ಚನ್ನಗಿರಿ: ರೈತರ ಭೂಮಿ ಸಂಬಂಧಿತ ಪಹಣಿಯಲ್ಲಿ ವಕ್ಫ್ ಭೂಮಿ ಎಂದು ದಾಖಲಿಸುತ್ತಿರುವ ಪ್ರಕರಣಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್, ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಚನ್ನಗಿರಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಬಸ್ ನಿಲ್ದಾಣ, ಕಲ್ಲುಸಾಗರ ರಸ್ತೆ, ಗಣಪತಿ ವೃತ್ತ, ಜೂನಿಯರ್ ಕಾಲೇಜು ಮತ್ತಿತರ ಪ್ರಮುಖ ಬೀದಿಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ತಾಲೂಕು ಕಚೇರಿಗೆ ತೆರಳಿ ಶಿರಸ್ತೇದಾರ್ ಮೋಹನ್ ಅವರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ಮುಖಂಡ ಸಂತೇಬೆನ್ನೂರು ಬಸವರಾಜ ಮಾತನಾಡಿ, ಕಾಂಗ್ರೆಸ್ ಸರ್ಕಾರ ಲ್ಯಾಂಡ್ ಜಿಹಾದ್ ರೂಪಿಸಿದಂತಿದೆ. ಇದರ ವಿರುದ್ಧ ರೈತರು ಶೀಘ್ರವೇ ಪಹಣಿ ಪರಿಶೀಲನೆ ಮಾಡಿಸಿಕೊಳ್ಳಬೇಕು. ರೈತರ ಪರವಾಗಿ ಬಿಜೆಪಿ ರಾಜ್ಯದಲ್ಲಿ ಅಭಿಯಾನ ಪ್ರಾರಂಭಿಸಿದೆ ಎಂದು ದೂರಿದರು.
ಚನ್ನಗಿರಿ ತಾಲೂಕಿನ ಸೋಮಲಾಪುರ ಗ್ರಾಮದ 8.34 ಎಕರೆ ಜಮೀನು ಹಾಗೂ ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿನ ಭೂಮಿಯನ್ನು ಸರ್ಕಾರಕ್ಕೆ ಮತ್ತೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್.ವಿ.ಮಲ್ಲಿಕಾರ್ಜುನ, ಪುರಸಭೆ ಸದಸ್ಯ ಪಟ್ಲಿನಾಗರಾಜ್, ಮಹಿಳಾ ನಗರ ಘಟಕ ಅಧ್ಯಕ್ಷೆ ಲತಾ ರಾಜೇಶ್, ನಗರ ಘಟಕ ಅಧ್ಯಕ್ಷ ಕೆ.ಆರ್.ಗೋಪಿ, ಅಜ್ಜಿಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಂಗಮ್ ಚಿಕ್ಕೊಲಿಕೆರೆ, ಪುರಸಭೆ ಸದಸ್ಯರಾದ ಪಾರಿ ಪರಮೇಶ್, ಚಿಕ್ಕಪ್ಪ ಇತರರಿದ್ದರು.