ಒಡಿಶಾದಲ್ಲಿ 8 ಜನರನ್ನು ಬಲಿಪಡೆದ ಫೊನಿ ಚಂಡಮಾರುತ: ಪರಿಸ್ಥಿತಿ ಅವಲೋಕಿಸಿದ ಸಿಎಂ ನವೀನ್​ ಪಟ್ನಾಯಕ್​

ಭುವನೇಶ್ವರ: ಗಂಟೆಗೆ 175 ಕಿ.ಮೀ. ವೇಗವಾಗಿ ಬೀಸುತ್ತಿದ್ದ ಗಾಳಿಯ ಜತೆಗೆ ಭಾರಿ ಮಳೆಯನ್ನೂ ಹೊತ್ತುತಂದ ಫೊನಿ ಚಂಡಮಾರುತ ಒಡಿಶಾದಲ್ಲಿ ಇದುವರೆಗೆ 8 ಮಂದಿಯನ್ನು ಬಲಿಪಡೆದಿದೆ. ಹಾವಿನ ಹೆಡೆ ಎಂಬ ಪರ್ಯಾಯ ನಾಮವನ್ನೂ ಹೊಂದಿರುವ ಫೊನಿ ಚಂಡಮಾರುತ ಶುಕ್ರವಾರ ಬೆಳಗ್ಗೆ 8ಕ್ಕೆ ಪುರಿಗೆ ಅಪ್ಪಳಿಸಿತು.

ಹಲವು ಗ್ರಾಮಗಳ ಗುಡಿಸಲುಗಳು, ಮನೆಗಳು ಗಾಳಿಯ ರಭಸಕ್ಕೆ, ಜೋರು ಮಳೆಯ ಹೊಡೆತಕ್ಕೆ ಸಿಲುಕಿ ಜರ್ಝರಿತಗೊಂಡವು. ರಸ್ತೆ, ಹೊಲಗದ್ದೆಗಳೆಲ್ಲವೂ ನೀರಿನಿಂದ ಆವೃತವಾಗಿ ಭಾರಿ ಹಾನಿಯುಂಟಾಯಿತು.
ಪುರಿಯಲ್ಲಿ ಭೂಮಿಗೆ ಅಪ್ಪಳಿಸುವ ಮುನ್ನ ಫೊನಿ ಚಂಡಮಾರುತ ಸ್ವಲ್ಪ ದುರ್ಬಲಗೊಂಡಿತ್ತು. ಆದರೂ, ಇದರ ಹೊಡೆತಕ್ಕೆ ಸಿಲುಕಿದ ಒಡಿಶಾದ ಕರಾವಳಿ ಭಾಗ ಸಂಪೂರ್ಣ ನಜ್ಜುಗುಜ್ಜಾಯಿತು.

ಮೂವರು ಕಾಣೆ
ಫೊನಿ ಚಂಡಮಾರುತದಿಂದಾಗಿ ಪುರಿ ಜಿಲ್ಲೆಯಲ್ಲಿ ಮೂವರು ಬಾಲಕರು ಮೃತಪಟ್ಟಿದ್ದರೆ, ಭುವನೇಶ್ವರ ಮತ್ತು ಸುತ್ತಮುತ್ತಲ ಪ್ರದೇಶದಿಂದ ಮೂವರು ಬಾಲಕರು ಕಾಣೆಯಾಗಿದ್ದಾರೆ. ನಯಾಗಢದಲ್ಲಿ ಗಾಳಿಯಲ್ಲಿ ತೇಲಿ ಬಂದ ಕಾಂಕ್ರೀಟ್​ ಅವಶೇಷ ಬಡಿದು ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, ಕೇಂದ್ರಪಾರಾ ಜಿಲ್ಲೆಯ ರಕ್ಷಣಾ ಶಿಬಿರದಲ್ಲಿ ಹಿರಿಯ ನಾಗರಿಕ ಮಹಿಳೆಯೊಬ್ಬರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪರಿಸ್ಥಿತಿ ಅವಲೋಕಿಸಿದ ನವೀನ್​ ಪಟ್ನಾಯಕ್​
ಒಡಿಶಾ ಸಿಎಂ ನವೀನ್​ ಪಟ್ನಾಯಕ್​ ಫೊನಿ ಚಂಡಮಾರುತದಿಂದ ಆಗಿರುವ ಅನಾಹುತದ ಕುರಿತು ಮತ್ತು ಪ್ರಸ್ತುತ ಇರುವ ಪರಿಸ್ಥಿತಿಯನ್ನು ಅವಲೋಕಿಸಿದರು. ಚಂಡಮಾರುತ ಹಾದು ಹೋಗಿರುವ ಪ್ರದೇಶದಲ್ಲಿ ಸಂಪೂರ್ಣವಾಗಿ ಹಾಳಾಗಿರುವ ವಿದ್ಯುತ್​ ಮಾರ್ಗಗಳನ್ನು ಯುದ್ಧೋಪಾದಿಯಲ್ಲಿ ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಚಂಡಮಾರುತದ ಹಾವಳಿ ಇನ್ನೂ ಮುಂದುವರಿದಿರುವ ಕಾರಣ ಆಗಿರುವ ನಷ್ಟವನ್ನು ನಿಖರವಾಗಿ ಅಂದಾಜಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಆಂಧ್ರದಲ್ಲಿ ಉರುಳಿದ 2 ಸಾವಿರ ವಿದ್ಯುತ್​ ಕಂಬಗಳು
ಆಂಧ್ರ ಪ್ರದೇಶದಲ್ಲಿ ಕೂಡ ಸಾಕಷ್ಟು ಹಾನಿಯುಂಟು ಮಾಡಿರುವ ಫೊನಿ ಚಂಡಮಾರುತದಿಮದಾಗಿ ಅಂದಾಜು 2 ಸಾವಿರ ವಿದ್ಯುತ್​ ಕಂಬಗಳು ಉರುಳಿ ಬಿದ್ದಿವೆ. 117 ಉಪವಿದ್ಯುತ್​ ಸ್ಥಾವರಗಳಿಗೆ ಹಾನಿಯುಂಟಾಗಿದೆ. 553 ಹೆಕ್ಟೇರ್​ ಕೃಷಿ ಭೂಮಿ ಮತ್ತು 520 ಹೆಕ್ಟೇರ್​ ತೋಟಗಳು ಸಂಪೂರ್ಣ ಜಲಾವೃತಗೊಂಡಿದ್ದು, ಸಂಪೂರ್ಣ ಹಾನಿಗೊಂಡಿವೆ.

Leave a Reply

Your email address will not be published. Required fields are marked *