ಪುಲ್ವಾಮಾ ನರಮೇಧಕ್ಕೆ ಪ್ರತೀಕಾರ

ಪುಲ್ವಾಮಾ: ಜೈಷ್ ಎ ಮೊಹಮದ್ ಉಗ್ರರ ಆತ್ಮಾಹುತಿ ದಾಳಿಯ ಬಳಿಕ ‘ನನ್ನ ರಕ್ತ ಕುದಿಯುತ್ತಿದೆ’ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಪ್ರತೀಕಾರದ ಸುಳಿವು ನೀಡಿದ ಕೆಲವೇ ಗಂಟೆಗಳಲ್ಲಿ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಪುಲ್ವಾಮಾ ಸಂಚುಕೋರ ಅಬ್ದುಲ್ ರಷೀದ್ ಘಾಜಿ ಹಾಗೂ ಇತರ ಮೂವರು ಜೈಷ್ ಉಗ್ರರನ್ನು ಬೇಟೆಯಾಡಿದೆ.

ಭಾನುವಾರ ತಡರಾತ್ರಿಯಿಂದ ಸತತ 18 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಸೇನೆ, ಪಾಕಿಸ್ತಾನ ಮೂಲದ ಉಗ್ರ ಅಬ್ದುಲ್ ರಷೀದ್​ನನ್ನು ಹತ್ಯೆ ಮಾಡಿದೆ. ಇವನ ಜತೆಗೆ ಸಹಚರ ಹಿಲಾಲ್ ಅಹ್ಮದ್ ಹಾಗೂ ಇನ್ನೋರ್ವ ಜೈಷ್ ಉಗ್ರನನ್ನೂ ಹೊಡೆದುರುಳಿಸಿದೆ. ಈ ಎನ್​ಕೌಂಟರ್​ನಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಓರ್ವ ಸ್ಥಳೀಯ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಗುಪ್ತಚರ ಸಂಸ್ಥೆಗಳ ನಿಖರ ಮಾಹಿತಿ ಆಧರಿಸಿ ಭಾನುವಾರ ರಾತ್ರಿ ಪುಲ್ವಾಮಾ ಸಮೀಪದ ಪಿಂಗಲಾನ್​ನಲ್ಲಿ ಸೇನೆ ಉಗ್ರ ನಿಗ್ರಹ ಕಾರ್ಯಾಚರಣೆ ಆರಂಭಿಸಿತು. ಸ್ಥಳೀಯರು ಕಾರ್ಯಾಚರಣೆಗೆ ಪ್ರತಿರೋಧ ವ್ಯಕ್ತಪಡಿಸಿದರು. ಸುಮಾರು 12 ಗಂಟೆಗಳ ಕಾರ್ಯಾಚರಣೆ ಬಳಿಕ ರಷೀದ್ ಹಾಗೂ ಹಿಲಾಲ್ ಹತ್ಯೆ ಮಾಡಲಾಯಿತು. ನಂತರ ಮತ್ತೆ 6 ಗಂಟೆ ಎನ್​ಕೌಂಟರ್ ಮುಂದುವರಿದು, ಇನ್ನೋರ್ವ ಉಗ್ರನನ್ನು ಹತ್ಯೆಗೈಯಲಾಯಿತು.

ಐವರು ಯೋಧರು ಹುತಾತ್ಮ: ಭಾರತೀಯ ಸೇನೆಯ 55 ರಾಷ್ಟ್ರೀಯ ರೈಫಲ್​ನ ಓರ್ವ ಮೇಜರ್ ಸೇರಿ ಐವರು ಯೋಧರು ಹುತಾತ್ಮರಾಗಿದ್ದಾರೆ. ಒಬ್ಬರು ಲೆಫ್ಟಿನಂಟ್ ಕರ್ನಲ್, ಡಿಐಜಿ ಕೂಡ ಗಾಯಗೊಂಡಿದ್ದು, ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆತ್ಮಾಹುತಿ ದಾಳಿ ಹಿಂದಿನ ದಿನ ಬಚಾವಾಗಿದ್ದ!: ಫೆ.14ರ ಆತ್ಮಾಹುತಿ ದಾಳಿ ಹಿಂದಿನ ದಿನ ಪುಲ್ವಾಮಾದಲ್ಲಿ ಎನ್​ಕೌಂಟರ್ ನಡೆದಿತ್ತು. ಕೂದಲೆಳೆ ಅಂತರದಲ್ಲಿ ಅಬ್ದುಲ್ ರಷೀದ್ ಹಾಗೂ ಇನ್ನಿಬ್ಬರು ಉಗ್ರರು ತಪ್ಪಿಸಿಕೊಂಡಿದ್ದರು. ಓರ್ವ ಉಗ್ರ ಹತನಾಗಿದ್ದ. ಒಂದೊಮ್ಮೆ ರಷೀದ್ ಎನ್​ಕೌಂಟರ್ ಆಗಿದ್ದರೆ ಪುಲ್ವಾಮಾ ದಾಳಿ ತಪು್ಪವ ಸಾಧ್ಯತೆಯಿತ್ತು.

ಪುಲ್ವಾಮಾದಲ್ಲಿನ ಹೇಯಕೃತ್ಯ ಮಾತುಕತೆಗೆ ಬೆಲೆಯಿಲ್ಲ ಎನ್ನುವುದನ್ನು ಸಾಬೀತು ಮಾಡಿದೆ. ಇನ್ನು ಮಾತುಕತೆ ಅಸಾಧ್ಯ. ಭಯೋತ್ಪಾದನೆ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದು ಉಗ್ರರ ರಕ್ಷಣೆ ಮಾಡುವುದಕ್ಕೆ ಸಮ.

| ನರೇಂದ್ರ ಮೋದಿ ಪ್ರಧಾನಿ

ಉಗ್ರ ಮಸೂದ್ ಅಝುರ್ ಆಪ್ತ!

ಜೈಷ್-ಎ-ಮೊಹಮದ್ ಉಗ್ರ ಸಂಘಟನೆ ಸ್ಥಾಪಕ ಮೌಲಾನಾ ಮಸೂದ್ ಅಝುರ್​ನ ಸೂಚನೆ ಮೇರೆಗೆ ಕಳೆದ ಡಿಸೆಂಬರ್​ನಲ್ಲಿ ಪುಲ್ವಾಮಾ ದಾಳಿ ಮಾಸ್ಟರ್​ವೆುೖಂಡ್ ಅಬ್ದುಲ್ ರಷೀದ್ ಘಾಜಿ ಕಾಶ್ಮೀರಕ್ಕೆ ಬಂದಿದ್ದ. ಅಝುರ್ ಅಳಿಯನ ಎನ್​ಕೌಂಟರ್​ನಿಂದ ಜೈಷ್ ಉಗ್ರರು ಹತಾಶರಾಗಿದ್ದರು. ಹಾಗೆಯೇ ಕಣಿವೆಯಲ್ಲಿ ಉಗ್ರ ಸಂಘಟನೆಗೆ ನಾಯಕರಿಲ್ಲದಂತಾಗಿತ್ತು. ಈ ಕಾರಣಕ್ಕೆ ಸ್ಪೋಟದ ಸಂಚಿನೊಂದಿಗೆ ಈತ ಬಂದಿದ್ದ. ಈತನೊಡನೆ ಇನ್ನೂ ಇಬ್ಬರು ಉಗ್ರರು ಬಂದಿದ್ದಾರೆ ಎನ್ನಲಾಗಿದೆ. ಅಝುರ್​ನ ಆಪ್ತ ವಲಯದಲ್ಲಿದ್ದ ಈತನಿಗೆ, ಈ ದಾಳಿಯ ಜವಾಬ್ದಾರಿ ನೀಡಲಾಗಿತ್ತು. ಈತ ಐಇಡಿ ಬಾಂಬ್ ತಜ್ಞನಾಗಿದ್ದು, ತಾಲಿಬಾನ್ ಆತ್ಮಾಹುತಿ ದಾಳಿ ತಂಡದಿಂದ ತರಬೇತಿ ಪಡೆದಿದ್ದಾನೆ. ಈತ ಮೂಲತಃ ಪಾಕಿಸ್ತಾನದವ.

ಬೆದರಿ ಮನೆ ಸೇರಿದ ಉಗ್ರರು

ಪುಲ್ವಾಮಾ ದಾಳಿ ಬಳಿಕ ಸೇನೆ ಕಾರ್ಯಾಚರಣೆ ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ಪುಲ್ವಾಮಾ ಸುತ್ತಲಿನ ಉಗ್ರರು ಬೆದರಿದ್ದು, ಸೇನೆಯಿಂದ ತಪ್ಪಿಸಿಕೊಳ್ಳಲು ಸ್ಥಳೀಯರ ಮನೆಗಳಲ್ಲಿ ಅಡಗಿದ್ದಾರೆ ಎನ್ನಲಾಗಿದೆ.

ಮೋದಿಗೆ ಮಾಹಿತಿ ನೀಡಿದ ದೋವಲ್

ಸೇನೆ ಕಾರ್ಯಾಚರಣೆ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪ್ರಧಾನಿ ನರೇಂದ್ರ ಮೋದಿಗೆ ವಿವರಿಸಿದ್ದಾರೆ. ಪ್ರಧಾನಿ ಹಾಗೂ ಗೃಹ ಸಚಿವರು ಉಗ್ರ ನಿಗ್ರಹ ಕಾರ್ಯಾಚರಣೆ ತೀವ್ರಗೊಳಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಕಾರ್ಯಾಚರಣೆ ಹೇಗಿತ್ತು?

  • ಗುಪ್ತಚರ ಸಂಸ್ಥೆ ಮಾಹಿತಿ ಆಧರಿಸಿ ಪುಲ್ವಾಮಾದ ಫಿಂಗಲಾನ್ ಪ್ರದೇಶ ಸುತ್ತುವರಿದ 55 ರಾಷ್ಟ್ರೀಯ ರೈಫಲ್ಸ್ ಪಡೆ
  • ಅಡಗುದಾಣ ಸುತ್ತುವರಿಯುತ್ತಿದ್ದಂತೆ ಸೈನಿಕರ ಮೇಲೆ ದಾಳಿ ಆರಂಭಿಸಿದ ಉಗ್ರರು
  • ಸ್ಥಳೀಯರಿಂದಲೂ ಕಾರ್ಯಾಚರಣೆಗೆ ಪ್ರತಿರೋಧ, ಕಲ್ಲು ಎಸೆತ
  • ಸತತ 12 ಗಂಟೆಗಳ ಬಳಿಕ ಸೇನೆಯಿಂದ ಆತ್ಮಾಹುತಿ ದಾಳಿಯ ಮಾಸ್ಟರ್​ವೆುೖಂಡ್ ಅಬ್ದುಲ್ ರಷೀದ್ ಬೇಟೆ
  • ಸುಮಾರು 18 ಗಂಟೆಗಳ ಕಾರ್ಯಾಚರಣೆ ಬಳಿಕ ಒಟ್ಟು ಮೂವರು ಉಗ್ರರ ಸದೆಬಡಿದ ಸೇನೆ, ಐವರು ಯೋಧರು ಹುತಾತ್ಮ