ಮಳೆಯಾಟಕ್ಕೆ ಮುಗಿಲಿಗೇರಿದ ಬೇಳೆಕಾಳುಗಳ ಬೆಲೆ

ಬೆಂಗಳೂರು: ಅತಿವೃಷ್ಟಿ ಹಾಗೂ ಅನಾವೃಷ್ಟಿ ಕಾರಣದಿಂದಾಗಿ ಪ್ರಸಕ್ತ ವರ್ಷ ಇಳುವರಿ ಕಡಿಮೆಯಾಗಿರುವುದರಿಂದ ಬೇಳೆಕಾಳುಗಳ ಬೆಲೆ ಏರಿಕೆಯಾಗಿದೆ.

ತೊಗರಿಬೇಳೆ ಬೆಲೆ ಕೆ.ಜಿ.ಗೆ 10-12 ರೂ.ಗಳಿಗೆ ಏರಿಕೆಯಾಗಿದೆ. ಈ ಹಿಂದೆ ಗುಜರಾತ್ ದರ್ಜೆ ತೊಗರಿ ಬೇಳೆ ಕ್ವಿಂಟಾಲ್​ಗೆ ಸಗಟು ದರ 6,600-6,700 ರೂ. ಇತ್ತು. ಈಗ 7,800-8,000 ರೂ. ಗೆ ಏರಿಕೆಯಾಗಿದೆ. ಇನ್ನು ಕಲಬುರಗಿ ದರ್ಜೆ ತೊಗರಿಬೇಳೆ 5,500-5,800 ಇತ್ತು. ಈಗ ಅದರ ಬೆಲೆ 6,500-7,000

ರೂ.ಗೆ ಏರಿಕೆಯಾಗಿದೆ. ಇದಲ್ಲದೆ ಉದ್ದಿನಬೇಳೆ, ಹೆಸರುಬೇಳೆ, ಹೆಸರುಕಾಳು ಬೆಲೆ ಕೂಡ ಏರಿದೆ. ಗುಲ್ಬರ್ಗ, ಬೀದರ್ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತೊಗರಿ ಪ್ರಮುಖವಾಗಿ ಬೆಳಯುತ್ತಿದ್ದು, ಮುಂದಿನ ತಿಂಗಳು ಹೊಸ ಬೆಳೆ ಬರುತ್ತಿದೆ. ಆದರೆ, ಕಳೆದ ತಿಂಗಳಿಂದ ಮಳೆ ಅಭಾವದಿಂದಾಗಿ ಇಳುವರಿಯಲ್ಲಿ ಶೇ.30 ಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ರೈತರು ಹೇಳುತ್ತಾರೆ.

ಗುಜರಾತ್, ಮಹಾರಾಷ್ಟ್ರಗಳಲ್ಲಿ ಹೆಚ್ಚು ತೊಗರಿ ಬೆಳೆಯುತ್ತಾರೆ. ಅಲ್ಲಿಯೂ ಈ ವರ್ಷ ಶೇ.30-35 ಬೆಳೆ ಕ್ಷೀಣಿಸಲಿದೆ. ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗಿದ್ದರಿಂದ ಬೆಳೆ ಕುಂಠಿತಗೊಂಡಿದ್ದರೆ, ಕರ್ನಾಟಕದಲ್ಲಿ ಮಳೆ ಅಭಾವದಿಂದ ಬೆಳೆ ಕಡಿಮೆ ಯಾಗಿದೆ ಎನ್ನುತ್ತಾರೆ ಬೆಂಗಳೂರು ಎಪಿಎಂಸಿ ತೊಗರಿಬೇಳೆ ವ್ಯಾಪಾರಿ ಎನ್. ಶಿವಕುಮಾರ್.

ಉತ್ತರಪ್ರದೇಶ, ಮಧ್ಯಪ್ರದೇಶ, ಆಂಧ್ರಪ್ರದೇಶ ಗಳಲ್ಲಿ ಹೆಚ್ಚು ಉದ್ದು ಬೆಳೆಯುತ್ತಿದ್ದು, ಮಳೆ ಅಭಾವದಿಂದಾಗಿ ಶೇ.40 ಬೆಳೆ ಕಡಿಮೆಯಾಗಲಿದೆ. ಇದು ಉದ್ದಿನ ಬೇಳೆ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಈ ಹಿಂದೆ ಉದ್ದಿನಬೇಳೆ ಕ್ವಿಂಟಾಲ್​ಗೆ 6,500-6,900 ರೂ. ಇತ್ತು. ಈಗ 7,800-10,000 ರೂ. ಗೆ ಏರಿಕೆಯಾಗಿದೆ.

ಹೆಸರುಬೇಳೆ ಈ ಹಿಂದೆ ಕ್ವಿಂಟಾಲ್ -ಠಿ;6,600-6,800 ಇದ್ದದ್ದು ಈಗ -ಠಿ;7,200-8,000ಕ್ಕೆ ಜಿಗಿದಿದೆ. ಕಡಲೆಬೇಳೆ ಬೆಲೆಯೂ ಏರಿಕೆಯಾಗಿದೆ. -ಠಿ;4,500-5,200 ಇದ್ದ ಬೆಲೆ ಈಗ 6,000-6,400 ರೂ. ಗೆ ಹೆಚ್ಚಳ ಕಂಡಿದೆ. ಕಳೆದ ತಿಂಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ ಗಳಲ್ಲಿ ಕಡಲೆ ಬಿತ್ತನೆಯಾಗಬೇಕಿತ್ತು. ಮಳೆ ಇಲ್ಲದೆ ಬಿತ್ತನೆಯಾಗಿಲ್ಲ. ಪರಿಣಾಮವಾಗಿ ಕಡ್ಲೆಕಾಳು ಮತ್ತು ಕಡ್ಲೆಬೇಳೆ ಬೆಲೆ ಕ್ವಿಂಟಾಲ್​ಗೆ ಅಂದಾಜು 800-1,200 ರೂ. ಏರಿಕೆಯಾಗಿದೆ.

ಒಟ್ಟಾರೆ ಎಲ್ಲ್ಲ ತರಹದ ಬೇಳೆಕಾಳುಗಳು ಈ ಹಿಂದಿನ ಬೆಲೆಗೆ ಹೋಲಿಸಿದರೆ ಕೆ.ಜಿ.ಗೆ 10-15 ರೂ.ಗಳವರೆಗೆ ಹೆಚ್ಚಳ ಕಂಡಿವೆ. ಇದು ಸಗಟು ಬೆಲೆಯಾಗಿದ್ದು, ಸಾಗಣೆ ವೆಚ್ಚ ಮತ್ತು ಇತರ ವೆಚ್ಚ ಸೇರಿದರೆ ಚಿಲ್ಲರೆ ದರ 15-20 ರೂ. ಏರಿಕೆಯಾಗಲಿದೆ ಎಂದು ಚಿಲ್ಲರೆ ವ್ಯಾಪಾರಿಗಳು ಹೇಳುತ್ತಾರೆ.

ಕಳೆದ ತಿಂಗಳಿಂದಲೂ ಮಳೆ ಇಲ್ಲ. ಇದರ ಪರಿಣಾಮ ಧಾನ್ಯಗಳ ಇಳುವರಿ ಕುಸಿಯಲಿದೆ. ಜತೆಗೆ ಹಿಂಗಾರು ಧಾನ್ಯಗಳಾದ ಕಡಲೆ, ಹೆಸರು, ಉದ್ದು ಬಿತ್ತನೆಯಾಗಿಲ್ಲ. ಹೀಗಾಗಿ ಧಾನ್ಯಗಳ ಅಭಾವದಿಂದಾಗಿ ಬೆಲೆ ಏರಿಕೆಯಾಗಿದೆ.

| ರಮೇಶ್​ಚಂದ್ರ ಲಾಹೋಟಿ ಬೆಂಗಳೂರು ಎಪಿಎಂಸಿ ಸಗಟು ಬೇಳೆಕಾಳು ವರ್ತಕರ ಸಂಘದ ಅಧ್ಯಕ್ಷ