WWW.ಪ್ರೇಮ.ಕಾಮ

ನೀರಾ: ನಮಸ್ಕಾರ. ನಿಮ್ಮ ಮೆಚ್ಚಿನ ಬಂಡಲ್ ಟಿವಿಯ ‘ಪ್ರೇಮ ಸಮಾಲೋಚನೆ’ ವಿಶೇಷ ನೇರ ಪ್ರಸಾರ ಕಾರ್ಯಕ್ರಮಕ್ಕೆ ಸ್ವಾಗತ. ನಾನು ನಿಮ್ಮ ನೆಚ್ಚಿನ ನಿರೂಪಕಿ ನೀರಾ. ಈ ದಿನ ನಿಮ್ಮ ಪ್ರೇಮರೋಗಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ನೀಡಲು ಆಗಮಿಸಿದ್ದಾರೆ, ಹಲವಾರು ಪ್ರೇಮ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡು ಅಪಾರ ಅನುಭವ ಗಳಿಸಿರುವ ಅಂತಾರಾಷ್ಟ್ರೀಯ ಖ್ಯಾತಿಯ ಪ್ರೇಮ ಗುರು ಡಾ. ಪ್ರೇಮಸ್ವಾಮಿ. ನಮಸ್ಕಾರ ಡಾ.ಪ್ರೇಮಸ್ವಾಮಿಯವರೆ, ಕಾರ್ಯಕ್ರಮಕ್ಕೆ ಸ್ವಾಗತ.

ಪ್ರೇಮಸ್ವಾಮಿ: ಬರೀ ಸ್ವಾಗತ ಅಂದ್ರೆ ಸಾಲದು. ಪ್ರೇಮ ಪೂರ್ವಕ ಸ್ವಾಗತ ಅನ್ನಿ.

ನೀ: ಹಾಗೇ ಆಗಲಿ. ತಮಗೆ ಸಪ್ರೇಮ ಸ್ವಾಗತ. ನನ್ನ ಮೊದಲ ಪ್ರಶ್ನೆ ತಮ್ಮ ಹೆಸರಿನ ಬಗ್ಗೆ. ರಾಮಸ್ವಾಮಿ, ಕೃಷ್ಣಸ್ವಾಮಿ ಮುಂತಾದ ಹೆಸರುಗಳು ತೀರಾ ಸಾಮಾನ್ಯ. ಆದರೆ ಪ್ರೇಮಸ್ವಾಮಿ ಸ್ವಲ್ಪ ಅಪರೂಪದ ಹೆಸರು. ಈ ಹೆಸರು ತಮಗೆ ಹೇಗೆ ಬಂತು?

ಪ್ರೇ: ಹೆಸರು ಅನ್ನುವುದು ತಾನಾಗಿ ಬರೋದಿಲ್ರಿ. ಪಿಜ್ಜಾ ತರಿಸಿದ ಹಾಗೆ ಆನ್ ಲೈನ್​ನಲ್ಲಿ ತರಿಸೋದಕ್ಕೂ ಆಗೋಲ್ಲ. ಅದನ್ನು ನಾವೇ ಕಷ್ಟಪಟ್ಟು ಗಳಿಸಬೇಕು. ನನಗೆ ಹೆತ್ತವರು ಇಟ್ಟ ಹೆಸರು ಪೊನ್ನುಸ್ವಾಮಿ. ಕಾಲೇಜಿನಲ್ಲಿ ನಾನು ಸದಾ ಹೆಣ್ಣುಮಕ್ಕಳ ಜೊತೆ ಇರುವುದನ್ನು ನೋಡಿ ಗೆಳೆಯರು ಪೆಣ್ಣುಸ್ವಾಮಿ ಎಂದು ತಮಾಷೆ ಮಾಡುತ್ತಿದ್ದರು. ಹೆಣ್ಣು ನನ್ನ ದೌರ್ಬಲ್ಯ. ನಾನು ಅದನ್ನೇ ನನ್ನ ಶಕ್ತಿಯನ್ನಾಗಿ ಮಾಡಿಕೊಂಡು ಜೀವನದಲ್ಲಿ ಯಶಸ್ವಿಯಾದೆ. ಪ್ರೇಮಲೋಕದಲ್ಲಿ ನನ್ನ ಅಪಾರ ಸಾಧನೆ ಹಾಗೂ ಸೇವೆಯನ್ನು ಗಮನಿಸಿ ಅಭಿಮಾನಿಗಳು ಇಟ್ಟ ಹೆಸರು ಪ್ರೇಮಸ್ವಾಮಿ.

ನೀ: ನೀವು ಡಾಕ್ಟರೇಟ್ ಪಡೆಯಲು ಸಂಶೋಧನೆಗೆ ಆರಿಸಿಕೊಂಡ ವಿಷಯ ಯಾವುದು?

ಪ್ರೇ: ಪ್ರೇಮದಲ್ಲಿ ಥಿಯರಿಗಿಂತ ಪ್ರಾಕ್ಟಿಕಲ್ಸ್ ಮುಖ್ಯ. ಸಂಶೋಧನೆ, ಪ್ರಬಂಧ ಅಂತ ಸಮಯ ಹಾಳು ಮಾಡ್ತಾ ಇದ್ರೆ ಪ್ರೀತಿ ಮಾಡೋದು ಯಾವಾಗ? ಪ್ರೇಮದಲ್ಲಿನ ನನ್ನ ಅಪಾರ ಅನುಭವವನ್ನು ಗುರುತಿಸಿ ಹೆಂಗಳೂರು ಯುನಿವರ್ಸಿಟಿ ಕಳೆದ ವರ್ಷ ನನಗೆ ಗೌರವ ಡಾಕ್ಟರೇಟ್ ನೀಡಿತ್ತು. ಈ ವರ್ಷ ಕೊಂಪೆ ವಿ.ವಿ. ‘ಪ್ರೇಮೋಜ’ ಗೌರವ ಕೊಟ್ಟಿದೆ.

ನೀ: ನಿಮ್ಮ -ಠಿ;ಡಿಡಿಡಿ.ಪ್ರೇಮ.ಕಾಮ| ಇದರ ಉದ್ದೇಶ ಮತ್ತು ಚಟುವಟಿಕೆಗಳ ಬಗ್ಗೆ ಚುಟುಕಾಗಿ ತಿಳಿಸ್ತೀರಾ?

ಪ್ರೇ: ಪ್ರೇಮ.ಡಾಟ್. ಕಾಮ ಅಲ್ರೀ ಕಾಮ್ ನಮ್ಮ ಜಾಲತಾಣದ ಮೂಲ ಉದ್ದೇಶ ಕನ್ನಡದ ಯುವಕ ಯುವತಿಯರಲ್ಲಿ ಆತ್ಮ ವಿಶ್ವಾಸ ಮೂಡಿಸಿ ಅವರೂ ಧೈರ್ಯದಿಂದ ಐ ಲವ್ ಯೂ ಅನ್ನುವಂತೆ ಮಾಡುವುದು. ನಮ್ಮ ಯುವಕರಿಗೆ ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಓದಿದ ಗ್ರಾಮೀಣ ಪ್ರದೇಶದ ಯುವಕರಿಗೆ ಇಂಗ್ಲಿಷಿನಲ್ಲಿ ಸರಿಯಾಗಿ ಮಾತನಾಡಲು ಬರುವುದಿಲ್ಲ. ಹೀಗಾಗಿ ಅವರಿಗೆ ನಗರದ ವಿದ್ಯಾವಂತ ಯುವತಿಯರನ್ನು ಇಂಪ್ರೆಸ್ ಮಾಡೋಕೆ ಆಗ್ತಾ ಇಲ್ಲ. ಇದರ ಪರಿಣಾಮವಾಗಿ ಕನ್ನಡದ ಹೆಣ್ಣುಮಕ್ಕಳು ಇಂಗ್ಲಿಷ್ ಮಾತಾಡುವ ಪರ ರಾಜ್ಯದವರನ್ನು ಲವ್ ಮಾಡ್ತಿದಾರೆ. ಇದನ್ನು ನಿಲ್ಲಿಸಬೇಕು.

ನೀ: ಸರಿ. ಇದಕ್ಕಾಗಿ ನೀವು ಏನು ಕ್ರಮ ಕೈಗೊಂಡಿದ್ದೀರಿ?

ಪ್ರೇ: ನಮ್ಮಲ್ಲಿ ಹಲವು ತರದ ಕ್ರಾ್ಯಶ್ ಕೋರ್ಸಗಳಿವೆ. ಉದಾಹರಣೆಗೆ ಇಂಗ್ಲಿಷ್​ನಲ್ಲಿ ಲವ್ ಮಾಡೋದು ಹೇಗೆ? ಪ್ರಪೋಸ್ ಮಾಡೋದು ಹೇಗೆ? ಅನ್ನುವುದನ್ನು ಕಲಿಸಿಕೊಡುವ ಎಲ್.ಬಿ.ಡಬ್ಲು್ಯ ಎಂಬ ಎರಡು ವಾರದ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿದೆ.

ನೀ: ಎಲ್.ಬಿ.ಡಬ್ಲು್ಯ ಅಂದ್ರೆ ಲೆಗ್ ಬಿಫೋರ್ ವಿಕೆಟ್ ಅಂತಲಾ?

ಪ್ರೇ: ಅಲ್ಲ. ಲವ್ ಬಿಫೋರ್ ಮ್ಯಾರೇಜ್. ಇದು ಆನಲೈನ್ ಪೋ›ಗ್ರಾಮ್

ನೀ: ಓಹೋ ಗೊತ್ತಾಯ್ತು. ಲೈನ್ ಹೊಡೆಯೋದು ಹೇಗೆ ಅನ್ನೋದನ್ನು ಕಲಿಸಿಕೊಡುವ ಆನ್​ಲೈನ್ ಕಾರ್ಯಕ್ರಮ. ಒಂದು ಕರೆ ಬರ್ತಾ ಇದೆ. ಹಲೋ ಯಾರು ಮಾತಾಡ್ತಿರೋದು?

ಆದಿ: ನಾನು ಗೌರಿಬಿದನೂರಿನಿಂದ ಆದಿನಾರಾಯಣ ಅಂತ.

ನೀ: ಹೇಳಿ ಆದಿನಾರಾಯಣರೆ, ಏನ್ ಸಮಸ್ಯೆ?

ಆದಿ: ನಾನು ಒಬ್ಬಳು ಹುಡುಗಿಯನ್ನು ಇದು ಮಾಡ್ತಾ ಇದೀನಿ.

ಪ್ರೇ: ಲವ್ ಮಾಡ್ತಾ ಇದೀನಿ ಅಂತ ಧೈರ್ಯವಾಗಿ ಹೇಳ್ರಿ. ನಾಚ್ಕೊಂಡ್ರೆ ಕೆಲಸ ಆಗೋಲ್ಲ. ಪ್ರಪೋಸ್ ಮಾಡಿದೀರಾ?

ಆದಿ: ಇಲ್ಲ. ಕಳೆದ ವರ್ಷ ಪ್ರೇಮಿಗಳ ದಿನ ಮಾಡೋಣ ಅಂತ ಅಂದ್ಕೊಂಡಿದ್ದೆ. ಆದರೆ ಆದಿನ ಒಂದು ಗುಲಾಬಿ ಹೂವಿನ ಬೆಲೆ ಐವತ್ತು ರೂಪಾಯಿ ಇತ್ತು. ತುಂಬಾ ದುಬಾರಿಯಾಯ್ತು ಅಂತ ಪ್ರೇಮ ನಿವೇದನೆ ಮುಂದೂಡಿದೆ.

ಪ್ರೇ: ಗುಲಾಬಿಗೆ ಇಂಗ್ಲಿಷ್​ನಲ್ಲಿ ರೋಸ್ ಅಂತಾರೆ. ರೋಸ್ ಅನ್ನುವುದು ರೈಸ್ ಅನ್ನುವುದರ ಭೂತಕಾಲ! ಅದರ ಬೆಲೆ ರೈಸ್ ಆಗ್ತಾನೆ ಹೋಗುತ್ತೆ. ಈ ವರ್ಷವೂ ವ್ಯಾಲೆಂಟೇನ್ಸ್ ಡೇ ದಿನ ರೋಸ್ ಬೆಲೆ ಜಾಸ್ತಿ ಇರುತ್ತೆ. ಈ ಕಾರಣಕ್ಕೆ ಪ್ರೇಮ ನಿವೇದನೆ ಮುಂದೂಡ್ತಾ ಹೋದರೆ ನಿಮ್ಮ ಮದುವೆ ತಡವಾಗಿ ಆಮೇಲೆ ಮಧುಚಂದ್ರ ಅನ್ನೋದು ಮುದಿಚಂದ್ರ ಆಗುತ್ತೆ!

ಆದಿ: ನಮ್ಮ ಮನೇಲಿ ಒಂದು ಪ್ಲಾಸ್ಟಿಕ್ ಗುಲಾಬಿ ಇದೆ. ಅದನ್ನು ಕೊಟ್ಟು ಪ್ರೇಮ ನಿವೇದನೆ ಮಾಡಿದರೆ ಹೇಗೆ?

ಪ್ರೇ: ಹಾಗೆ ಮಾಡಿದರೆ ನಿಮ್ಮ ಪ್ರೇಮ ನೀರ ಮೇಲಿನ ಹೋಮ ಆಗುತ್ತೆ. ‘ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ’ ಅನ್ನುತ್ತಾ ನಿಜವಾದ ಗುಲಾಬಿ ಹೂ ಕೊಟ್ರೆ ಮಾತ್ರ ಪ್ರೇಯಸಿ ನಿಮ್ಮ ಕೋರಿಕೆಗೆ ‘ಹೂ’ ಅಂತಾಳೆ. ಪ್ಲಾಸ್ಟಿಕ್ ಹೂ ಕೊಟ್ರೆ ಊಹೂ ಅಂದು ಅದನ್ನು ನಿಮ್ಮ ಮುಖದ ಮೇಲೆ ಎಸೆಯೋದು ಗ್ಯಾರಂಟಿ.

ಆದಿ: ಹಾಗಾದರೆ ಬೇರೆ ಏನಾದರೂ ಚೀಪ್ ವಿಧಾನ ತಿಳಿಸಿ ಗುರುಗಳೆ.

ಪ್ರೇ: ಪ್ರೇಮಿಗಳ ದಿನಾಚರಣೆಗೆ ಎರಡು ದಿನ ಮುಂಚೆ ಗುಲಾಬಿ ಖರೀದಿಸಿ. ಆಗ ರೇಟ್ ಕಡಿಮೆ ಇರುತ್ತೆ. ಆಮೇಲೆ ಅದನ್ನು ಫ್ರಿಜ್​ನಲ್ಲಿಡಿ.

ಆದಿ: ಓಳ್ಳೇ ಐಡಿಯಾ ಗುರುಗಳೆ. ಹಾಗೇ ಮಾಡ್ತೀನಿ. ನಮಸ್ಕಾರ.

ನೀ: ಪ್ರೇಮಸ್ವಾಮಿಯವರೆ, ಪ್ರೇಮಿಗಳಿಗಾಗಿ ನಿಮ್ಮ ಹೊಸ ಯೋಜನೆ ಏನು?

ಪ್ರೇ: ನಮ್ಮ ಕನ್ನಡದ ಮಣ್ಣಿನ ಮಕ್ಕಳಿಗೆ ಪ್ರೇಮಕ್ಕಾಗಿ ಹೊಡೆದಾಡಲು ಸ್ಪೂರ್ತಿ ನೀಡುವಂತಹ ಒಂದು ಸಿನಿಮಾ ಪ್ರೇಮಿಗಳ ದಿನದಂದು ಬಿಡುಗಡೆಯಾಗ್ತಿದೆ. ಚಿತ್ರದ ಕತೆ, ಸಂಭಾಷಣೆ, ಸಾಹಿತ್ಯ, ಸಂಗೀತ, ನಿರ್ದೇಶನ ಎಲ್ಲವೂ ನನ್ನದೆ. ಚಿತ್ರದ ಹೆಸರು ‘ಹೀರೊ ನನ್ಮಗ’.

ನೀ: ವೆರಿಗುಡ್. ಹೀರೋ ಯಾರು?

ಪ್ರೇ: ಟೈಟಲ್ ನೋಡಿದ್ರೆ ಗೊತ್ತಾಗಲ್ವಾ? ನನ್ನ ಮಗನೇ ಹೀರೊ. ಬೊಂಬಾಟಾಗಿ ಅಭಿನಯಿಸಿದ್ದಾನೆ. ನನ್ನ ಮಗನ ನಟನೆಯ ಮುಂದೆ ನಿಮ್ಮ ಶಾರುಖ್ ಖಾನ್ ಝೀರೊ ನನ್ಮಗ! ಇದಲ್ಲದೆ ‘ಎಲ್​ಟಿಟಿ’ ಎಂಬ ಇನ್ನೂ ಒಂದು ಬಿಗ್ ಬಜೆಟ್ ಚಿತ್ರ ನಿರ್ವಣದ ಹಂತದಲ್ಲಿದೆ. ಅದು ಬಾಕ್ಸ್ ಆಫೀಸಿನಲ್ಲಿ ಕೆಜಿಎಫ್ ದಾಖಲೆ ಮುರಿಯುತ್ತೆ.

ನೀ: ಎಲ್​ಟಿಟಿ ಅಂದ್ರೆ ಶೂಟಿಂಗ್ ]ೕಲಂಕಾದಲ್ಲೇ ಇರುತ್ತೆ ಅಲ್ವಾ?

ಪ್ರೇ: ಇಲ್ಲ. ಎಲ್​ಟಿಟಿ ಅಂದ್ರೆ ಆ ತಮಿಳ ಪ್ರಭಾಕರನ್ ಕತೆ ಅಲ್ಲ. ಇದು ಈ ಕನ್ನಡ ಪ್ರೇಮಿ ಪ್ರೇಮಸ್ವಾಮಿಯ ಕತೆ. ಎಲ್​ಟಿಟಿ ಅನ್ನುವುದು ‘ಲವ್ವೇ ತಂದೆ ತಾಯಿ’ ಅನ್ನುವುದರ ಸಂಕ್ಷಿಪ್ತ ರೂಪ. ಇದರಲ್ಲಿ ಲವ್ವಿಗಾಗಿ ಹೀರೋ ಹೋರೋಯಿನ್ ಇಬ್ಬರೂ ತಮ್ಮ ತಂದೆತಾಯಿಯನ್ನು ತ್ಯಾಗ ಮಾಡ್ತಾರೆ. ಪ್ರೇಮ ವಿವಾಹವನ್ನು ವಿರೋಧಿಸುವ ಹೆತ್ತವರನ್ನು ಹ್ಯಾಂಡಲ್ ಮಾಡುವುದು ಹೇಗೆ ಅನ್ನುವುದನ್ನು ನಮ್ಮ ಯುವಜನತೆ ಈ ಸಿನಿಮಾ ನೋಡಿ ಕಲಿಯಬಹುದು.

ಲವ್ವೆ ನಮ್ಮ ತಾಯಿ ತಂದೆ

ಲವ್ವೆ ನಮ್ಮ ಮುಖ್ಯ ದಂಧೆ

ಲವ್ವು ಮಾಡದೆ ಡಿಗ್ರಿ ಪಡೆದರೆ

ಮೆಚ್ಚರಾ ರತಿ ಮನ್ಮಥ

ಎಂಬ ಈ ಚಿತ್ರದ ಹಾಡು ಈಗಾಗಲೇ ಯೂಟ್ಯೂಬ್​ನಲ್ಲಿ ಸೂಪರ್ ಹಿಟ್ ಆಗಿದೆ.

ನೀ: ಇನ್ನೊಂದು ಕರೆ ಇದೆ. ಹಲೋ ಯಾರು ಮಾತಾಡ್ತಾ ಇರೋದು?

ಲಂ: ನಾನು ಲಂಕೇಶ್ ಹನುಮನಹಳ್ಳಿ ಅಂತ. ಎರಡು ವರ್ಷಗಳಿಂದ ಇಬ್ಬರನ್ನು ಪ್ರೀತಿ ಮಾಡ್ತಾ ಇದೀನಿ.

ಪ್ರೇ: ಓಹೋ ಡ್ಯುಯಲ್ ಸಿಮ್ ಯೋಜನೆ.

ಲಂ: ಹೌದು. ಆದರೆ ಅದೀಗ ಇಬ್ಬರಿಗೂ ಗೊತ್ತಾಗಿ ಯಾರಾದರೂ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಒಬ್ಬಳು ನೋಡೋಕೆ ತುಂಬಾ ಚೆನ್ನಾಗಿದಾಳೆ. ಆದರೆ ಮೂಗಿನ ತುದಿಯಲ್ಲಿ ಕೋಪ. ಇನ್ನೊಬ್ಬಳ ರೂಪ ಚೆನ್ನಾಗಿಲ್ಲ. ಆದರೆ ಸ್ವಭಾವದಲ್ಲಿ ಪಾಪ. ಯಾರ ಬಳಿ ಪ್ರಪೋಸ್ ಮಾಡೋದು ಅಂತ ಗೊತ್ತಾಗ್ತಾ ಇಲ್ಲ.

ಪ್ರೇ: ಗೊತ್ತಾಯ್ತು ಬಿಡಿ. ಇಬ್ಬರಲ್ಲಿ ಯಾರನ್ನು ವರಿಸಲಿ ಎನ್ನುವುದು ನಿಮ್ಮ ವರಿ. ಒಂದು ಚುಟುಕ ಹೇಳ್ತೀನಿ ಕೇಳಿ.

ಮರುಳಾಗಬೇಡಿ ಗೆಳೆಯರೆ

ಯುವತಿಯ ಮೈಕಟ್ಟಿಗೆ

ನೆನಪಿರಲಿ

ಮನಸ್ಸಿಲ್ಲದ ಮೈ

ಕಟ್ಟಿಗೆ!

ಆದ್ದರಿಂದ ಯಾರು ನಿಮ್ಮನ್ನು ಮನಸಾರೆ ಪ್ರೀತಿಸುತ್ತಾರೊ ಅವರನ್ನು ಪ್ರೀತಿಸಿ.

ಲಂ: ಅದನ್ನು ತಿಳಿದುಕೊಳ್ಳುವುದು ಹೇಗೆ?

ಪ್ರೇ: ಬಹಳ ಸುಲಭ. ಐದು ಸಾವಿರ ಕೊಟ್ಟು ನಮ್ಮ ಕ್ರಾ್ಯಶ್ ಕೋರ್ಸಿಗೆ ಸೇರಿ.

ಲಂ: ಸರ್, ಇನ್ನೊಂದು ಪ್ರಶ್ನೆ. ಪ್ರಪೋಸ್ ಮಾಡೋವಾಗ ಐ ಲವ್ ಯೂ ಅಂತ ಎಷ್ಟು ಸಾರಿ ಹೇಳ್ಬೇಕು?

ಪ್ರೇ: ಸಾವಿರ ಸಲ ಹೇಳೋಕೆ ಅದೇನು ಸಹಸ್ರನಾಮಾರ್ಚನೆಯಲ್ಲ. ಆತ್ಮ ವಿಶ್ವಾಸದಿಂದ ಒಂದು ಸಲ ಹೇಳಿದರೂ ಸಾಕು.

ಲಂ: ಗುರೂಜಿ, ಇನ್ನೂ ಒಂದು ಸಂಶಯ. ಪ್ರಪೋಸ್ ಮಾಡೋವಾಗ ಬಲಗಾಲು ಮಡಚಬೇಕಾ? ಅಥವಾ ಎಡಗಾಲಾ?

ಪ್ರೇ: ಎರಡೂ ಬೇಡ. ಹೂ ಕೊಟ್ಟು ಉದ್ದಂಡ ನಮಸ್ಕಾರ ಮಾಡಿ.

ನೀ: ಕರೆ ಮಾಡಿದ್ದಕ್ಕೆ ಥ್ಯಾಂಕ್ಸ್. ಅಬ್ಬಾ ಎಷ್ಟೊಂದು ಡೌಟು. ಈತ ಲಂಕೇಶ್ ಹನುಮನಹಳ್ಳಿ ಅಲ್ಲ. ಶಂಕೇಶ್ ಅನುಮಾನ್ ಹಳ್ಳಿ. ಯಾರೋ ಬಹಳ ಹೊತ್ತಿನಿಂದ ಟ್ರೈ ಮಾಡ್ತಿದಾರೆ. ಹಲೋ ಪ್ರಶ್ನೆ ಕೇಳಿ.

ಚಂದ್ರ: ನಾನು ಚಂದ್ರ ಅಂತ. ತಾರಾ ಅನ್ನುವವಳನ್ನ ಪ್ರೀತಿಸ್ತಾ ಇದೀನಿ.

ನೀ: ಚಂದ್ರ-ತಾರೆ ಜೋಡಿ ಚೆನ್ನಾಗಿದೆ. ನಿಮ್ಮ ಪ್ರೇಮ ಯಾವ ಹಂತದಲ್ಲಿದೆ?

ಚಂದ್ರ: ಇನ್ನೂ ಫೋನ್​ನಲ್ಲಿ ಮಾತಾಡ್ತಾ ಇದೀವಿ.

ಪ್ರೇ: ಮುಂದಿನ ಹಂತ ಇಬ್ಬರೇ ಸಿನಿಮಾಕ್ಕೆ ಹೋಗೋದು. ತಡ ಮಾಡ್ಬೇಡಿ. ಶುಭಸ್ಯ ಶೀಘ್ರಂ.

ಚಂ: ಆದರೆ ಎಷ್ಟು ಕರೆದರೂ ಆಕೆ ಬರ್ತಾ ಇಲ್ಲ. ಸಿನಿಮಾ ನೋಡಿದ್ರೆ ಕಣ್ಣು ಉರಿಯುತ್ತೆ ಅಂತಾಳೆ.

ಪ್ರೇ: ಯಾವ ಸಿನಿಮಾಕ್ಕೆ ಕರೆದಿರಿ?

ಚಂ: ಹಿಂದಿ ಸಿನಿಮಾ ‘ಉರಿ’

ಪ್ರೇ: ಅದಕ್ಕೆ ಅವಳು ಕಣ್ಣು ಉರಿಯುತ್ತೆ ಅಂದದ್ದು. ಮೊದಲ ಸಲ ಸಿನಿಮಾಗೆ ಹೋಗ್ತಾ ಇದೀರಿ. ಯಾವುದಾದರೂ ರೊಮ್ಯಾಂಟಿಕ್ ಸಿನಿಮಾಕ್ಕೆ ಕರೀರಿ. ಬಂದೇ ಬರ್ತಾಳೆ.

ನೀ: ಈಗ ಒಂದು ಪುಟ್ಟ ವಿರಾಮ. ವಿರಾಮದ ನಂತರ ಕಾರ್ಯಕ್ರಮ ಮುಂದುವರಿಯುತ್ತೆ. ನೋಡ್ತಾ ಇರಿ. ನಗ್ತಾ ಇರಿ. ನಿಮ್ಮ ನೆಚ್ಚಿನ ಬಂಡಲ್ ಟಿವಿ.

(ಲೇಖಕರು ಕವಿ ಹಾಗೂ ನಾಟಕಕಾರರು)