ಚರಂಡಿಗೆ ಇಳಿದು ಪುದುಚೇರಿ ಸಿಎಂರಿಂದ ಸ್ವಚ್ಛತಾ ಕಾರ್ಯ: ವಿಡಿಯೋ ವೈರಲ್​

ನವದೆಹಲಿ: ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಅವರು ಸಲಾಕೆಯೊಂದಿಗೆ ಚರಂಡಿಯೊಳಗೆ ಇಳಿದು ಸ್ವಚ್ಛಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಸ್ವಚ್ಛ ಭಾರತದ ಅಂಗವಾಗಿ ಸೆ. 15ರಿಂದ ಅ. 2ರ ಗಾಂಧಿ ಜಯಂತಿ ತನಕ ದೇಶವ್ಯಾಪಿ ಹಮ್ಮಿಕೊಂಡಿದ್ದ ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಸಿಎಂ ನಾರಾಯಣಸ್ವಾಮಿ ಸಾಥ್​ ನೀಡಿದರು. ಚರಂಡಿ ಸ್ವಚ್ಛಗೊಳಿಸಿರುವ ವಿಡಿಯೋವನ್ನು ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಳಿ ಅಂಗಿ ತೊಟ್ಟ ಪುದುಚೇರಿ ಸಿಎಂ ಪಂಚೆಯನ್ನು ಮೇಲಕ್ಕೆತ್ತಿ ಕಟ್ಟಿ, ಕೈಗೆ ಗ್ಲೌವ್ಸ್​ ಹಾಕಿಕೊಂಡು ಚರಂಡಿಯೊಳಗೆ ಇಳಿದು ಸ್ವಚ್ಛಗೊಳಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಅವರ ಕಾರ್ಯಕ್ಕೆ ಬೆಂಬಲಿಗರು ಸಾಥ್​ ನೀಡಿದ್ದಾರೆ.

ನಿಮ್ಮ ಪ್ರಾಮಾಣಿಕ ಶ್ರಮವನ್ನು ನೋಡಲು ಸಂತೋಷವಾಗುತ್ತಿದೆ. ನೀವು ಕಾಂಗ್ರೆಸ್​ ಪಕ್ಷದ ಕಾರ್ಯಕರ್ತರಿಗೆ ಆದರ್ಶ ವ್ಯಕ್ತಿಯಾಗಿದ್ದೀರಿ. ದೇಶಕ್ಕೆ ಹೆಚ್ಚಿನ ಸೇವೆ ನೀಡಲು ದೇವರು ನಿಮಗೆ ಶಕ್ತಿಯನ್ನು ಕೊಡಲಿ ಎಂದು ಕಾಂಗ್ರೆಸ್​ ಕಾರ್ಯಕರ್ತನೊಬ್ಬ ಟ್ವೀಟ್​ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. (ಏಜೆನ್ಸೀಸ್​)