ಪಾರ್ಕಿನಲ್ಲಿ ರೌಂಡು, ಪಾರ್ಟಿಯಲ್ಲಿ ಗುಂಡು

ಮದುವೆ ಮುಗಿದ ಕೂಡಲೆ ಮಧುಚಂದ್ರಕ್ಕಾಗಿ ವಿದೇಶಕ್ಕೆ ಹಾರುವುದು ಈಗ ಸಾಮಾನ್ಯವಾಗಿಬಿಟ್ಟಿದೆ. ನಾನು ಮದುವೆಯಾದಾಗ ವಿದೇಶದ ಮಾತು ಹಾಗಿರಲಿ, ಸ್ವದೇಶದಲ್ಲಿ ಹನಿಮೂನಿಗೆ ಹೋಗುವುದಕ್ಕೂ ನನ್ನ ಬಳಿ ಹಣ ಇರಲಿಲ್ಲ. ಆಗ ಮಧ್ಯಮ ವರ್ಗದ ಎಲ್ಲರ ಪರಿಸ್ಥಿತಿಯೂ ಹಾಗೇ ಇತ್ತು ಅನ್ನಿ. ಮದುವೆ, ಬೀಗರ ಔತಣ, ಶೋಭನ ಇತ್ಯಾದಿ ಮುಗಿದ ಬಳಿಕ ಮದುಮಕ್ಕಳು ಅವರ ಸಂಬಂಧಿಕರ ಮನೆಗಳಿಗೆ ಊಟಕ್ಕೆ ಹೋದರೆ ಅದೇ ಮಧುಚಂದ್ರ ಪ್ರವಾಸ! ನಾವೂ ಅಷ್ಟೇ. ವಿವಾಹದ ಕಾರ್ಯಕ್ರಮಗಳೆಲ್ಲವೂ ಮುಗಿದ ನಂತರ ನಮ್ಮ ಊರಾದ ಕುಂದಾಪುರದಿಂದ ಮೈಸೂರಿನಲ್ಲಿದ್ದ ನಮ್ಮಅಣ್ಣನ ಮನೆಗೆ ಹೋಗಿ ಅದನ್ನೇ ನಮ್ಮ ಹನಿಮೂನ್ ಟ್ರಿಪ್ ಅಂದುಕೊಂಡೆವು. ಮೈಸೂರಿನಲ್ಲಿ ಕೆಆರ್​ಎಸ್, ಚಾಮುಂಡಿ ಬೆಟ್ಟ, ಅರಮನೆ ನೋಡಿ ಕೊನೆಗೆ ಮೃಗಾಲಯಕ್ಕೆ ಹೋದೆವು. ಆಗ ಏನಾಯಿತು ಗೊತ್ತಾ?

ಪ್ರಾಣಿಗಳನ್ನು ನೋಡಲು

ಮೃಗಾಲಯಕ್ಕೆ ಹೋದೆ,

ನೋಡಬಂದ ಜನರನ್ನೇ

ನೋಡುತ್ತಾ ಕಾಲಕಳೆದೆ!

ಹೌದು. ಎಲ್ಲಿಗೆ ಹೋದರೂ ಅಲ್ಲಿ ಜನರನ್ನು ನೋಡುವುದು ನನ್ನ ಅಭ್ಯಾಸ. ಪಕ್ಷಿ ವೀಕ್ಷಣೆ, ಆಕಾಶ ಕಾಯಗಳ ವೀಕ್ಷಣೆಯ ಹಾಗೆ ಇದೂ ಒಂದು ಹವ್ಯಾಸ ಅನ್ನಬಹುದು. ನಾನಿಂದು ಬರೆಯಲು ಹೊರಟಿರುವುದು ಇದರ ಬಗ್ಗೆ. ಹನಿಮೂನಿನ ಕುರಿತು ಬರೆಯುತ್ತಿದ್ದೇನೆ ಅಂದುಕೊಂಡವರಿಗೆ ನಿರಾಸೆಯಾಗಿದ್ದರೆ ದಯವಿಟ್ಟು ಕ್ಷಮೆ ಇರಲಿ! ಆದರೆ ತರತರದ ಜನರನ್ನು ನೋಡುವುದು, ಅವರ ಮಾತುಗಳನ್ನು ಕೇಳುವುದೂ ಅತ್ಯಂತ ಸ್ವಾರಸ್ಯಕರ ಅನ್ನುವುದು ನನ್ನ ಅನುಭವ.

ಧಾರವಾಡದ ಕೃಷಿ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಸಹಪಾಠಿ ಗೆಳೆಯರ ಜತೆ ನಾನೂ ಸಂಜೆ ಲೈನ್​ಬಜಾರಿಗೆ ಹೋಗುತ್ತಿದ್ದೆ. ಲೈನ್​ಬಜಾರ್ ಫೇಡಕ್ಕೆ ಪ್ರಸಿದ್ಧವಾದರೂ ನಾವು ಅಲ್ಲಿಗೆ ಹೋಗುತಿದ್ದದ್ದು ಫೇಡ ತಿನ್ನುವುದಕ್ಕಲ್ಲ. ಸೌಂದರ್ಯ ವೀಕ್ಷಣೆಗೆ ಎಂದರೆ ವಾಚಕ ಮಹಾಶಯರಿಗೆ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ. ಗೃಹಸ್ಥನಾದ ಬಳಿಕ ಆ ರೀತಿಯ ‘ಸೌಂದರ್ಯ’ ವೀಕ್ಷಣೆಯನ್ನು ತೊರೆದು ಮನುಷ್ಯ ವೀಕ್ಷಣೆಯ ನನ್ನ ಹವ್ಯಾಸವನ್ನು ಪುರುಷ ವರ್ಗಕ್ಕೆ ಸೀಮಿತಗೊಳಿಸಿಕೊಂಡೆ. ಈಗ ನಾನು ಹಿರಿಯ ನಾಗರಿಕನಾಗಿರುವುದರಿಂದ ಯಾರ ಭಯವೂ ಇಲ್ಲದೆ ಲಿಂಗಾತೀತವಾಗಿ ಜನರನ್ನು ನೋಡಬಹುದು. ಮನುಷ್ಯರನ್ನು ವೀಕ್ಷಿಸುವ ನನ್ನ ಕಾರ್ಯಕ್ರಮ ಮುಂಜಾನೆಯ ವಾಕಿಂಗ್ ವೇಳೆಯಲ್ಲೆ ಆರಂಭವಾಗುತ್ತದೆ. ವಾಕಿಂಗಿಗೆ ಬರುವವರ ವೇಷಭೂಷಣ, ನಡಿಗೆಯ ಭಂಗಿ, ವೇಗ, ಮಾತಿನ ರೀತಿ, ಭಾಷೆ, ವಿಷಯ ವೈವಿಧ್ಯಮಯವಾಗಿರುತ್ತವೆ. ಜೊತೆಯಾಗಿ ನಡೆಯುತ್ತಿರುವ ಮಹಿಳೆ ಮತ್ತು ಪುರುಷರಲ್ಲಿ ಇಬ್ಬರೂ ಮೌನವಾಗಿ ನಡೆಯುತ್ತಿದ್ದರೆ ಅಥವಾ ಹೆಂಗಸು ಮಾತ್ರ ಮಾತನಾಡುತ್ತಿದ್ದು ಗಂಡಸು ಹೂಂ ಹೂಂ ಅನ್ನುತ್ತಿದ್ದರೆ ಅವರು ದಂಪತಿ ಎಂದು ತಿಳಿಯಬಹುದು. ರ್ಪಾನಲ್ಲಿ ಇಂಥ ಘನಗಂಭೀರ ಜೋಡಿಗಳೇ ಹೆಚ್ಚಾಗಿ ಕಾಣಸಿಗುತ್ತಾರೆ. ಅಪರೂಪಕ್ಕೆ ಗಂಡ ಮತ್ತು ಹೆಂಡತಿ ಇಬ್ಬರೂ ನಗುನಗುತ್ತಾ ಮಾತನಾಡುತ್ತಾ ನಡೆಯುವ ದೃಶ್ಯ ಕಂಡರೆ ಆತ ಯಾರದೋ ಗಂಡ ಮತ್ತು ಆಕೆ ಯಾರದೋ ಹೆಂಡತಿ ಅನ್ನುವುದು ಖಾತ್ರಿ! ಒಂದು ಕಾಲದಲ್ಲಿ ಸಹಪಾಠಿಯಾಗಿಯೋ ಸಹೋದ್ಯೋಗಿಯಾಗಿಯೋ ಪರಿಚಿತರಾಗಿದ್ದ ಅವರು ಅಕಸ್ಮಾತ್ತಾಗಿ ರ್ಪಾನಲ್ಲಿ ಭೇಟಿಯಾದಾಗ ಒಂದೆರಡು ಸುತ್ತು ನಗುನಗುತ್ತಾ ಮಾತಾಡಿ ನಂತರ ಬೇರೆಯಾಗುತ್ತಾರೆ.

ಕೆಲವರಿಗೆ ಬಾಹ್ಯ ಪ್ರಪಂಚದ ಯಾವ ಶಬ್ದಗಳನ್ನು ಕೇಳುವುದಕ್ಕೂ ಇಷ್ಟವಿರುವುದಿಲ್ಲ. ಅಂಥವರು ಕಿವಿಗೆ ಇಯರ್ ಫೋನ್ ಹಾಕಿಕೊಂಡು ತಮಗಿಷ್ಟವಾದದ್ದನ್ನು ಕೇಳುತ್ತಾ ನಡೆಯುತ್ತಾರೆ. ಇನ್ನು ಕೆಲವರಿಗೆ ಸುಪ್ರಭಾತ ಮತ್ತು ದೇವರ ನಾಮಗಳನ್ನು ತಾವು ಮಾತ್ರ ಕೇಳಿದರೆ ಸಾಲದು. ವಾಕಿಂಗ್ ಮಾಡುವವರೆಲ್ಲ ಕೇಳಿ ಪುಣ್ಯ ಕಟ್ಟಿಕೊಳ್ಳಲಿ ಎಂದು ಮೊಬೈಲನ್ನು ಹೈ ವಾಲ್ಯೂಮಿನಲ್ಲಿ ಇಟ್ಟುಕೊಂಡು ನಡೆಯುತ್ತಾರೆ. ವಾಕಿಂಗ್ ಮಾಡುವಾಗ ಜೋರಾಗಿ ಚಪ್ಪಾಳೆ ತಟ್ಟುವವರನ್ನು ನೀವೂ ನೋಡಿರಬಹುದು. ಕಾಲುಗಳ ಜೊತೆಗೆ ಕೈಗಳಿಗೂ ವ್ಯಾಯಾಮವಾಗಲಿ ಎಂದು ಹಾಗೆ ಮಾಡುತ್ತಾರಂತೆ. ಅದರ ಹಿಂದೆ ಜನರ ಗಮನ ಸೆಳೆಯುವ ಹಿಡನ್ ಅಜೆಂಡಾ ಇರಬಹುದೆಂಬ ಅನುಮಾನ ನನಗಿದೆ. ಏಕೆಂದರೆ ಟಪ್ ಟಪ್ ಸದ್ದು ಕೇಳಿದಾಗ ಎಲ್ಲರೂ ಅವರತ್ತ ಒಮ್ಮೆ ದೃಷ್ಟಿ ಹಾಯಿಸುತ್ತಾರೆ.

ವಾಕಿಂಗ್​ಗೆ ಬರುವವರ ಉಡುಗೆ ತೊಡುಗೆ ಹವಾಮಾನಕ್ಕೆ ತಕ್ಕಂತೆ ಬದಲಾಗುತ್ತದೆ. ಚಳಿಗೆ ಅಂಜುವ ವಯಸ್ಕರು ಸ್ವೆಟರು, ಕೋಟು, ಮಫ್ಲರು, ಶಾಲು ಇತ್ಯಾದಿಗಳನ್ನು ಹೇರಿಕೊಂಡು ನಡೆದಾಡುವ ಜವಳಿ ಮಳಿಗೆಯಂತೆ ಕಾಣುತ್ತಾರೆ. ಡಿಸೆಂಬರ್ ತಿಂಗಳ ಬೆಂಗಳೂರಿನ ಚಳಿಗೆ ಈ ಬಗೆಯ ಪ್ಯಾಡಿಂಗ್ ಬೇಕು. ಆದರೆ ನಮ್ಮ ರ್ಪಾನಲ್ಲಿ ಹಿರಿಯರೊಬ್ಬರು ಈ ಕಡು ಬೇಸಿಗೆಯಲ್ಲೂ ಸ್ವೆಟರು ಧರಿಸಿ, ಆದರೆ ಮೇಲೆ ಕಣ್ಣು ಮಾತ್ರ ಕಾಣಿಸುವಂತೆ ಉಣ್ಣೆಯ ಶಾಲು ಹೊದ್ದುಕೊಂಡು ವಾಕಿಂಗ್ ಮಾಡುತ್ತಾರೆ. ಅವರದ್ದು ಸರ್ವಋತುಗಳಲ್ಲೂ ಒಂದೇ ಡ್ರೆಸ್ಸು. ಸಾಮಾನ್ಯವಾಗಿ ಮಹಿಳೆಯರು ವಾಕಿಂಗ್​ಗೆ ಬರುವಾಗಲೂ ಚೆನ್ನಾಗಿ ಸಿಂಗರಿಸಿಕೊಂಡೇ ಬರುತ್ತಾರೆ. ನನ್ನಾಕೆ ವಾಕಿಂಗ್​ಗೆ ಬರದಿರಲು ಕೊಡುವ ಕಾರಣವೇನು ಗೊತ್ತಾ? ನೈಟಿ ತೆಗೆದು ಡ್ರೆಸ್ ಹಾಕಿಕೊಳ್ಳಲು ಉದಾಸೀನ! ಆದರೆ ಕೆಲವು ಮಧ್ಯವಯಸ್ಕ ಮಹಿಳೆಯರು ನೈಟಿಯಲ್ಲೆ ವಾಕಿಂಗ್​ಗೆ ಬರುವುದುಂಟು. ಗಂಡಸರು ನೈಂಟಿ ಹಾಕಿಕೊಂಡು ಟೈಟಾಗಿ ರಸ್ತೆಯಲ್ಲಿ ನಡೆಯುವಂತೆ ಈ ಮಹಿಳಾ ಮಣಿಗಳು ಟೈಟ್ ನೈಟಿ ಹಾಕಿಕೊಂಡು ರ್ಪಾನಲ್ಲಿ ನಡೆಯುತ್ತಾರೆ.

ಜನರ ವೇಷಭೂಷಣ ಹಾಗೂ ಸ್ವಭಾವಗಳನ್ನು ಗಮನಿಸಲು ಸೂಕ್ತವಾದ ಇನ್ನೊಂದು ಸಂದರ್ಭವೆಂದರೆ ಮದುವೆ. ರಾತ್ರಿ ಆರತಕ್ಷತೆಗೆ ಹೋದರೆ ಜನರನ್ನು ನೋಡಲು ಹೆಚ್ಚು ಅವಕಾಶ ಸಿಗುವುದಿಲ್ಲ. ಮದುಮಕ್ಕಳಿಗೆ ಶುಭಾಶಯ ಕೋರಲು ಸರತಿಸಾಲಲ್ಲಿ ನಿಂತಾಗ ಮುಂದಿನವರ ಬೆನ್ನುಗಳು ಮಾತ್ರ ಕಾಣುತ್ತವೆ. ನಂತರ ಬಫೆಯಲ್ಲಿ ಎಷ್ಟು ಜನಜಂಗುಳಿ ಇರುತ್ತದೆ ಎಂದರೆ ನಿಮ್ಮ ತಟ್ಟೆಗೆ ಇನ್ನಾರೋ ಕೈ ಹಾಕುತ್ತಾರೆ. ಎಷ್ಟೋ ಸಲ ನನ್ನ ಪ್ಯಾಂಟು ಷರ್ಟು ಕೂಡಾ ಬಫೆ ಊಟದ ರುಚಿ ನೋಡಿರುತ್ತದೆ. ನಿಮಗೆ ಸಾಕಷ್ಟು ಬಿಡುವಿದ್ದು ಜನರನ್ನು ವೀಕ್ಷಿಸುವ ಉದ್ದೇಶವಿದ್ದರೆ ಮದುವೆ ಛತ್ರಕ್ಕೆ ಮಧ್ಯಾಹ್ನ ಹೋಗುವುದು ಒಳ್ಳೆಯದು. ಆರಾಮವಾಗಿ ಕುರ್ಚಿಯಲ್ಲಿ ಕುಳಿತುಕೊಂಡು ಜನರನ್ನು ನೋಡಬಹುದು. ತಾವಾಗಿಯೇ ಬಂದು ಕೊರೆಯುವ ವಾಚಾಳಿಗಳು, ಮಾತಾಡಿಸಿದರೂ ಪ್ರತಿಕ್ರಿಯೆ ನೀಡದ ಮೌನಮೋಹನರು, ಬೋಳು ತಲೆ ಸವರಿಕೊಳ್ಳುತ್ತಾ ಚಿಂತಾಕ್ರಾಂತರಾಗಿ ಕುಳಿತವರು, ಸದಾನಗುವ ಸದಾನಂದರು ಹೀಗೆ ತರತರದ ಜನರು ನೋಡಲು ಸಿಗುತ್ತಾರೆ. ನಂತರ ಕುರ್ಚಿಯಲ್ಲಿ ಕುಳಿತು ಬಾಳೆ ಎಲೆೆಯಲ್ಲಿ ಊಟ ಮಾಡುವಾಗಲೂ ಜನರನ್ನು ನೋಡಲು ಅವಕಾಶವಿರುತ್ತದೆ. ಮದುವೆ ಮನೆಯಲ್ಲಿ ಜನರ ಮಾತುಗಳನ್ನು ಕೇಳುವುದೂ ಸ್ವಾರಸ್ಯಕರ ಅನುಭವ. ಉದಾಹರಣೆಗೆ ಈ ಸಂಭಾಷಣೆ:

ವಧು ಹೇಗಿದ್ದಾಳೆ?

ಲಕ್ಷಣವಾಗಿದ್ದಾಳೆ

ಮತ್ತೆ ವರ?

ಅವ ಲಕ್ಷಣವಾಗಿದ್ದಾನೆ!

ನಿಮ್ಮ ಎಲ್ಲ ಸಮಸ್ಯೆಗಳಿಗೂ ಉಚಿತ ಸಲಹೆ ನೀಡುವ ಸರ್ವಜ್ಞರು, ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವವರು, ಕೆಳಗೆ ಬಿದ್ದರೂ ಮೂಗು ಮೇಲೆನ್ನುವ ವಾದಪ್ರಿಯರು, ರಾಜಕೀಯ ಪಂಡಿತರು, ಸಮಾಜ ಸುಧಾರಕರು, ದೈವಭಕ್ತರು ಹೀಗೆ ವಿವಿಧ ಬಗೆಯ ಜನರು ಒಂದೆಡೆ ಸಿಗುವ ಜಾಗ ಮದುವೆ ಛತ್ರ. ಮೊನ್ನೆ ಛತ್ರದಲ್ಲಿ ಒಬ್ಬರು ‘ನಾನು ನಿಮ್ಮ ಅಭಿಮಾನಿ, ನಿಮ್ಮ ಹನಿಗವನ, ಲೇಖನಗಳನ್ನು ಓದುತ್ತೇನೆ’ ಎಂದು ನನ್ನನ್ನು ಮಾತನಾಡಿಸಿದಾಗ ನನಗೆ ಸಹಜವಾಗಿಯೇ ಖುಷಿಯಾಯಿತು. ‘ಹೌದಾ? ತುಂಬಾ ಸಂತೋಷ. ನೀವು?’ ಅಂದೆ, ಅಷ್ಟೆ. ನಂತರ ಅವರು ನನಗೆ ಮಾತನಾಡುವುದಕ್ಕೆ ಅವಕಾಶವನ್ನೇ ಕೊಡಲಿಲ್ಲ. ತಮ್ಮ ಹಾಗೂ ತಮ್ಮ ಮಕ್ಕಳ ಸಾಧನೆಗಳ ಬಗ್ಗೆ ಒಂದೇ ಸಮನೆ ಕೊರೆದರು. ನಾನು ನಿಮ್ಮ ಅಭಿಮಾನಿ ಅಂತ ಅವರು ಹೇಳಿದ್ದು ಗಾಳದ ತುದಿಗೆ ಸಿಕ್ಕಿಸಿದ ಎರೆಹುಳ ಅನ್ನುವುದು ನನಗೆ ಗೊತ್ತಾಗುವಷ್ಟರಲ್ಲಿ ಕಾಲ ಮಿಂಚಿತ್ತು. ಕೆಲವು ಮಹಿಳೆಯರು ಮದುವೆಗಳಿಗೆ ಹೋಗುವ ಉದ್ದೇಶವೇ ಅಲ್ಲಿಗೆ ಬಂದವರು ಧರಿಸಿದ ಉಡುಗೆತೊಡುಗೆ ಮತ್ತು ಆಭರಣಗಳನ್ನು ನೋಡುವುದು. ಯಾವುದೋ ಒಂದು ಸೀರೆ ಅಥವಾ ಆಭರಣ ಇಷ್ಟವಾದರೆ ಮನೆಗೆ ಬಂದ ಬಳಿಕ ತಮಗೂ ಅಂಥದೇ ಸೀರೆ, ನೆಕ್ಲೇಸ್ ಬೇಕೆಂಬ ಬೇಡಿಕೆ ಶುರುವಾಗುತ್ತದೆ. ಆದ್ದರಿಂದ ಮದುವೆಗೆ ಹೋಗುವಾಗ ಗಂಡಂದಿರು ತಮ್ಮ ಹೆಂಡತಿಯ ಕಣ್ಣಿಗೆ ಒಳ್ಳೆಯ ಸೀರೆ ಮತ್ತು ಆಭರಣಗಳು ಬೀಳದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವುದು ಒಳ್ಳೆಯದು.

ರೈಲು ಪ್ರಯಾಣ ಜನರನ್ನು ನೋಡಲು ಒಳ್ಳೆಯ ಪ್ಲಾಟ್​ಫಾರಂ ಒದಗಿಸುತ್ತದೆ. ಸಾಮಾನ್ಯವಾಗಿ ರೈಲುಗಳು ಸಮಯಕ್ಕೆ ಸರಿಯಾಗಿ ಬರುವುದಿಲ್ಲವಾದ್ದರಿಂದ ಪ್ಲಾಟ್​ಫಾರಂ ಹತ್ತಿರ ಕಾಯುವುದು ಅನಿವಾರ್ಯ. ರೈಲು ತಡವಾದ ಬಗ್ಗೆ ಜನರ ಪ್ರತಿಕ್ರಿಯೆ ಅವರ ನಡೆನುಡಿಗಳಲ್ಲಿ ವ್ಯಕ್ತವಾಗುವ ರೀತಿ ವಿಭಿನ್ನವಾಗಿರುತ್ತದೆ. ಕೆಲವರು ಬೇಸರದಿಂದ ಗೊಣಗಿದರೆ ಇನ್ನು ಕೆಲವರು ಹತಾಶೆಯಿಂದ ಶಾಪ ಹಾಕುತ್ತಾರೆ. ವ್ಯಂಗ್ಯ, ಕೋಪ, ಅಸಹಾಯಕತೆ, ಬೈಗುಳ ಎಲ್ಲವನ್ನೂ ಅಲ್ಲಿ ಕಾಣಬಹುದು. ರೈಲು ಬರುತ್ತಿದ್ದ ಹಾಗೆ ಜನರು ಎಲ್ಲವನ್ನೂ ಮರೆತು ಒಳಗೆ ನುಗ್ಗುತ್ತಾರೆ. ಮನುಷ್ಯ ವೀಕ್ಷಣೆಗೆ ಎಸಿ ಸ್ಲೀಪರುಗಳಿಗಿಂತ ಸಾಮಾನ್ಯ ದರ್ಜೆಯ ಬೋಗಿಗಳೇ ಉತ್ತಮ. ಯಾಕೋ ಏನೋ ಹವಾನಿಯಂತ್ರಿತ ದರ್ಜೆಯಲ್ಲಿ ಪ್ರಯಾಣಿಸುವಾಗ ಜನರು ತಮ್ಮ ಸಹಜ ಸ್ವಭಾವವನ್ನು ನಿಯಂತ್ರಿಸಿಕೊಂಡು ಗಂಭೀರರಾಗುತ್ತಾರೆ. ಈಚೆಗೆ ಎಸಿ ಸ್ಲೀಪರ್​ನಲ್ಲಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಎಲ್ಲರೂ ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು. ಕಾರಣ ಆ ಇಡೀ ಬೋಗಿಯಲ್ಲಿ ಪುಸ್ತಕ ಓದುತ್ತಿದ್ದವನು ನಾನೊಬ್ಬನೆ! ಉಳಿವರೆಲ್ಲ ಮೊಬೈಲ್​ನಲ್ಲಿ ಮುಳುಗಿದ್ದರು. ವಾಪಾಸು ಬರುವಾಗ ಹಗಲು ಹೊತ್ತು ಸಾಮಾನ್ಯ ದರ್ಜೆಯಲ್ಲಿ ಪ್ರಯಾಣಿಸಿದೆ. ರೈಲಿನಲ್ಲಿ ಪ್ರಯಾಣಿಕರು ಎದುರುಬದುರು ಕುಳಿತುಕೊಳ್ಳುವುದರಿಂದ ಒಬ್ಬರನ್ನೊಬ್ಬರು ನೋಡಲು, ಮಾತನಾಡಲು ಬಸ್ಸು ಅಥವಾ ವಿಮಾನಕ್ಕಿಂತ ಹೆಚ್ಚು ಅನುಕೂಲವಿದೆ. ಮಾರಲು ಬಂದದ್ದನ್ನೆಲ್ಲ ಮುಕ್ಕುವ ತಿಂಡಿಪೋತರು, ತಾವೊಬ್ಬರೆ ತಿನ್ನುವ ಸ್ವಾರ್ಥಿಗಳು, ಹಂಚಿ ಉಣ್ಣುವ ಉದಾರಿಗಳು, ಕುಳಿತಲ್ಲೆ ನಿದ್ರಿಸುವ ಕುಂಭಕರ್ಣರು, ಇಸ್ಪೀಟ್ ಆಡುವವರು, ಅಂತಾಕ್ಷರಿ ಹಾಡುವವರು… ಇವರನ್ನೆಲ್ಲ ನೋಡುವುದರಲ್ಲಿ ಬೆಂಗಳೂರು ಬಂದದ್ದೇ ಗೊತ್ತಾಗಲಿಲ್ಲ.

ನನ್ನ ಬರೆಯುವ ಕೋಣೆಯ ಕಿಟಕಿಯಿಂದ ನೋಡಿದರೆ ದಿನವೂ ಕಾಣುವ ದೃಶ್ಯ- ನಿರ್ವಣದ ಹಂತದಲ್ಲಿರುವ ಕಟ್ಟಡದ ಕಾವಲುಗಾರನ ಕುಟುಂಬಕ್ಕಾಗಿ ಮಾಡಿದ ಪುಟ್ಟ ಶೆಡ್. ಒಳಗೆ ಸೆಕೆ ಅಂತ ವಾಚ್​ವ್ಯಾನ್ ಹೊರಗೆ ಮರಳು ರಾಶಿಯ ಮೇಲೇ ಗೋಣಿ ಚೀಲ ಹಾಕಿಕೊಂಡು ಮಲಗಿದ್ದಾನೆ. ಅವನಿಗೆ ಒಂದು ಬೀದಿ ನಾಯಿ ಕಂಪನಿ ಕೊಟ್ಟಿದೆ. ಮೈಮೇಲೆ ಬೆಳಗಿನ ಬಿಸಿಲು ಬಿದ್ದರೂ ಆತ ಇನ್ನೂ ಎದ್ದಿಲ್ಲ. ಹೆಂಡತಿ ಬೈದು ಎಬ್ಬಿಸುವವರೆಗೂ ಆರಾಮವಾಗಿ ಮಲಗಿರುತ್ತಾನೆ. ಎದ್ದ ತಕ್ಷಣ ಹಲ್ಲು ಉಜ್ಜುತ್ತಾ ಬಹಿರ್ದೆಸೆಗೆ ಹೊರಡುತ್ತಾನೆ. ಅವನ ಕೈಯಲ್ಲಿ ಹಳ್ಳಿಯವರ ಹಾಗೆ ತಂಬಿಗೆ ಇಲ್ಲ. ನಗರದವನಾದ್ದರಿಂದ ತಂಬಿಗೆಯ ಬದಲು ಪ್ಲಾಸ್ಟಿಕ್ ಬಾಟಲಿ!

ಮುಗಿಸುವ ಮುನ್ನ, ರ್ಪಾನಲ್ಲಿ ವಾಕಿಂಗ್ ಮಾಡುವವರನ್ನು ಕಂಡಾಗ ಹೊಳೆದದ್ದು:

ಕೆಲವರದ್ದು ಎರಡೇ ಸುತ್ತು

ಇನ್ನು ಕೆಲವರು ಮೂರು ಸುತ್ತು

ನಾಲ್ಕು ಸುತ್ತು ಐದು ಸುತ್ತು

ರ್ಪಾನಲ್ಲಿ ರೌಂಡು

ಪಾರ್ಟಿಯಲ್ಲಿ ಗುಂಡು

ಅವರವರ ತಾಕತ್ತು!

(ಲೇಖಕರು ಕವಿ ಹಾಗೂ ನಾಟಕಕಾರರು)

(ಪ್ರತಿಕ್ರಿಯಿಸಿ:[email protected], [email protected])

Leave a Reply

Your email address will not be published. Required fields are marked *