ನೆಲಮಂಗಲ: ಸಮಾಜದ ಸಂಘ ಸಂಸ್ಥೆಗಳು ಮಾಡುವ ಗೌರವ ಪುರಸ್ಕಾರಗಳು ಸಾಧಕರಿಗೆ ಪ್ರೇರಣೆಯಾಗಲಿವೆ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟರು.
ಪಟ್ಟಣದ ನೇತಾಜಿ ಉದ್ಯಾವನದಲ್ಲಿ ರಾಜ್ಯ ದಲಿತ ಕೂಲಿ ಮತ್ತು ಕಾರ್ಮಿಕರ ಸಂಘಟನೆ, ಕಲಾಗಂಗಾ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಗ್ರಾಮೀಣ ಕಲಾಮೇಳ, ಅಂಬೇಡ್ಕರ್ ಅವರ 63ನೇ ಪರಿನಿರ್ವಾಣದಿನ ಹಾಗೂ 13ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದ ಏಳಿಗೆಯಲ್ಲಿ ಸಂಘ ಸಂಸ್ಥೆಗಳು ಮಹತ್ವದ ಪಾತ್ರವಹಿಸಲಿವೆ. ಸಂಘಟನೆಯಿಂದ ದಲಿತ ಕೂಲಿಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ಮಾಡಿ ನ್ಯಾಯ ಒದಗಿಸುವುದರ ಜತೆಗೆ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಸಮಾಜ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರನ್ನು ಗುರುತಿಸಿ ಗೌರವಿಸುವ ಕೆಲಸ ದಶಕಗಳಿಗೂ ಮೀರಿ ಮಾಡುತ್ತಿರುವುದು ಪ್ರಶಂಸನೀಯವಾಗಿದೆ ಎಂದರು.
ಚಿತ್ರದುರ್ಗ ಮಹಾಸಂಸ್ಥಾನ ಮಠದ ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ ಮಾತನಾಡಿ, ಪ್ರತಿಭೆ ಇದ್ದವರಿಗೆ ಮಾತ್ರ ಪುರಸ್ಕಾರ ದೊರೆಯಲಿದೆ. ಪುರಸ್ಕೃತ ವಿದ್ಯಾರ್ಥಿಗಳು ಗುರಿ ಭವಿಷ್ಯ ರೂಪಿಸಿಕೊಳ್ಳವುದಾಗಿರಬೇಕು. ಸರ್ಕಾರಿ ಕೆಲ ಸ್ವಾಮ್ಯದ ಕಂಪನಿಗಳು ಮುಚ್ಚಿಕೊಂಡಿದ್ದರೆ, ಕೆಲ ಕಂಪನಿಗಳು ಖಾಸಗೀಕರಣಗೊಂಡಿದ್ದು, ಆದ್ದರಿಂದ ಮೀಸಲಾತಿ ಬಿಟ್ಟು ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಕೌಶಲ ಬೆಳೆಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಜೀವನದ ಗುರಿ ಉದ್ದೇಶಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ. ಸಮಾಜಕ್ಕೆ ಬೆಳಕಾಗಬೇಕಿದೆ. ಎಸ್ಸೆಸ್ಸೆಲ್ಸಿ ನಂತರದ ಪದವಿ ಶಿಕ್ಷಣದವರೆಗೂ ಕಡ್ಡಾಯಗೊಳಿಸುವ ಕಾರ್ಯ ಕೇಂದ್ರ ಸರ್ಕಾರ ಮಾಡಬೇಕಿದೆ. ಸಮಾಜದಲ್ಲಿ ಧ್ವನಿಯಿಲ್ಲದವರಿಗೆ, ಅಸಹಾಯಕರಿಗೆ ಆಸರೆಯಾಗುವ ಕೆಲಸ ಸಮಾಜದಲ್ಲಿನ ಸಂಘಟನೆಗಳು ಮಾಡಬೇಕಿದೆ ಎಂದು ವನಕಲ್ಲುಮಠದ ಶ್ರೀ ಬಸವರಮಾನಂದಸ್ವಾಮೀಜಿ ತಿಳಿಸಿದರು.
ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಾಧಕರಿಗೆ ಸನ್ಮಾನ: ಬೆಂ.ಗ್ರಾಮಾಂತರ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ 230ಕ್ಕೂ ಹೆಚ್ಚು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಲಾವಿದ ಜ್ಯೋರ್ತಿಲಿಂಗಪ್ಪ, ವಕೀಲ ಕನಕರಾಜು, ಕವಿ ಸಿರಾಜ್‌ಅಹ್ಮದ್, ಗಂಗಾಧರ್ ಅವರಿಗೆ ಸನ್ಮಾನಿಸಲಾಯಿತು.
ಸಂಘಟನೆ ಅಧ್ಯಕ್ಷ ಬಿ.ಎಂ.ಗಂಗಬೈಲಪ್ಪ, ಬಸವಣ್ಣದೇವರಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ತಹಸೀಲ್ದಾರ್ ಎಂ.ಶ್ರೀನಿವಾಸಯ್ಯ, ಜಿಪಂ ಸದಸ್ಯ ಟಿ.ತಿಮ್ಮರಾಯಪ್ಪ ಮಾಜಿ ಸದಸ್ಯ ಎಚ್.ಪಿ.ಚಲುವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ವಾಜರಹಳ್ಳಿ ಗ್ರಾಪಂ ಅಧ್ಯಕ್ಷೆ ಮಂಜಮ್ಮ, ಸಂಘಟನೆ ಗೌರವಾಧ್ಯಕ್ಷ ಎಸ್.ಮಂಜುನಾಥಯ್ಯ, ಉಪಾಧ್ಯಕ್ಷ ಸಿ.ಗಂಗರಾಜು, ಪ್ರದಾನ ಕಾರ್ಯದರ್ಶಿ ಆರ್.ಪ್ರಸಾದ್, ಜಿಲ್ಲಾಧ್ಯಕ್ಷ ಸನಾಹುಲ್ಲಾ, ಸಂಘಟನಾ ಅಧ್ಯಕ್ಷ ಬಿ.ಮಹೇಶ್, ಕಾರ್ಯದರ್ಶಿ ಕುಮಾರ್, ತಾಲೂಕು ಕಾರ್ಯಾಧ್ಯಕ್ಷ ಮುನಿಆಂಜಿನಪ್ಪ, ಸಂಚಾಲಕ ನರಸಿಂಹಮೂರ್ತಿ, ತಾಲೂಕು ಸಂಘಟನಾ ಅಧ್ಯಕ್ಷ ಗೌಸ್, ಕಾರ್ಯದರ್ಶಿ ಕೆ.ಕೆಂಪರಾಜು ಮತ್ತಿತರರಿದ್ದರು.