ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ರಾಜಕೀಯದಿಂದಾಚೆಗೆ ನಾವೆಲ್ಲ ಒಗ್ಗೂಡಬೇಕಿದೆ: ಅಮಿತ್​ ಷಾ ಮನವಿ

ನವದೆಹಲಿ: ಸಿಆರ್​ಪಿಎಫ್​ ಯೋಧರ ಮೇಲಿನ ಉಗ್ರರ ದಾಳಿಯನ್ನು ಖಂಡಿಸಿ, ಸಂತಾಪ ಸೂಚಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಅವರು ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ರಾಜಕೀಯದಿಂದಾಚೆಗೆ ನಾವೆಲ್ಲ ಒಗ್ಗೂಡಬೇಕಿದೆ ಎಂದು ಎಲ್ಲ ರಾಜಕೀಯ ಪಕ್ಷಗಳಿಗೆ ಟ್ವೀಟ್​ ಮೂಲಕ ಮನವಿ ಮಾಡಿದ್ದಾರೆ.

ಈ ಸಮಯದಲ್ಲಿ ಭಾರತವನ್ನು ಬಲಿಷ್ಠ ಹಾಗೂ ಸುರಕ್ಷಿತವಾನ್ನಾಗಿಸಲು ನಾವು ನಮ್ಮ ನಿರ್ಧಾರಗಳನ್ನು ಬಲಗೊಳಿಸಬೇಕಿದೆ. ರಾಷ್ಟ್ರೀಯ ಭದ್ರತಾ ವಿಚಾರ ಅಂತಾ ಬಂದಾಗ ನಾವೆಲ್ಲ ಒಂದೇ ಎಂದು ತೋರಿಸಬೇಕಾಗಿದೆ. ಭಾರತಕ್ಕಿಂತ ದೊಡ್ಡದಾದ ವಿಚಾರವೇನಿಲ್ಲ ಎಂದು ಎಲ್ಲ ರಾಜಕೀಯ ಪಕ್ಷಗಳಿಗೆ ಸರಣಿ ಟ್ವೀಟ್​ ಮೂಲಕ ಮನವಿ ಮಾಡಿದ್ದಾರೆ.

ಗುರುವಾರ ಪುಲ್ವಾಮದಲ್ಲಿ ಯೋಧರ ಮೇಲೆ ನಡೆದ ಭೀಕರ ದಾಳಿಯಿಂದಾಗಿ ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿದೆ. ಇಂತಹ ದ್ವೇಷ ಮತ್ತು ಹಿಂಸಾಚಾರವನ್ನು ಬೆಂಬಲಿಸುವ ಅನಾಗರಿಕ ಮನಸ್ಥಿತಿಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಶ್ರಮ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಅವರು ಖಚಿತಪಡಿಸಿದ್ದಾರೆ. ದೇಶ ಸೇವೆಗಾಗಿ ಪ್ರಾಣ ಅರ್ಪಿಸಿದ ಹುತಾತ್ಮ ಯೋಧರು ಹಾಗೂ ಅವರ ಕುಟುಂಬದ ಬೆಂಬಲಕ್ಕೆ 130 ಕೋಟಿ ಭಾರತೀಯರು ಒಕ್ಕೊರಲಾಗಿ ನಿಂತಿದೆ. ಮುಂದಿನ ಪೀಳಿಗೆ ನಿಮ್ಮ ಶೌರ್ಯವನ್ನು ನೆನಪು ಮಾಡಿಕೊಳ್ಳುತ್ತದೆ. ಘಟನೆಯಲ್ಲಿ ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂದು ಷಾ ಹಾರೈಸಿದ್ದಾರೆ. (ಏಜೆನ್ಸೀಸ್​)