
ಹಳೇಬೀಡು: ಇಲ್ಲಿನ ಕಸ್ತೂರಿ ರಂಗನಾಥ ದೇಗುಲ ಹಾಗೂ ರಾಮಮಂದಿರದಲ್ಲಿ ಶ್ರೀರಾಮನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಹಳೇಬೀಡು ಬ್ರಾಹ್ಮಣ ಮಹಾಸಭಾ ಸಹಯೋಗದಲ್ಲಿ ಬುಧವಾರ ಐದು ದಿನಗಳ ಶ್ರೀರಾಮನವಮಿ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು. ಮುಂಜಾನೆ ಕಸ್ತೂರಿ ರಂಗನಾಥ ದೇಗುಲದಲ್ಲಿ ಸುಪ್ರಭಾತ ಸೇವೆಯೊಂದಿಗೆ ಪೂಜಾ ಕೈಂಕರ್ಯಗಳನ್ನು ಆರಂಭಿಸಲಾಯಿತು. ಶಯನ ಭಂಗಿಯಲ್ಲಿರುವ ರಂಗನಾಥ ಸ್ವಾಮಿ ಹಾಗೂ ಶ್ರೀರಾಮ ದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು. ವಿಪ್ರ ಮಹಿಳಾ ಮಂಡಳಿ ಸದಸ್ಯರು ಶ್ರೀರಾಮ ಹಾಗೂ ಹನುಮಂತ ದೇವರ ಕೀರ್ತನೆಗಳನ್ನು ಹಾಡಿ ಭಜನಾ ಕಾರ್ಯಕ್ರಮಕ್ಕೆ ಕಳೆ ತಂದು ಕೊಟ್ಟರು.
ದೇಗುಲದ ಸುತ್ತಲಿನ ರಾಜ ಬೀದಿಯಲ್ಲಿ ಭೂದೇವಿ ಹಾಗೂ ಶ್ರೀದೇವಿ ಸಹಿತ ರಂಗನಾಥ ಸ್ವಾಮಿ ಮತ್ತು ಶ್ರೀರಾಮ ದೇವರ ಉತ್ಸವ ಮೂರ್ತಿಗಳನ್ನು ಅಡ್ಡೆಯಲ್ಲಿ ಹೊತ್ತು ದೇಗುಲದ ಸುತ್ತಲಿನ ರಾಜಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ದೇವರು ಸ್ವಸ್ಥಾನಕ್ಕೆ ಹಿಂದಿರುಗಿದ ಬಳಿಕ ವಿಪ್ರರ ವೇದಘೋಷದೊಂದಿಗೆ ಅಷ್ಟಾವಧಾನ ಸೇವೆ ನಡೆಸಿ, ಮಹಾಮಂಗಳಾರತಿ ನೆರವೇರಿಸಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ವಸಂತ ಸೇವೆಯ ಪ್ರಯುಕ್ತ ಪಾನಕ, ಕೋಸಂಬರಿ, ಮಜ್ಜಿಗೆ ಹಾಗೂ ಹಣ್ಣಿನ ರಸಾಯನ ವಿತರಿಸಲಾಯಿತು. ಅರ್ಚಕ ನರಸಿಂಹ ಪ್ರಸಾದ್ ಪೂಜಾ ವಿಧಾನಗಳನ್ನು ನಡೆಸಿಕೊಟ್ಟರು.
ಬ್ರಾಹ್ಮಣ ಮಹಾಸಭಾ ಗೌರವಾಧ್ಯಕ್ಷ ನಾಗೇಶರಾವ್, ಕಾರ್ಯದರ್ಶಿ ನಾಗರಾಜ್, ಖಜಾಂಚಿ ಕೃಷ್ಣ, ಮಾಜಿ ಅಧ್ಯಕ್ಷ ರಘುನಾಥ್, ಉಪಾಧ್ಯಕ್ಷೆ ರೂಪಾ ಚಿದಂಬರ ಮತ್ತು ಮಹಿಳಾ ಮಂಡಳಿಯ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತ್ಯಾನಂದ, ಸದಸ್ಯರು ಪಾಲ್ಗೊಂಡಿದ್ದರು.
ಐದು ದಿನಗಳ ಕಾರ್ಯಕ್ರಮ: ಬುಧವಾರ ಆರಂಭಗೊಂಡಿರುವ ಶ್ರೀರಾಮನವಮಿ ಕಾರ್ಯಕ್ರಮ ಭಾನುವಾರ ಸಂಪನ್ನಗೊಳ್ಳಲಿದೆ. ಪ್ರತಿನಿತ್ಯ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಗುರುವಾರ ಸಂಜೆ ರಾಮತಾರಕ ಹೋಮ, ಶುಕ್ರವಾರ ನಿಶ್ಚಿತಾರ್ಥ ಪೂರ್ವಕ ಸೀತಾರಾಮ ಕಲ್ಯಾಣ ಜರುಗಲಿದೆ. ಶನಿವಾರ ಪ್ರಾತಃಕಾಲ ಕೋಟೆ ಆಂಜನೇಯ ದೇಗುಲದಲ್ಲಿ ಅಭಿಷೇಕ ಹಾಗೂ ವಿಶೇಷ ಪೂಜೆಗಳು ನಡೆಯಲಿದ್ದು, ಅಂದು ಸಂಜೆ ಶ್ರೀದೇವಿ ಹಾಗೂ ಭೂದೇವಿ ಸಹಿತ ರಂಗನಾಥ ಸ್ವಾಮಿ ಮತ್ತು ಪರಿವಾರ ಸಮೇತ ರಾಮಚಂದ್ರ ದೇವರ ಉತ್ಸವವು ಗ್ರಾಮದ ಮುಖ್ಯ ಬೀದಿಗಳಲ್ಲಿ ಸಂಚರಿಸಲಿದೆ. ಭಾನುವಾರ ರಾಮ ಪಟ್ಟಾಭಿಷೇಕ ಹಾಗೂ ಮಂಗಳಾರ್ಚನೆ ನೆರವೇರಲಿದೆ.