ಪಂಪ್‌ವೆಲ್ ಫ್ಲೈಓವರ್ ಈ ವರ್ಷ ಡೌಟ್

>

ವಿಜಯವಾಣಿ ವಿಶೇಷ, ಮಂಗಳೂರು
ಪ್ರತಿ ಬಾರಿ ಡೆಡ್‌ಲೈನ್‌ಗಳನ್ನು ದಾಟುತ್ತಾ ಬಂದಿರುವ ಇನ್ನೂ ‘ಪ್ರಗತಿ’ಯಲ್ಲಿರುವ ಪಂಪ್‌ವೆಲ್ ಹಾಗೂ ತೊಕ್ಕೊಟ್ಟು ಫ್ಲೈಓವರ್‌ಗಳು ಸದ್ಯಕ್ಕಂತೂ ಪೂರ್ಣಗೊಳ್ಳುವ ಸಾಧ್ಯತೆ ಇಲ್ಲ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೇ ನಿಯೋಜನೆ ಮಾಡಿರುವ ತಾಂತ್ರಿಕ ಕನ್ಸಲ್ಟೆಂಟ್ ಇಂಜಿನಿಯರ್‌ಗಳ ಪ್ರಕಾರ ಈ ವರ್ಷದ ಡಿಸೆಂಬರ್‌ಗೂ ಪಂಪ್‌ವೆಲ್ ಕಾಮಗಾರಿ ಮುಗಿಯುವುದು ಅಸಾಧ್ಯ. ತೊಕ್ಕೊಟ್ಟು ಫ್ಲೈಓವರ್ ಮೇ 31ಕ್ಕೆ ಪೂರ್ಣಗೊಳ್ಳುವುದಾಗಿ ಗುತ್ತಿಗೆದಾರರು ಹೇಳಿದರೂ ಅದನ್ನು ಅಧಿಕಾರಿಗಳು ನಂಬುವ ಸ್ಥಿತಿಯಲ್ಲಿಲ್ಲ.
ಕಳೆದ ಫೆಬ್ರವರಿ 28ರಂದು ಎಲ್ಲ ಹೆದ್ದಾರಿ ಅಧಿಕಾರಿಗಳು, ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರ ಕಾರ್ಯದರ್ಶಿ ವೈಭವ್ ಡಾಂಗೆ ಜತೆಗೆ ಸಭೆ ನಡೆಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಏಪ್ರಿಲ್ 30ಕ್ಕೆ ತೊಕ್ಕೊಟ್ಟು ಹಾಗೂ ಮೇ 31ಕ್ಕೆ ಪಂಪ್‌ವೆಲ್ ಫ್ಲೈಓವರ್‌ಗಳು ಪೂರ್ಣಗೊಳ್ಳಬೇಕು ಎಂದು ಹೊಸದಾಗಿ ಡೆಡ್‌ಲೈನ್ ವಿಧಿಸಿದ್ದರು.
ಗುತ್ತಿಗೆದಾರ ನವಯುಗ ಟೋಲ್‌ವೇಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಕೂಡ ಇದಕ್ಕೆ ಸಾಕ್ಷಿಯಾಗಿದ್ದರು. ಹಣವಿಲ್ಲದೆ ಕಂಗೆಟ್ಟಿದ್ದ ಕಂಪನಿಗೆ ಆಕ್ಸಿಸ್ ಬ್ಯಾಂಕ್ 55 ಕೋಟಿ ರೂಪಾಯಿ ಸಾಲ ನೀಡುವುದಾಗಿ ಸಾಲದ ಮಂಜೂರಾತಿ ಪತ್ರವನ್ನೂ ತೋರಿಸಲಾಗಿತ್ತು.
ಆದರೆ ಇದು ನಡೆದು ಎರಡೂವರೆ ತಿಂಗಳೇ ಕಳೆದರೂ ಕಾಮಗಾರಿಯಲ್ಲಿ ಚುರುಕು ಕಂಡುಬಂದಿಲ್ಲ. ಪ್ರಾರಂಭದ ಒಂದು ವಾರ ಒಂದಷ್ಟು ಜೆಸಿಬಿಗಳು ಮಣ್ಣಿನ ಕೆಲಸ ಮಾಡಿದ್ದು ಬಿಟ್ಟರೆ ಬೇರೇನೂ ಆಗಿಲ್ಲ. ಪಂಪ್‌ವೆಲ್ ಫ್ಲೈಓವರ್ ರಚನೆಯ ಕೆಲಸ ಪೂರ್ಣವಾಗಿದೆ. ಆದರೆ ಅದರ ಇಳಿಜಾರು ಹಾಗೂ ಕೂಡು ರಸ್ತೆಗಳ ಕೆಲಸವಾಗಿಲ್ಲ.

ಬಿಡುಗಡೆಯಾಗದ ಸಾಲ?:  ಆಕ್ಸಿಸ್ ಬ್ಯಾಂಕ್‌ನಿಂದ ನವಯುಗ ಕಂಪನಿಗೆ 55 ಕೋಟಿ ರೂ. ನೀಡುವುದಾಗಿ ಹೇಳಿದ್ದರೂ, ಲಭ್ಯ ಮಾಹಿತಿ ಪ್ರಕಾರ ಕೇವಲ 12 ಕೋಟಿ ರೂ. ಬಿಡುಗಡೆಯಾಗಿದೆ. ಹಾಗಾಗಿ ಕೆಲಸದಲ್ಲಿ ಚುರುಕು ಕಂಡುಬಂದಿಲ್ಲ ಎನ್ನುತ್ತಾರೆ ಅಧಿಕಾರಿಗಳು. ಪ್ರಾರಂಭದಲ್ಲಿ 55 ಕೋಟಿ ರೂ. ಏಕಗಂಟಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿತ್ತು, ಆದರೆ ಇದನ್ನು ಕಂತುಗಳಲ್ಲಿ ಬಿಡುಗಡೆಗೊಳಿಸುವುದಾಗಿ ಬ್ಯಾಂಕ್ ಷರತ್ತು ಹಾಕಿದ್ದರಿಂದ ಕೆಲಸ ನಿಗದಿತ ವೇಗ ಪಡೆದಿಲ್ಲ ಎನ್ನಲಾಗಿದೆ.

ಸದ್ಯ ಏನಾಗುತ್ತಿದೆ ?:  ಸದ್ಯ ಬೆರಳೆಣಿಕೆ ಮಂದಿ ಕಾರ್ಮಿಕರು, ಒಂದೆರಡು ಜೆಸಿಬಿ ಹಾಗೂ ಟಿಪ್ಪರ್‌ಗಳು ಮಹಾವೀರ ವೃತ್ತದ ಕರ್ಣಾಟಕ ಬ್ಯಾಂಕ್ ಬದಿಯಲ್ಲಿ ಕೆಲಸ ಮಾಡುತ್ತಿರುವುದು ಕಂಡು ಬಂದಿದೆ. ಎತ್ತರದಲ್ಲಿರುವ ಫ್ಲೈಓವರ್‌ನ್ನು ಸಂಪರ್ಕಿಸುವ ಕೂಡು ರಸ್ತೆಗೆ ಇನ್ನೂ ಸಹಸ್ರಾರು ಲೋಡ್‌ಗಟ್ಟಲೆ ಮಣ್ಣು ಹಾಕಿ ಇಕ್ಕೆಲಗಳಲ್ಲಿ ರಿಟೇನಿಂಗ್ ವಾಲ್ ನಿರ್ಮಾಣವಾಗಬೇಕಿದೆ. ಎರಡು ಬಾಕ್ಸ್ ಕಲ್ವರ್ಟ್ ರಚನೆಯ ಕೆಲಸವೂ ಆಮೆಗತಿಯಲ್ಲಿ ಸಾಗುತ್ತಿದೆ.
ತೊಕ್ಕೊಟ್ಟಿನಲ್ಲಿ ರಿಟೇನಿಂಗ್ ವಾಲ್, ಮಣ್ಣು ಹಾಕಿ ರಸ್ತೆ ನಿರ್ಮಾಣ ಪೂರ್ಣಗೊಂಡಿದ್ದು ಡಾಂಬರು ಹಾಕುವ ಕೆಲಸ ಇನ್ನಷ್ಟೇ ಆಗಬೇಕಿದೆ. ಅದು ಮೇ 31ರ ಒಳಗೆ ಪೂರ್ಣವಾಗುವ ಸಾಧ್ಯತೆ ಕಡಿಮೆ.

ಡೆಡ್‌ಲೈನ್ ಏನಿತ್ತು?: ಸರ್ವೀಸ್ ರಸ್ತೆ ಹಾಗೂ ಜಂಕ್ಷನ್ ಸುಧಾರಣೆಗೆ ಮಾರ್ಚ್ 15, ತೊಕ್ಕೊಟ್ಟು ಫ್ಲೈಓವರ್ ಹಾಗೂ ಉಜ್ಜೋಡಿ ಅಂಡರ್‌ಪಾಸ್ ಪೂರ್ಣ ಮಾಡಲು ಏಪ್ರಿಲ್ 10, ಪಂಪ್‌ವೆಲ್ ಮೇಲ್ಸೇತುವೆ ಮುಗಿಸಲು ಮೇ 31 ಅಂತಿಮ ದಿನ ನಿಗದಿ ಪಡಿಸಲಾಗಿತ್ತು.

ಗುತ್ತಿಗೆದಾರರಿಗೆ ಹಣ ಹೊಂದಾಣಿಕೆ ಮಾಡುವುದೇ ಸಾಧ್ಯವಾಗುತ್ತಿಲ್ಲ, ಮೇ 31ಕ್ಕೆ ಪಂಪ್‌ವೆಲ್ ಬಿಡಿ, ತೊಕ್ಕೊಟ್ಟೇ ಪೂರ್ಣವಾಗದು, ಇಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ನವಯುಗದವರು ಜೂನ್ 30ಕ್ಕೆ ತೊಕ್ಕೊಟ್ಟು ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಮಳೆಗಾಲ ಪ್ರಾರಂಭವಾದರೆ ಪಂಪ್‌ವೆಲ್ ಕಾಮಗಾರಿ ಮತ್ತಷ್ಟು ವಿಳಂಬವಾಗಬಹುದು.
– ಸ್ಯಾಮ್ಸನ್ ವಿಜಯಕುಮಾರ್, ಯೋಜನಾ ನಿರ್ದೇಶಕರು, ಎನ್‌ಎಚ್‌ಎಐ