ದೇಶದೊಳಗಿನ ಕಾಶ್ಮೀರಿಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಿ: ಸುಪ್ರೀಂಕೋರ್ಟ್​ ಸೂಚನೆ

ನವದೆಹಲಿ: ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ದೇಶದಲ್ಲಿರುವ ಕಾಶ್ಮೀರಿಗಳ ಮೇಲೆ ಯಾವುದೇ ಹಲ್ಲೆಯಾಗದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಕೇಂದ್ರ ಸರ್ಕಾರ ಸೇರಿದಂತೆ 11 ರಾಜ್ಯಗಳಿಗೆ ಸುಪ್ರೀಂಕೋರ್ಟ್​ ಶುಕ್ರವಾರ ಸೂಚನೆ ನೀಡಿದೆ.

ಈಗಾಗಲೇ ನಡೆದಿರುವ ಕಾಶ್ಮೀರಿಗಳ ಹಲ್ಲೆ ಕುರಿತಾದ ವರದಿಗಳ ಬಗ್ಗೆ ರಾಜ್ಯಗಳ ಪ್ರತಿಕ್ರಿಯೆಯನ್ನು ಕೋರ್ಟ್​ ಬಯಸುವ ಮೂಲಕ ಈ ವಿಚಾರದಲ್ಲಿ ಕೋರ್ಟ್​ ಮಧ್ಯ ಪ್ರವೇಶಿಸಬೇಕು ಎಂಬ ಕೇಂದ್ರದ ಮನವಿಯನ್ನು ಕೋರ್ಟ್​ ಪುರಷ್ಕರಿಸಿದೆ.

ಈ ಮುಂಚೆ ಗುಂಪು ಹತ್ಯೆ ಪ್ರಕರಣಗಳ ತನಿಖೆಗೆ ನೇಮಿಸಲಾಗಿದ್ದ ನೋಡಲ್​ ಅಧಿಕಾರಿಗಳು ಕಾಶ್ಮೀರಿ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಕುರಿತಾದ ತನಿಖೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ನೇತೃತ್ವದ ಸಾಂವಿಧಾನಿಕ ಪೀಠ ಪೊಲೀಸ್​ ಅಧಿಕಾರಿಗಳಿಗೆ ನಿರ್ದೇಶಿಸಿದೆ.

ನೋಡಲ್​ ಅಧಿಕಾರಿಗಳಿಗೆ ವ್ಯಾಪಕವಾದ ಪ್ರಚಾರವನ್ನು ನೀಡುವಂತೆ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಸುಪ್ರೀಂಕೋರ್ಟ್​ ಹೇಳಿದ್ದು, ಇದರಿಂದ ಹಲ್ಲೆಗೊಳಗಾದವರು ಅಧಿಕಾರಿಗಳನ್ನು ಸಂಪರ್ಕಿಸಲು ನೆರವಾಗಲು ಸಹಾಯವಾಗುತ್ತದೆ ಎಂದು ಹೇಳಿದೆ.

ಕಾಶ್ಮೀರಿ ಹಾಗೂ ಅಲ್ಪಸಂಖ್ಯಾತರ ವಿರುದ್ಧ ಬೆದರಿಕೆ, ಹಲ್ಲೆ ಹಾಗೂ ಸಾಮಾಜಿಕ ಬಹಿಷ್ಕಾರಗಳಂತಹ ಘಟನೆಗಳನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಪೊಲೀಸ್​ ಮಹಾ ನಿರ್ದೇಶಕರು ಹಾಗೂ ದೆಹಲಿ ಪೊಲೀಸ್​ ಆಯುಕ್ತರಿಗೆ ಸಾಂವಿಧಾನಿಕ ಪೀಠದ ಮತ್ತೊಬ್ಬ ನ್ಯಾಯಮೂರ್ತಿ ಸಂಜೀವ್​ ಖನ್ನ ಸೂಚಿಸಿದ್ದಾರೆ. (ಏಜೆನ್ಸೀಸ್​)