ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ನೇಮಕಾತಿಗೆ ಪರೀಕ್ಷೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ 29ರಿಂದ ಡಿಸೆಂಬರ್ 8ರ (ಡಿ. 2 ಹೊರತುಪಡಿಸಿ)ವರೆಗೆ ನಗರದ 28 ಪರೀಕ್ಷಾ ಕೇಂದ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ತೀವ್ರ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಪರೀಕ್ಷೆಗೆ ಸಂಬಂಧಿಸಿ ರೂಟ್ ಅಧಿಕಾರಿಗಳು ಮತ್ತು ವೀಕ್ಷಕರು ಹಾಗೂ ಪರೀಕ್ಷಾ ಕೇಂದ್ರದ ಉಪ ಮುಖ್ಯ ಅಧೀಕ್ಷಕರ ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ನೇಮಕಾತಿಗೆ 2015ರಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು, ಇದೀಗ ಸ್ಪರ್ಧಾತ್ಮಕ ಪರೀಕ್ಷೆ ನಡೆಯುತ್ತಿದೆ. ಪರೀಕ್ಷಾ ಕರ್ತವ್ಯದಲ್ಲಿ ಯಾವುದೇ ಲೋಪವಾಗದಂತೆ ಅಗತ್ಯ ಮುನ್ನೆಚರಿಕೆ ವಹಿಸಿ. ಅವ್ಯವಹಾರ ಕಂಡುಬಂದಲ್ಲಿ ಸಂಬಂಧಿಸಿದ ಕೇಂದ್ರದ ಮುಖ್ಯಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
29 ರಿಂದ ಡಿಸೆಂಬರ್ 8ರವರೆಗೆ ವಿವಿಧ ವಿಷಯಗಳಿಗೆ ನಡೆಯುವ ಪರೀಕ್ಷೆಗೆ ಜಿಲ್ಲೆಯ 7318 ಅಭ್ಯರ್ಥಿಗಳು ಪರೀಕ್ಷೆ ಬರೆಯ ಲಿದ್ದಾರೆ. ಪರೀಕ್ಷೆಯು ಸೂಸೂತ್ರವಾಗಿ ನಡೆಯಲು ಜಿಲ್ಲಾಡಳಿತದಿಂದ 28 ಮಾರ್ಗಾಧಿಕಾರಿಗಳು ಕಂ ವೀಕ್ಷಕರನ್ನು ನೇಮಿಸಲಾಗಿದೆ. ಪರೀಕ್ಷಾ ದಿನದಂದು ಪತ್ರಿಕೆಯ ಬಂಡಲ್ ತೆರೆಯುವಾಗ ಮತ್ತು ಪರೀಕ್ಷೆಯ ನಂತರ ಪತ್ರಿಕೆಗಳ ಬಂಡಲ್ ಪ್ಯಾಕ್ ಮಾಡುವಾಗ ವಿಡೀಯೋಗ್ರಾಫಿ ಮಾಡಬೇಕು. ಆಯಾ ಪರೀಕ್ಷಾ ಕೇಂದ್ರದ (ಕಾಲೇಜಿನ ಉಪನ್ಯಾಸಕರು) ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆ ಮಾಡದಂತೆ ವೀಕ್ಷಕರು ನಿಗಾ ವಹಿಸಬೇಕು ಹಾಗೂ ಪರೀಕ್ಷೆಗೆ ಸಂಬಂಧಿಸಿದಂತೆ ಕೆ.ಇ.ಎ. ನೀಡಲಾದ ಎಲ್ಲ ಸೂಚನೆಗಳನ್ನು ಚಾಚುತಪ್ಪದೆ ಪಾಲಿಸಬೇಕು ಎಂದರು.
ಪರೀಕ್ಷೆಗೆ ಬರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಪ್ರತ್ಯೇಕವಾಗಿ ತಪಾಸಣೆ ನಡೆಸಿಯೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಬೇಕು. ಇನ್ನು ಪ್ರತಿ ಪರೀಕ್ಷಾ ಕೇಂದ್ರದಲ್ಲಿಯೂ ಇಬ್ಬರು ಸಿಟ್ಟಿಂಗ್ ಸ್ಕ್ವಾಡ್ ನೇಮಿಸಲಾಗಿದೆ. ಸೂಕ್ತ ಬಂದೋಬಸ್ತ್​ಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ತಿಳಿಸಿದರು.
200 ಮೀಟರ್ ನಿಷೇಧ: ಪರೀಕ್ಷಾ ಅಕ್ರಮ ತಡೆಯಲು ಹಾಗೂ ಸುಸೂತ್ರವಾಗಿ ಪರೀಕ್ಷೆ ನಡೆಯಲು ಅನುಕೂಲವಾಗುವಂತೆ ಕೇಂದ್ರದ ಸುತ್ತಮುತ್ತ 200 ಮೀಟರ್ ಪ್ರದೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು.

ಮೊಬೈಲ್ ಸಂಪೂರ್ಣ ನಿಷೇಧ: ಪರೀಕ್ಷಾ ಕೇಂದ್ರದಲ್ಲಿ ಕೊಠಡಿ ಮೇಲ್ವಿಚಾರಕರು ಸೇರಿದಂತೆ ಅಭ್ಯರ್ಥಿಗಳು ಮೊಬೈಲ್ ಫೋನ್, ಪೇಜರ್, ಬ್ಲ್ಯೂಟೂತ್, ವೈರಲೆಸ್ ಸೆಟ್, ಸ್ಲೈಡರೂಲ್ ಕ್ಯಾಲ್ಕುಲೇಟರ್, ರಿಸ್ಟ್ ವಾಚ್, ವಾಚ್ ಕ್ಯಾಲ್ಕುಲೇಟರ್, ಪಠ್ಯ ಪುಸ್ತಕ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೋಳೆಗಾಂವ, ಮಾರ್ಗಾಧಿಕಾರಿಗಳು ಕಂ ವೀಕ್ಷಕರು, ಉಪ ಮುಖ್ಯ ಅಧೀಕ್ಷಕರು ಇದ್ದರು.
ಗುರುತಿನ ಚೀಟಿ ಕಡ್ಡಾಯ: ಸ್ಪರ್ಧಾತ್ಮಕ ಪರೀಕ್ಷೆಗೆ ಬರುವ ಅಭ್ಯರ್ಥಿಗಳು ಪ್ರವೇಶ ಪತ್ರದೊಂದಿಗೆ ಕಡ್ಡಾಯವಾಗಿ ಭಾವಚಿತ್ರವಿರುವ ಚುನಾವಣಾ ಐ.ಡಿ., ಆಧಾರ್ ಕಾರ್ಡ್​, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್​, ಪಾಸಪೋರ್ಟ್​ ಮೂಲ ಗುರುತಿನ ಚೀಟಿ ಅಥವಾ ಅದರ ಛಾಯಾಪ್ರತಿ ತರುವುದು ಕಡ್ಡಾಯವಾಗಿದೆ. ಗುರುತಿನ ಚೀಟಿ ತರದಿದ್ದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ.