ಬೆಂಗಳೂರು: ಮಾ. 17, 2022.. ಅಂದು ನಟ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅನುಪಸ್ಥಿತಿಯಲ್ಲಿ ನಡೆಯಲಿರುವ ಮೊದಲ ಜನ್ಮದಿನ. ಅಂದೇ ಅವರ ಅಭಿನಯದ ‘ಜೇಮ್ಸ್’ ಸಿನಿಮಾ ಬಿಡುಗಡೆ ಆಗಲಿದೆ. ಅಪ್ಪು ಇಲ್ಲ ಎಂಬ ನೋವಿನ ನಡುವೆಯೇ ಜನ್ಮದಿನ ಹಾಗೂ ಸಿನಿಮಾ ಬಿಡುಗಡೆ ನಡೆಯಲಿದೆ. ವಿಶೇಷವೆಂದರೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮೇಲಿನ ಅಪಾರ ಅಭಿಮಾನದಿಂದ ಆ ದಿನವನ್ನು ಉತ್ಸವ ಆಗಿಸಲಿದ್ದಾರೆ.
ಹೌದು.. ಮಾರ್ಚ್ 17ರಂದು ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಜೇಮ್ಸ್ ಉತ್ಸವ ನಡೆಯಲಿದೆ. ಡಾ.ರಾಜ್ ಕುಟುಂಬದ ಅಭಿಮಾನಿಗಳಿಂದ ಈ ಜೇಮ್ಸ್ ಉತ್ಸವ ನಡೆಯಲಿದ್ದು, ಅಂದು ವಿಶೇಷ ಅನಿಸುವಂಥ ಹಲವಾರು ಸಂಗತಿಗಳು ನಡೆಯಲಿವೆ. ಮಾ. 17ರಂದು ಅಪ್ಪು ಅಭಿನಯದ ಮೊದಲ ಚಿತ್ರದಿಂದ ಹಿಡಿದು ಜೇಮ್ಸ್ ವರೆಗಿನ ಎಲ್ಲ 31 ಚಿತ್ರಗಳ ಕಟೌಟ್ಗಳು ಅಲ್ಲಿರಲಿವೆ. ಮಾತ್ರವಲ್ಲ ಎಲ್ಲ ಕಟೌಟ್ಗಳಿಗೂ ಭಾರಿ ಹೂವಿನ ಹಾರಗಳನ್ನು ಹಾಕಲಾಗುತ್ತದೆ. ಜೇಮ್ಸ್ ಚಿತ್ರದ ಕಲಾವಿದರು, ಖ್ಯಾತ ನಟ-ನಟಿಯರು ಸೇರಿ ಚಿತ್ರರಂಗದ ಹಲವು ಗಣ್ಯರು ಈ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.
ಅಲ್ಲದೆ ಡಾ.ರಾಜಕುಮಾರ್, ಪಾರ್ವತಮ್ಮ ರಾಜಕುಮಾರ್ ಅವರ ಬೃಹತ್ ಕಟೌಟ್ಗಳೂ ಇರಲಿವೆ. ವಿಶೇಷವೆಂದರೆ ಪುನೀತ್ ಭಾವಚಿತ್ರಕ್ಕೆ ಹೆಲಿಕಾಪ್ಟರ್ ಮೂಲಕ ಸತತವಾಗಿ 1 ಗಂಟೆ ಹೂಮಳೆಗರೆಯಲಾಗುತ್ತದೆ. ಇನ್ನು ಅದೇ ಹೆಲಿಕಾಪ್ಟರ್ ಮೇಲಿನಿಂದ ಪುನೀತ್ ರಾಜಕುಮಾರ್ ಅವರ 40 ಅಡಿ ಉದ್ದದ ಫೋಟೋ ಬಿಡಲಾಗುವುದು. ಜೊತೆಗೆ ಮಕ್ಕಳಿಗೆ ವಯೋವೃದ್ಧರಿಗೆ ಬಟ್ಟೆ ವಿತರಣೆ, ಸಿಹಿ ಹಂಚಿಕೆ, ಗಿಡ ವಿತರಣೆ ಕೂಡ ನಡೆಯಲಿದೆ.
ವಿವಿಧ ಸಾಂಸ್ಕೃತಿಕ ತಂಡಗಳಿಂದ ಡೊಳ್ಳುಕುಣಿತ, ಪೂಜಾಕುಣಿತ, ವೀರಗಾಸೆ, ಕೇರಳದ ಪ್ರಸಿದ್ಧ ಕಲಾವಿದರಿಂದ ವಾದ್ಯಗೋಷ್ಠಿ, ಬೆಂಗಳೂರು ತಮಟೆ ಕಲೆಗಳ ಪ್ರದರ್ಶನವೂ ಇರಲಿದೆ.
ದಿನವಿಡೀ ದಾಸೋಹ
ವೀರೇಶ್ ಚಿತ್ರಮಂದಿರದಲ್ಲಿ ಬೆಳ್ಳಂಬೆಳಗ್ಗೆಯಿಂದ ರಾತ್ರಿಯವರೆಗೂ ಶೋಗೆ ಒಮ್ಮೆಯಂತೆ ದಿನವಿಡೀ ದಾಸೋಹ ಇರಲಿದೆ. ಬೆಳಗಿನ ಜಾವದ 4 ಗಂಟೆಯ ಶೋಗೆ ಕಾಫಿ-ಟೀ ಬಿಸ್ಕಿಟ್, 10 ಗಂಟೆಯ ಶೋಗೆ ಮಸಾಲೆದೋಸೆ, ಮಧ್ಯಾಹ್ನ 1ರ ಶೋಗೆ ಚಿಕನ್ ಬಿರಿಯಾನಿ, ಸಂಜೆ 4ರ ಶೋಗೆ ಸಮೋಸ-ಟೀ ಮತ್ತು ರಾತ್ರಿ 7ರ ಶೋಗೆ ಗೋಬಿ ಮಂಚೂರಿ ವಿತರಣೆ ನಡೆಯಲಿದೆ. ಇವಿಷ್ಟೇ ಅಲ್ಲದೆ ಇನ್ನೂ ಅನೇಕ ಕಾರ್ಯಕ್ರಮಗಳು ಇರಲಿವೆ.
ಒಂದು ದಿನ ಮಾತ್ರವಲ್ಲ..
ಅಪ್ಪು ಜನ್ಮದಿನವಾದ ಮಾ. 17ರ ಒಂದು ದಿನ ಮಾತ್ರವಲ್ಲ, ನಂತರದ ಮೂರು ದಿನಗಳಿಗೂ ಈ ಉತ್ಸವ ವಿಸ್ತರಣೆ ಆಗಲಿದೆ. ಅಂದರೆ ಮಾ. 18ರ ಬೆಳಗ್ಗೆ 10.30ಕ್ಕೆ ಸಿಹಿ ಹಂಚಿಕೆ, ಮಧ್ಯಾಹ್ನ ಅನ್ನದಾನ ಮತ್ತು ಸಂಜೆ 6.30ಕ್ಕೆ ದೀಪೋತ್ಸವ ನಡೆಯಲಿದೆ. ಮಾ. 19ರಂದು ಬೆಳಗ್ಗೆ ಸಿಹಿ ಹಂಚಿಕೆ, ಅನ್ನದಾನದ ಜೊತೆಗೆ ನೇತ್ರದಾನ ತಪಾಸಣೆ, ರಕ್ತದಾನ ಶಿಬಿರ ಕೂಡ ಇರಲಿದೆ. ಮಾ. 20ರ ಭಾನುವಾರ ಮಧ್ಯಾಹ್ನ ಚಿಕನ್ ಬಿರಿಯಾನಿ ವಿತರಣೆ, ಸಂಜೆ 4.30ಕ್ಕೆ ಹೂವಿನ ಪಲ್ಲಕ್ಕಿಗಳಲ್ಲಿ ಡಾ.ರಾಜ್ ಮತ್ತು ಅಪ್ಪು ಭಾವಚಿತ್ರಗಳ ಮೆರವಣಿಗೆ, ಬಳಿಕ 6 ಗಂಟೆಗೆ ಡಿಜೆ ಅಳವಡಿಸಿದ ನೃತ್ಯ ಕಾರ್ಯಕ್ರಮ ಕೂಡ ಇರಲಿದೆ.