ಸಮಸ್ಯೆಗಳ ಮಹಾಪೂರ

ಜಮಖಂಡಿ: ನಗರದ ಎಪಿಎಂಸಿ ಮಂಗಲ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮೂಲ ಸೌಲಭ್ಯ, ಗ್ರಾಮಗಳಲ್ಲಿ ರಸ್ತೆ, ಸ್ವಚ್ಛತೆ, ವಿದ್ಯುತ್ ಕಂಬ ಅಳವಡಿಕೆ, ಭೂಸ್ವಾಧೀನ, ಹಳೇ ವ್ಯಾಜ್ಯಗಳ ಕುರಿತು ಆಯಾ ಇಲಾಖೆಗಳ ಮೂಲಕ ಸಾರ್ವಜನಿಕರು ಹಾಗೂ ವಿವಿಧ ಗ್ರಾಮಗಳ ಗ್ರಾಮಸ್ಥರು ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ ಅವರಿಗೆ ಮನವಿ ಸಲ್ಲಿಸಿದರು.

ಶಾಂತಿನಗರಕ್ಕೆ ಮೂಲ ಸೌಲಭ್ಯ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಕ್ಕೆ ಜಿಲ್ಲಾಧಿಕಾರಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಿ ಎಂದು ಪೌರಾಯುಕ್ತ ಗೋಪಾಲ ಕಾಸೆ ಅವರಿಗೆ ಸೂಚಿಸಿದರು.

ನಿವೃತ್ತ ಶಿಕ್ಷಣಾಧಿಕಾರಿ ಕೆ.ಎನ್. ಟಕಾಳೆ, ಸಿ.ಎಸ್. ಹುನಕುಂಟಿ ಮಾತನಾಡಿ, ಶಿಕ್ಷಕರ ಕಾಲನಿ ಮೂಲ ಸೌಲಭ್ಯದಿಂದ ವಂಚಿತವಾಗಿದೆ. ವಿದ್ಯುತ್ ಕಂಬಗಳನ್ನು ಅಳವಡಿಸಬೇಕು. ಕಾಲನಿಯ ಉದ್ಯಾನ ಬಗ್ಗೆ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಜನವಾಡ ಆರ್​ಸಿಗೆ ಹೆಚ್ಚಿನ ಭೂಮಿ ನೀಡಬೇಕು ಎಂದು ಪೀರಪ್ಪ ಗಲಗಲಿ ಅರ್ಜಿ ಸಲ್ಲಿಸಿದ್ದಕ್ಕೆ ಆರ್ ಆಂಡ್ ಆರ್ ಅಧಿಕಾರಿ ಪ್ರತಿಕ್ರಿಯಿಸಿ ಸರ್ಕಾರ ಮಟ್ಟದಲ್ಲಿ ರ್ಚಚಿಸಿ ಸಮಸ್ಯೆ ಸರಿಪಡಿಸಲಾಗುವುದು ಎಂದರು.

ಜಮಖಂಡಿ ನಗರದಲ್ಲಿ ಮಾಸ್ಟರ್ ಪ್ಲ್ಯಾನ್ ಆರಂಭಿಸಬೇಕು ಎಂದು ಯಾಸಿನ್ ಲೋದಿ ಹಾಗೂ ಹಿಪ್ಪರಗಿ ಗ್ರಾಮವನ್ನು ಜಮಖಂಡಿ ತಾಲೂಕಿನಲ್ಲೇ ಮುಂದುವರಿಸಬೇಕು ಎಂದು ನಾಗೇಶ ಜತ್ತಿ ಮನವಿ ಸಲ್ಲಿಸಿದರು. ಸರ್ಕಾರದ ಜತೆಗೆ ಈ ಬಗ್ಗೆ ರ್ಚಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹುಲ್ಯಾಳದ ರೈತರೊಬ್ಬರು ಮಾತನಾಡಿ, 4 ವರ್ಷಗಳಿಂದ ಪಹಣಿ ಪತ್ರ ತಿದ್ದುಪಡಿ ಮಾಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಸಭೆಯಲ್ಲಿ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಕ್ಕೆ ಕೂಡಲೇ ಸರಿಪಡಿಸಿ ಕೊಡಲಾಗುವುದು ಎಂದು ಎಸಿ ರವೀಂದ್ರ ಕರಲಿಂಗಣ್ಣವರ ತಿಳಿಸಿದರು.

ಕಡಪಟ್ಟಿ ಗ್ರಾಮದ ಗಾವಠಾಣ ಜಾಗವನ್ನು ವಿಸ್ತರಿಸುವಂತೆ ಗ್ರಾಪಂ ಅಧ್ಯಕ್ಷ ಬಸವರಾಜ ಇಟ್ಟಿ ಅರ್ಜಿ ಸಲ್ಲಿಸಿದ್ದಕ್ಕೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆಗೆ ಕಳುಹಿಸ ಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

ಬಡವರು ಮನೆ ನಿರ್ವಿುಸಲು ಮರಳು ಸಿಗುತ್ತಿಲ್ಲ, ಒಂದು ಟಿಪ್ಪರ್​ಗೆ 30-35 ಸಾವಿರ ರೂ. ನೀಡುವಂತಾಗಿದೆ. ರಾತ್ರೋರಾತ್ರಿ ಹಣ ಇರುವವರು ಮರಳು ಲೂಟಿ ಮಾಡುತ್ತಿದ್ದಾರೆ. ಇದರಿಂದ ಬಡವರಿಗೆ ಮರಳು ದೊರೆಯುವುದು ಅಸಾಧ್ಯವಾಗಿದೆ ಎಂದು ರೈತ ಸಂಘದ ಬಾಬು ಹಸರಡ್ಡಿ, ಗುರುಪಾದ ಮೆಂಡಿಗೇರಿ, ಅಶೋಕ ಹಲಗನ್ನವರ ನೇರವಾಗಿ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ, ತಾಲೂಕಿನಲ್ಲಿ 6 ಸ್ಟಾಕ್ ಯಾರ್ಡ್​ಗಳನ್ನು ಸ್ಥಾಪಿಸಲಾಗಿದೆ. ಎಂ ಸ್ಯಾಂಡ್ ವಿತರಣೆ ಪ್ರಾರಂಭಿಸಲಾಗಿದೆ. ಮರಳು ಬೇಕಾದವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಸಂರ್ಪಸಿ ಎಂದು ತಿಳಿಸಿದರು.

ಕಬ್ಬು ಕಳಿಸಿ 7-8 ತಿಂಗಳಾದರೂ ರೈತರಿಗೆ ಕಬ್ಬಿನ ಬಿಲ್ ಪಾವತಿಸಿಲ್ಲ ಎಂದು ರೈತ ಸಂಘದ ದುಂಡಪ್ಪ ಜೀರಗಾಳ, ಬಾಬು ಹಸರಡ್ಡಿ ಸಭೆ ಗಮನ ಸೆಳೆದರು.

ಹುನ್ನೂರ ಗ್ರಾಮದ ಬಸ್ ನಿಲ್ದಾಣದಲ್ಲಿ ಎಲ್ಲ ಬಸ್​ಗಳನ್ನು ನಿಲುಗಡೆ ಮಾಡುವಂತೆ ಹಾಗೂ ಪಾಳು ಬಿದ್ದಿರುವ ಮಧುರಖಂಡಿ ಬೀಜೋತ್ಪಾದನೆ ಕೇಂದ್ರವನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಾಲಪ್ಪ ಕುಲ್ಹಳ್ಳಿ ಒತ್ತಾಯಿಸಿದ್ದಕ್ಕೆ ಘಟಕ ವ್ಯವಸ್ಥಾಪಕ ಜಮಖಂಡಿ ಘಟಕದ ಎಲ್ಲ ಬಸ್​ಗಳನ್ನು ನಿಲುಗಡೆ ಮಾಡುವಂತೆ ಸೂಚಿಸುವುದಾಗಿ ತಿಳಿಸಿದರು. ಸರ್ಕಾರದ ಮಟ್ಟದಲ್ಲಿ ರ್ಚಚಿಸಿ ಬೀಜೋತ್ಪಾದನೆ ಕೇಂದ್ರವನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಚನಗೊಂಡ ತಿಳಿಸಿದರು.

ಶೂರ್ಪಾಲಿ ಗ್ರಾಮದಿಂದ ಜಂಬಗಿ ಕೂಡುವ ರಸ್ತೆ ನಿರ್ವಿುಸಬೇಕು, ನದಿಯಲ್ಲಿ ನೀರು ಹೆಚ್ಚಳವಾದರೆ ಗ್ರಾಮಗಳು ನಡುಗಡ್ಡೆಯಾಗುತ್ತವೆ. ಗ್ರಾಮಸ್ಥರಿಗೆ ಅನು ಕೂಲ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಜಂಬಗಿ ಗ್ರಾಮದಲ್ಲಿ ಆರ್​ಎಂಎಸ್​ಎ ಶಾಲೆ ಕಟ್ಟಡ ನಿರ್ವಿುಸಲು 1 ಕೋಟಿ ರೂ. ಅನುದಾನ ಬಂದಿದೆ. ಆದರೆ ಮುಳುಗಡೆ ನೆಪದಲ್ಲಿ ಕಟ್ಟಡ ನಿರ್ವಿುಸುತ್ತಿಲ್ಲ. ಹೈಸ್ಕೂಲ್ ವಿದ್ಯಾರ್ಥಿಗಳು ಪತ್ರಾಸ್ ಶೆಡ್, ಗಿಡದ ಕೆಳಗೆ ಕುಳಿತು ಪಾಠ ಆಲಿಸುವಂತಾಗಿದೆ. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಕಂಕಣವಾಡಿ ಹಾಗೂ ಗುಹೇಶ್ವರ ಗಡ್ಡೆಗೆ ಸೇತುವೆ ನಿರ್ವಿುಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ತುಂಗಳ, ಝುುಂಜರವಾಡ ಗ್ರಾಮ ಕೂಡುವ ರಸ್ತೆ ಅತಿಕ್ರಮಣಗೊಂಡಿದೆ ಎಂದು ತಾಪಂ ಮಾಜಿ ಸದಸ್ಯರಾದ ಎಸ್.ಎಸ್. ಶೇಗುಣಸಿ, ರವಿ ಹಾಜವ್ವಗೋಳ ಸಭೆಯ ಗಮನ ಸೆಳೆದರು.