ತಣ್ಣಗಾಯ್ತು ಪಾಕ್ ಪ್ರತಾಪ

ಇಸ್ಲಾಮಾಬಾದ್: ಪುಲ್ವಾಮಾ ದಾಳಿಯಿಂದ ಆಕ್ರೋಶಗೊಂಡಿರುವ ಭಾರತದ ಎದುರು ತಾನೂ ಯುದ್ಧಕ್ಕೆ ಸಿದ್ಧ ಎಂಬ ಪರೋಕ್ಷ ಎಚ್ಚರಿಕೆ ನೀಡಿದ್ದ ಪಾಕಿಸ್ತಾನದ ಪ್ರತಾಪ ವಾರ ಕಳೆಯುವಷ್ಟರಲ್ಲೇ ತಣ್ಣಗಾಗಿದೆ. ‘ಚುನಾವಣೆ ಕಾರಣದಿಂದ ಭಾರತ ಶಾಂತಿ ಮಾತುಕತೆಗೆ ಸಿದ್ಧವಿಲ್ಲವಾದರೂ ನರೇಂದ್ರ ಮೋದಿ ಅವರು ಇದಕ್ಕಾಗಿ ಸಣ್ಣ ಅವಕಾಶ ನೀಡಬೇಕು’ ಎನ್ನುವ ಮೂಲಕ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನಿಲುವು ಬದಲಿಸಿದ್ದಾರೆ.

ಭಯೋತ್ಪಾದನೆ ಬದಲು ದೇಶದ ಅಭಿವೃದ್ಧಿಗಾಗಿ ಒಟ್ಟಿಗೆ ಹೋಗೋಣ ಎಂಬ ಮಾತನ್ನು ಮರೆಯ ಬೇಡಿ ಎಂಬ ಮೋದಿ ಟಾಂಗ್​ಗೆ ಪ್ರತಿಕ್ರಿಯಿಸಿರುವ ಇಮ್ರಾನ್, ‘2015ರ ಡಿಸೆಂಬರ್ ಸಭೆಯಲ್ಲಿ ಬಡತನದ ಬಗ್ಗೆ ಮೋದಿ ಜತೆ ಮಾತನಾಡಿದ್ದೆ. ಬಡತನ ನಿಮೂಲನೆ ಎರಡೂ ದೇಶಗಳ ಆದ್ಯತೆ ಆಗಿರಬೇಕು ಎಂದು ನಿರ್ಧರಿಸಲಾಗಿತ್ತು.

ಹಾಗೆಯೇ ಶಾಂತಿ ಪ್ರತಿಷ್ಠಾಪನೆ ವಿರುದ್ಧದ ಕ್ರಮಕ್ಕೆ ಯಾವುದೇ ಭಯೋತ್ಪಾದನೆ ಸಂಘಟನೆಗಳಿಗೂ ಅವಕಾಶ ನೀಡುವುದಿಲ್ಲ. ಆದಾಗ್ಯೂ ಪುಲ್ವಾಮಾ ದಾಳಿ ನಡೆಯುವ ಮುನ್ನವೇ 2018ರ ಸೆಪ್ಟೆಂಬರ್​ನಲ್ಲಿ ಮಾತುಕತೆಗೆ ಭಾರತ ಅಡ್ಡಿಯಾಯಿತು. ಬೇಸರವೆಂದರೆ ಚುನಾವಣೆ ಹಿನ್ನೆಲೆಯಲ್ಲಿ ಈಗ ಮಾತುಕತೆಗೆ ಭಾರತ ಸಿದ್ಧವಿಲ್ಲ. ಮಾತುಕತೆಗೆ ಮೋದಿ ಸಣ್ಣ ಅವಕಾಶ ನೀಡಬೇಕು’ ಎಂದು ಪ್ರಧಾನಿ ಕಾರ್ಯಾಲಯದ ಮೂಲಕ ಹೊರಡಿಸಿರುವ ಹೇಳಿಕೆಯಲ್ಲಿ ಖಾನ್ ಮನವಿ ಮಾಡಿದ್ದಾರೆ.

ಇದು ಪುಲ್ವಾಮಾ ದಾಳಿ ಬಳಿಕ ಇಮ್ರಾನ್ ಖಾನ್ ನೀಡಿದ ಎರಡನೇ ಪ್ರತಿಕ್ರಿಯೆ. ಆದರೆ ಎರಡೂ ಬಾರಿ ದಾಳಿ ಬಗ್ಗೆ ಅವರು ಖಂಡನೆ ವ್ಯಕ್ತಪಡಿಸಿಲ್ಲ. ಭಾರತ ಸಾಕ್ಷ್ಯ ನೀಡಿದರೆ ತನಿಖೆಗೆ ಸಿದ್ಧ ಹಾಗೂ ಭಯೋತ್ಪಾದನೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮಕ್ಕೆ ಬದ್ಧ ಎಂದು ಹಿಂದಿನ ಹೇಳಿಕೆಯಲ್ಲಿ ಹೇಳಿದ್ದರು.

ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದಿದ್ದ ರ್ಯಾಲಿಯಲ್ಲಿ ಪ್ರಧಾನಿ ಮೋದಿ, ಭಾರತ ಹಾಗೂ ಪಾಕಿಸ್ತಾನದ ನಡುವೆ ಹಲವು ಯುದ್ಧ ನಡೆದಿದ್ದರೂ ಪಾಕ್​ಗೆ ಏನೂ ಸಿಕ್ಕಿಲ್ಲ. ಪ್ರತಿ ಯುದ್ಧದಲ್ಲಿಯೂ ಭಾರತ ಗೆದ್ದಿದೆ. ಬಡತನ ಹಾಗೂ ಅನಕ್ಷರತೆ ವಿರುದ್ಧ ಒಟ್ಟಾಗಿ ಹೋರಾಡೋಣ ಎಂದು ಇಮ್ರಾನ್ ಖಾನ್​ಗೆ ಹೇಳಿದ್ದಾಗ, ‘ನಾನು ಪಠಾಣನ ಮಗ, ಸತ್ಯವನ್ನು ಹೇಳುತ್ತೇನೆ. ಅದರಂತೆ ನಡೆದುಕೊಳ್ಳುತ್ತೇನೆ’ ಎಂದಿದ್ದರು ಎಂದು ವಾಗ್ದಾಳಿ ನಡೆಸಿದ್ದರು.

ಉಗ್ರನಾದ ಕಾರು ಮಾಲೀಕ

ಪುಲ್ವಾಮಾ ಆತ್ಮಾಹುತಿ ದಾಳಿಗೆ ಬಳಸಿದ್ದ ಮಾರುತಿ ಎಕೋ ಕಾರಿನ ಮಾಲೀಕ ಸಜ್ಜದ್ ಭಟ್ ಜೈಷ್ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದಾನೆಂಬುದು ಖಚಿತವಾಗಿದೆ. 8 ವರ್ಷಗಳ ಹಿಂದೆ ನೋಂದಣಿ ಆಗಿದ್ದ ಈ ವಾಹನದ ಬಣ್ಣವನ್ನು ದಾಳಿಗೆ ಮುನ್ನ ಬದಲಿಸಲಾಗಿತ್ತು. ತನಿಖೆಯಲ್ಲಿ ದೊರೆತ ಮಾಹಿತಿ ಪ್ರಕಾರ, ಸಜ್ಜದ್ ಸಮ್ಮತಿ ಮೇರೆಗೆ ಒಂದು ಗುಂಪು ಈ ಕಾರನ್ನು ಬಳಸಿತ್ತು. ಹೀಗಾಗಿ ಬಾಂಬ್ ಸ್ಪೋಟದಲ್ಲಿ ಈತನ ಕೈವಾಡವಿರುವುದು ದೃಢಪಟ್ಟಿದೆ. ಸದ್ಯ ಸಜ್ಜದ್ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.