ಮಂಗಳೂರು: ‘ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊರಭಾಗದ ವಿಶ್ರಾಂತಿ ಚೇರ್ನಲ್ಲಿ ಬಾಂಬ್ ಇರಿಸಿ, ಯಾರಾದರೂ ನೋಡಿದರೆ ಸಿಕ್ಕಿ ಬೀಳುತ್ತೇನೆ ಎನ್ನುವ ಭಯದಿಂದ ತಕ್ಷಣ ಹೊರಗೆ ಓಡಿ ಬಂದು ಆಟೋ ಹತ್ತಿ ತೆರಳಿದೆ’…
-ಇದು ಬಾಂಬರ್ ಆದಿತ್ಯ ರಾವ್ ಶುಕ್ರವಾರ ಸ್ಥಳ ಮಹಜರು ವೇಳೆ ಪಣಂಬೂರು ಉಪವಿಭಾಗದ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತನಿಖಾಧಿಕಾರಿಗಳ ಮುಂದೆ ತುಳು ಭಾಷೆಯಲ್ಲಿ ನೀಡಿದ ಹೇಳಿಕೆ. ಕಾರ್ಕಳದಿಂದ ಸ್ಟೇಟ್ ಬ್ಯಾಂಕ್ಗೆ ಆಗಮಿಸಿ, ರಾಜ್ಕುಮಾರ್ ಬಸ್ನಲ್ಲಿ ಕೆಂಜಾರಿಗೆ ಬಂದು ಅಲ್ಲಿ ಸಲೂನ್ನಲ್ಲಿ ದೊಡ್ಡ ಬ್ಯಾಗ್ ಇಟ್ಟು ಆಟೋರಿಕ್ಷಾದಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿರುವುದನ್ನು ಆದಿತ್ಯ ರಾವ್ ತನಿಖಾಧಿಕಾರಿಗಳಿಗೆ ವಿವರಿಸಿದ. ವಿಮಾನ ನಿಲ್ದಾಣದ ಹೊರಭಾಗದ ಟಿಕೆಟ್ ಕೌಂಟರ್ ಬಳಿ ಪ್ರಯಾಣಿಕರು ಕುಳಿತುಕೊಳ್ಳುವ ಕಬ್ಬಿಣದ ಚೇರ್ನಡಿ ಬಾಂಬ್ ಇದ್ದ ಬ್ಯಾಗ್ ಇಟ್ಟು, ಎಸ್ಕಲೆಟರ್ ಮೂಲಕ ಕೆಳಗೆ ಇಳಿದು ಅಲ್ಲಿಂದ ಎಕ್ಸಿಟ್ ಗೇಟ್ ಮೂಲಕ ಹೊರಗೆ ಬಂದು ರಿಕ್ಷಾದಲ್ಲಿ ತೆರಳಿದೆ. ಈ ಸಂದರ್ಭ ಭದ್ರತಾ ಅಧಿಕಾರಿಗಳು ಇರಲಿಲ್ಲ. ಹಾಗಾಗಿ ತಕ್ಷಣ ತನ್ನ ಕೆಲಸ ಮುಗಿಸಿದೆ ಎಂದು ಹೇಳಿದ್ದಾನೆ. ಸಾಕಷ್ಟು ಮಾಹಿತಿ ಸಂಗ್ರಹಿಸಲು ತನಿಖಾಧಿಕಾರಿಗಳು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಎಲ್ಲದಕ್ಕೂ ಆತ ಸಕಾರಾತ್ಮಕವಾಗಿ ಸ್ಪಂದಿಸಿ ಉತ್ತರ ನೀಡಿದ್ದಾನೆ. ಬ್ಯಾಗ್ ಇಟ್ಟ ಸಲೂನ್ ಬಳಿಗೂ ಕರೆದೊಯ್ದು ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಸೆಲೂನ್ನಲ್ಲಿದ್ದವರು ಜ.20ರಂದು ದೊಡ್ಡ ಬ್ಯಾಗ್ ಹಿಡಿದುಕೊಂಡು ಬಂದು ‘ಇಲ್ಲಿ ಇಡಬಹುದೇ’ ಎಂದು ಪ್ರಶ್ನಿಸಿದ ವ್ಯಕ್ತಿ ಈತನೇ ಎಂಬುದನ್ನು ಗುರುತಿಸಿದ್ದಾರೆ. ಬಳಿಕ ಬ್ಯಾಗ್ ಇಟ್ಟು ಹೋದ ಸ್ಥಳವನ್ನು ಆರೋಪಿ ತೋರಿಸಿದ್ದಾನೆ. ಆಟೋರಿಕ್ಷಾ ಚಾಲಕನನ್ನೂ ಕರೆಸಿದ್ದು, ಅವರೂ ತನ್ನ ರಿಕ್ಷಾದಲ್ಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ ವ್ಯಕ್ತಿ ಈತನೇ ಎಂದು ಆದಿತ್ಯನನ್ನು ಗುರುತಿಸಿದ್ದಾರೆ.
ಮಧ್ಯಂತರ ತನಿಖಾ ವರದಿ ಸಲ್ಲಿಕೆ
ಈವರೆಗಿನ ತನಿಖೆಯ ಮಧ್ಯಂತರ ವರದಿ ನೀಡುವಂತೆ ಕೇಂದ್ರ ನೀಡಿದ್ದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಈ ಜವಾಬ್ದಾರಿಯನ್ನು ಪೊಲೀಸ್ ಆಯುಕ್ತರಿಗೆ ನೀಡಿತ್ತು. ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ವೈದ್ಯಕೀಯ ತಪಾಸಣೆಗೊಳಪಡಿಸಿ ಆದಿತ್ಯ ರಾವ್ನನ್ನು ಪಣಂಬೂರು ಎಸಿಪಿ ಕಚೇರಿಗೆ ಕರೆದೊಯ್ದ ತನಿಖಾ ತಂಡ, ತಡರಾತ್ರಿ ತನಕ ವರದಿ ತಯಾರಿಯಲ್ಲಿ ತೊಡಗಿತ್ತು. ಶುಕ್ರವಾರ ಬೆಳಗ್ಗೆ ಪೊಲೀಸ್ ಆಯುಕ್ತರು ಡಿಜಿಪಿ ಕಚೇರಿಗೆ ಈ ವರದಿ ಕಳುಹಿಸಿದ್ದಾರೆ. ಸರ್ಕಾರ ಈ ವರದಿಯನ್ನು ಕೇಂದ್ರ ಗೃಹ ಇಲಾಖೆಗೆ ರವಾನಿಸಲಿದೆ.
ಪೆಟ್ರೋಲ್ ಬಾಂಬ್ ಪ್ರಕರಣಕ್ಕೆ 2 ವರ್ಷ
ಬೆಳಗಾವಿ: ಮಂಗಳೂರು ವಿಮಾನ ನಿಲ್ದಾಣದಲ್ಲಿಟ್ಟಿದ್ದ ಬಾಂಬ್ ಪ್ರಕರಣ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ಇದೇ ಸಂದರ್ಭದಲ್ಲಿ ಬೆಳಗಾವಿ ಚಿತ್ರಮಂದಿರದಲ್ಲಿ 2018ರ ಜ.25ರಲ್ಲಿ ನಡೆದ ಪೆಟ್ರೋಲ್ ಬಾಂಬ್ ಪ್ರಕರಣಕ್ಕೆ 2 ವರ್ಷ ತುಂಬಿದೆ. ಈವರೆಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯಕ್ಕೆ 2 ದೋಷಾರೋಪ ಪಟ್ಟಿ ಸಲ್ಲಿಕೆಯಾಗಿವೆ. 10 ಆರೋಪಿಗಳನ್ನು ತನಿಖೆಗೊಳಪಡಿಸಲಾಗಿದ್ದು, 11ನೇ ಆರೋಪಿಯನ್ನು ತನಿಖೆಗಾಗಿ ಕಸ್ಟಡಿಗೆ ಪಡೆಯಲು ಬೆಳಗಾವಿ ಪೊಲೀಸರು ಸಿದ್ಧತೆ ನಡೆಸಿರುವುದು ಬಿಟ್ಟರೆ ಪ್ರಮುಖ ಬೆಳವಣಿಗೆಗಳು ಆಗಿಲ್ಲ.
ದೇಶದ ಆಂತರಿಕ ಭದ್ರತೆಗೆ ಸವಾಲೊಡ್ಡುವ ಯಾವುದೇ ಘಟನೆ ನಡೆದಾಗ ರಾಜ್ಯ ಸರ್ಕಾರದ ಮೂಲಕ ಕೇಂದ್ರದ ಗೃಹ ಇಲಾಖೆಗೆ ವರದಿ ನೀಡಬೇಕು. ಆ ನಿಟ್ಟಿನಲ್ಲಿ ಸ್ಪೋಟಕ ಪತ್ತೆಯಾದ ವಿಚಾರಕ್ಕೆ ಸಂಬಂಧಿಸಿ ವರದಿ ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ವರದಿಯನ್ನು ಕೇಂದ್ರ ಗೃಹ ಇಲಾಖೆಗೆ ರಾಜ್ಯ ಸರ್ಕಾರ ಕಳುಹಿಸಲಿದೆ.
| ಡಾ. ಪಿ.ಎಸ್.ಹರ್ಷ ಮಂಗಳೂರು ಪೊಲೀಸ್ ಆಯುಕ್ತ