ಹುಬ್ಬಳ್ಳಿ ಬಾಲ ಮುದುಡಿಕೊಂಡಿದ್ದ ಪುಡಿ ರೌಡಿಗಳು ಮತ್ತೆ ಬಾಲ ಬಿಚ್ಚಿದ್ದು, ಅವರ ಅಟ್ಟಹಾಸಕ್ಕೆ ಯುವಕನೊಬ್ಬ ಬಲಿಯಾಗಿದ್ದಾನೆ. ಆ ಏರಿಯಾ ನಂದು ಈ ಏರಿಯಾ ನಿಂದು ಎಂದು ಶುರುವಾಗಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಚಾಕುವಿನಿಂದ ಇರಿದು ಯುವಕನ ಕೊಲೆ ಮಾಡಿರುವ ಭೀಕರ ಘಟನೆಗೆ ಇಲ್ಲಿನ ಮಂಟೂರ ರಸ್ತೆಯ ತಬೀಬ ಲ್ಯಾಂಡ್ ಎಸ್ಬಿಐ ಎಟಿಎಂ ಬಳಿ ಮಂಗಳವಾರ ರಾತ್ರಿ ನಡೆದಿದೆ.
ಮಂಟೂರ ರಸ್ತೆ ಮಿಲ್ಲತ ನಗರದ ನಿವಾಸಿ ಇಮ್ತಿಯಾಜ ಮಕ್ಬುಲಸಾಬ ಕಣವಿ (35) ಕೊಲೆಯಾದ ವ್ಯಕ್ತಿ. ಅಫ್ತಾಬ್ (21), ದಾವೂದ್ (25), ಮಹಮ್ಮದ ಶಫಿ (20) ಹಾಗೂ ಶಾರೂಖ್ (23) ಕೊಲೆ ಮಾಡಿದ ಆರೋಪಿಗಳು. ಬೈಕ್ನಲ್ಲಿ ಬಂದ ದುಷ್ಕರ್ವಿುಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು.
ಇಮ್ತಿಯಾಜ ವಾಟರ್ ಫ್ಯೂರಿಫಿಕೇಶನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮನೆ ಸುತ್ತಮುತ್ತ ಹಲವು ಹುಡುಗರೊಂದಿಗೆ ದೋಸ್ತಿ ಬೆಳೆಸಿದ್ದ. ಅವರನ್ನು ಕರೆದುಕೊಂಡು ಸುತ್ತಾಡುತ್ತ ಆ ಪ್ರದೇಶದಲ್ಲಿ ಪ್ರಭಾವ ಬೆಳೆಸಿಕೊಳ್ಳಲು ಯತ್ನಿಸುತ್ತಿದ್ದ. ಇದರಿಂದ ಆರೋಪಿಗಳು ಆಕ್ರೋಶಗೊಂಡಿದ್ದರು. ಇದೇ ವಿಚಾರವಾಗಿ ಹಲವು ಬಾರಿ ಜಗಳ ಉಂಟಾಗಿತ್ತು. ಆದರೆ ಪೊಲೀಸ್ ಠಾಣೆ ಮೆಟ್ಟಿಲು ಏರಿರಲಿಲ್ಲ. ಆ ಹಳೆಯ ದ್ವೇಷದಿಂದ ಇಮ್ತಿಯಾಜನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಶಹರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಶಹರ ಠಾಣೆ ಇನ್ಸ್ಪೆಕ್ಟರ್ ಗಿರೀಶ ಬೋಜಣ್ಣವರ ನೇತೃತ್ವದ ತಂಡ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೈ ಮೀರಿದ ಕಾನೂನು ಸುವ್ಯವಸ್ಥೆ:
ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿದ್ದ ರೇಣುಕಾ ಸುಕುಮಾರ್ ಕಳೆದ ವರ್ಷ ರೌಡಿ ಪರೇಡ್ ನಡೆಸುವ ಮೂಲಕ ಬಾಲ ಬಿಚ್ಚದಂತೆ ರೌಡಿ, ಪುಡಿ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದರು. ಇತ್ತೀಚೆಗೆ ರೌಡಿಗಳ ಮನೆಗೆ ಏಕಾಏಕಿ ದಾಳಿ ನಡೆಸುವ ಮೂಲಕ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಹಲವರನ್ನು ಬಂಧಿಸಿದ್ದರು. ಅವರ ವರ್ಗಾವಣೆ ನಂತರ ಪುಡಿರೌಡಿಗಳು ಈಗ ಮತ್ತೆ ಬಾಲ ಬಿಚ್ಚಿದ್ದಾರೆ.
ಡಿಸಿಪಿ ನೇಮಕ ಯಾವಾಗ ?:
ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ಅವರು ಸದ್ಯ ಮೂವರು ಡಿಸಿಪಿಯ ಹೊಣೆ ಹೊತ್ತಿದ್ದಾರೆ. ಕಾನೂನು ಸುವ್ಯವಸ್ಥೆ, ಸಿಎಆರ್ ಹೆಚ್ಚುವರಿ ಹೊಣೆಯಾದ್ದರಿಂದ ಕೆಲಸದ ಒತ್ತಡ ಹೆಚ್ಚಾಗಿದೆ. ರೇಣುಕಾ ಸುಕುಮಾರ್ ವರ್ಗಾವಣೆ ಬಳಿಕ ಅವರ ಹುದ್ದೆಗೆ ಸರ್ಕಾರ ಈವರೆಗೆ ಯಾರನ್ನೂ ನೇಮಕ ಮಾಡಿಲ್ಲ. ಇನ್ನಾದರೂ ಸರ್ಕಾರ ಖಡಕ್ ಅಧಿಕಾರಿಯನ್ನು ಅವಳಿನಗರಕ್ಕೆ ನೇಮಕ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.