ಪುಸ್ತಕ ಮಂಥನಕ್ಕೆ 25ರ ಸಂಭ್ರಮ

ಶರವೇಗದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದಿಂದಾಗಿ ಬಹುತೇಕ ಮಂದಿ ಅದರ ದಾಸರಾಗಿಬಿಟ್ಟಿದ್ದಾರೆ. ಇದರಿಂದಾಗಿ ಪುಸ್ತಕದ ಬಗ್ಗೆ ಇರುವ ಆಸಕ್ತಿ, ಓದುವ ಅಭಿರುಚಿ ಕಡಿಮೆಯಾಗುತ್ತಿದೆ. ಜನಮಾನಸದಲ್ಲಿ ಪುಸ್ತಕ ಪ್ರೀತಿ ಬೆಳೆಸಬೇಕಾದ ಅಗತ್ಯತೆ ಮತ್ತು ಅನಿವಾರ್ಯತೆ ಗಮನಿಸಿರುವ ತಂಡವೊಂದು ಆ ನಿಟ್ಟಿನಲ್ಲಿ ಸದ್ದಿಲ್ಲದೇ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

| ಎಸ್. ರುದ್ರೇಶ್ವರ

ಮನುಷ್ಯರನ್ನು ಸುಸಂಸ್ಕೃತರನ್ನಾಗಿಸುವ, ಅವರೊಳಗಿನ ಮಾನವ ಸಂವೇದನೆಗಳನ್ನು ಜಾಗೃತಗೊಳಿಸುವ ಪ್ರಕ್ರಿಯೆಯಲ್ಲಿ ಸಾಹಿತ್ಯದ ಪಾತ್ರ ಮಹತ್ವವಾದದ್ದು. ಸಾಹಿತ್ಯಾಭಿರುಚಿಯಿಂದ ಸುಸಂಸ್ಕೃತ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯವಿದೆ. ಸಾಹಿತ್ಯವು ಮಾನವೀಯ ಮೌಲ್ಯಗಳ ಮಹತ್ವವನ್ನು ಪ್ರತಿಬಿಂಬಿಸುತ್ತದೆ. ಮೃಗೀಯ ಮನೋಭಾವಗಳ ಪ್ರತಿಕೂಲ ಪರಿಣಾಮಗಳನ್ನು ವಿಶ್ಲೇಷಿಸುತ್ತದೆ. ಸಂಸ್ಕೃತಿಯ ಅಧಃಪತನಕ್ಕೆ ಸಾಹಿತ್ಯಾಭಿರುಚಿ ಕ್ಷೀಣಿಸುತ್ತಿರುವುದೂ ಮುಖ್ಯ ಕಾರಣ. ಇಂತಹ ಸಮಯದಲ್ಲಿ ಸಾಹಿತ್ಯಾಸಕ್ತರ ತಂಡವೊಂದು ಪ್ರತಿ ತಿಂಗಳು ಒಂದು ಪುಸ್ತಕ ಓದಿ, ರ್ಚಚಿಸುವ ಕೆಲಸವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಮನಗರದಲ್ಲಿ ಸದ್ದಿಲ್ಲದೆ ಮಾಡುತ್ತಿದೆ.

ಎರಡು ವರ್ಷಗಳ ಪಯಣ: ಉಪನ್ಯಾಸಕ ಕೆ.ಎಸ್. ಧನಂಜಯ ಹಾಗೂ ಎಸ್. ಮಂಜೇಶ್​ಕುಮಾರ್ ಅವರ ಪರಿಕಲ್ಪನೆಯಲ್ಲಿ ಮೂಡಿದ ‘ಪುಸ್ತಕ ಮಂಥನ’ 2016ರ ನವೆಂಬರ್ ತಿಂಗಳಿನಲ್ಲಿ ಪ್ರಾರಂಭವಾಗಿದ್ದು ಇದೀಗ ಎರಡು ವರ್ಷಗಳ ಪಯಣ ಮುಗಿಸಿದೆ.

12 ಮಂದಿಯೊಂದಿಗೆ ಪ್ರಾರಂಭವಾದ ಈ ತಂಡದಲ್ಲಿ ಈಗ 40 ಸದಸ್ಯರಿದ್ದಾರೆ. ಜಿಲ್ಲೆಯ ನಿರ್ಲಕ್ಷಿತ ನಿಸರ್ಗ ತಾಣಗಳಲ್ಲಿ ಪುಸ್ತಕ ಮಂಥನದ ಕಾರ್ಯಕ್ರಮಗಳು ನಡೆಯುತ್ತಿವೆ. ಮೊದಲಿಗೆ ಜಾನಪದ ಲೋಕದಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ‘ಅಬಚೂರಿನ ಪೋಸ್ಟಾಫೀಸು’ ಪುಸ್ತಕದೊಡನೆ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಈ ಎರಡು ವರ್ಷಗಳಲ್ಲಿ 25 ಮಂಥನ ಕಾರ್ಯಕ್ರಮ ನಡೆದಿವೆ. ಕಳೆದ ನವೆಂಬರ್ 26ರಂದು ನಡೆದ 25ನೇ ಕಾರ್ಯಕ್ರಮದಲ್ಲಿ ‘ವಿಜಯವಾಣಿ’ ಪತ್ರಿಕೆಯ ಅಂಕಣಕಾರ ಹಾಗೂ ಕಥೆಗಾರ ಪ್ರೇಮಶೇಖರ ಅವರ ‘ಕನ್ನಡಿಯೊಳಗಿನ ಗಾಯ’ ಕಥಾ ಸಂಕಲನ ಕುರಿತು ಚರ್ಚೆ ನಡೆಯಿತು. ಪುಸ್ತಕ ಮಂಥನ ತಂಡದಲ್ಲಿ ಕೃಷಿಕರು, ಗೃಹಿಣಿಯರು, ವಿದ್ಯಾರ್ಥಿಗಳು, ಅಧ್ಯಾಪಕರು, ಸಾಹಿತಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸಾಹಿತ್ಯಾಸಕ್ತರು ಇದ್ದಾರೆ. ವ್ಯಕ್ತಿ ತನ್ನನ್ನು ಓದಿಗೆ ಹಚ್ಚಿ ತನ್ನ ಓದಿನ ಚಿಂತನೆಗಳನ್ನು ಅನಾವರಣಗೊಳಿಸಿಕೊಳ್ಳುವ ಅವಕಾಶ ಮಂಥನದಲ್ಲಿ ಎಲ್ಲರಿಗೂ ವಿಪುಲವಾಗಿದೆ. ಸ್ತ್ರೀ ಪುರುಷರಷ್ಟೇ ಅಲ್ಲ ಅವರ ಮಕ್ಕಳನ್ನು ಓದಿನ ಅನುಭವ ಮಂಟಪಕ್ಕೆ ಕರೆದುಕೊಂಡು ಬರುವ ಅವಕಾಶವಿರುವುದರಿಂದ ಮಕ್ಕಳನ್ನು ಪರೋಕ್ಷವಾಗಿ ಓದಿನ ವಾತಾವರಣಕ್ಕೆ ಒಡ್ಡುವ ಮತ್ತು ಓದಿನ ಹವ್ಯಾಸವನ್ನು ಬಿತ್ತುವ ಕೊಡುಗೆಯನ್ನು ಮಂಥನ ನೀಡುತ್ತಿದೆ.

ನೈಸರ್ಗಿಕ ತಾಣಗಳನ್ನೇ ಆಯ್ದುಕೊಳ್ಳುವುದರಿಂದ ಮಕ್ಕಳಲ್ಲಿ ಮತ್ತು ಓದುಗರಲ್ಲಿ ನಗರೀಕರಣದ ಗೊಂದಲದಿಂದ ಒಂದಷ್ಟು ಹೊತ್ತಿನ ಮುಕ್ತಿ, ಸೌಂದರ್ಯ ಪ್ರಜ್ಞೆಯ ಉದ್ದೀಪನವೂ ಇಲ್ಲಿ ಸಾಧ್ಯವಾಗುತ್ತದೆ.

ಪ್ರಕೃತಿಯ ಜೀವ ವೈವಿಧ್ಯವನ್ನು ನೋಡುವ ಗಮನಿಸುವ ಅರಿಯುವ ಮತ್ತು ಉಪಾಸನೆಗೈಯ್ಯುವ ಮನೋವೃತ್ತಿಯನ್ನು ಬೆಳೆಸುವ ಕಾರ್ಯ ಪರೋಕ್ಷವಾಗಿ ಮಂಥನ ಕುಟುಂಬದ ಸದಸ್ಯರಿಗೆ ಸಾಧುವಾಗುತ್ತಿದೆ.

ವ್ಯಕ್ತಿ ಸ್ವಾತಂತ್ರ್ಯ, ಅಭಿವೃಕ್ತಿಗೆ ಇಲ್ಲಿ ಮುಕ್ತವಾದ ಮನ್ನಣೆ ಇರುವುದರಿಂದ ಮಕ್ಕಳಾಗಲಿ, ಹಿರಿಯರಾಗಲಿ, ಎಲ್ಲರೂ ಒಂದಾಗಿ ಎಲ್ಲರಲ್ಲೂ ಒಂದಾಗಿ ನಲಿದು ಒಲವಿನಿಂದ ಪಾಲ್ಗೊಳ್ಳುವುದರಿಂದ ಒಂದು ಭಾವನಾತ್ಮಕ ಬುದ್ಧಿವಂತಿಕೆಯನ್ನು ಮಂಥನ ಕುಟುಂಬ ಪೋಷಿಸಿ ಬೆಳೆಸುತ್ತಿದೆ.

ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ರಚಿತವಾಗಿರುವ ಕಾವ್ಯ, ಕಥೆ, ಕಾದಂಬರಿ, ಅನುವಾದ, ನಾಟಕ, ಮನೋವಿಜ್ಞಾನ ಸೇರಿದಂತೆ ವೈವಿಧ್ಯಮಯ ಪುಸ್ತಕಗಳನ್ನು ಓದಿ, ಚರ್ಚೆ ಮಾಡಲಾಗುತ್ತಿದೆ.

ಪುಸ್ತಕದ ಆಯ್ಕೆ, ಲೇಖಕರ ಒಡನಾಟ, ಅವರ ಆಶಯ ವಿಚಾರಗಳ ವಿನಿಯಮಯವೂ ಮಂಥನದ ವಿಶೇಷತೆಯಲ್ಲೊಂದು. ಮಂಥನ ಅನೌಪಚಾರಿಕ ಗುಂಪಾದರೂ ಸಮಯಪಾಲನೆ, ಓದಿನ ಶಿಸ್ತು, ಪರಸ್ಪರ ಗೌರವ, ಪ್ರೀತಿ ಆದರತೆ ಪ್ರಕೃತಿಯ ಭಾಗವಾಗಿ ನಾವು ಹೇಗೆ ನಡೆದುಕೊಳ್ಳಬೇಕು ಎಂಬ ನಡವಳಿಕೆಗಳು ಯಾವ ಶಾಲೆಯೂ ಕಲಿಸದ ಕಲಿಕೆಗೆ ಗುಂಪಿನ ಸದಸ್ಯರನ್ನು ಒಡ್ಡುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ‘ಪುಸ್ತಕ ಮಂಥನ’ವು ಸಮಾನತೆ, ಪರಸ್ಪರತೆ ಎಂಬ ಅಲಿಖಿತ ನಿಯಮದೊಳಗೆ ಲಿಂಗಭೇದ, ವೃತ್ತಿ ಭೇದ, ವಿಚಾರ ಭೇದ, ಆಚಾರಭೇದ, ವಯೋಭೇದ ಇಂತಹ ಯಾವುದೇ ಮಾನವ ನಿರ್ವಿುತ ಭೇದಭಾವಗಳಿರದ ಸಹೃದಯ ಓದುಗ ಕುಟುಂಬ.

ನಿಮಗೆ ಆಸಕ್ತಿ ಇದೆಯೇ?

ಓದಿನ ಆಸಕ್ತಿಯಿರುವ ಎಲ್ಲಾ ವಯೋಮಾನದವರು ಪಾಲ್ಗೊಳ್ಳಬಹುದು. ಮೂರು ತಿಂಗಳ ಸತತ ಹಾಜರಾತಿಯೊಂದಿಗೆ ಗುಂಪಿನ ಸದಸ್ಯತ್ವ ಸ್ವಯಂ ಚಾಲನೆಗೊಳ್ಳುತ್ತದೆ. ಮೂರು ತಿಂಗಳ ಸತತ ಗೈರು ಹಾಜರಿಯಿಂದ ಸದಸ್ಯತ್ವವು ಸ್ಥಗಿತಗೊಳ್ಳುತ್ತದೆ. ಆದರೆ ಪುನಃ ಸೇರ್ಪಡೆಗೊಳ್ಳಲು ಮಂಥನ ಗುಂಪಿನ ನಿರ್ವಾಹಕರ ಪೂರ್ವಾನುಮತಿ ಪಡೆದು ಗುಂಪಿನಲ್ಲಿ ಭಾಗವಹಿಸಬಹುದು. ತಿಂಗಳ ಪುಸ್ತಕದ ಹೆಸರಿನಲ್ಲಿ ವಾಟ್ಸ್ ಆಪ್ ಗುಂಪು ಇದ್ದು, ತಮ್ಮ ಓದಿನ ಅನುಭವ, ಸಲಹೆ ಸೂಚನೆ, ಹಾಸ್ಯ ಪ್ರವೃತ್ತಿ, ಚಿಂತನೆಗಳನ್ನು ಸದಸ್ಯರು ಹಂಚಿಕೊಳ್ಳಬಹುದಾಗಿದೆ. ಮಂಥನ ಸ್ವಯಂ ನಿರ್ದೇಶಿತ ಗುಂಪಾಗಿದ್ದು, ಮುಕ್ತತತೆ ಓದಿನ ಸಂತೋಷವನ್ನು ಅನುಭವಿಸುವ ಹಂಚುವ ಕುಟುಂಬವಾಗಿ ಯಾವುದೇ ಅಹಮ್ಮಿಕೆಗಳಿಂದ ಮುಕ್ತವಾಗಿರುವ ಒಂದು ಗುಂಪಾಗಿ ಓದಿನಲ್ಲಿ ಪಾಲ್ಗೊಳ್ಳುವುದನ್ನು ಸದಸ್ಯರಿಂದ ಬಯಸುತ್ತದೆ.

ಮಂಥನದಲ್ಲಿ ಏನೇನಿವೆ?

ಪುಸ್ತಕವನ್ನು ಓದುವ ಜತೆಗೆ ಆ ಕೃತಿಯನ್ನು ವಿವಿಧ ನೆಲೆಗಳಲ್ಲಿ ಅಧ್ಯಯನಕ್ಕೆ ಒಳಪಡಿಸುವ ಕೆಲಸವನ್ನು ‘ಪುಸ್ತಕ ಮಂಥನ’ ಕಾರ್ಯಕ್ರಮದಲ್ಲಿ ಮಾಡಲಾಗುತ್ತಿದೆ. ಕೃತಿಯನ್ನು ಓದಿ ಪಕ್ಕಕ್ಕೆ ಇಡುವ ಬದಲಾಗಿ ಓದಿದ್ದನ್ನು ವಿಶೇಷವಾಗಿ ಗ್ರಹಿಸುವ ಕೆಲಸ ಇಲ್ಲಿ ನಡೆಯುತ್ತಿದೆ. ಓದಿದ ಪುಸ್ತಕಗಳ ಕುರಿತು ಮಾತನಾಡುವ ಕ್ರಿಯಾಶೀಲತೆಯನ್ನು ಬೆಳೆಸಲಾಗುತ್ತಿದೆ. ಈ ಮೂಲಕ ಪುಸ್ತಕ ಪ್ರೀತಿಯನ್ನು ಎಲ್ಲೆಡೆ ಪಸರಿಸಲಾಗುತ್ತಿದೆ. ಇದರ ಜತೆಗೆ, ವರ್ಷಕ್ಕೊಮ್ಮೆ ಯಾವುದೇ ಸಾಹಿತ್ಯ ಪುಸ್ತಕ ಬಯಸುವ ಸ್ಥಳಕ್ಕೆ ಭೇಟಿ ನೀಡಿ ಚರ್ಚೆ ನಡೆಸಲಾಗುತ್ತಿದೆ. 2017ರಲ್ಲಿ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಕೃತಿಯ ಬಗ್ಗೆ ಅವರ ಹುಟ್ಟೂರಾದ ಕುಪ್ಪಳಿಯಲ್ಲಿ ರ್ಚಚಿಸಲಾಗಿದೆ. ಈಚೆಗೆ, ತ.ರಾ.ಸು ಅವರ ‘ದುರ್ಗಾಸ್ತಮಾನ’ ಕಾದಂಬರಿಯನ್ನು ಚಿತ್ರದುರ್ಗದಲ್ಲಿ ನಡೆಸಲಾಗಿದೆ. ಕಾದಂಬರಿಯಲ್ಲಿ ಉಲ್ಲೇಖಗೊಂಡಿರುವ ಸ್ಥಳಗಳನ್ನು ಪರಿಶೀಲಿಸಿ, ಸಂಬಂಧಿಸಿದ ಸಂಶೋಧಕರ ಜತೆ ಸಂವಾದ ನಡೆಸಲಾಗಿದೆ. ಸಂಸ್ಕಾರಯುತ ಸಮಾಜ ರೂಪಿಸುವ ಆಶಯ ಹೊತ್ತು ‘ಪುಸ್ತಕ ಮಂಥನ’ ಎಂಬ ಉಪಯುಕ್ತ ಕಾರ್ಯ ಯೋಜನೆ ರೂಪಿಸಿರುವ ಸಾಹಿತ್ಯಾಸಕ್ತರ ಬಳಗದ ಕ್ರಿಯಾಶೀಲತೆ ನಿಜಕ್ಕೂ ಶ್ಲಾಘನೀಯ. ಇಂತಹ ಪ್ರಯತ್ನಗಳು ಆರೋಗ್ಯಕರ ಸಮಾಜ ನಿರ್ಮಾಣ ಕಾರ್ಯಕ್ಕೆ ಸಹಕಾರಿಯಾಗುತ್ತವೆ. ಈ ಬಗೆಯ ಆಶಯ ಹೊತ್ತಿರುವ ಸಮಾನ ಮನಸ್ಕ ಗೆಳೆಯರ ಬಳಗದ ಪ್ರಯತ್ನ ಅಭಿನಂದನೀಯ.