಡೆವು. ಶಾಲೆಯಿಂದ ಆಚೆಗೂ ನಾವು ಕಲಿಯುವುದು ಸಾಕಷ್ಟು ಇದೆ ಎಂದು ಅರ್ಥವಾಯಿತು. ಶಿಬಿರದಿಂದ ಊರಿಗೆ ಬಂದ ನಂತರ ನನ್ನಶಾಲೆ ಮತ್ತು ಸತ್ಯಸಾಯಿ ಸಂಸ್ಥೆ ಶಿವಮೊಗ್ಗದ ಬಸ್ ನಿಲ್ದಾಣದಲ್ಲಿ ಉಚಿತ ಕುಡಿಯುವ ಶುದ್ಧ ನೀರಿನ ಕೇಂದ್ರದಲ್ಲಿ ಪ್ರಯಾಣಿಕರಿಗೆ ನೀರು-ಬೆಲ್ಲ ಕೊಡುವ ಪುಣ್ಯದ ಸೇವೆಯಲ್ಲಿ ಭಾಗಿಯಾದೆ.

| ಸುದರ್ಶನ ಟಿ. ರಮಣ 10ನೇ ತರಗತಿ.ಆನಂದ ಸಾಯಿ ಶಿಕ್ಷಣ ಸಂಸ್ಥೆ , ಬಸವನಗುಡಿ, ಶಿವಮೊಗ್ಗ


ಕೈಯಾರೆ ಮಾಡಿದ ಉಡುಗೊರೆ

ಈ ವರ್ಷದ ರಜೆಯಲ್ಲಿ ಸಾಕಷ್ಟು ಕಸೂತಿ ಕೆಲಸ ಮಾಡಿದೆ. ಕಸೂತಿಯಿಂದ ಅಲಂಕೃತವಾದ ಮೊಬೈಲ್ ಕವರ್ ಮಾಡಿ ಅಮ್ಮಂದಿರ ದಿನದಂದು ಅಮ್ಮನಿಗೆ ಉಡುಗೊರೆಯಾಗಿ ನೀಡಿದೆ. ಅದು ಎಲ್ಲರ ಮೆಚ್ಚುಗೆ ಗಳಿಸಿತು. ಅಪ್ಪ-ಅಮ್ಮನಿಗೆ ಅವರ ಕಾಲೇಜಿನಲ್ಲಿ ಟೇಬಲ್ ಮೇಲಿಟ್ಟುಕೊಳ್ಳಲು ಪೆನ್ ಸ್ಟ್ಯಾಂಡ್ ಮಾಡಿಕೊಟ್ಟೆ. ಜತೆಗೆ ಉಡುಗೊರೆ ಪೆಟ್ಟಿಗೆ, ಶುಭಾಶಯ ಪತ್ರ ಸಹ ಮಾಡಿದ್ದೇನೆ. 40 ದಿನಗಳ ಕಾಲ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಬ್ಯಾಡ್ಮಿಂಟನ್ ಶಿಬಿರಕ್ಕೆ ಹೋಗಿದ್ದೆ. ಅಲ್ಲಿ ಪ್ರತಿದಿನ ಎರಡು ಗಂಟೆ ವ್ಯಾಯಾಮ, ಆಟ ನಿರಂತರವಾಗಿ ನಡೆಯುತ್ತಿತ್ತು. ಶಿಬಿರದ ಸಮಾರೋಪ ಸಮಾರಂಭದಲ್ಲಿ ನೃತ್ಯ ಮಾಡಿದೆ. ಜತೆಗೆ ತುಮಕೂರಿನಲ್ಲಿರುವ ದೊಡ್ಡಪ್ಪಂದಿರ ಮನೆಗೆ, ಹಿಂದೂಪುರದಲ್ಲಿರುವ ಅತ್ತೆ ಮನೆಗೆ ಹೋಗಿ ಅಲ್ಲಿ ಸಮಯ ಕಳೆದದ್ದು ಖುಷಿಯಾಯಿತು.

| ಸುಚೇತಾ ಎಸ್.ವಿ. 6ನೇ ತರಗತಿ ಆರ್.ವಿ.ಪಬ್ಲಿಕ್ ಸ್ಕೂಲ್ ಬೆಂಗಳೂರು

 

 


ಮಜವಾಗಿತ್ತು ಕುದುರೆ ಸವಾರಿ

ರಜೆ ಆರಂಭದಲ್ಲೇ ನನ್ನ ಹುಟ್ಟುಹಬ್ಬ ಬಂದಿತ್ತು. ಜನ್ಮದಿನದ ಆಚರಣೆಗಾಗಿ ನನ್ನ ಅಜ್ಜ ಅಜ್ಜಿ ಊರಿನಿಂದ ಬಂದಿದ್ದರು. ಸ್ನೇಹಿತರು, ಕುಟುಂಬದವರೊಡನೆ ಸೇರಿ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿದೆ. ಆಮೇಲೆ ಅಜ್ಜನಮನೆಗೆ ಹೋದೆ. ಅಲ್ಲಿ ವಿವಿಧ ರೀತಿಯ ಪಕ್ಷಿ ನೋಡಿದೆ. ಕೆಮ್ಮಣ್ಣಿನಲ್ಲಿ ಆಡುತ್ತ ಮಣ್ಣಿನ ಆಟಿಕೆ ಮಾಡುವುದನ್ನು ಕಲಿತೆ. ಮನೆಯಂಗಳದಲ್ಲೇ ಇದ್ದ ಪೇರಲೆ ಹಣ್ಣು ಕಿತ್ತು ತಿನ್ನುವುದೆಂದರೆ ನನಗೂ, ನನ್ನ ತಂಗಿಗೂ ಎಲ್ಲಿಲ್ಲದ ಖುಷಿ. ಆಟದ ಜತೆ ಪಾಠವೆಂಬಂತೆ ಅಜ್ಜಿಯಿಂದ ರಂಗೋಲಿ ಹಾಕುವುದನ್ನು, ಅಜ್ಜನಿಂದ ಭಗವದ್ಗೀತೆ ಶ್ಲೋಕಗಳನ್ನು ಕಲಿತೆನು. ಜತೆಗೆ ಶ್ರವಣಬೆಳಗೊಳದ ಬಾಹುಬಲಿ, ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದರ್ಶನ ಪಡೆದೆ. ಆಮೇಲೆ ಶ್ರೀರಂಗಪಟ್ಟಣದ ಟಿಪ್ಪು ಕೋಟೆ, ರಂಗನಾಥಸ್ವಾಮಿ ದೇಗುಲ ನೋಡಿದೆ. ಅಲ್ಲಿ ಕುದುರೆ ಸವಾರಿ ಮಾಡಿದೆ. ಆಕ್ಷಣಕ್ಕೆ ರಾಜರು ಹೇಗಪ್ಪಾ ಕುದುರೆ ಸವಾರಿ ಮಾಡುತ್ತಿದ್ದರು ಎನಿಸಿತು. ಮೈಸೂರಿನಲ್ಲಿರುವ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದೆ. ಒಟ್ಟಾರೆ ಈ ವರ್ಷದ ರಜಾ ನನ್ನ ಸಂತಸದ ಮೂಟೆಯನ್ನು ಹೊತ್ತು ತಂದಿತ್ತು.

| ಶ್ರದ್ಧಾ ಎಸ್. 3ನೇ ತರಗತಿ, ಕೆಪಿಸಿ ಆಂಗ್ಲಮಾಧ್ಯಮ ಶಾಲೆ ಕಾರ್ಗಲ್, ಸಾಗರ ತಾಲೂಕು, ಶಿವಮೊಗ್ಗ


ಹೊಳೆ ನೀರಿನಲ್ಲಿ ಸ್ನಾನ

ರಜಾ ಆರಂಭವಾದ ಮೊದಲ ವಾರದಲ್ಲೇ ಅಣ್ಣನ ಉಪನಯನವಿತ್ತು. ಆದ್ದರಿಂದ ವಾರವಿಡೀ ಸಂಭ್ರಮದಿಂದ ಕಳೆದೆ. ನಂತರದ ದಿನಗಳಲ್ಲಿ ನಿತ್ಯವೂ ಅಕ್ಕ, ಅಣ್ಣ, ತಮ್ಮ, ಅಪ್ಪ, ಚಿಕ್ಕಪ್ಪನ ಜತೆ ಸೇರಿ ಹೊಳೆಸ್ನಾನಕ್ಕೆ ಹೋಗುತ್ತಿದ್ದೆವು. ಅಪ್ಪ ಬೇಡವೆಂದರೂ ಕಾಡಿಸಿ, ಪೀಡಿಸಿ ಹೊಳೆ ಸ್ನಾನಕ್ಕೆ ಕರೆದುಕೊಂಡು ಹೋಗಲು ಒತ್ತಾಯಿಸುತ್ತಿದ್ದೆವು. ಹೊಳೆಯಲ್ಲಿರುವ ದುಂಡು ದುಂಡಾದ ಕಲ್ಲುಗಳ ಸಂಗ್ರಹ, ನೀರೊಳಗೆ ಕಾಲಿಟ್ಟು ಚಿಕ್ಕ ಚಿಕ್ಕ ಮೀನಿನಿಂದ ಪಾದ ಕಚ್ಚಿಸಿಕೊಳ್ಳುವುದು, ದಡದಲ್ಲಿರುವ ಮಾವಿನ ಮರದಲ್ಲಿ ಹಣ್ಣು ಬಿದ್ದೊಡನೆ ನಾ ಮುಂದು, ತಾ ಮುಂದು ಎಂದು ಓಡಿ ಹೋಗಿ ಆರಿಸಿಕೊಳ್ಳುವುದು, ಅಲ್ಪ-ಸ್ವಲ್ಪ ಈಜು ಕಲಿತಿದ್ದು ಮಾತ್ರ ಮರೆಯಲಾಗದು. ಶೃಂಗೇರಿಯಿಂದ ಕುಂದಾಪುರದ ಅಜ್ಜನಮನೆಗೆ ಅಪ್ಪ-ಅಮ್ಮ ಬೇಡವೆಂದರೂ ಒಬ್ಬಳೇ ಬಸ್​ನಲ್ಲಿ ಹೋಗಿದ್ದು ಮಾತ್ರ ದೊಡ್ಡ ಸಾಹಸ ನನ್ನ ಪಾಲಿಗೆ. ಈಗ ನನಗೆ ಬಸ್ ಹತ್ತುವುದು, ಇಳಿಯುವುದು, ಟಿಕೆಟ್ ಪಡೆಯುವುದು ಗೊತ್ತಾಗಿದೆ. ಅಜ್ಜನಮನೆ ಯಲ್ಲಿನ ಎಲ್ಲ ಹಣ್ಣುಗಳನ್ನು ತಿಂದು ಬಾಯಿ ಚಪ್ಪರಿಸಿದೆ. ನನಗೆ ದೊಡ್ಡ ಹಣ್ಣು ಬೇಕು, ದೊಡ್ಡ ಗೊರಟೆ ಬೇಕು ಎನ್ನುತ್ತ ಚಿಕ್ಕ ಚಿಕ್ಕ ವಿಷಯಕ್ಕೆ ಹಠ ಮಾಡಿ ಅಮ್ಮನ ಹತ್ತಿರ ಬೈಸಿಕೊಳ್ಳುತ್ತಾ ರಜಾ ಕಳೆದೆ. ಅಜ್ಜನಮನೆ ಪಕ್ಕದಲ್ಲೇ ಸಮುದ್ರವಿರುವುದರಿಂದ ದಿನಕ್ಕೆರಡು ಬಾರಿ ಅಲ್ಲಿ ಹೋಗಿ ಸ್ನಾನ ಮಾಡುತ್ತಿದ್ದೆ. ನೋಡು ನೋಡುವಷ್ಟರಲ್ಲಿ ರಜಾ ಮುಗಿದು ಶಾಲೆ ಆರಂಭವಾಯಿತು. ಮತ್ತೆ ಶಾಲೆಗೆ ಹೊಂದಿಕೊಳ್ಳುವಷ್ಟರಲ್ಲಿ ದಸರಾ ರಜೆ ಬಂದಿರುತ್ತದೆ. ಮತ್ತೆ ನಮಗೆ ಆಗ ರಜಾ…ಮಜಾ…

| ಮನೀಷಾ ಕೆ.ವಿ. 5ನೇ ತರಗತಿ, ಸಂತ ನೋಬರ್ಟ್ ಸಿಬಿಎಸ್​ಇ ಶಾಲೆ ಕೊಪ್ಪ, ಚಿಕ್ಕಮಗಳೂರು

Leave a Reply

Your email address will not be published. Required fields are marked *