ಮೈಸೂರಿನ ಪುಷ್ಪಾ ಅಮರ್​ನಾಥ್​ಗೆ ಮಹಿಳಾ ಕಾಂಗ್ರೆಸ್​ ಅಧ್ಯಕ್ಷ ಸ್ಥಾನ

ಬೆಂಗಳೂರು: ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮ ಪಾಲಿಸಿರುವ ಕಾಂಗ್ರೆಸ್​ ಪಕ್ಷ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಬಳಿಯಿದ್ದ ರಾಜ್ಯ ಮಹಿಳಾ ಕಾಂಗ್ರೆಸ್​ನ ಅಧ್ಯಕ್ಷ ಸ್ಥಾನವನ್ನು ಮೈಸೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಪುಷ್ಪಾ ಅಮರನಾಥ್​ ಅವರಿಗೆ ವಹಿಸಿದೆ.
ಪುಷ್ಪಾ ಅವರನ್ನು ಮಹಿಳಾ ಕಾಂಗ್ರೆಸ್​ನ ಅಧ್ಯಕ್ಷರನ್ನಾಗಿ ನೇಮಿಸಿ ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಅಶೋಕ್​ ಗೆಹ್ಲೋಟ್​ ಅವರು ಇಂದು ಅದೇಶಿಸಿದ್ದಾರೆ.

ಈ ವರೆಗೆ ಮಹಿಳಾ ಕಾಂಗ್ರೆಸ್​ನ ಅಧ್ಯಕ್ಷರಾಗಿದ್ದ ಬೆಳಗಾವಿಯ ಲಕ್ಷ್ಮೀ ಹೆಬ್ಬಾಳ್ಕರ್​ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ಒಬ್ಬರಿಗೆ ಒಂದೇ ಸ್ಥಾನ ಎಂಬ ನಿಯಮವನ್ನು ಪಾಲಿಸುವ ಕಾಂಗ್ರೆಸ್​, ಮಹಿಳಾ ಕಾಂಗ್ರೆಸ್​ನ ಅಧ್ಯಕ್ಷ ಹುದ್ದೆಯನ್ನು ಬೇರೊಬ್ಬರಿಗೆ ವಹಿಸುವ ದೃಷ್ಟಿಯಿಂದ ಕಳೆದ ಹಲವು ದಿನಗಳಿಂದ 16ಕ್ಕೂ ಹೆಚ್ಚು ಜನರನ್ನು ಸಂದರ್ಶನ ಮಾಡಿತ್ತು. ಮಾಜಿ ಮೇಯರ್​ ಪದ್ಮಾವತಿ ಮತ್ತು ನಾಗಲಕ್ಷ್ಮೀ ಎಂಬುವವರೂ ಸಂದರ್ಶನದಲ್ಲಿ ಭಾಗವಹಿಸಿದ್ದರು. ಆದರೆ, ಅಂತಿಮವಾಗಿ ಪುಷ್ಪಾ ಅವರನ್ನು ನೇಮಕ ಮಾಡಲಾಗಿದೆ.

ಲೋಕಸಭಾ ಚುನಾವಣೆವರೆಗೂ ತಮ್ಮನ್ನು ಮುಂದುವರಿಸುವಂತೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಎಐಸಿಸಿ ಬಳಿ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ, ಅವರ ಮನವಿಯನ್ನು ತಿರಸ್ಕರಿಸಿರುವ ಹೈಕಮಾಂಡ್​, ಪುಷ್ಪಾ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.