ಪಂಪ್‌ವೆಲ್‌ನಲ್ಲೇ ಸರ್ವೀಸ್ ಬಸ್ ನಿಲ್ದಾಣ

ಮಂಗಳೂರು: ದೀರ್ಘ ಕಾಲದಿಂದ ಬಾಕಿ ಉಳಿದ ಮಂಗಳೂರು ಸರ್ವೀಸ್/ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಯೋಜನೆ ಮತ್ತೆ ಹಳೇ ಹಳಿಗೆ ಬಂದಿದೆ!
ಈ ಮೊದಲು ಪ್ರಸ್ತಾವಿಸಿದಂತೆ ಪಡೀಲು ಬದಲು ದಶಕದ ಹಿಂದೆ ಉದ್ದೇಶಿಸಿದ್ದ ನಗರದ ಪಂಪ್‌ವೆಲ್ ವೃತ್ತದ ಸಮೀಪದ 7.5 ಎಕರೆ ಜಾಗದಲ್ಲೇ ಸ್ಮಾರ್ಟ್ ಸಿಟಿ ಯೋಜನೆಯಡಿ ಹೊಸ ಸರ್ವೀಸ್ ಬಸ್ ನಿಲ್ದಾಣ ನಿರ್ಮಾಣಗೊಳ್ಳಲಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅಧ್ಯಕ್ಷತೆಯಲ್ಲಿ ಶನಿವಾರ ಸ್ಮಾರ್ಟ್ ಸಿಟಿ 7ನೇ ನಗರಮಟ್ಟದ ಸಲಹಾ ಸಮಿತಿ ಸಭೆ ಯಲ್ಲಿ ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಮುಹಮ್ಮದ್ ನಝೀರ್ ಈ ಮಾಹಿತಿ ನೀಡಿದರು.

ಬಸ್ ನಿಲ್ದಾಣ ನಿರ್ಮಿಸುವ ಉದ್ದೇಶದಿಂದ, ಪಡೀಲ್‌ನಲ್ಲಿಲ್ಲಿರುವ ಖಾಸಗಿ ವ್ಯಕ್ತಿಗಳಿಗೆ ಜಮೀನು ಒದಗಿಸಲು ಮುಂದಾಗುವಂತೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಯಾರೂ ಜಮೀನು ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಪಂಪ್‌ವೆಲ್‌ನಲ್ಲೇ ಯೋಜನೆ ಅನುಷ್ಠಾನಗೊಳಿಸುವಂತೆ ಹೈ ಪವರ್ ಕಮಿಟಿ ಸಲಹೆ ನೀಡಿದೆ. ಮುಂದಿನ ತಿಂಗಳ ಸಮಿತಿ ಸಭೆಯಲ್ಲಿ ಯೋಜನೆಗೆ ಅಧಿಕೃತ ಅನುಮೋದನೆ ಸಿಗಲಿದ್ದು, ಬಳಿಕ ಟೆಂಡರ್ ಕರೆಯಲಾಗುವುದು ಎಂದರು.

ಕ್ಲಾಕ್ ಟವರ್‌ನಿಂದ ಎ.ಬಿ.ಶೆಟ್ಟಿ ಸರ್ಕಲ್‌ವರೆಗೆ ಸ್ಮಾರ್ಟ್ ರಸ್ತೆ ನಿರ್ಮಾಣ ಕಾಮಗಾರಿ ಡಿಸೆಂಬರ್‌ನೊಳಗೆ ಪೂರ್ಣಗೊಳ್ಳಲಿದೆ. ಪೊಲೀಸ್ ಇಲಾಖೆ ವರದಿ ಪ್ರಕಾರ ಬಸ್ ನಿಲ್ದಾಣ ಸ್ಥಳಾಂತರ ತನಕ ನಗರದ ಎ.ಬಿ.ಶೆಟ್ಟಿ ವೃತ್ತದಿಂದ ಕ್ಲಾಕ್ ಟವರ್ ತನಕದ ರಸ್ತೆಯನ್ನು ಏಕಮುಖ(ಒನ್‌ವೇ) ಮಾಡುವ ಯೋಜನೆ ಮುಂದೂಡಲಾಗಿದೆ ಎಂದರು.

ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಸ್ಮಾರ್ಟ್ ಸಿಟಿ ನಿರ್ದೇಶಕ ಡಿ.ಪಿ.ಮೆಹ್ತಾ, ಸ್ವತಂತ್ರ ನಿರ್ದೇಶಕಿ ಅಂಬಾ ಶೆಟ್ಟಿ, ಜನರಲ್ ಮೆನೇಜರ್ ಮಹೇಶ್ ಕುಮಾರ್, ಪಾಲಿಕೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಲಿಂಗೇಗೌಡ, ಕದ್ರಿ ಠಾಣೆ ವೃತ್ತ ನಿರೀಕ್ಷಕ ಗೋಪಾಲಕೃಷ್ಣ ಭಟ್ ಅಭಿಪ್ರಾಯ ಹಂಚಿಕೊಂಡರು.

ವೆನ್ಲಾಕ್/ಲೇಡಿಗೋಶನ್ ಅಭಿವೃದ್ಧಿ: ಸ್ಮಾರ್ಟ್ ಸಿಟಿ ಯೋಜನೆಯಡಿ 45 ಕೋಟಿ ರೂ. ವೆಚ್ಚದಲ್ಲಿ ವೆನ್ಲಾಕ್ ಆಸ್ಪತ್ರೆ ಹಾಗೂ 5 ಕೋಟಿ ರೂ.ವೆಚ್ಚದಲ್ಲಿ ಲೇಡಿಗೋಶನ್ ಆಸ್ಪತ್ರೆ ಅಭಿವೃದ್ಧಿಗೊಳ್ಳಲಿದೆ ಎಂದು ಮುಹಮ್ಮದ್ ನಝೀರ್ ಹೇಳಿದರು. ವೆನ್ಲಾಕ್ ಆಸ್ಪತ್ರೆಯಲ್ಲಿ 30 ಬೆಡ್‌ಗಳ ಐಸಿಯು, 100 ಶಸ್ತ್ರಕ್ರಿಯೆ ಬಳಿಕದ ಹಾಸಿಗೆಗಳು ಹಾಗೂ ಇತರ ಮೂಲ ಸೌಕರ್ಯಗಳನ್ನು ಪ್ರಸ್ತಾಪಿಸಲಾಗಿದೆ. ವೆನ್ಲಾಕ್‌ನ ಹಳೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸಂಪರ್ಕ ವ್ಯವಸ್ಥೆ ಸಹಿತ ವಿವಿಧ ಕೆಲಸಗಳು ನಡೆಯಲಿವೆ. ವೆನ್ಲಾಕಿನ ಹಳೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸಂಪರ್ಕ ವ್ಯವಸ್ಥೆ, ಮಿಲಾಗ್ರಿಸ್‌ನಿಂದ ಮಸೀದಿಗೆ ಹೋಗುವ ರಸ್ತೆಯನ್ನು ಅಗಲ ಮಾಡಿ, ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ ವೆನ್ಲಾಕ್‌ನ ಮಕ್ಕಳ ಆಸ್ಪತ್ರೆಯಿಂದ ಬರುವ ರಸ್ತೆಯನ್ನು ಮುಚ್ಚಲು ಉದ್ದೇಶಿಸಲಾಗಿದೆ. ಲೇಡಿಗೋಶನ್ ನೂತನ ಕಟ್ಟಡದಲ್ಲಿ ಹೆಚ್ಚುವರಿ ಮಹಡಿ ನಿರ್ಮಿಸಲಾಗುವುದು ಎಂದರು.

ಮಲ್ಟಿ ಲೆವೆಲ್ ಕಾರು ಪಾರ್ಕಿಂಗ್ ಒಪ್ಪಂದ ಶೀಘ್ರ
ಹಂಪನಕಟ್ಟ ಜಂಕ್ಷನ್‌ನಲ್ಲಿ ಮಲ್ಟಿ ಲೆವೆಲ್ ಕಾರು ಪಾರ್ಕಿಂಗ್ ನಿರ್ಮಾಣ ಸಂಬಂಧ ಯೋಜನೆ ಅನುಷ್ಠಾನಗೊಳ್ಳುವ ಪ್ರದೇಶದಲ್ಲಿರುವ 5 ಕಟ್ಟಡಗಳ 22 ಆಸ್ತಿಗಳ ಮಾಲೀಕರ ಜತೆ 10 ದಿನಗಳೊಳಗೆ ಪಾಲಿಕೆ ಸಹಿ ಹಾಕಿಕೊಳ್ಳಲಿದೆ. 95 ಕೋಟಿ ರೂ.ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ. ಅಲ್ಲಿನ ಕಟ್ಟಡಗಳಿಗೆ ಸಂಬಂಧಿಸಿ 200 ಕಾರುಗಳು ಹಾಗೂ ಇತರ 200 ಕಾರುಗಳಿಗೆ ತಂಗಲು ಈ ಕಾರು ಪಾರ್ಕಿಂಗ್‌ನಲ್ಲಿ ಅವಕಾಶವಾಗಲಿದೆ. 200 ದ್ವಿಚಕ್ರ ವಾಹನಗಳು ತಂಗಲು ಅವಕಾಶವಿದೆ ಎಂದರು.

ಕಮಾಂಡ್ ಸೆಂಟರ್, ಕ್ಲಾಕ್ ಟವರ್ ಸಿದ್ಧ
ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರು ನಗರದಲ್ಲಿ ನಿರ್ಮಿಸಲು ಉದ್ದೇಶಿಸಿದ 20 ಸ್ಮಾರ್ಟ್ ಬಸ್ ತಂಗುದಾಣಗಳಲ್ಲಿ 17 ತಂಗುದಾಣಗಳ ಕಾಮಗಾರಿ ಭೌತಿಕವಾಗಿ ಪೂರ್ಣಗೊಂಡಿದೆ ಎಂದು ಮಹಮ್ಮದ್ ನಜೀರ್ ಹೇಳಿದರು. ಎ ಮಾದರಿಯಡಿ 21 ಲಕ್ಷ ರೂ. ವೆಚ್ಚದಲ್ಲಿ ಇ- ಶೌಚಗೃಹದೊಂದಿಗೆ, ಬಿ ಮಾದರಿಯಡಿ 15 ಲಕ್ಷ ರೂ. ವೆಚ್ಚ ಹಾಗೂ ಸಿ ಮಾದರಿಯಡಿ 12 ಲಕ್ಷ ರೂ. ವೆಚ್ಚದಲ್ಲಿ ಬಸ್ ತಂಗುದಾಣಗಳು ನಿರ್ಮಾಣವಾಗಲಿವೆ ಎಂದರು. ನಗರದ ಮಿನಿವಿಧಾನ ಸೌಧದ ಎದುರಿನಿಂದ ಗಾಂಧಿ ಪಾರ್ಕ್‌ಗೆ 10.5 ಅಡಿ ಅಗಲದ ಅಂಡರ್‌ಪಾಸನ್ನು 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಈ ಯೋಜನೆಯಡಿ ಪಾರ್ಕ್ ಕೂಡ ಅಭಿವೃದ್ಧಿಯಾಗಲಿದೆ. ಪಾಲಿಕೆ ಕಚೇರಿ ಕಟ್ಟಡದ ಮೊದಲ ಮಹಡಿಯಲ್ಲಿ ಸ್ಮಾರ್ಟ್ ಸಿಟಿಯ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಕಾಮಗಾರಿ ಪೂರ್ಣಗೊಂಡಿದೆ. ಪರಿಸರ ಸೂಚ್ಯಂಕಗಳ ನೇರಪ್ರಸಾರಕ್ಕೆ ಅವಕಾಶವಿದೆ ಎಂದರು.

Leave a Reply

Your email address will not be published. Required fields are marked *