ಪ್ರಿಯಕರನ ಜತೆ ಓಡಿಹೋಗಲು ಗಂಡನನ್ನೇ ಇಲ್ಲವಾಗಿಸಿದ ಎರಡು ಮಕ್ಕಳ ತಾಯಿ, ಮಕ್ಕಳ ಒತ್ತಾಯ ಕೇಳಿದ್ರೆ ಶಾಕ್‌ ಆಗುತ್ತೆ!

ನವದೆಹಲಿ: ಎರಡು ಮಕ್ಕಳ ತಾಯಿಯಾಗಿದ್ದ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಓಡಿಹೋಗಲು ಉಸಿರುಗಟ್ಟಿಸಿ ಗಂಡನನ್ನೇ ಹತ್ಯೆ ಮಾಡಿರುವ ಘಟನೆ ಪಂಜಾಬ್‌ನ ತರ್ನ್‌ ತರನ್‌ ಜಿಲ್ಲೆಯಲ್ಲಿ ನಡೆದಿದೆ.

ಮಹಿಳೆಯನ್ನು ಸಿಮ್ರಾನ್‌ ಕೌರ್ ಎಂದು ಗುರುತಿಸಲಾಗಿದ್ದು, ಭಾನುವಾರ ರಾತ್ರಿ ಆರೋಪಿಯು ಗಂಡನಿಗೆ ಆಹಾರದಲ್ಲಿ ವಿಷ ಬೆರೆಸಿದ್ದಾಳೆ. ಬಳಿಕ ಬದುಕಿಬಿಟ್ಟರೆ ಎಂಬ ಭಯದಿಂದ ಕತ್ತು ಹಿಸುಕಿ ಹತ್ಯೆ ಮಾಡಿದ್ದಾಳೆ. ಮಕ್ಕಳನ್ನು ತನ್ನ ತಂದೆ ಮನೆಗೆ ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.

ಸಿಮ್ರಾನ್‌ ಮತ್ತು ಗಂಡ ರಾಜ್‌ಪ್ರೀತ್‌ ಸಿಂಗ್‌ 12 ವರ್ಷದ ಹಿಂದೆ ವಿವಾಹವಾಗಿದ್ದರು ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದರು. ಸಿಮ್ರಾನ್‌ ಲವ್‌ಪ್ರೀತ್‌ ಸಿಂಗ್ ಲವ್ಲಿ ಎಂಬಾತನೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದಾಳೆ. ಇದನ್ನು ತಡೆಯಲು ಕುಟುಂಬಸ್ಥರು ಪ್ರಯತ್ನಿಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ.

ಅಪ್ಪನ ಹತ್ಯೆ ಕುರಿತಂತೆ ಮಕ್ಕಳು ತನ್ನ ತಾತನೊಂದಿಗೆ ಹೇಳಿಕೊಂಡ ಬಳಿಕ ಘಟನೆ ಬೆಳಕಿಗೆ ಬಂದಿದೆ. ರಾಜ್‌ಪ್ರೀತ್‌ನನ್ನು ಹಗ್ಗದಿಂದ ಕುತ್ತಿಗೆಗೆ ಸುತ್ತಿ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಕುರಿತು ತಿಳಿಸಿದ್ದಾರೆ. ಅಲ್ಲದೆ ತಮ್ಮ ತಾಯಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ತಾಯಿಯನ್ನು ನೇಣಿಗೇರಿಸಬೇಕು ಎಂದು ಹೇಳಿದ್ದಾರೆ.

ಇನ್ನು ರಾಜ್‌ಪ್ರೀತ್‌ ಕುಟುಂಬಸ್ಥರು ಪ್ರತಿಕ್ರಿಯಿಸಿ, ನಾವು ಸ್ಥಳಕ್ಕೆ ತಲುಪಿದಾಗ ಆತ ಕುತ್ತಿಗೆಗೆ ಹಗ್ಗ ಬಿಗಿದ ಸ್ಥಿತಿಯಲ್ಲಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟೊತ್ತಿಗಾಗಲೇ ಕೊನೆಯುಸಿರೆಳೆದಿದ್ದ ಎಂದು ಹೇಳಿದ್ದಾರೆ.

ಈ ಕುರಿತು ರಾಜ್‌ಪ್ರೀತ್‌ ತಂದೆ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಸಿಮ್ರಾನ್‌ ಮತ್ತು ಲವ್ಲಿ ಪತ್ತೆಗೆ ಬಲೆ ಬೀಸಲಾಗಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *