ಬಸ್​ ಚಾಲನೆ ಮಾಡುತ್ತಲೇ ಟಿಕ್​ಟಾಕ್​ಗಾಗಿ ವಿಡಿಯೋ ಚಿತ್ರೀಕರಿಸಿ ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟವಾಡಿದ ಚಾಲಕ

ಜಾಲಂಧರ್​: ಬಸ್​ ಚಾಲನೆ ಮಾಡುವಾಗ ಅದರಲ್ಲಿ ಕುಳಿತಿರುವವರ ಪ್ರಾಣ ಎಲ್ಲವೂ ಬಸ್​ ಚಾಲಕನ ಕೈಯಲ್ಲಿರುತ್ತದೆ. ಆತ ಮಾಡುವ ಸಣ್ಣದೊಂದು ತಪ್ಪು ಹಲವು ಜೀವಗಳನ್ನು ಬಲಿ ಪಡೆಯುವ ಸಾಧ್ಯತೆ ಇರುತ್ತದೆ. ಈ ವಿಷಯ ತಿಳಿದಿದ್ದರೂ ಇಲ್ಲೊಬ್ಬ ಚಾಲಕ ಟಿಕ್​ಟಾಕ್​ನಲ್ಲಿ ಜನಪ್ರಿಯತೆ ಗಳಿಸಲು ವಿಡಿಯೋ ಚಿತ್ರೀಕರಿಸಿ, ಶಿಕ್ಷೆಗೆ ಗುರಿಯಾಗಿದ್ದಾನೆ.

ಅಮನ್​ಜೋತ್​ ಬ್ರಾರ್​ ಪಂಜಾಬ್​ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಜು.7ರಂದು ಜಾಲಂಧರ್​ನಿಂದ ದೆಹಲಿಗೆ ತೆರಳುತ್ತಿದ್ದ ಬಸ್​ ಅನ್ನು ಚಾಲನೆ ಮಾಡುತ್ತಿದ್ದ. ನಿದ್ದೆ ಬಾರದಿರಲಿ ಎಂಬ ಕಾರಣಕ್ಕೆ ಪ್ಲೇಯರ್​ನಲ್ಲಿ ಚಲನಚಿತ್ರ ಹಾಡನ್ನು ಹಾಕಿಕೊಂಡು ಹಾಡು ಗುನುಗುತ್ತಾ ಬಸ್​ ಚಾಲನೆ ಮಾಡುತ್ತಿದ್ದ.

ಒಂದು ಹಂತದಲ್ಲಿ ಆತನಿಗೆ ಹಠಾತ್ತನೆ ಟಿಕ್​ಟಾಕ್​ ಸಾಮಾಜಿಕ ಜಾಲತಾಣದ ನೆನಪಾಗಿದೆ. ಬರುತ್ತಿರುವ ಹಾಡನ್ನು ಗುನುಗುತ್ತಿದ್ದೇನೆ. ಅದಕ್ಕೆ ತುಟಿ ಚಲನೆಯನ್ನು ಹೊಂದಿಸಿ, ಟಿಕ್​ಟಾಕ್​ನಲ್ಲಿ ಹಾಕಿದರೆ ಹೆಚ್ಚಿನ ಜನಪ್ರಿಯತೆ ಗಳಿಸಬಹುದು ಎಂದು ನಿರ್ಧರಿಸಿದ್ದಾನೆ. ಹಾಗೆಂದೇ ಆತ ತನ್ನ ಮೊಬೈಲ್​ ಫೋನ್​ ಹೊರತೆಗೆದು, ಹಾಡು ಗುನುಗುತ್ತಲೇ ಅದರಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ.

ಬಳಿಕ ಅದನ್ನು ಟಿಕ್​ಟಾಕ್​ನಲ್ಲಿ ಅಳವಡಿಸಿದ್ದಾನೆ. ಅದರಲ್ಲಿ ಆತನಿಗೆ ಹೆಚ್ಚಿನ ಲೈಕ್​ ಸಿಕ್ಕಿಲ್ಲ. ಆದರೆ, ಆತನ ದುರದೃಷ್ಟಕ್ಕೆ ಈ ದೃಶ್ಯ ಪಂಜಾಬ್​ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ. ಕಣ್ಣಕೆಂಪಾಗಿಸಿಕೊಂಡ ಅವರು ಟಿಕ್​ಟಾಕ್​ಗೆ ವಿಡಿಯೋ ಚಿತ್ರೀಕರಿಸುವ ಮೂಲಕ ಪ್ರಯಾಣಿಕರ ಪ್ರಾಣದೊಂದಿಗೆ ಚೆಲ್ಲಾಟವಾಡಿದ್ದಾನೆ ಎಂದು ಆರೋಪಿಸಿ ಕೆಲಸದಿಂದ ಅಮಾನತುಗೊಳಿಸಿದ್ದಾರೆ. ಹಾಗೂ ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ.

ಅಮನ್​ಜೋತ್​ ಸಿಂಗ್​ ಅವರ ಕೃತ್ಯವನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಸ್ವಲ್ಪ ಹೆಚ್ಚೂಕಡಿಮೆಯಾಗಿದ್ದರೂ ಹತ್ತಾರು ಪ್ರಯಾಣಿಕರ ಪ್ರಾಣ ಹೋಗಬಹುದಿತ್ತು. ಹಾಗಾಗಿ, ಅಮನ್​ಜೋತ್​ ಸಿಂಗ್​ ಅವರನ್ನು ಸೇವೆಯಿಂದ ವಜಾಗೊಳಿಸಿ, ವಾಹನ ಚಾಲನೆ ಮಾಡುವಾಗ ಮೊಬೈಲ್​ಫೋನ್​ನಲ್ಲಿ ಮಾತನಾಡದಂತೆ, ವಿಡಿಯೋ ಚಿತ್ರೀಕರಿಸದಂತೆ ಇತರೆ ಚಾಲಕರಿಗೂ ಎಚ್ಚರಿಕೆ ನೀಡಲಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *