ಬಾಕ್ಸಿಂಗ್​ ಡೇ ಟೆಸ್ಟ್​: 443 ರನ್​ಗೆ ಡಿಕ್ಲೇರ್ ಮಾಡಿದ ಭಾರತ

ಮೆಲ್ಬೋರ್ನ್​: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಭಾರತ ತಂಡ 443 ರನ್​ಗೆ ಡಿಕ್ಲೇರ್​ ಮಾಡಿಕೊಂಡಿದೆ.

ಎರಡನೇ ದಿನದಾಟ ಮುಕ್ತಾಯವಾಗಲು ಕೆಲವೇ ಓವರ್​ಗಳು ಬಾಕಿಯಿದ್ದಾಗ 169.4 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 443 ರನ್​ ಗಳಿಸಿದ್ದಾಗ ನಾಯಕ ವಿರಾಟ್​ ಕೊಹ್ಲಿ ಡಿಕ್ಲೇರ್​ ನಿರ್ಧಾರವನ್ನು ಘೋಷಿಸಿದರು. ಮೊದಲ ಇನಿಂಗ್ಸ್​ ಆರಂಭಿಸಿರುವ ಆಸ್ಟ್ರೇಲಿಯಾ 6 ಓವರ್​ಗಳಲ್ಲಿ ವಿಕೆಟ್​ ನಷ್ಟವಿಲ್ಲದೆ 8 ರನ್​ ಗಳಿಸಿದೆ.

ಮೊದಲ ದಿನದಂತ್ಯಕ್ಕೆ 2 ವಿಕೆಟ್​ ನಷ್ಟಕ್ಕೆ 215 ರನ್​ ಗಳಿಸಿದ್ದ ಭಾರತ ಎರಡನೇ ದಿನ 228 ರನ್​ ಗಳಿಸಿತು. ಭಾರತದ ಪರ ಮೊದಲ ದಿನದಂತ್ಯಕ್ಕೆ ಅರ್ಧ ಶತಕ ಗಳಿಸಿದ್ದ ಚೇತೇಶ್ವರ ಪೂಜಾರ (106) ಭರ್ಜರಿ ಶತಕ ಗಳಿಸಿರೆ, ಕೊಹ್ಲಿ (82) ರನ್​ ಗಳಿಸಿ ಔಟಾಗುವ ಮೂಲಕ ಶತಕ ವಂಚಿತರಾದರು. ಕೊಹ್ಲಿ ಮತ್ತು ಪೂಜಾರ ಔಟಾದ ನಂತರ ಕ್ರೀಸ್​ಗೆ ಬಂದ ಅಜಿಂಕ್ಯ ರಹಾನೆ (34) ರೋಹಿತ್​ ಶರ್ಮಾಗೆ(63*) ಉತ್ತಮ ಸಾಥ್​ ನೀಡಿದರು. ರಹಾನೆ ಔಟಾದ ಬಳಿಕ ಕ್ರೀಸ್​ಗೆ ಬಂದ ರಿಷಭ್​ ಪಂತ್​ (39) ರನ್​ ಗಳಿಸಿ ತಂಡದ ಮೊತ್​ 400ರ ಗಡಿ ದಾಟಲು ನೆರವಾದರು.

ಆಸ್ಟ್ರೇಲಿಯಾದ ಪರ ಪಾಟ್​ ಕಮ್ಮಿನ್ಸ್​ 72/3 ಮತ್ತು ಮಿಷಲ್​ ಸ್ಟಾರ್ಕ್​ 87/2 ವಿಕೆಟ್​ ಪಡೆದರು. (ಏಜೆನ್ಸೀಸ್​)