ಮೋದಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಪುಲ್ವಾಮ ದಾಳಿಯ ಹುತಾತ್ಮ ಯೋಧರ ಕುಟುಂಬಕ್ಕೂ ಆಹ್ವಾನ

ನವದೆಹಲಿ: ಕಳೆದ ಫೆ.14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಜೈಷ್​ ಎ ಮಹಮ್ಮದ್​ ಉಗ್ರ ಸಂಘಟನೆ ನಡೆಸಿದ ಬಾಂಬ್​ ದಾಳಿಯಲ್ಲಿ ಹುತಾತ್ಮರಾದ ಸಿಆರ್​ಪಿಎಫ್​ ಯೋಧರ ಕುಟುಂಬಕ್ಕೂ ಪ್ರಧಾನಿ ನರೇಂದ್ರ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದ್ದು, ಈಗಾಗಲೇ ಕೆಲ ಕುಟುಂಬದ ಸದಸ್ಯರು ರಾಷ್ಟ್ರ ರಾಜಧಾನಿಗೆ ಬಂದಿಳಿದಿದ್ದಾರೆ.

ಪುಲ್ವಾಮ ಬಾಂಬ್​ ದಾಳಿಯಲ್ಲಿ ಮೃತಪಟ್ಟ ಯೋಧರಲ್ಲಿ ಒಬ್ಬರಾದ ಸುದೀಪ್​ ಬಿಸ್ವಾಸ್ ಅವರ ತಾಯಿ ಮಾತನಾಡಿ, ಪ್ರಧಾನಿ ಪದಗ್ರಹಣ ಕಾರ್ಯಕ್ರಮಕ್ಕೆ ಬರುವಂತೆ ನಮಗೆ ಆಹ್ವಾನ ನೀಡಲಾಯಿತು. ದುಃಖದ ನಡುವೆಯೂ ನಾವು ಇಲ್ಲಿಗೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ.​

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸೆಗೆ ಸಂಬಂಧಿತ ಘಟನೆಯಲ್ಲಿ ಮೃತರಾಗಿದ್ದ ಬಿಜೆಪಿ ಕಾರ್ಯಕರ್ತರ ಕುಟುಂಬಕ್ಕೂ ಆಹ್ವಾನ ನೀಡಲಾಗಿದ್ದು, ಅವರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದ್ದಾರೆ. ಇವರಿಗೆ ವಿಶೇಷ ಆಹ್ವಾನಿತರ ಅಡಿಯಲ್ಲಿ ಕಾರ್ಯಕ್ರಮಕ್ಕೆ ಕರೆತರಲಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಮತ್ತೊಮ್ಮೆ ಕೇಂದ್ರ ಗದ್ದುಗೆ ಏರಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 7 ಗಂಟೆಗೆ ತಮ್ಮ ಸಚಿವ ಸಂಪುಟದ ಹೊಸ ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.

ಫೆ.14 ರಂದು ನಡೆದ ಉಗ್ರರ ದಾಳಿಯಲ್ಲಿ ಸುಮಾರು 40 ಯೋಧರು ಹುತಾತ್ಮರಾಗಿದ್ದರು. ಹುತಾತ್ಮ ಯೋಧರು ಹಾಗೂ ಅವರ ಕುಟುಂಬಕ್ಕೆ ಗೌರವ ಸೂಚಿಸಲು ಆಹ್ವಾನ ನೀಡಲಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *