ಅಪ್ಪಟ ದೇಸಿ ಸೋಪು!

| ಮನೋಹರ್ ಬಳಂಜ ಬೆಳ್ತಂಗಡಿ

ಬಣ್ಣಬಣ್ಣದ ಸುವಾಸಿತ ಸಾಬೂನುಗಳಲ್ಲಿ ಅಪಾಯಕಾರಿ ರಾಸಾಯನಿಕಗಳನ್ನು ಬಳಸುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವುದು ಎಲ್ಲರಿಗೂ ತಿಳಿದ ಸಂಗತಿ. ಆದರೆ, ಬೇರೆ ಗತ್ಯಂತರವಿಲ್ಲದೆ ಅದನ್ನೇ ಬಳಸುವಂತಾಗುತ್ತದೆ. ಏನೊಂದೂ ರಾಸಾಯನಿಕ ಬಳಸದೆ ಸ್ನಾನ ಹಾಗೂ ಬಟ್ಟೆಯ ಸೋಪುಗಳನ್ನು ತಯಾರಿಸುವ ಕಾರ್ಯ ಅಲ್ಲಲ್ಲಿ ನಡೆಯುತ್ತಿದೆ. ಅಂಥವರಲ್ಲಿ ಕಣಿಯೂರು ಗ್ರಾಮದ ಕೃಷಿಕ ರವಿರಾಜ್ ಒಬ್ಬರು. ಇವರು ಕೃಷಿ ಉತ್ಪನ್ನಗಳಿಂದಲೇ ಸಾಬೂನು ತಯಾರಿಸಿರುವುದು ವಿಶೇಷ. ಶುದ್ಧ ಕೊಬ್ಬರಿ ಎಣ್ಣೆಯ ಸೋಪು, ದನದ ಹಾಲಿನ ಸೋಪು, ಶುದ್ಧ (ನೈಸರ್ಗಿಕ) ಅರಿಶಿಣ ಎಣ್ಣೆ ಸೋಪು, ಹಾಲು ಮತ್ತು ಅರಿಶಿಣಮಿಶ್ರಿತ ಸೋಪು, ಮಜ್ಜಿಗೆ ಸೋಪು, ಅಡಕೆ ಸೋಪು ಹೀಗೆ 6 ಬಗೆಯ ಸಾಬೂನುಗಳನ್ನು ಇವರು ಉತ್ಪಾದಿಸುತ್ತಿದ್ದಾರೆ. ಈ ಸಾಬೂನುಗಳು ಚರ್ಮರೋಗ ನಿವಾರಿಸಿ, ಚರ್ಮದ ಕಾಂತಿ ಹೆಚ್ಚಿಸುತ್ತವೆ. ಯಾವುದೇ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಿಲ್ಲ. ದೀರ್ಘಕಾಲ ಸಂಗ್ರಹಿಸಲು ಬೇಕಾದ ರಾಸಾಯನಿಕಗಳನ್ನೂ ಬಳಸಿಲ್ಲ ಎನ್ನುವುದು ಅಚ್ಚರಿದಾಯಕ. ಕೊಬ್ಬರಿ ಎಣ್ಣೆ ಮತ್ತು ಅರಿಶಿಣವೇ ಸೂಕ್ಷ್ಮಾಣುಜೀವಿನಾಶಕ ಎನ್ನುತ್ತಾರೆ ಸಂಶೋಧಕ.

ಸಾವಯವ ಕೃಷಿಕ: ಸಾವಯವ ಕೃಷಿ ಹೆಚ್ಚಾಗಬೇಕು. ಕೃಷಿ ಉತ್ಪನ್ನ ಬೇಡಿಕೆ ಹೆಚ್ಚುವು ದರೊಂದಿಗೆ ಧಾರಣೆ ಹೆಚ್ಚಬೇಕು ಎಂಬ ಚಿಂತನೆಯುಳ್ಳ ರವಿರಾಜ್, 1997ರಲ್ಲಿ ಉಜಿರೆ ಎಸ್​ಡಿಎಂ ಕಾಲೇಜಿನಲ್ಲಿ ಬಿಎಸ್ಸಿ ಪೂರೈಸಿ ಸ್ವಂತ ಉದ್ಯಮ ನಡೆಸುತ್ತಿದ್ದರು. ಬಳಿಕ ಹಿರಿಯರಿಂದ ಬಳವಳಿಯಾಗಿ ಬಂದ ಕೃಷಿಯನ್ನು ಪ್ರಮುಖ ವೃತ್ತಿಯನ್ನಾಗಿಸಿಕೊಂಡರು. ಹಾನಿಕರ ರಾಸಾಯನಿಕ ಬಳಸದೆ ಸಾವಯವ ಕೃಷಿ ಮೂಲಕ ಯಶಸ್ವಿ ರೈತರಾದರು. ಈಗ ಅಂತರ್ಜಾಲದ ಮೂಲಕ ಕೃಷಿ ಉತ್ಪನ್ನಗಳಿಂದ ಸಿದ್ಧ ವಸ್ತು ತಯಾರಿ ಬಗ್ಗೆ ಮಾಹಿತಿ ಸಂಗ್ರಹಿಸಿ ಆರು ಬಗೆಯ ಸಾಬೂನು ತಯಾರಿಸಿದ್ದಾರೆ. ಈ ಪ್ರಯೋಗದ ಹಾದಿಯಲ್ಲಿ ನಷ್ಟ ಅನುಭ ವಿಸಿದರೂ ಛಲ ಬಿಡದೆ ಪ್ರಾಕೃತಿಕ ಉತ್ಪನ್ನಗಳಿಂದಲೇ ಸಾಬೂನು ತಯಾರು ಮಾಡಿದ್ದಾರೆ. ಇವರ ಸಂಪರ್ಕ ಸಂಖ್ಯೆ: 7760545001.

ನಿರಂತರ ಶ್ರಮ ಹಾಗೂ ಪತ್ನಿ ಮತ್ತು ಮನೆಯವರ ಪ್ರೋತ್ಸಾಹದಿಂದ ಸಾಬೂನು ತಯಾರಿಸಲು ಯಶಸ್ವಿಯಾಗಿದ್ದೇನೆ. ಅಡ್ಡ ಪರಿಣಾಮವಿಲ್ಲದ, ಚರ್ಮ ರೋಗ ನಿವಾರಣೆ ಹಾಗೂ ಚರ್ಮದ ಕಾಂತಿಗೆ ಈ ಸಾಬೂನು ಉತ್ತಮ. ಕೃಷಿ ಉತ್ಪನ್ನಗಳಿಂದ ಸಿದ್ಧವಸ್ತುಗಳು ಹೆಚ್ಚು ಉತ್ಪಾದನೆಯಾದರೆ ಅಡಕೆ, ತೆಂಗು, ಹಾಲು, ಮಜ್ಜಿಗೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗಿ ಕೃಷಿಕರ ಕೈಹಿಡಿಯಬಹುದು.

| ರವಿರಾಜ್ ಸಾಬೂನು ಉತ್ಪನ್ನ ಸಂಶೋಧಕ

ಬೇಡಿಕೆಯಷ್ಟು ಉತ್ಪಾದನೆ ಕಷ್ಟ

ಅತ್ಯಂತ ಸೂಕ್ಷ್ಮವಾಗಿ ಸೋಪು ತಯಾರಿಸುತ್ತಿದ್ದಾರೆ ರವಿರಾಜ್. ಇದಕ್ಕೆ ವಿದ್ಯುತ್​ಶಕ್ತಿ ಅಗತ್ಯವಿಲ್ಲ. ಅಡಕೆ ಹುಡಿ ಮಾಡುವ ಯಂತ್ರ ಬೇಕು. ಉಳಿದೆಲ್ಲವೂ ರವಿರಾಜ್ ದಂಪತಿ ಶ್ರಮದಿಂದಲೇ ತಯಾರಾಗುತ್ತಿದೆ. ಬಿಸಿಲಿನ ತಾಪವಿಲ್ಲದೆ ಮನೆಯೊಳಗಿನ ಗಾಳಿಯಿಂದಲೇ ಈ ಸೋಪು ಸಿದ್ಧವಾಗುತ್ತದೆ. ಮಜ್ಜಿಗೆ ಸೋಪನ್ನು ಸ್ನಾನ, ಬಟ್ಟೆ ಒಗೆಯಲು ಎರಡಕ್ಕೂ ಬಳಸಬಹುದಾಗಿದೆ. ಉಳಿದ ಸೋಪುಗಳು ಸ್ನಾನಕ್ಕೆ ಮಾತ್ರ. ಒಂದು ಸೋಪು ತಯಾರಿಸಿ ಮಾರುಕಟ್ಟೆಗೆ ನೀಡಲು ಕನಿಷ್ಠ 20 ದಿನ ಬೇಕು. ದಿನದಲ್ಲಿ ಗರಿಷ್ಠ 200 ಸೋಪು ಮಾತ್ರ ಉತ್ಪಾದಿಸಲು ಸಾಧ್ಯ. ಈಗಾಗಲೇ ಮುಂಬೈ, ಗೋವಾ, ಬೆಂಗಳೂರು ಮುಂತಾದೆಡೆಯಿಂದ ಬೇಡಿಕೆ ಬಂದಿದೆ. ಬಳಸಿದವರು ಉತ್ಪನ್ನಕ್ಕೆ ಬೇಡಿಕೆ ಇಡುತ್ತಿದ್ದಾರೆ. ಆದರೆ, ಸ್ನೇಹಿತರು, ಸಂಬಂಧಿಕರಿಗೆ ಮಾತ್ರ ಪೂರೈಸಲು ಸಾಧ್ಯವಾಗುತ್ತಿದೆ. ಉತ್ಪಾದನಾ ವೆಚ್ಚ ಅಧಿಕವಿರುವುದರಿಂದ ಕೆಲವು ಸಾಬೂನು ಬೆಲೆ ದುಬಾರಿ. ‘ನಮ್ಮಿಂದ ಸಾಧ್ಯವಿರುವಷ್ಟು ಮಾತ್ರ ಉತ್ಪಾದಿಸಿ ಪೂರೈಸುತ್ತಿದ್ದೇವೆ. ಬೇಡಿಕೆ ಹೆಚ್ಚಾದರೂ ದೊಡ್ಡ ಕಾರ್ಖಾನೆ ನಿರ್ವಿುಸಿ ತಯಾರಿಸುವುದು ಅಸಾಧ್ಯ. ಇದು ಸೂಕ್ಷ್ಮ ವಿಚಾರವಾಗಿರುವುದರಿಂದ ಕಾರ್ವಿುಕರಿಗೂ ಇದರ ಬಗ್ಗೆ ತಿಳಿದಿಲ್ಲ. ಮುಂದೆ ಗೊಂಡೆಹೂವಿನ ಸೋಪು ತಯಾರಿಸುತ್ತೇನೆ’ ಎನ್ನುತ್ತಾರೆ ರವಿರಾಜ.