More

  ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ ಸಾಬೀತು: ಅಪರಾಧಿಗೆ 17 ವರ್ಷ ಶಿಕ್ಷೆ ಪ್ರಕಟ

  ಮಂಡ್ಯ: ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 17 ವರ್ಷ ಶಿಕ್ಷೆ ಹಾಗೂ ಎಪ್ಪತ್ತು ಸಾವಿರ ರೂ ದಂಡ ವಿಧಿಸಿ ಮಂಡ್ಯ ಅಧಿಕ ಸೆಷನ್ ಮತ್ತು ತ್ವರಿತ ಗತಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಕೆ.ಎ.ನಾಗಜ್ಯೋತಿ ತೀರ್ಪು ನೀಡಿದ್ದಾರೆ.
  ನಾಗಮಂಗಲ ತಾಲೂಕಿನ ಕೆ.ಹೊಸಳ್ಳಿ ಗ್ರಾಮದ ಹಾಗೂ ಹಾಲಿ ಮಂಡ್ಯ ತಾಲೂಕಿನ ಸಾತನೂರು ಗ್ರಾಮದ ಸಂಪತ್(36) ಶಿಕ್ಷೆಗೆ ಒಳಗಾದ ಅಪರಾಧಿ. ಈತ 13 ವರ್ಷದ ಬಾಲಕಿ ಮಂಡ್ಯ ನಗರದಲ್ಲಿ ಶಾಲೆಗೆ ಹೋಗುವ ಮತ್ತು ಬರುವುದನ್ನು ನೋಡಿಕೊಂಡಿದ್ದನು. 2015 ನ.6ರಂದು ಸಂಜೆ ಶಾಲೆ ಮುಗಿಸಿಕೊಂಡು ವಾಪಾಸ್ ಬರುವಾಗ ಬೈಕ್‌ನಲ್ಲಿ ಬಂದಿದ್ದಾನೆ. ತನ್ನ ತಂಗಿಗೆ ಸೈಕಲ್ ತೆಗೆದುಕೊಂಡಿದ್ದೇನೆ. ಅದನ್ನು ಮನೆಗೆ ಕೊಂಡೊಯ್ಯಲು ಸಹಾಯ ಮಾಡು ಎಂದೇಳಿ ಬಾಲಕಿಯ ಸೈಕಲ್ ಅನ್ನು ದೇವಸ್ಥಾನದ ಕಾಂಪೌಂಡ್ ಒಳಗೆ ನಿಲ್ಲಿಸಿದ್ದಾನೆ.
  ಬಳಿಕ ಮಂಡ್ಯ ನಗರದಿಂದ ಬಲವಂತವಾಗಿ ಸುಮಾರು 8 ರಿಂದ 10 ಕಿ.ಮೀ ದೂರದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕು ತೋರಿಸಿ ಬೆದರಿಸಿ ಅತ್ಯಾಚಾರವೆಸಗಿದ್ದನು. ಈ ಸಂಬಂಧ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೆಲ ದಿನದಲ್ಲಿ ಕೆರಗೋಡು ಠಾಣೆಗೆ ವರ್ಗಾವಣೆಗೊಂಡಿತ್ತು. ಅಂದಿನ ವೃತ್ತ ನಿರೀಕ್ಷಕ ಬಿ.ಕೆ.ಸುರೇಶ್‌ಕುಮಾರ್ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದರು.
  ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶರು, ಫೆ.22ರಂದು ಅಂತಿಮ ತೀರ್ಪು ವಿಧಿಸಿದ್ದಾರೆ. ಅದರಂತೆ ಅಪರಾಧಿಗೆ ಭಾದಂಸಅ ಕಲಂ 366 ಅಡಿಯಲ್ಲಿ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 30 ಸಾವಿರ ರೂ ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದಲ್ಲಿ ಮೂರು ತಿಂಗಳ ಸಾದಾ ಶಿಕ್ಷೆ ಹಾಗೂ ಭಾದಂಸಅ ಕಲಂ 376(2)(ಐ ) ಅಡಿ ಅಪರಾಧಕ್ಕೆ 12 ವರ್ಷದ ಕಠಿಣ ಕಾರಾಗೃಹ ಶಿಕ್ಷೆ ಮತ್ತು 40 ಸಾವಿರ ರೂ ದಂಡ, ಒಂದೊಮ್ಮೆ ದಂಡ ಪಾವತಿಸಲು ತಪ್ಪಿದ್ದಲ್ಲಿ ಮೂರು ತಿಂಗಳು ಸಾದಾ ಶಿಕ್ಷೆ ಮತ್ತು ಭಾದಂಸಅ ಕಲಂ 506 ಅಡಿಯಲ್ಲಿ ಅಪರಾಧಕ್ಕೆ ಎರಡು ವರ್ಷಗಳ ಸಾಧಾ ಕಾರಾಗೃಹ ಶಿಕ್ಷೆ ತೀರ್ಪು ನೀಡಿದ್ದಾರೆ. ಅಭಿಯೋಜನೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ವಾದ ಮಂಡಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts