ಹರಿಹರ: ರಾಜ್ಯ ಸರ್ಕಾರ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವ ನಿರ್ಧಾರವನ್ನು ವಿರೋಧಿಸಿ ಶನಿವಾರ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣ ತಾಲೂಕು ಘಟಕದಿಂದ ನಗರದ ಬೆಸ್ಕಾಂ ಕಚೇರಿವರೆಗೆ ಪ್ರತಿಭಟನೆ ನಡೆಸಿತು.
ಹರಿಹರದ ಬೆಸ್ಕಾಂ ಉಪವಿಭಾಗ ಕಚೇರಿ ಮುಂದೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಇಇ ರವಿಕಿರಣ್ ಅವರ ಮುಖಾಂತರ ಬೆಂಗಳೂರಿನ ಬೆಸ್ಕಾಂ ಸೂಪರಿಡೆಂಟ್ ಇಂಜಿನಿಯರ್ ಅವರಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ತಾಲೂಕು ಅಧ್ಯಕ್ಷ ಜೆ.ಪ್ರಭುಗೌಡ ಮಾತನಾಡಿ, ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ನಂಬರ್ ಜೋಡಣೆ ಮೂಲಕ ಮೀಟರ್ ಅಳವಡಿಸಿ ಶುಲ್ಕ ವಿಧಿಸುವ ಉದ್ದೇಶದಿಂದ ಸರ್ಕಾರವು ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಖಂಡನೀಯ ಎಂದು ತಿಳಿಸಿದರು.
ಬೆಳೆಗಳಿಗೆ ನ್ಯಾಯಯುತ ಬೆಲೆ ನಿಗದಿಗೊಳಿಸಿ ಕಾನೂನು ಬದ್ಧಗೊಳಿಸುವರೆಗೂ ಕೃಷಿ ಕ್ಷೇತ್ರಕ್ಕೆ ಮೂಲ ಸೌಕರ್ಯಗಳಾದ ಭೂಮಿ, ರಸ್ತೆ, ನೀರು, ವಿದ್ಯುತ್, ಬಿತ್ತನೆ ಬೀಜಗಳು, ರಸಗೊಬ್ಬರ, ಕೀಟನಾಶಕಗಳು, ಯಂತ್ರೋಪಕರಣಗಳಿಗೆ ಸಹಾಯಧನ ನೀಡ ಬೇಕಾಗಿರುವುದು ಸರ್ಕಾರದ ಜವಾಬ್ದಾರಿ ಎಂದರು.
ಕೃಷಿ ಕೊಳವೆ ಬಾವಿಗಳಿಗೆ 2023 ರಿಂದ ಟಿಸಿ, ವಿದ್ಯುತ್ ಕಂಬಗಳು, ತಂತಿಗಳು ಇತರ ಸಾಮಗ್ರಿಗಳನ್ನು ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಖರೀದಿಸಿ ವಿದ್ಯುತ್ ಸಂಪರ್ಕ ಪಡೆಯಬೇಕೆಂದು ಕಾನೂನು ಜಾರಿಗೊಳಿಸಿದೆ. ಇದನ್ನು ರದ್ದು ಮಾಡಿ ಹಿಂದಿನಂತೆ ಟಿಸಿ, ಕಂಬ, ತಂತಿ ಹಾಗೂ ಇತರ ಉಪಕರಣಗಳನ್ನು ಇಲಾಖೆಗೆ ಸರಬರಾಜು ಮಾಡಿ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಆಗ್ರಹಿಸಿದರು.
ಗೃಹಜ್ಯೋತಿ ಹೆಸರಲ್ಲಿ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಿ ವಿದ್ಯುತ್ ದರವನ್ನು ಏರಿಕೆ ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕು, ವಿದ್ಯುತ್ ಅವಘಡಗಳಿಗೆ ಸಿಲುಕಿ ಮರಣ ಹೊಂದಿರುವ ವ್ಯಕ್ತಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು. ಸೋಲಾರ್ ಸಂಪರ್ಕ ಹೊಂದುವ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವ ಉದ್ದೇಶವನ್ನು ಕೈ ಬಿಡಬೇಕು ಎಂದರು.
ರೈತ ಮುಖಂಡರಾದ ಅಂಜಿನಪ್ಪ, ಬಿ.ಮೊಹಮ್ಮದ್ ಹನೀಫ್ ಸಾಬ್, ಸುರೇಶ, ಗರಡಿ ಮನೆ ಬಸಣ್ಣ, ಟಿ.ರಾಜಣ್ಣ, ಮಾರುತಿರಾವ್, ಜಗದೀಶ, ನಿಜಗುಣ, ಗುಡ್ಡಪ್ಪ, ಎಂ.ಭರಮಗೌಡ, ಎಂ.ಬಸಪ್ಪ, ಬಸಪ್ಪರೆಡ್ಡಿ, ಬಸವನಗೌಡ, ಪರಶುರಾಮ ಇತರರಿದ್ದರು.