ಅಮ್ಮನ ಮನೆಗೆ ಪುನೀತ್ ಸಾಥ್

ಬೆಂಗಳೂರು: ನಟ, ನಿರ್ಮಾಪಕ ರಾಘವೇಂದ್ರ ರಾಜ್​ಕುಮಾರ್ ತೆರೆಮೇಲೆ ಕಾಣಿಸಿಕೊಂಡು 15 ವರ್ಷಗಳಾದವು. ‘ಪಕ್ಕದ್ಮನೆ ಹುಡುಗಿ’ ಚಿತ್ರದ ಬಳಿಕ ಬೇರಾವ ಸಿನಿಮಾದಲ್ಲೂ ಅವರು ನಟಿಸಿರಲಿಲ್ಲ. ಇದೀಗ ‘ಅಮ್ಮನ ಮನೆ’ ಮೂಲಕ ಅವರ ಆಗಮನವಾಗುತ್ತಿದೆ. ಚಿತ್ರದ ಶೂಟಿಂಗ್, ಡಬ್ಬಿಂಗ್ ಸೇರಿ ಬಹುತೇಕ ಎಲ್ಲ ಕೆಲಸಗಳನ್ನೂ ಮುಗಿಸಿಕೊಂಡಿರುವ ಚಿತ್ರತಂಡ, ಇದೀಗ ಟೀಸರ್ ತೋರಿಸಲು ಬರುತ್ತಿದೆ. ಅಂದರೆ, ಇಂದು (ಜ. 12) ‘ಅಮ್ಮನ ಮನೆ’ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ‘ಪವರ್ ಸ್ಟಾರ್’ ಪುನೀತ್ ರಾಜ್​ಕುಮಾರ್ ಟೀಸರ್ ಬಿಡುಗಡೆ ಮಾಡಲಿದ್ದಾರೆ. ವಿಶೇಷವೆಂದರೆ, ಚಿತ್ರದ ಮುಹೂರ್ತಕ್ಕೂ ಪುನೀತ್ ಆಗಮಿಸಿ, ‘ಅಮ್ಮನ ಮನೆ’ ತಂಡಕ್ಕೆ ಶುಭ ಕೋರಿದ್ದರು.

ಇನ್ನು, ಫಸ್ಟ್ ಲುಕ್​ನಲ್ಲಿ ರಾಘವೇಂದ್ರ ರಾಜ್​ಕುಮಾರ್ ಈ ಹಿಂದೆಂದೂ ಕಾಣದ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಕೈಯಲ್ಲಿ ವಿಸಿಲ್ ಹಿಡಿದು ಪೋಸ್ ಕೊಟ್ಟಿದ್ದರು. ಇದೀಗ ಟೀಸರ್ ಬಿಡುಗಡೆಯಾಗುತ್ತಿದ್ದು, ದಶಕದ ಬಳಿಕ ಅವರ ನಟನೆಯನ್ನು ಕಣ್ತುಂಬಿಕೊಳ್ಳುವ ಕಾಲ ಒದಗಿಬಂದಿದೆ. ‘ರಾಷ್ಟ್ರ ಪ್ರಶಸ್ತಿ’ ವಿಜೇತ ನಿರ್ದೇಶಕ ನಿಖಿಲ್ ಮಂಜೂ ಲಿಂಗಯ್ಯ ಆಕ್ಷನ್-ಕಟ್ ಹೇಳುತ್ತಿರುವ ‘ಅಮ್ಮನ ಮನೆ’ಗೆ ಪಿವಿಆರ್ ಸ್ವಾಮಿ ಛಾಯಾಗ್ರಹಣ, ಸಮೀರ ಕುಲಕರ್ಣಿ ಸಂಗೀತ ಇದೆ. ಬಿ. ಶಿವಾನಂದ ಸಂಭಾಷಣೆ ಬರೆದಿದ್ದು, ಆತ್ಮಶ್ರೀ ಮತ್ತು ಆರ್.ಎಸ್. ಕುಮಾರ್ ಬಂಡವಾಳ ಹೂಡಿದ್ದಾರೆ.