ಸಚಿವ ಮಂಕಾಳ ವೈದ್ಯ ಮಾಹಿತಿ
ಕಾಮಗಾರಿಗೆ 22 ಕೋಟಿ ರೂ. ಅನುದಾನ
ವಿಜಯವಾಣಿ ಸುದ್ದಿಜಾಲ ಉಡುಪಿ
ಮಲ್ಪೆ ಮೀನುಗಾರಿಕಾ ಬಂದರು ಶೀಘ್ರ ಆಧುನೀಕರಣಗೊಳ್ಳಲಿದ್ದು ಈಗಾಗಲೇ 22 ಕೋಟಿ ರೂ.ಗೆ ಟೆಂಡರ್ ಆಗಿದ್ದು, ಕಾರ್ಯಾದೇಶ ಲಭಿಸಬೇಕಿದೆ. ಬಹುತೇಕ ಜೂನ್ ತಿಂಗಳಲ್ಲಿ ಶಿಲಾನ್ಯಾಸ ನಡೆಯಲಿದೆ ಎಂದು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಮಾಹಿತಿ ನೀಡಿದರು.

ಮಲ್ಪೆಯಲ್ಲಿ ಯಾಂತ್ರಿಕ (ಟ್ರಾಲ್) ದೋಣಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ವತಿಯಿಂದ ಮೀನುಗಾರಿಕಾ ಬಂದರಿನಲ್ಲಿ ನಿರ್ಮಿಸಿರುವ ಸಾರ್ವಜನಿಕ ಮಹಿಳಾ ಶೌಚಾಲಯ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ನಿಮಿತ್ತ ಮೇ 10ರಂದು ಬೆಳಗ್ಗೆ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಭಿವೃದ್ಧಿಗೆ ನೀಡಿ ಆದ್ಯತೆ
ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ದೇಶದ ಎಲ್ಲ ಕರಾವಳಿಯಲ್ಲೂ ಏಕರೂಪದ ಕಾನೂನು ಅಳವಡಿಸಬೇಕು. ಇನ್ಶೂರೆನ್ಸ್ ಕಂಪನಿಗಳಿಂದಲೂ ಮೀನುಗಾರರು ಬಹಳ ಸಮಸ್ಯೆ ಎದುರಿಸುತ್ತಿದ್ದು, ಪ್ರತ್ಯೇಕ ನಿಯಮ ರೂಪಿಸುವಂತೆ ಮೀನುಗಾರಿಕಾ ಅಧಿಕಾರಿಗಳಿಗೆ ಸೂಚಿಸಬೇಕು. ಮಳೆಗಾಲ ಶುರುವಾಗುವ ಮೊದಲು ಮೀನುಗಾರಿಕಾ ಸಚಿವರು ಮಲ್ಪೆ ಬಂದರಿನಲ್ಲಿ ಅಧಿಕಾರಿಗಳು ಹಾಗೂ ಮೀನುಗಾರ ಮುಖಂಡರೊಂದಿಗೆ ಸಭೆ ನಡೆಸಬೇಕು ಎಂದರು.
ಮಹಿಳಾ ಶೌಚಾಲಯವನ್ನು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಂಗಳೂರಿನ ಎಂಆರ್ಪಿಎಲ್ನ ಹಿರಿಯ ವ್ಯವಸ್ಥಾಪಕ ನಾಗರಾಜ ರಾವ್ ಕೆ. ಉದ್ಘಾಟಿಸಿದರು.
ಮೀನುಗಾರಿಕಾ ಇಲಾಖೆಯ ನಿರ್ದೇಶಕ ದಿನೇಶಕುಮಾರ್ ಕಳ್ಳೇರ, ಮಲ್ಪೆ ಮೀನುಗಾರರ ಸಂಘ ಅಧ್ಯಕ್ಷ ದಯಾನಂದ ಸುವರ್ಣ, ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿಯ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಇತರರಿದ್ದರು.
ಮಲ್ಪೆ ಯಾಂತ್ರಿಕ ದೋಣಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ರಾಮಚಂದ್ರ ಕುಂದರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪಾಧ್ಯಕ್ಷ ಪ್ರಕಾಶ ಬಂಗೇರ ವಂದಿಸಿದರು. ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ನಿರೂಪಿಸಿದರು.
ಸೈನಿಕರ ಕಲ್ಯಾಣ ನಿಧಿಗೆ 10 ಲಕ್ಷ ರೂ. ನೆರವು
ಮಲ್ಪೆಯ ಯಾಂತ್ರಿಕ (ಟ್ರಾಲ್) ದೋಣಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ವತಿಯಿಂದ ದೇಶದ ಸೈನಿಕರ ಕಲ್ಯಾಣದ ನಿಧಿಗೆ ನೀಡಿದ 10 ಲಕ್ಷ ರೂ. ನೆರವಿನ ಚೆಕ್ಅನ್ನು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರಿಗೆ ಹಸ್ತಾಂತರಿಸಲಾಯಿತು. ಪೆಹಲ್ಗಾಮ್ನಲ್ಲಿ ಉಗ್ರರ ದಾಳಿಯಿಂದ ಮಡಿದ ಪ್ರವಾಸಿಗರಿಗೆ ಹಾಗೂ ಗಡಿಯಲ್ಲಿ ವೀರಮರಣ ಹೊಂದಿದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಲ್ಪೆ ಬಂದರಿನಲ್ಲಿ ಮೀನುಗಾರಿಕೆಯಲ್ಲಿ ತೊಡಗಿರುವ ಮಹಿಳೆಯರಿಗೆ ಈ ಶೌಚಾಲಯ ಬಹಳ ಅನುಕೂಲವಾಗಿದೆ. ಯಾವುದೇ ಸಾರ್ವಜನಿಕ ಘಟಕಗಳ ನಿರ್ವಹಣೆ, ಸ್ವಚ್ಛತೆಯೊಂದಿಗೆ ಪರಿಸರವನ್ನು ಕಾಪಾಡಿಕೊಳ್ಳಬೇಕು. ಇದು ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ. ಈ ನಾಗರಿಕ ಪ್ರಜ್ಞೆ ಎಲ್ಲರಿಗೂ ಅಗತ್ಯ.
| ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ