More

    ಚೇಂಜ್ ಆಗಿದೆ ಟ್ರೆಂಡ್; ಪುನೀತ್​ ಸೋಷಿಯಲ್​ ಮಾತು

    ಬೆಂಗಳೂರು: ‘ಇತ್ತೀಚೆಗೆ ಒಂದು ಟೀಸರ್-ಟ್ರೇಲರ್ ಲಾಂಚ್ ಮಾಡಬೇಕು ಎಂದರೆ ಅಲ್ಲಿಂದಲೇ ಶುರುವಾಗುತ್ತದೆ. ಈಗ ಟ್ರೆಂಡ್ ಚೇಂಜ್ ಆಗಿದೆ. ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು..’

    – ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಅವರು ಈ ಮಾತುಗಳನ್ನು ಹೇಳಿರುವುದು ಸಾಮಾಜಿಕ ಜಾಲತಾಣಗಳ ಕುರಿತು. ಅವರದೇ ‘ಪಿಆರ್​ಕೆ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಆಗಿರುವ ‘ಮಾಯಾಬಜಾರ್’ ಸಿನಿಮಾದ ಆಡಿಯೋ ಬಿಡುಗಡೆ ಸಂದರ್ಭ ಸುದ್ದಿಗಾರರ ಜತೆ ಮುಕ್ತವಾಗಿ ಮಾತನಾಡಿದ ಅವರು, ತಾವು ಸೋಷಿಯಲ್ ಮೀಡಿಯಾಗೆ ಪ್ರವೇಶಿಸಿರುವುದು ಹಾಗೂ ಅಲ್ಲಿ ಆಕ್ಟಿವ್ ಆಗಿರುವ ಕುರಿತು ಒಂದಷ್ಟು ವಿಷಯಗಳನ್ನು ಹಂಚಿಕೊಂಡರು.

    ‘ಏನಾದರೂ ಕಮ್ಯುನಿಕೇಟ್ ಮಾಡಬೇಕು ಎಂದುಕೊಂಡಾಗ ಅಲ್ಲಿ ಹಾಕುತ್ತೇವೆ. ಹಾಗಂತ ಎಲ್ಲವನ್ನೂ ಅಲ್ಲಿ ಹಾಕಬೇಕು ಅಂತಲ್ಲ. ಎಲ್ಲರಿಗೂ ಗೊತ್ತಿರುವಂತೆ ಸೋಷಿಯಲ್ ಮೀಡಿಯಾ ಕೂಡ ಮುಂದೆ ಒಂದೊಳ್ಳೆಯ ಗಳಿಕೆಯ ಮಾಧ್ಯಮ ಆಗಲಿದೆ. ನಾವು ನಮ್ಮ ಸಿನಿಮಾದ ಹಾಡುಗಳು ನಮ್ಮಲ್ಲೇ ಇರಲಿ ಎಂದು ಒಂದು ಆಡಿಯೋ ಕಂಪನಿ ಶುರು ಮಾಡಿದೆವು. ಬೇರೆ ಚಿತ್ರದ ಹಾಡುಗಳು ಬಂದರೆ ನಮ್ಮ ಬಜೆಟ್​ಗೆ ಹೊಂದಿಕೆಯಾದರೆ ನಾವು ಅವುಗಳನ್ನೂ ಖರೀದಿಸುತ್ತೇವೆ. ಅವನ್ನೆಲ್ಲ ಮಾರ್ಕೆಟ್ ಮಾಡಬೇಕು ಎಂದರೆ ಸೋಷಿಯಲ್ ಮೀಡಿಯಾ ಪ್ರಬಲ ಮಾಧ್ಯಮ. ಹಾಗಾಗಿ ಸೋಷಿಯಲ್ ಮೀಡಿಯಾಗೆ ಪ್ರವೇಶಿಸಿ ಆಕ್ಟಿವ್ ಇದ್ದೇನೆ’ ಎಂದರು ಪುನೀತ್.

    ಇನ್ನು ಸೋಷಿಯಲ್ ಮೀಡಿಯಾದಲ್ಲಿ ಬರುವ ಕಮೆಂಟ್​ಗಳಿಗೆ ಅವರು ಹೆಚ್ಚು ಗಮನ ಕೊಡುವುದಿಲ್ಲ ಎನ್ನುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಪಾಸಿಟಿವ್-ನೆಗೆಟಿವ್ ಎಲ್ಲವೂ ಬರುತ್ತವೆ. ಅವೆಲ್ಲ ಅವರವರ ವಿವೇಚನೆಗೆ ಬಿಟ್ಟಿದ್ದು. ಆದರೆ ನನಗೆ ಸ್ಪೋರ್ಟ್ಸ್ ಹಾಗೂ ಫಿಟ್​ನೆಸ್ ಕುರಿತ ವಿಷಯಗಳನ್ನು ಹಂಚಿಕೊಳ್ಳುವುದರಲ್ಲಿ ಹೆಚ್ಚು ಆಸಕ್ತಿ. ಅದನ್ನು ಒಂದಷ್ಟು ಜನ ಫಾಲೋ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು. ಆ ಮೂಲಕ ನನ್ನಿಂದಾದಷ್ಟು ಪಾಸಿಟಿವ್ ಅಂಶಗಳನ್ನು ಹಂಚಬಹುದು’ ಎಂಬುದು ಪವರ್​ಸ್ಟಾರ್ ಆಶಯ.

    ತಮ್ಮ ಸಿನಿಮಾ ನಿರ್ಮಾಣ ಕಂಪನಿ ಕುರಿತು ಮಾತನಾಡುವ ಅವರು, ‘ಪಿಆರ್​ಕೆ ಪ್ರೊಡಕ್ಷನ್ಸ್’ ನಮ್ಮದೇ ‘ವಜ್ರೇಶ್ವರಿ ಕಂಬೈನ್ಸ್’ನ ಇನ್ನೊಂದು ಶಾಖೆ. ಅಗಲಿರುವ ಅಮ್ಮನಿಗೆ ಏನಾದರೂ ಅರ್ಪಣೆ ಮಾಡಬೇಕು ಎಂಬ ಉದ್ದೇಶದೊಂದಿಗೆ ‘ಪಿಆರ್​ಕೆ ಪ್ರೊಡಕ್ಷನ್ಸ್’ ಆರಂಭಿಸಿದೆವು. ಇನ್ನು ‘ವಜ್ರೇಶ್ವರಿ..’ ಮೂಲಕ ನೂರು ಸಿನಿಮಾ ಮಾಡಬೇಕು ಎಂಬ ಗುರಿ ಇದೆ. ಇದೀಗ ಆ ಸಂಸ್ಥೆ ಮೂಲಕ 83 ಸಿನಿಮಾ ನಿರ್ಮಾಣ ಆಗಿದೆ ಎಂಬ ಮಾಹಿತಿ ನೀಡಿದರು ಪುನೀತ್.

    ‘ನಮ್ಮ ಕಂಪನಿಗೆ ಬೆಂಬಲ ನೀಡಲು ತುಂಬ ಜನ ಮುಂದೆ ಬರುತ್ತಿದ್ದಾರೆ. ಕಥೆಯಲ್ಲಿ ಕಂಟೆಂಟ್ ಚೆನ್ನಾಗಿರಬೇಕು, ಸ್ಕ್ರಿಪ್ಟ್ ಹೊಸ ಥರ ಇರಬೇಕು ಎಂಬುದೇ ‘ಪಿಆರ್​ಕೆ ಪ್ರೊಡಕ್ಷನ್ಸ್’ ಆದ್ಯತೆ’ ಎನ್ನುತ್ತಾರೆ ಪುನೀತ್.

    ಒಂದು ಕನ್ನಡ ಸಿನಿಮಾ ಚೆನ್ನಾಗಿ ಓಡಿದರೆ ಅದು ನಮ್ಮ ಸಿನಿಮಾ. ಒಬ್ಬ ಕಲಾವಿದನಿಗೆ ಒಳ್ಳೆಯ ಹೆಸರು ಬಂದರೆ ಅದು ಎಲ್ಲರಿಗೂ ಹೆಸರು. ಒಳ್ಳೆಯದಾದರೆ ಅದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎನ್ನುವ ಮೂಲಕ ಇಂಡಸ್ಟ್ರಿ ಯಲ್ಲಿ ಎಲ್ಲರೂ ಅನ್ಯೋನ್ಯವಾಗಿರಬೇಕು ಎಂದು ಆಶಿಸಿದರು. ಈ ಮಧ್ಯೆ ಪೈರಸಿ ಕುರಿತು ಪ್ರತಿಕ್ರಿಯಿಸಿದ ಪುನೀತ್ ರಾಜ್​ಕುಮಾರ್, ಪೈರಸಿ ದೂರ ಮಾಡಬೇಕು. ಅದು ಒಳ್ಳೆಯದಲ್ಲ, ಆ ಬಗ್ಗೆ ಜಾಗೃತಿ ಮೂಡಿಸಬೇಕಾದ್ದು ಅನಿವಾರ್ಯ ಎಂದು ಅಭಿಪ್ರಾಯಪಟ್ಟರು. ಇನ್ನು ರಾಜ್​ಕುಮಾರ್ ಪುತ್ರತ್ರಯರು ಒಂದಾಗಿ ಅಭಿನಯಿಸುವ ಸಿನಿಮಾ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೂವರೂ ಅಭಿನಯಿಸುವಂಥ ಸ್ಕ್ರಿಪ್ಟ್ ಬರಲೇ ಇಲ್ಲ ಎನ್ನುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts