ಮುನಿಸಂಘ ಧರ್ಮಸ್ಥಳ ಪುರಪ್ರವೇಶ

ಬೆಳ್ತಂಗಡಿ: ಧರ್ಮಸ್ಥಳ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ನೇತೃತ್ವ ವಹಿಸಲಿರುವ ಆಚಾರ್ಯ ಶ್ರೀ ಪುಷ್ಪದಂತ ಸಾಗರ ಮುನಿ ಮಹಾರಾಜರು ಮುನಿ ಸಂಘದೊಂದಿಗೆ ಶನಿವಾರ ಧರ್ಮಸ್ಥಳ ಪುರಪ್ರವೇಶ ಮಾಡಿದರು.

ಮೆರವಣಿಗೆಯಲ್ಲಿ ಆಗಮಿಸಿದ ಮುನಿ ವೃಂದದವರನ್ನು ಗೌರವದಿಂದ ಬರಮಾಡಿಕೊಳ್ಳಲಾಯಿತು. ಬೀಡಿನಲ್ಲಿ ಭಗವಾನ್ ಶ್ರೀ ಆದಿನಾಥ ಸ್ವಾಮಿ ಹಾಗೂ ಬಸದಿಯಲ್ಲಿ ಭಗವಾನ್ ಚಂದ್ರನಾಥ ಸ್ವಾಮಿಯ ದರ್ಶನ ಮಾಡಿದ ಬಳಿಕ ಮುನಿಗಳು ಮಂಗಲ ಪ್ರವಚನ ನೀಡಿದರು.

ಶ್ರೀ ಪುಷ್ಪದಂತ ಸಾಗರ ಮುನಿ ಮಹಾರಾಜರು ಮಾತನಾಡಿ, ನಿತ್ಯವೂ ಅಹಿಂಸಾ ಧರ್ಮದ ಪಾಲನೆ ಮಾಡಬೇಕು. ಸಾಮಾಯಿಕ, ಪ್ರತಿಕ್ರಮಣದ ಮೂಲಕ ಜೀವನ ಪಾವನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ವರ್ಧಮಾನ ಸಾಗರ್‌ಜಿ ಮಾತನಾಡಿ, ಧರ್ಮಾತ್ಮರ ಸತ್ಸಂಗದಿಂದ ನಾವು ಆತ್ಮ ಜಾಗೃತಿ ಮಾಡಿಕೊಂಡಾಗ ಜೀವನ ಪಾವನವಾಗುತ್ತದೆ. ಧರ್ಮದ ಮರ್ಮ ಅರಿಯಲು ಧರ್ಮಾತ್ಮರು ಪ್ರೇರಣೆ ನೀಡುತ್ತಾರೆ. ಧರ್ಮಸ್ಥಳ ಪವಿತ್ರ ಕ್ಷೇತ್ರ. ಇಲ್ಲಿ ಬಂದಾಗ ನಮ್ಮ ಹೃದಯ ಪರಿವರ್ತನೆಯಾಗಬೇಕು. ನಿರಂತರ ಸಾಧನೆಯಿಂದ ಆತ್ಮನೇ ಪರಮಾತ್ಮನಾಗಬಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಮುಖ್ ಸಾಗರ್ ಮುನಿ ಮಹಾರಾಜರು ಮತ್ತು ಹೊಂಬುಜ ಜೈನ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ.ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್ ಮತ್ತು ಹೆಗ್ಗಡೆ ಕುಟುಂಬಸ್ಥರು ಹಾಗೂ ನೂರಾರು ಭಕ್ತರು ಭಾಗವಹಿಸಿದ್ದರು.