ಸೈತಾನ್ ಬೇಟೆಗೆ ಸೈಲಂಟ್ ಪ್ಲ್ಯಾನ್

ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ನ 40 ಯೋಧರ ಜೀವ ಬಲಿಪಡೆದ ಪಾಕ್ ಬೆಂಬಲಿತ ಉಗ್ರರ ದಾಳಿಗೆ ಇಡೀ ಭಾರತ ಆಕ್ರೋಶದಿಂದ ಕುದಿಯುತ್ತಿದೆ. ರಣಹೇಡಿ ಪಾಕಿಸ್ತಾನದ ವಿರುದ್ಧ ಪ್ರತೀಕಾರವಾಗಲೇಬೇಕೆಂಬ ಆಗ್ರಹ ದೇಶಾದ್ಯಂತ ಪ್ರತಿಧ್ವನಿಸುತ್ತಿದೆ. ದೇಶ ಸರ್ಜಿಕಲ್ ಭಾಗ-2ರ ನಿರೀಕ್ಷೆ ಯಲ್ಲಿರುವಾಗಲೇ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಸೇನೆಯ ಮುಖ್ಯಸ್ಥರಾದಿಯಾಗಿ ಎಲ್ಲರೂ ಪಾಕ್​ಗೆ ತಕ್ಕಪಾಠ ಕಲಿಸುವ ಎಚ್ಚರಿಕೆ ರವಾನಿಸಿದ್ದಾರಾದರೂ ಆ ಕ್ರಮ ಯಾವುದೆಂಬ ಕುತೂಹಲ ಮಾತ್ರ ಕರಗುತ್ತಿಲ್ಲ. ಪಾಕಿಸ್ತಾನಕ್ಕೆ ನೀಡಿದ್ದ ಪರಮಾಪ್ತ ರಾಷ್ಟ್ರದ ಸ್ಥಾನ ಹಿಂಪಡೆಯುವ ಜತೆಗೆ, ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿಯನ್ನು ದೇಶಕ್ಕೆ ವಾಪಸ್ ಕರೆಸಿಕೊಳ್ಳುವ ಮೂಲಕ ಮೋದಿ ಸರ್ಕಾರ ರಾಜತಾಂತ್ರಿಕ ಪಟ್ಟನ್ನೂ ಪ್ರದರ್ಶಿಸಿದೆ. ಹೀಗಾಗಿ ಕೇಂದ್ರದ ನಡೆ ಏನಿರಬಹುದು? ಪಾಕ್ ಸೈತಾನರ ಬೇಟೆಗೆ ಹೆಣೆದಿರುವ ಸೈಲಂಟ್ ಪ್ಲಾ್ಯನ್ ಯಾವುದಿರಬಹುದು? ಅದಕ್ಕೆ ಇರುವ ಸವಾಲುಗಳೇನು? ಇವೇ ಮೊದಲಾದ ಪ್ರಶ್ನೆಗಳ ಬೆನ್ನತ್ತಿ, ರಾಜತಾಂತ್ರಿಕ ತಜ್ಞರ ಅನಿಸಿಕೆ, ಅಭಿಪ್ರಾಯ ಕ್ರೋಡೀಕರಿಸಿ ಈ ಮಾಹಿತಿ ಸಿದ್ಧಪಡಿಸಲಾಗಿದೆ.

ಯುದ್ಧ ವಾತಾವರಣ ನಿರ್ವಣವಾದರೆ ಆರ್ಥಿಕವಾಗಿಯೂ ಹೊಡೆತ ಬೀಳುತ್ತದೆ. ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಏಕಾಂಗಿಯಾಗಿಸುವ ಯತ್ನವನ್ನು ಭಾರತ ತೀವ್ರಗೊಳಿಸಬೇಕು. ಆ ದೇಶಕ್ಕೆ ಬರುವ ಹಣದ ಮಾರ್ಗ ಬಂದ್ ಆದಲ್ಲಿ ಅದರ ಕೈಕಟ್ಟಿದಂತಾಗುತ್ತದೆ. ಸರ್ಕಾರ ಸೂಕ್ತ ಕಾಲದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ಅದನ್ನು ಬಹಿರಂಗಪಡಿಸಬೇಕೆಂದೇನೂ ಇಲ್ಲ.

| ಎನ್.ಪಾರ್ಥಸಾರಥಿ, ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕ

ಭಾರತದ ಬತ್ತಳಿಕೆಯಲ್ಲಿರುವ ಅಸ್ತ್ರ

 1. ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಪರಿಸ್ಥಿತಿಗೆ ತಕ್ಕಂತೆ ಕ್ರಮ ಕೈಗೊಳ್ಳುವ ಪೂರ್ಣ ಹೊಣೆಯನ್ನು ಸೇನೆಗೆ ನೀಡುವುದು. ಪ್ರಧಾನಿ ನರೇಂದ್ರ ಮೋದಿ ಶುಕ್ರವಾರವೇ ಸೇನೆಗೆ ಈ ಅಧಿಕಾರ ನೀಡಿದ್ದಾರೆ.
 2. ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಏಕಾಂಗಿಯನ್ನಾಗಿಸುವುದು, ಪುಲ್ವಾಮಾ ಪ್ರಕರಣದಲ್ಲಿ ವಿಶ್ವರಾಷ್ಟ್ರಗಳು ಭಾರತದ ಬೆಂಬಲಕ್ಕೆ ಬಂದಿರುವುದರಿಂದ ಭಾರತಕ್ಕೆ ಈಗಾಗಲೇ ಆರಂಭಿಕ ಯಶ ಸಿಕ್ಕಿದೆ.
 3. ಪಾಕಿಸ್ತಾನಕ್ಕೆ ಆರ್ಥಿಕ ಹೊಡೆತ ನೀಡುವುದು, ಈಗಾಗಲೇ ಪರಮಾಪ್ತ ಸ್ಥಾನ ಹಿಂಪಡೆದಿರುವುದರಿಂದ ಪಾಕ್ ಜತೆಗಿನ ವ್ಯಾಪಾರ ಸಂಬಂಧದ ಮೇಲೆ ಪರಿಣಾಮ ಆಗಲಿದೆ.
 4. ಅಮೆರಿಕದಿಂದ ಪಾಕಿಸ್ತಾನಕ್ಕೆ ಆರ್ಥಿಕ ನೆರವು ಸ್ಥಗಿತವಾಗುವಂತೆ ನೋಡಿಕೊಳ್ಳುವುದು.
 5. ಗಡಿ ಭಾಗದಲ್ಲಿ ಸೇನಾ ತುಕಡಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುವ ಮೂಲಕ ಕಾರ್ಯಾಚರಣೆಯನ್ನು ತೀವ್ರಗೊಳಿಸುವುದು.
 6. ಕಾಶ್ಮೀರದಲ್ಲಿ ಅಡಗಿರುವ ಉಗ್ರರ ಹೆಡೆಮುರಿ ಕಟ್ಟಿ ಅವರಿಗೆ ಆಶ್ರಯ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು.

ಕಾರ್ಯಾಚರಣೆ ಸವಾಲುಗಳು

 • ಮುಂಬೈ ದಾಳಿ ತನಿಖೆಗೆ ಸಾಕ್ಷ್ಯ ಕೊರತೆ ನೆಪ ಹೇಳುತ್ತಿರುವ ಪಾಕಿಸ್ತಾನವನ್ನು ಎದುರಿಸಲು ಭಾರತ ಮೊದಲು ಪುಲ್ವಾಮಾ ದಾಳಿ ಹಿಂದಿನ ಪಾಕ್ ನಂಟನ್ನು ಸಾಬೀತುಪಡಿಸುವ ಸಾಕ್ಷ್ಯ ಸಂಗ್ರಹಿಸಬೇಕು. ಆ ಬಳಿಕವಷ್ಟೇ ಉರಿ ಮಾದರಿಯಲ್ಲಿ ಸರ್ಜಿಕಲ್ ದಾಳಿ ನಡೆಸಿ ಸಾಕ್ಷ್ಯಗಳನ್ನು ವಿಶ್ವರಾಷ್ಟ್ರಗಳ ಮುಂದಿಡಬಹುದು.
 • ಪಾಕ್ ಮೇಲೆ ಯುದ್ಧ ಸಾರಿ ಉಗ್ರ ನೆಲೆಗಳನ್ನು ಧ್ವಂಸ ಗೊಳಿಸುವ ಸಾಮರ್ಥ್ಯ ಭಾರತಕ್ಕಿದೆ.ಆದರೆ ಪಾಕಿಸ್ತಾನವೂ ಅಣ್ವಸ್ತ್ರ ರಾಷ್ಟ್ರವಾಗಿರುವುದರಿಂದ ಅದು ಅಷ್ಟು ಸುಲಭವಲ್ಲ.

ಶುಕ್ರವಾರ ಏನೇನಾಯ್ತು?

 • ಪ್ರತೀಕಾರ ಕ್ರಮದ ಸ್ಥಳ, ಸಮಯ, ಮಾದರಿ ನಿರ್ಧರಿಸಲು ಸೇನೆಗೆ ಪೂರ್ಣ ಸ್ವಾತಂತ್ರ್ಯ ನೀಡಿದ ಕೇಂದ್ರ, ಪಾಕ್​ಗೆ ನೀಡಿದ್ದ ಪರಮಾಪ್ತ ದೇಶ ಮಾನ್ಯತೆ ರದ್ದು, ಆ ರಾಷ್ಟ್ರದ ಸರಕುಗಳ ಮೇಲಿನ ಸುಂಕ ಹೆಚ್ಚಳ
 • ಭಾರತಕ್ಕೆ ನೈತಿಕ ಸ್ಥೈರ್ಯ ತುಂಬಿದ ಇಸ್ರೇಲ್, ಉಗ್ರರಿಗೆ ನೆರವು ನಿಲ್ಲಿಸುವಂತೆ ಪಾಕ್​ಗೆ ಅಮೆರಿಕ ಎಚ್ಚರಿಕೆ, ದಾಳಿಯಲ್ಲಿ ನಮ್ಮ ಕೈವಾಡವಿಲ್ಲ. ತನಿಖೆ ನಡೆಸದೆ ಆಪಾದನೆ ಸರಿಯಲ್ಲ ಎಂದ ಪಾಕ್
 • ಪುಲ್ವಾಮಾ ದಾಳಿಗೆ 6 ತಿಂಗಳ ಮೊದಲೇ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿತ್ತು ಸಂಚು, ಪುಲ್ವಾಮಾ ದಾಳಿಕೋರ ಅಹ್ಮದ್ ದಾರ್ ಘಟನೆ ನಡೆದ 10 ಕಿ.ಮೀ ದೂರದಲ್ಲಿ ವಾಸವಿದ್ದ ಎಂಬುದು ದೃಢ

ಪ್ರತೀಕಾರ ತೀರಿಸಿಯೇ ಸಿದ್ಧ

ಭಾರತವನ್ನು ಅಸ್ಥಿರಗೊಳಿಸಲು ಪಾಕ್ ಯತ್ನಿಸುತ್ತಿದೆ. ಆದರೆ ಈ ಕನಸು ಎಂದಿಗೂ ನನಸಾಗಲ್ಲ. ಪುಲ್ವಾಮಾ ದಾಳಿಯಿಂದ ದೇಶದ ಜನರು ಆಕ್ರೋಶಗೊಂಡಿದ್ದಾರೆ. ಎಲ್ಲರ ರಕ್ತ ಕುದಿಯುತ್ತಿದೆ. ನಾವು ಹುತಾತ್ಮ ವೀರಯೋಧರ ಮರಣಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಈ ವಿಚಾರದಲ್ಲಿ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ನಮ್ಮ ಸೇನೆಯ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ.

| ನರೇಂದ್ರ ಮೋದಿ, ಪ್ರಧಾನಿ