ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್​ರೂಂನಲ್ಲಿ ಭದ್ರ

ಹಾವೇರಿ: ಜಿಲ್ಲೆಯಾದ್ಯಂತ ಶುಕ್ರವಾರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಶೇ. 69.07ರಷ್ಟು ಮತದಾನವಾಗಿದ್ದು, ಇದೀಗ ಅಭ್ಯರ್ಥಿಗಳ ಭವಿಷ್ಯ ಜಿಲ್ಲೆಯ ಐದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಟ್ರಾಂಗ್​ರೂಂನಲ್ಲಿರುವ ವಿದ್ಯುನ್ಮಾನ ಮತಯಂತ್ರಗಳಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್​ನಲ್ಲಿ ಭದ್ರವಾಗಿದೆ.

ಸೆ. 3ರಂದು ಮತ ಏಣಿಕೆ ಕಾರ್ಯ ಬೆಳಗ್ಗೆ 8ರಿಂದ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾ ಚುನಾವಣಾ ಆಯೋಗ ಸಿದ್ಧತೆಯಲ್ಲಿ ತೊಡಗಿದೆ. ಹಾವೇರಿ ನಗರಸಭೆಯ 31 ಹಾಗೂ ರಾಣೆಬೆನ್ನೂರ ನಗರಸಭೆ 35ವಾರ್ಡ್​ಗಳ ಮತ ಏಣಿಕೆಗೆ ತಲಾ 8 ಟೇಬಲ್​ಗಳನ್ನು ಪುರಸಭೆ, ಪ.ಪಂ.ಗಳಿಗೆ ತಲಾ 4 ಟೇಬಲ್​ಗಳಂತೆ ಒಟ್ಟು 36 ಟೇಬಲ್​ಗಳನ್ನು ಮತಏಣಿಕೆ ಕಾರ್ಯಕ್ಕೆ ಬಳಸಲು ಆಯೋಗ ನಿರ್ಧರಿಸಿದೆ. ಒಬ್ಬರು ಮೇಲ್ವಿಚಾರಕರು, ಒಬ್ಬರು ಸಹಾಯಕರು ಹಾಗೂ ಡಿ ವರ್ಗದ ನೌಕರ ಪ್ರತಿಯೊಬ್ಬ ಚುನಾವಣಾಧಿಕಾರಿಗೆ ಒಬ್ಬ ಟ್ಯಾಬುಲೇಷನ್ ಸಹಾಯಕರು ಮತ ಏಣಿಕೆ ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ ಇವರೆಲ್ಲರಿಗೂ ತರಬೇತಿ ನೀಡಲಾಗಿದೆ. ಮತ ಏಣಿಕೆ ಆರಂಭಗೊಂಡ 2 ತಾಸಿನಲ್ಲಿ ಜಿಲ್ಲೆಯ 5 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.

ಜಿಲ್ಲೆಯ ಒಟ್ಟು 136 ವಾರ್ಡ್​ಗಳಿಗೆ 480 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, 1,41,541 ಮತದಾರರು ಮತ ಚಲಾಯಿಸಿದ್ದಾರೆ. ಸೆ. 3ರಂದು ಎಲ್ಲ ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ.

ಸ್ಟ್ರಾಂಗ್ ರೂಂಗೆ ಬಿಗಿ ಭದ್ರತೆ: ಜಿಲ್ಲೆಯ ಐದು ಸ್ಥಳೀಯ ಸಂಸ್ಥೆಗಳ ಮತಯಂತ್ರಗಳನ್ನು ಸ್ಟ್ರಾಂಗ್​ರೂಂಗಳಲ್ಲಿ ಶುಕ್ರವಾರ ರಾತ್ರಿಯೇ ಬಿಗಿ ಬಂದೋಬಸ್ತ್​ನೊಂದಿಗೆ ಭದ್ರವಾಗಿ ಇರಿಸಲಾಗಿದೆ. ಪ್ರತಿಯೊಂದು ಸ್ಟ್ರಾಂಗ್​ರೂಂಗೆ ದಿನದ 24 ಗಂಟೆಗಳ ಕಾಲ ಭದ್ರತೆಗೆ ಐವರು ಪೊಲೀಸ್ ಪೇದೆಗಳು, ಒಂದು ಜಿಲ್ಲಾ ಮೀಸಲು ಪಡೆ, ಒಬ್ಬ ಪಿಎಸ್​ಐ ಹಾಗೂ ಎಎಸ್​ಐ ಸಿಬ್ಬಂದಿ ಕಾವಲಿದ್ದಾರೆ.

ಮತ ಏಣಿಕೆ ಕೇಂದ್ರಗಳು: ಹಾವೇರಿ ನಗರಸಭೆಯ ಮತ ಏಣಿಕೆ ಹಾವೇರಿ ನಗರದ ರಾಚೋಟೇಶ್ವರ ಪದವಿ ಪೂರ್ವ ಕಾಲೇಜ್​ನಲ್ಲಿ, ರಾಣೆಬೆನ್ನೂರ ನಗರಸಭೆಯದ್ದು ಸೇಂಟ್ ಲಾರೆನ್ಸ್ ಸ್ಕೂಲ್, ಹಾನಗಲ್ಲ ಹಾಗೂ ಹಿರೇಕೆರೂರು ಆಯಾ ತಹಸೀಲ್ದಾರ್ ಕಚೇರಿ ಹಾಗೂ ಸವಣೂರ ಮತ ಏಣಿಕೆ ಸರ್ಕಾರಿ ಪ್ರಾಥಮಿಕ ಶಾಲೆ ನಂ. 2ರಲ್ಲಿ ಜರುಗಲಿದೆ.